ಯುದ್ಧ ಆಗು ಮಾಡುವ ಈ ವಿನಾಶದ ಎಲ್ಲ ಭಾರವನ್ನು ಹೊರುವವರು ಜನಸಾಮಾನ್ಯರು. ಅವರ ವ್ಯಥೆ ವಿಷಾದ ದುಃಖ ದುಮ್ಮಾನಗಳು ಇರಾನ್, ಭಾರತ, ಅಮೆರಿಕ, ಪಾಕಿಸ್ತಾನ, ಇಸ್ರೇಲ್, ಪ್ಯಾಲೆಸ್ತೀನ್ ಮುಂತಾದ ಕೃತಕ ಗಡಿಗಳನ್ನೂ ಮೀರಿದಂತಹವು.
ಯುದ್ಧವೆಂಬುದೇ ವಿನಾಶದ ಕೃತ್ಯ. ಪುರಾಣ, ಇತಿಹಾಸ, ಮಹಾಕಾವ್ಯಗಳು ಈ ಸತ್ಯವನ್ನು ಸಾರಿ ಹೇಳಿವೆ. ಇತಿಹಾಸ ಮರೆತವರಿಗೆ ಭವಿಷ್ಯ ಇಲ್ಲವೆಂಬುದು ಮತ್ತೊಂದು ವಿವೇಕದ ಮಾತು. ಹುಸಿಪ್ರತಿಷ್ಠೆಯ ಸಮುದ್ರವನ್ನೇ ಹಾಸಿ ಹೊದ್ದ ದುಷ್ಟಮೂರ್ಖರಿಗೆ ವಿವೇಕದ ಮಾತುಗಳು ನಾಟುವುದಿಲ್ಲ. ತಾವು ಏರಿ ಕುಳಿತ ಕೊಂಬೆಗೇ ಕೊಡಲಿ ಹಾಕುವವರು ಇವರು. ಇರಾನ್ ಮೇಲೆ ದಾಳಿ ನಡೆಸಿ ವಿಶ್ವವನ್ನೇ ಯುದ್ಧಕ್ಕೆ ವಿನಾಶಕ್ಕೆ ಎಳೆಯತೊಡಗಿದ್ದಾರೆ ಡೊನಾಲ್ಡ್ ಟ್ರಂಪ್ ಮತ್ತು ನೆತಾನ್ಯಾಹು. ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಮುಠ್ಠಾಳ ಜೋಡಿಯಿದು.
ಮಧ್ಯಪ್ರಾಚ್ಯ ಯುದ್ಧ ನಾಲ್ಕನೆಯ ವಾರವನ್ನು ಪ್ರವೇಶಿಸುತ್ತಿದ್ದಂತೆ, ತಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ ಎಂಬುದು ಈ ಅಲ್ಪರಿಗೆ ಅರ್ಥವಾಗತೊಡಗಿದೆ. ಆದರೆ ಒಪ್ಪಿಕೊಳ್ಳುವ ಘನತೆಯಿಲ್ಲ. ತಾವು ಎಳೆದುಕೊಂಡಿರುವ ಪ್ರಳಯಕ್ಕೆ ಪ್ರಪಂಚವನ್ನೇ ಕೊಂಡೊಯ್ಯತೊಡಗಿದ್ದಾರೆ.
ತನ್ನ ಮೇಲೆ ನಡೆದಿರುವ ಅವ್ಯಾಹತ ಅಮಾನುಷ ಬಾಂಬ್ ದಾಳಿಗೆ ಜಗ್ಗದೆ ನೆಲಕಚ್ಚಿ ನಿಂತು ವಿಶ್ವದ ಎರಡು ಅನಿಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತಿದೆ ಇರಾನ್. ನಾಲ್ಕು ದಶಕಗಳ ಬಿಗಿ ನಿರ್ಬಂಧಗಳಲ್ಲಿ ಬಳಲಿದ ಇರಾನ್, ವಿರುದ್ಧ ಅಮೆರಿಕ-ಇಸ್ರೇಲ್ ನ ಪ್ರಚಂಡ ಮಿಲಿಟರಿ ಶಕ್ತಿಯ ವಿರುದ್ಧ ಪ್ರತಿದಾಳಿ ನಡೆಸಿರುವ ಪರಿ ಸೋಜಿಗದ್ದು. ತನ್ನ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರಬಲ ಉತ್ತರ ನೀಡಿದೆ. ಇಸ್ರೇಲಿನ ಪರಮಾಣು ಕೇಂದ್ರಗಳು ಅಭೇದ್ಯ ಎಂಬ ಮಿಥ್ಯೆಯನ್ನು ಬಯಲು ಮಾಡಿದೆ. ಇಸ್ರೇಲಿನ ಎಫ್.16 ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿದೆ.
ಮತ್ತೊಂದು ದೇಶಕ್ಕೆ ನುಗ್ಗಿ ಅಲ್ಲಿರುವ ಸರ್ವಸಂಪತ್ತೂ ತಮ್ಮದೆಂದು ಸಾರುವ ಟ್ರಂಪ್- ನೆತನ್ಯಾಹು ದುಷ್ಟದ್ವಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರುತ್ತಿಲ್ಲ. ಇರಾನ್ ಸೇರಿದಂತೆ ಇಡೀ ಮಧ್ಯಪ್ರಾಚ್ಯವನ್ನು ತಮ್ಮ ಸ್ವಾರ್ಥಗಳಿಗೆ ಬಗ್ಗಿಸಿಕೊಳ್ಳುವ ಸನ್ನಾಹವನ್ನು ಕೈ ಬಿಡುತ್ತಿಲ್ಲ. ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗಿದ್ದು, ಮುಂಬರುವ ಐದು ದಿನಗಳ ಕಾಲ, ಈ ದೇಶದ ಅನಿಲ-ತೈಲ-ಊರ್ಜಾ ಸ್ಥಾವರಗಳ ಮೇಲೆ ದಾಳಿ ನಡೆಸದಂತೆ ತಮ್ಮ ಮಿಲಿಟರಿಗೆ ಆದೇಶ ನೀಡಿರುವುದಾಗಿ ಟ್ರಂಪ್ ಇಂದು ಅಪರಾಹ್ಣ ಸಾರಿದ್ದಾರೆ. ಈ ಸಂಬಂಧದ ಅವರ ಟ್ವೀಟ್ ಇಂಗ್ಲಿಷ್ ಲಿಪಿಯ ದೊಡ್ಡಕ್ಷರಗಳಲ್ಲಿರುವುದು (ಕ್ಯಾಪಿಟಲ್ ಲೆಟರ್ಸ್) ವಿಶೇಷ. ಆದರೆ ನೆನ್ನೆ ಹೇಳಿದ್ದನ್ನು ಇಂದು ನಿರಾಕರಿಸುವ ತಿಕ್ಕಲು ಜಾಯಮಾನದವರು ಟ್ರಂಪ್. ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಅಮೆರಿಕದ ನಡೆ ಮತ್ತು ನುಡಿಯ ನಡುವೆ ದೊಡ್ಡ ಅಂತರವನ್ನು ಕಂಡು ಅನುಭವಿಸಿರುವ ಇರಾನ್, ಟ್ರಂಪ್ ಮಾತುಗಳನ್ನು ನಂಬುವುದಿಲ್ಲ. ಹೀಗಾಗಿಯೇ ಅದು ಅಮೆರಿಕ-ಇಸ್ರೇಲ್ ನ ದಾಳಿಯನ್ನು ಮುಂದಾಗಿಯೇ ನಿರೀಕ್ಷಿಸಿದೆ. ಅಪಾರ ಪ್ರಮಾಣದ ಸಿದ್ಧತೆಯನ್ನೂ ಸದ್ದುಗದ್ದಲವಿಲ್ಲದೆ ನಡೆಸಿತ್ತೆಂದು ಈಗ ಪ್ರಪಂಚಕ್ಕೇ ತಿಳಿದು ಬರುತ್ತಿದೆ.
ವಿಶ್ವದ ಜನಜೀವನದ ಉಸಿರೇ ಆಗಿ ಪರಿಣಮಿಸಿವೆ ಪೆಟ್ರೋಲಿಯಂ ಉತ್ಪನ್ನಗಳು. ಪೆಟ್ರೋಲ್-ಡೀಸೆಲ್-ಅಡುಗೆ ಅನಿಲವಿಲ್ಲದ ಜನಜೀವನವನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲದಂತಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಅಪಾರ ಸಂಪತ್ತು ಹೊಂದಿರುವ ಮಧ್ಯಪ್ರಾಚ್ಯ ದೇಶಗಳ ಮೇಲೆ ಯಜಮಾನಿಕೆ ಸಾಧಿಸಿರುವ ಅಮೆರಿಕ ಈ ಉತ್ಪನ್ನಗಳ ವ್ಯಾಪಾರ ಡಾಲರ್ ಕರೆನ್ಸಿಯಲ್ಲೇ ನಡೆಯುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಅಮೆರಿಕೆಯ ಅರ್ಥವ್ಯವಸ್ಥೆಯನ್ನು ಪೆಟ್ರೋಡಾಲರ್ ಅರ್ಥವ್ಯವಸ್ಥೆ ಎಂದೇ ಕರೆಯಲಾಗುತ್ತಿದೆ. ಇರಾನ್ ಮೇಲೆ ದಾಳಿ ನಡೆಸಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯ ಜೇನುಗೂಡಿಗೆ ಕಲ್ಲೆಸೆದಿದೆ. ಅಡುಗೆ ಮನೆಯಿಂದ ಹಿಡಿದು, ಸಾರಿಗೆ ಸಂಚಾರ, ಔಷಧಿ, ರಾಸಾಯನಿಕ ಗೊಬ್ಬರ ಬೇಡುವ ಕೃಷಿಯ ತನಕ ವ್ಯಾಪಿಸಿವೆ ಪೆಟ್ರೋಲಿಯಂ ಉತ್ಪನ್ನಗಳು.
ಇಂತಹ ಅತ್ಯಗತ್ಯ ಇಂಧನ ಪೂರೈಕೆಯ ಜಾಲ, ಅನ್ಯಾಯದ ಯುದ್ಧದ ಕಾರಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಲ್ಲಿ ದೇಶಗಳು ದಾಳಿಗಳಿಂದ ತತ್ತರಿಸಿವೆ.
ತನ್ನ ತೈಲ ಉತ್ಪನ್ನ ವ್ಯವಸ್ಥೆಯ ಮೇಲೆ ಬಿದ್ದಿರುವ ಏಟಿನಿಂದ ಚೇತರಿಸಿಕೊಂಡು ಎದ್ದು ನಿಲ್ಲಲು ಐದು ವರ್ಷಗಳೇ ಬೇಕು ಎಂದಿದೆ ಕತಾರ್. ಪ್ರವಾಸಿಗರ ಸ್ವರ್ಗವಾಗಿ ಹೊಮ್ಮಿದ್ದ ಮಧ್ಯಪ್ರಾಚ್ಯ ದೇಶಗಳನ್ನು ಕೆಲವೇ ವಾರಗಳ ಯುದ್ಧ ನೆಲ ಕಚ್ಚಿಸಿದೆ. ಐಸಿಸ್ ನಂತಹ ಭಯೋತ್ಪಾದಕ ಶಕ್ತಿಗಳು ಮರಳಿ ತಲೆಯೆತ್ತಲು ಸಿದ್ಧವಾಗಿವೆ.
ತೈಲ-ಅನಿಲಗಳ ದರ ಮುಗಿಲು ಮುಟ್ಟುತ್ತಿರುವ ಆತಂಕದಲ್ಲಿ, ಇರಾನ್ ಮತ್ತು ರಷ್ಯಾದ ತೈಲ-ಅನಿಲ ರಫ್ತುಗಳ ಮೇಲೆ ವಿಧಿಸಿದ್ದ ಏಕಪಕ್ಷೀಯ ನಿರ್ಬಂಧವನ್ನು ಸಡಿಲಿಸಲೇಬೇಕಾಗಿ ಬಂದಿದೆ.
ಈ ಯುದ್ಧವು ಅಂತಾರಾಷ್ಟ್ರೀಯ ಸಂಬಂಧಗಳು-ಸೂತ್ರಗಳನ್ನು ಮರು ರೂಪಿಸತೊಡಗಿದೆ. ಯುದ್ಧವು ಕೊನೆಗೊಳ್ಳುವ ಹೊತ್ತಿಗೆ ದೇಶದೇಶಗಳ ಗಡಿಗಳೂ ಬದಲಾಗುವ ನಿರೀಕ್ಷೆಯಿದೆ. ಟ್ರಂಪ್ ರಫ್ತುಸುಂಕಗಳ ಹುಚ್ಚಾಟವು ಯೂರೋಪಿಯನ್ ದೇಶಗಳನ್ನು ಕೂಡ ದೂರ ಮಾಡಿಕೊಂಡಿತ್ತು. ಟ್ಯಾರಿಫ್ ಹುಚ್ಚಾಟದ ಬೆನ್ನಿನಲ್ಲೇ ತಲೆಯೆತ್ತಿದ ಮಹಾದುಷ್ಟ ಹುಚ್ಚಾಟ ಇರಾನ್ ಮೇಲೆ ದಾಳಿ ನಡೆಸಿದ ದುಸ್ಸಾಹಸ. ತಾನೇ ನಾಯಕತ್ವ ವಹಿಸಿದ್ದ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೋ) ದೇಶಗಳನ್ನು ದೂರ ಮಾಡಿಕೊಂಡಿದೆ ಅಮೆರಿಕ. ತಮ್ಮ ಮೇಲೆ ಮನಬಂದಂತೆ ಸುಂಕಗಳನ್ನು ಹೇರಿದ್ದ ಟ್ರಂಪ್ ಮಾತಿಗೆ ಸೊಪ್ಪು ಹಾಕಿಲ್ಲ ನ್ಯಾಟೋ ದೇಶಗಳು. ಹಾರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಬಿಡಿಸಲು ಸೈನ್ಯ ಕಳಿಸಿ ಎಂಬ ಟ್ರಂಪ್ ಆಣತಿಯನ್ನು ಧಿಕ್ಕರಿಸಿವೆ.
ತನ್ನ ಬದ್ಧ ಹಗೆಯೆಂದು ಬಗೆದಿರುವ ರಷ್ಯಾಕ್ಕೆ ಅನಾಯಾಸವಾಗಿ ತೈಲ ವ್ಯಾಪಾರವನ್ನು ಕುದುರಿಸಿಕೊಟ್ಟಿದೆ ಅಮೆರಿಕ. ಅದೂ ಏರಿದ ದರಗಳ ಅತ್ಯಂತ ಲಾಭದಾಯಕ ವ್ಯಾಪಾರವಿದು. ಇರಾನ್ ತೈಲದ ಮೇಲಿನ ನಿರ್ಬಂಧವನ್ನೂ ಸಡಿಲಿಸಬೇಕಾದ ಮುಖಭಂಗ ಅನುಭವಿಸಿದ್ದಾರೆ ಟ್ರಂಪ್. ಇರಾನ್ ವಿರುದ್ಧ ಬಾಲ ಮುದುರಿಕೊಳ್ಳಬೇಕಾಗಿ ಬಂದಿರುವ ಅಮೆರಿಕ ಹಸ್ತಕ್ಷೇಪ ಮಾಡಲಾರದು ಎಂದು ಬಗೆದಿರುವ ಚೀನಾ, ತೈವಾನನ್ನು ವಶಪಡಿಸಿಕೊಳ್ಳಲು ಗರಿಗೆದರತೊಡಗಿದೆ.
ತೈಲ ಅನಿಲಗಳಿಗೆ ಮಧ್ಯಪ್ರಾಚ್ಯದೇಶಗಳನ್ನೇ ಅವಲಂಬಿಸಿಕೊಂಡು ಬಂದಿರುವ ಭಾರತ ಕಷ್ಟಕ್ಕೆ ಸಿಕ್ಕಿದೆ. ಇರಾನ್ ಭಾರತದ ಅನುಗಾಲದ ಪುರಾತನ ಮಿತ್ರ. ಯುದ್ಧದ ಆರಂಭದಲ್ಲಿ ಈ ಅಂಶವನ್ನು ಲೆಕ್ಕಿಸಲಿಲ್ಲ ಭಾರತದ ಪ್ರಧಾನಿ ಮೋದಿಯವರು. ಇಸ್ರೇಲ್-ಅಮೆರಿಕ ದಾಳಿಯು ಇರಾನಿನ ಪರಮೋಚ್ಚ ನಾಯಕ ಖಮೇನಿಯವರನ್ನು ಬಲಿ ತೆಗೆದುಕೊಂಡಾಗ, ಇಸ್ರೇಲ್ ನ ಬಾಂಬ್ ದಾಳಿಗೆ ಇರಾನಿನ 150ಕ್ಕೂ ಹೆಚ್ಚು ಶಾಲಾ ಮಕ್ಕಳು ಬಲಿಯಾದಾಗ ಸಂತಾಪದ ಕನಿಷ್ಠ ಸೌಜನ್ಯವನ್ನು ಕೂಡ ತೋರದೆ ಹೋದರು. ಆದರೂ ಭಾರತದ ಜೊತೆಗಿನ ಸ್ನೇಹದ ಬದ್ಧತೆಯನ್ನು ಗೌರವಿಸಿದೆ ಇರಾನ್. ಈವರೆಗೆ ಭಾರತಕ್ಕೆ ತೈಲ-ಅನಿಲ ಹೊತ್ತು ತರುತ್ತಿದ್ದ ನಾಲ್ಕು ಹಡಗುಗಳಿಗೆ ಹಾರ್ಮುಜ್ ಜಲಸಂಧಿಯಿಂದ ಸುರಕ್ಷಿತ ದಾರಿಯನ್ನು ಕಲ್ಪಿಸಿದೆ.
ಮೂರು ವಾರಗಳ ಯುದ್ಧದ ನಂತರವೂ ಶರಣಾಗದೆ ಸೆಣೆಸುತ್ತಿರುವ ಇರಾನ್ ನ ಕೆಚ್ಚು, ಟ್ರಂಪ್- ನೆತಾನ್ಯಹು ದುಷ್ಟದ್ವಯರನ್ನೂ ಅಪ್ರತಿಭಗೊಳಿಸಿದೆ. ಹೀಗೆ ಯುದ್ಧದ ತಕ್ಕಡಿಯಲ್ಲಿ ಇರಾನ್ ಕೆಳಗೆ ಬೀಳದೆ, ಅಮೆರಿಕ-ಇಸ್ರೇಲನ್ನು ಕೆಳಗೆಳೆಯುತ್ತಿರುವ ಅನಿರೀಕ್ಷಿತ ಬೆಳವಣಿಗೆ ಮೋದಿಯವರ ನಡೆನುಡಿಯನ್ನು ತಡವಾಗಿಯಾದರೂ ಬದಲಾಯಿಸಿದಂತಿದೆ. ಸೋಮವಾರ ಅಪರಾಹ್ಣ ಮಧ್ಯಪ್ರಾಚ್ಯದ ಯುದ್ಧ ಕುರಿತು ಲೋಕಸಭೆಯಲ್ಲಿ ಅವರು ನೀಡಿದ ಹೇಳಿಕೆಯಲ್ಲಿ ಈ ಬದಲಾವಣೆ ಒಡೆದು ಕಂಡಿತು. ಭಾರತವು ಮಾನವೀಯತೆ ಮತ್ತು ಶಾಂತಿಯ ಪರವಾಗಿ ನಿಲ್ಲುತ್ತದೆ ಎಂದು ಘೋಷಿಸಿದರು. ಸಾರಿಗೆ, ತೈಲ ಅನಿಲ ಊರ್ಜಾ ಸಂಪನ್ಮೂಲಗಳ ಮೇಲೆ ದಾಳಿ ನಡೆಸುವುದನ್ನು ಭಾರತ ಖಂಡಿಸುತ್ತದೆ ಎಂದರು.
ಭಾರತ ಖರೀದಿಸುತ್ತಿರುವ ಅನಿಲ ತೈಲಗಳ ಬೆಲೆ ತೀವ್ರವಾಗಿ ಏರಿದೆ. ರೂಪಾಯಿ ವಿನಿಮಯ ದರ ಕುಸಿತದ ಹೊಸ ದಾಖಲೆ ನಿರ್ಮಿಸಿದೆ. ಪಂಚರಾಜ್ಯಗಳ ಚುನಾವಣೆಯ ನಡುವಿನಲ್ಲಿರುವ ಮೋದಿ ಸರ್ಕಾರ ತೈಲ ಅನಿಲದ ಬೆಲೆಯನ್ನು ಹೆಚ್ಚಿಸಿಲ್ಲ. ಸದ್ಯಕ್ಕೆ ಈ ಹೆಚ್ಚಳ ಪ್ರೀಮಿಯಂ ಪೆಟ್ರೋಲ್ ಗೆ ಸೀಮಿತವಾಗಿದೆ. ಈಗಾಗಲೆ ಬೆಲೆ ಏರಿಕೆಯಡಿ ತತ್ತರಿಸಿರುವ ಜನ ಚುನಾವಣೆಯಗಳ ನಂತರ ಮತ್ತಷ್ಟು ಭಾರ ಹೊರಲು ನಡು ಬಿಗಿಯಬೇಕಿದೆ. ಅಚ್ಛೇ ದಿನಗಳು ಯಾವ ಲೋಕದಲ್ಲಿವೆಯೋ ತಿಳಿಯದಾಗಿದೆ. ದುರ್ಭರ ದಿನಗಳು ಮತ್ತಷ್ಟು ದುರ್ಭರವಾಗುತ್ತ ನಡೆದಿವೆ.
ಯುದ್ಧದ ಆರ್ಥಿಕ ವೆಚ್ಚವನ್ನು ಲೆಕ್ಕ ಹಾಕಬಹುದು. ಆದರೆ ಮಾನವೀಯತೆ-ಅಮಾನುಷತೆಯ ವೆಚ್ಚಗಳನ್ನು ಹೇಗೆ ಲೆಕ್ಕ ಹಾಕಲಾದೀತು? ಪರಿಸರ ವಿನಾಶದ ಪರಿಸ್ಥಿತಿಯೇನು ಎಂದು ಯೋಚಿಸಿದರೆ ಮನುಷ್ಯ ಕುಲ ಎಂತಹ ಅವನತಿಯ ತುದಿಯಲ್ಲಿ ನಿಂತಿದೆಯೆಂದು ಅರ್ಥವಾದೀತು. ಯುದ್ಧ ಆಗು ಮಾಡುವ ಈ ವಿನಾಶದ ಎಲ್ಲ ಭಾರವನ್ನು ಹೊರುವವರು ಜನಸಾಮಾನ್ಯರು. ಅವರ ವ್ಯಥೆ ವಿಷಾದ ದುಃಖ ದುಮ್ಮಾನಗಳು ಇರಾನ್, ಭಾರತ, ಅಮೆರಿಕ, ಪಾಕಿಸ್ತಾನ, ಇಸ್ರೇಲ್, ಪ್ಯಾಲೆಸ್ತೀನ್ ಮುಂತಾದ ಕೃತಕ ಗಡಿಗಳನ್ನೂ ಮೀರಿದಂತಹವು.





