ಅನ್ವೇಷಣೆಯ ಸಂಸ್ಕೃತಿ: ಆರ್ಥಿಕ ಪ್ರಗತಿಯ ಇಂಜಿನ್‌

Date:

ಅವಶ್ಯಕತೆ ಇದ್ದ ಮಾತ್ರಕ್ಕೆ ಅನ್ವೇಷಣೆಗಳು ಆಗಿಬಿಡೋದಿಲ್ಲ. ಜ್ಞಾನ ತನ್ನಷ್ಟಕ್ಕೆ ಬೆಳೆಯುವುದಿಲ್ಲ. ಸಮಾಜದಲ್ಲಿನ ಸಂಸ್ಕೃತಿಗಳು ಹಾಗೂ ಸಂಸ್ಥೆಗಳು ಅದನ್ನು ಬೆಳೆಸುತ್ತವೆ. ಒಂದು ಸಮಾಜದಲ್ಲಿ ಜ್ಞಾನ ನಿರಂತರವಾಗಿ ಹರಿದು ಬರುತ್ತಿದ್ದರೆ ನಿರಂತರ ಪ್ರಗತಿ ಸಾಧ್ಯವಾಗುತ್ತದೆ. ಅಂದರೆ, ನಿರಂತರ ಪ್ರಗತಿ ಸಾಧ್ಯವಾಗಬೇಕಾದರೆ ಅನ್ವೇಷಣೆಗಳು ಆಗೊಮ್ಮೆ ಈಗೊಮ್ಮೆ ಆಗಿ ನಿಂತುಹೋಗುವ ಘಟನೆಗಳಾಗದೆ, ನಿರಂತರ ನಡೆಯುತ್ತಿರುವ ಪ್ರಕ್ರಿಯೆಯಾಗಬೇಕು. ಇದು ಈ ಬಾರಿ ನೋಬೆಲ್ ಬಹುಮಾನ ಪಡೆದ ಜೋಯೆಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೌವಿಟ್ ಅವರ ಅಧ್ಯಯನ ಹೇಳುವ ಸಂಗತಿಯಾಗಿದೆ. ಅರ್ಥಶಾಸ್ತ್ರದ ಇತಿಹಾಸಕಾರ ಮೊಕಿರ್ ನಿರಂತರ ಪ್ರಗತಿಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಚಾರಿತ್ರಿಕ ಮಾಹಿತಿಯನ್ನು ಆಳವಾಗಿ ಶೋಧಿಸಿದ್ದಾರೆ. ಅಘಿಯಾನ್ ಮತ್ತು ಹೌವಿಟ್ ಅವರು ಗಣಿತೀಯ ಮಾದರಿಗಳನ್ನು ಬಳಸಿಕೊಂಡು ಮಾರುಕಟ್ಟೆಯ ಆರ್ಥಿಕತೆಯಲ್ಲಿ ಹೇಗೆ ಅನ್ವೇಷಣೆಗಳು ಆಗುತ್ತವೆ ಎಂಬುದನ್ನು ವಿವರಿಸಿದ್ದಾರೆ.

ಕೆಲವು ದೇಶಗಳಲ್ಲಿ ಪ್ರಗತಿ ನಿರಂತರವಾಗಿ ಆಗುತ್ತಿರುತ್ತದೆ. ಕೆಲವು ದೇಶಗಳು ಪ್ರಗತಿ ಕಾಣದೆ ಸೊರಗುತ್ತಲೇ ಇರುತ್ತವೆ. ಕೆಲವೊಮ್ಮೆ ಪ್ರಗತಿ ತೀವ್ರವಾಗಿರುತ್ತದೆ. ಕೆಲವೊಮ್ಮೆ ಸ್ಥಗಿತವಾಗಿರುತ್ತದೆ. ಯಾಕೆ ಹೀಗೆ? ಆರ್ಥಿಕ ಪ್ರಗತಿ ಯಾವಾಗ ಮತ್ತು ಏಕೆ ಆಗುತ್ತದೆ?ಈ ಪ್ರಶ್ನೆಗಳು ಅರ್ಥಶಾಸ್ತ್ರಜ್ಞರನ್ನು ಬಹಳ ಹಿಂದಿನಿಂದಲೂ ಕಾಡುತ್ತಿವೆ. ಕೆಲವರು ಆರ್ಥಿಕ ಪ್ರಗತಿಗೆ ಬಂಡವಾಳದ ಉಳಿತಾಯ ಹಾಗೂ ಹೂಡಿಕೆ ಕಾರಣ ಎನ್ನುತ್ತಾರೆ. ಅವರು ಅರ್ಥಿಕತೆ ಹೆಚ್ಚಿನ ಪ್ರಗತಿಯನ್ನು ಸಾಧಿಸುವುದಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ರಾಬರ್ಟ್ ಸೋಲೊ ಆರ್ಥಿಕ ಪ್ರಗತಿಗೆ ತಂತ್ರಜ್ಞಾನವನ್ನು ಮುಖ್ಯ ಚಾಲಕ ಶಕ್ತಿಯಾಗಿ ಕಂಡಿದ್ದ. ಆದರೆ ಆತನಿಗೆ ತಂತ್ರಜ್ಞಾನದ ಬದಲಾವಣೆಗೆ ಯಾವ ಅಂಶಗಳು ಪ್ರೇರೇಪಿಸುತ್ತವೆ ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಅವನು ಅದನ್ನೊಂದು ಹೊರಗಿನ ಅಂಶವನ್ನಾಗಿ ನೋಡಿದ್ದ. ಮೊಕಿರ್, ಅಘಿಯಾನ್ ಹಾಗೂ ಹೌವಿಟ್ ಈ ಮೂವರು ತಂತ್ರಜ್ಞಾನ ಹಾಗೂ ಪ್ರಗತಿ ಇವೆಲ್ಲಾ ಯಾವುದೋ ಮಾಂತ್ರಿಕ ವಿದ್ಯಮಾನಗಳಲ್ಲ. ಅದು ಆರ್ಥಿಕತೆಯ ಅಂತರಿಕ ರಚನೆಗಳು, ಸಂಸ್ಥೆಗಳು ಹಾಗೂ ಸಂಸ್ಕೃತಿಗಳ ಪರಿಣಾಮವಾಗಿ ಒಳಗಿಂದಲೇ ರೂಪುಗೊಳ್ಳುವ ಪ್ರಕ್ರಿಯೆ ಎಂದು ವಾದಿಸಿದ್ದಾರೆ.

ಆದರೆ ಅನ್ವೇಷಣೆಗಳು ಆಗುತ್ತಿದ್ದ ಮಾತ್ರಕ್ಕೆ ನಿರಂತರ ಪ್ರಗತಿ ಖಚಿತವಾಗಿ ಆಗುತ್ತದೆ ಅಂತೇನಿಲ್ಲ. ಅನ್ವೇಷಣೆಗಳು ಹಾಗೂ ತಾಂತ್ರಿಕ ಬದಲಾವಣೆಗಳು ನಿನ್ನೆ-ಮೊನ್ನೆಯ ವಿದ್ಯಮಾನಗಳೇನಲ್ಲ. ತುಂಬಾ ಮೊದಲಿನಿಂದಲೂ ಆಗುತ್ತಿವೆ. ಚೀನಾ, ಗ್ರೀಸ್, ರೋಮ್ ಇಲ್ಲೆಲ್ಲಾ ಬಹಳ ಹಿಂದೆಯೇ ಮಹತ್ತರ ಅನ್ವೇಷಣೆಗಳು ಆಗಿವೆ. ಮುದ್ರಣ ಯಂತ್ರಗಳು, ಗಾಳಿಯಂತ್ರಗಳು ಇವೆಲ್ಲಾ ದೊಡ್ಡ ಅನ್ವೇಷಣೆಗಳೆ.ಆದರೆ ಆಗ ನಿರಂತರ ಪ್ರಗತಿ ಸಾಧ್ಯವಾಗಿರಲಿಲ್ಲ. ಆಗೀಗ ಒಂದಿಷ್ಟು ಪ್ರಗತಿಯಾಗಿ ನಿಂತುಹೋಗುತ್ತಿತ್ತು. ಆರ್ಥಿಕ ಸ್ಥಗಿತತೆ ಸಾಮಾನ್ಯವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
joel mokyr nobel prize1940 3

ನಿರಂತರ ಪ್ರಗತಿ ಸಾಧ್ಯವಾಗಬೇಕಾದರೆ ಉಪಯುಕ್ತ ಜ್ಞಾನ ನಿರಂತರವಾಗಿ ಹರಿದು ಬರುತ್ತಿರಬೇಕು. ಇದು ಅವರು ಮುಖ್ಯವಾಗಿ ಕಂಡುಕೊಂಡ ಸತ್ಯ. ‘ಉಪಯುಕ್ತ ಜ್ಞಾನ’ ಅನ್ನುವಾಗ ಮೊಕಿರ್ ಎರಡು ಬಗೆಯ ಜ್ಞಾನವನ್ನು ಗುರುತಿಸುತ್ತಾರೆ. ಒಂದು ಸೈದ್ಧಾಂತಿಕ ಜ್ಞಾನ. ಇದು ಪ್ರಾಕೃತಿಕ ನಿಯಮಗಳಿಗೆ ಒಂದು ವ್ಯವಸ್ಥಿತ ವಿವರಣೆ ಕೊಡುತ್ತದೆ. ಪ್ರಾಕೃತಿಕ ವಿದ್ಯಮಾನಗಳು ಯಾಕೆ ಜರುಗುತ್ತವೆ ಎನ್ನುವುದಕ್ಕೆ ಕಾರಣವನ್ನು ಕೊಡುತ್ತವೆ. ಮತ್ತೊಂದು ಪ್ರಾಯೋಗಿಕ ಜ್ಞಾನ. ಇದು ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಕೆಗೆ ತರುವುದಕ್ಕೆ ಬೇಕಾದ ಕ್ರಮವನ್ನು ತಿಳಿಸುತ್ತದೆ. ಅದಕ್ಕೆ ಬೇಕಾದ ನೀಲಿ ನಕ್ಷೆಯನ್ನು, ಅನುಸರಿಸಬೇಕಾದ ವಿಧಾನವನ್ನು, ವಿವರವಾದ ಸೂಚನೆಗಳನ್ನು ನೀಡುತ್ತದೆ. ನಿರಂತರ ಪ್ರಗತಿಯಾಗಬೇಕಾದರೆ ಎರಡು ಬಗೆಯ ಜ್ಞಾನಗಳು  ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು. ಕೇವಲ ವೈಜ್ಞಾನಿಕ ಚಿಂತನೆಗಳಷ್ಟೇ ಸಾಲುವುದಿಲ್ಲ. ಅದನ್ನು ಬಳಕೆಗೆ ತರಲು ಪ್ರಾಯೋಗಿಕ ಜ್ಞಾನ ಬೇಕು. ನುರಿತ ಕುಶಲಕರ್ಮಿಗಳು ಬೇಕು. ಲಿಯೋನಾರ್ಡೊ ಡಾವಿನ್ಸಿ 15ನೇ ಶತಮಾನದಲ್ಲೇ ಹೆಲಿಕಾಪ್ಟರ್ ನಕ್ಷೆಯನ್ನು ರಚಿಸಿದ್ದ. ಆದರೆ ಅದನ್ನು ನಿರ್ಮಿಸುವುದಕ್ಕೆ ಬೇಕಾದ ಇಂಜಿನಿಯರುಗಳು, ತಂತ್ರಜ್ಞಾನಿಗಳು ಆಗ ಇರಲಿಲ್ಲ.

ಹಾಗೆಯೇ ಕೇವಲ ಪ್ರಾಯೋಗಿಕ ಜ್ಞಾನವೂ ಸಾಲುವುದಿಲ್ಲ. ಕಮ್ಮಾರನಿಗೆ ಕಬ್ಬಿಣವನ್ನು ಕಾಯಿಸಿ ತಟ್ಟುವ ಮೂಲಕ ಆಯುಧಗಳನ್ನು ಮಾಡಬಹುದೆನ್ನುವ ಪ್ರಾಯೋಗಿಕ ಜ್ಞಾನ ಪರಂಪರಾಗತವಾಗಿ ಬಂದಿದೆ. ಅದರ ಹಿಂದಿನ ವಿಜ್ಞಾನ ಅವನಿಗೆ ತಿಳಿದಿರುವುದಿಲ್ಲ. ಆ ತಂತ್ರಜ್ಞಾನ ಯಾಕೆ ಕೆಲಸ ಮಾಡುತ್ತಿದೆ ಅನ್ನುವುದು ತಿಳಿದಿರಲಿಲ್ಲ. ಆಗಿನ ಜ್ಞಾನ “ಯಾಂತ್ರಿಕ ಜ್ಞಾನ ತಿಳಿಯದ ಕಮ್ಮಾರಿಕೆಯಾಗಿತ್ತು. ಮಣ್ಣಿನ ಜ್ಞಾನವಿಲ್ಲದ ಕೃಷಿಯಾಗಿತ್ತು.” ವೈಜ್ಞಾನಿಕ ಹಾಗೂ ಪ್ರಾಯೋಗಿಕ ಜ್ಞಾನ ಪರಸ್ಪರ ಸಂವಹಿಸುತ್ತಾ, ಕೊಡುಕೊಳ್ಳುತ್ತಾ ಸಾಗಿದರೆ ಮಾತ್ರ ನಿರಂತರ ಬೆಳವಣಿಗೆ ಸಾಧ್ಯ. ರಸವಾದಿಗೆ ಸೀಸದಿಂದ ಚಿನ್ನವನ್ನು ತಯಾರಿಸುವುದಕ್ಕೆ ಸಾಧ್ಯವಿಲ್ಲವೆಂಬ ವೈಜ್ಞಾನಿಕ ಅರಿವು ಇದ್ದಿದ್ದರೆ, ಅವನು ಸೀಸದಿಂದ ಚಿನ್ನವನ್ನು ತಯಾರಿಸುವುದಕ್ಕೆ ಪ್ರಯತ್ನಿಸುತ್ತಾ ಹಲವು ಶತಮಾನಗಳ ಕಾಲ ಶ್ರಮವನ್ನು ವ್ಯರ್ಥಮಾಡಬೇಕಾಗಿರಲಿಲ್ಲ.

ಕೈಗಾರಿಕಾ ಕ್ರಾಂತಿಗೆ ಮೊದಲು ಇವೆರಡು ಜ್ಞಾನಶಾಖೆಗಳು ಪರಸ್ಪರ ಪ್ರತ್ಯೇಕವಾಗಿದ್ದವು. ತಾಂತ್ರಿಕ ಅನ್ವೇಷಣೆಗಳು ಪ್ರಾಯೋಗಿಕ ಜ್ಞಾನದ ನೆಲೆಯಲ್ಲಿ ನಡೆಯುತ್ತಿತ್ತು. ಅವು ಬಹುತೇಕ ಅನುಭವದಿಂದ ಕಂಡುಕೊಂಡ, ತಲೆಮಾರುಗಳಿಂದ ಹರಿದುಬಂದ ಜ್ಞಾನವಾಗಿತ್ತು.

1760432629544

ವೈಜ್ಞಾನಿಕ ಅನ್ವೇಷಣೆಗಳು ಹಾಗೂ ಅವುಗಳ ಪ್ರಾಯೋಗಿಕ ಬಳಕೆ ಒಂದನ್ನೊಂದು ಬೆಳೆಸುತ್ತವೆ. ವೈಜ್ಞಾನಿಕ ಅನ್ವೇಷಣೆಗಳು ಪ್ರಾಯೋಗಿಕವಾಗಿ ಬಳಕೆಯಾದರೆ, ವಾಣಿಜ್ಯದ ದೃಷ್ಟಿಯಿಂದ ಲಾಭದಾಯಕವಾದರೆ ವೈಜ್ಞಾನಿಕ ಅನ್ವೇಷಣೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ಹೊಸ ಹೊಸ ಅನ್ವೇಷಣೆಗಳಾದರೆ ಬಳಕೆಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹೊಸ ಉತ್ಪನ್ನಗಳು ತಯಾರಾಗುತ್ತವೆ. ಉತ್ಪಾದನಾ ವಿಧಾನಗಳಲ್ಲಿ ಸುಧಾರಣೆಯಾಗುತ್ತದೆ. ಉತ್ಪಾದಕತೆ ಹೆಚ್ಚುತ್ತದೆ. ಆರ್ಥಿಕತೆಯಲ್ಲಿ ನಿರಂತರ ಪ್ರಗತಿ ಸಾಧ್ಯವಾಗುತ್ತದೆ.

6280704554856811927 1
(ಇಂಗ್ಲೆಂಡಿನಲ್ಲಿ ಯಂತ್ರಗಳನ್ನು ವಿರೋಧಿಸಿ ಲಡ್ಡೈಟರು ಚಳುವಳಿ ನಡೆಸಿದ್ದರು.)

ಇದು ಸಾಧ್ಯವಾಗಬೇಕಾದರೆ ಸಮಾಜ ಹೊಸ ಚಿಂತನೆಗಳಿಗೆ, ಬದಲಾವಣೆಗೆ ತೆರೆದುಕೊಳ್ಳಬೇಕು. ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಚರಿತ್ರೆಯುದ್ದಕ್ಕೂ ತಂತ್ರಜ್ಞಾನದ ಬದಲಾವಣೆಗೆ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಹೊಸ ಅನ್ವೇಷಣೆಗಳ ಬಗ್ಗೆ, ತಾಂತ್ರಿಕ ಬದಲಾವಣೆಗಳ ಬಗ್ಗೆ ಜನರಲ್ಲಿ ಯಾವಾಗಲೂ ಆತಂಕವಿರುತ್ತದೆ. ಅದರಿಂದ ತಮ್ಮ ನಿಪುಣತೆಗೆ, ಜ್ಞಾನಕ್ಕೆ, ಘನತೆಗೆ, ಸಂಪನ್ಮೂಲದ ಒಡೆತನಕ್ಕೆ, ಏಕಸ್ವಾಮ್ಯಕ್ಕೆ ದಕ್ಕೆಯಾಗುತ್ತದೆ ಅನ್ನುವ ಗಾಬರಿ ಇರುತ್ತದೆ. ಅಭದ್ರತೆ ಕಾಡುತ್ತಿರುತ್ತದೆ. ಹೊಸ ಅನ್ವೇಷಣೆಗಳು ಹಳೆಯ ಕ್ರಮಕ್ಕೆ ಸವಾಲಾಗಿ ತೋರುತ್ತವೆ. ಪರಿಣಾಮವಾಗಿ ಅನ್ವೇಷಣೆಗಳನ್ನು ಮತ್ತು ತಾಂತ್ರಿಕ ಬದಲಾವಣೆಯನ್ನು ತಡೆಯಲು ಪ್ರಯತ್ನಿಸುತ್ತಾರೆ. 1811-16ರ ಅವಧಿಯಲ್ಲಿ ಇಂಗ್ಲೆಂಡಿನಲ್ಲಿ ಯಂತ್ರಗಳನ್ನು ವಿರೋಧಿಸಿ ಲಡ್ಡೈಟರು ಚಳುವಳಿ ನಡೆಸಿದ್ದರು. ಕೆಲವೊಮ್ಮೆ ವಿಜ್ಞಾನಿಗಳೂ ಬದಲಾವಣೆಯನ್ನು ವಿರೋಧಿಸಿದ್ದಾರೆ. ಇಂತಹ ಹಲವು ಪ್ರಕರಣಗಳನ್ನು ಮೊಕಿರ್ ತಮ್ಮ ಬರಹಗಳಲ್ಲಿ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ಸ್ಟರ್ಲೈಜ್ ಮಾಡಬೇಕೆನ್ನುವ ಸರಳಚಿಂತನೆಯನ್ನು ಪ್ರಾರಂಭದಲ್ಲಿ ವೈದ್ಯರಿಗೆ ಒಪ್ಪಿಕೊಳ್ಳುವುದಕ್ಕೆ ಆಗಿರಲಿಲ್ಲ. ಅದನ್ನು ವಿರೋಧಿಸಿದ್ದರು. ತಾವು ಮಾಡುವ ಶಸ್ತ್ರಚಿಕಿತ್ಸೆಯಿಂದ ರೋಗಗಳು ಹರಡಬಹುದೆನ್ನುವ ಯೋಚನೆಯೇ ತಮಗೆ ಮಾಡುತ್ತಿರುವ ಅವಮಾನ ಅಂತ ಅವರು  ಭಾವಿಸಿದ್ದರು

ಹೊಸ ಬಗೆಯ ಆಲೋಚನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಬೌದ್ಧಿಕ ಸಹನೆ ಬೇಕಾಗುತ್ತದೆ. ಹದಿನೆಂಟನೇ ಶತಮಾನದಲ್ಲಿ ಯುರೋಪಿನಲ್ಲಿ ನಡೆದ ಪುನರುತ್ಥಾನ ಚಳುವಳಿ ಸಮಾಜವನ್ನು ಬದಲಾವಣೆಗಳಿಗೆ ಹೆಚ್ಚೆಚ್ಚು ತೆರೆದುಕೊಳ್ಳುವಂತೆ, ಬದಲಾವಣೆಗಳನ್ನು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ಸಮಾಜದಲ್ಲಿ ಸಾಂಸ್ಕೃತಿಕ ಹಾಗೂಸಾಮಾಜಿಕ ಪಲ್ಲಟಕ್ಕೆ ಅವಕಾಶ ಮಾಡಿಕೊಟ್ಟಿತು. ಬ್ರಿಟನ್ನಿನಲ್ಲಿ ವಿಜ್ಞಾನದೊಂದಿಗೆ ವ್ಯವಹರಿಸಲು ತಯಾರಿದ್ದ ವೃತ್ತಿಪರರು ಇದ್ದರು. ಬದಲಾವಣೆಯನ್ನು ಒಪ್ಪಿಕೊಳ್ಳುವಂತಹ ರಾಜಕೀಯ ವ್ಯವಸ್ಥೆಯೂ ಬ್ರಿಟನ್ನಿನಲ್ಲಿ ಸೃಷ್ಟಿಯಾಗಿತ್ತು. ಅಂದಿನ ಬ್ರಿಟಿಷ್ ಪಾರ್ಲಿಮೆಂಟ್ ಇಂದಿನ ದೃಷ್ಟಿಯಿಂದ ನೋಡಿದರೆ ಒಳ್ಳೆಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿರಲಿಲ್ಲ. ಸಾಕಷ್ಟು ನ್ಯೂನತೆಗಳಿದ್ದವು. ಆದರೆ ಅದು ಬದಲಾವಣೆಗೆ ಪ್ರೋತ್ಸಾಹ ನೀಡಿತು. ಈ ಎಲ್ಲಾ ಬೆಳೆವಣಿಗೆಗಳು ಬದಲಾವಣೆಗೆ ಇದ್ದ ಅಡಚಣೆಗಳನ್ನು ನಿವಾರಿಸಿತು. ಬದಲಾವಣೆಯನ್ನು ಒಪ್ಪಿಕೊಳ್ಳುವುದಕ್ಕೆ ಬೇಕಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಾತಾವರಣ ಬ್ರಿಟನ್ನಿನಲ್ಲಿ ಸೃಷ್ಟಿಯಾಯಿತು.  ಕೈಗಾರಿಕಾ ಕ್ರಾಂತಿ ಸಾಧ್ಯವಾಯಿತು. ಅಲ್ಲಿ ಪ್ರಾರಂಭವಾದ ನಿರಂತರ ಪ್ರಗತಿ ಕ್ರಮೇಣ ಇತರ ಕಡೆಗಳಿಗೆ ಹರಡುತ್ತಾ ಇದೊಂದು ಜಾಗತಿಕ ವಿದ್ಯಮಾನವಾಯಿತು. ಜನರ ಜೀವನಮಟ್ಟವೂ ಸುಧಾರಿಸತೊಡಗಿತು.

istockphoto 1363769403 612x612 1

ಪುನರುತ್ಥಾನ ಚಳುವಳಿಯಿಂದಾಗಿ ಉಪಯುಕ್ತ ಜ್ಞಾನವು ಹೆಚ್ಚೆಚ್ಚು ಕ್ರೋಡೀಕರಣಗೊಳ್ಳುವುದಕ್ಕೆ ಸಾಧ್ಯವಾಯಿತು. ಪುನರುತ್ಥಾನವು ಸೈದ್ದಾಂತಿಕ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ, ಅದನ್ನು ಪ್ರಾಯೋಗಿಕವಾಗಿ ಉಪಯುಕ್ತವಾಗುವಂತೆಯೂ ಮಾಡಿತು. ಕೈಗಾರಿಕಾ ಕ್ರಾಂತಿಯಿಂದಾಗಿ ನ್ಯೂಟನ್, ಬೇಕನ್ ಮೊದಲಾದವರು ಸೃಷ್ಟಿಸಿದ ಶುದ್ಧ ವೈಜ್ಞಾನಿಕ ಜ್ಞಾನ ಹಾಗೂ ಕುಶಲಕರ್ಮಿಗಳ ಹಾಗೂ ಅನ್ವೇಷಕರ ಪ್ರಾಯೋಗಿಕ ಜ್ಞಾನಗಳ ನಡುವೆ ಸೇತುವೆ ನಿರ್ಮಾಣವಾಯಿತು. ಹಾಗಾಗಿಯೇ ಮೋಕಿರ್ ಕೈಗಾರಿಕಾ ಕ್ರಾಂತಿಯನ್ನು “ಕೈಗಾರಿಕಾ ಪುನರುತ್ಥಾನ” ಅಂತ ಕರೆದದ್ದು. ಸೈದ್ದಾಂತಿಕ ಹಾಗೂ ಪ್ರಾಯೋಗಿಕ ಜ್ಞಾನಗಳ ನಡುವಿನ ಸಂಬಂಧ ಕ್ರಮೇಣ ಹೆಚ್ಚೆಚ್ಚು ಬಲಗೊಳ್ಳುತ್ತಾ ಹೋಯಿತು. ಪುನರುತ್ಥಾನ ಚಳುವಳಿ ತಂತ್ರಜ್ಞಾನದ ಬದಲಾವಣೆಯ ಮುಖ್ಯ ಚಾಲಕ ಶಕ್ತಿಯಾಗಿತ್ತು ಅನ್ನುವುದು ನಿಜ. ಆದರೆ ಪುನರುತ್ಥಾನವೊಂದರಿಂದಲೇ ಬದಲಾವಣೆ ಆಗಿಬಿಡಲಿಲ್ಲ. ಹೊಸ ಚಿಂತನೆಗಳು, ಅನ್ವೇಷಣೆಗಳು ಸೃಷ್ಟಿಯಾದಾಗ, ಅವುಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವುದಕ್ಕೆ, ಬಳಕೆಗೆ ತರುವುದಕ್ಕೆ ನುರಿತ ಕೆಲಸಗಾರರು ಬೇಕು. ತಾಂತ್ರಿಕ ಜ್ಞಾನ ಹಾಗೂ ಯಾಂತ್ರಿಕ ಸಾಮರ್ಥ್ಯ ಬೇಕು. ಬ್ರಿಟನ್ನಿನಲ್ಲಿ ನುರಿತ ಕುಶಲಕರ್ಮಿಗಳು ಹಾಗೂ ಇಂಜಿನಿಯರುಗಳು ದೊಡ್ಡ ಪ್ರಮಾಣದಲ್ಲಿ ಇದ್ದರು. ಜೇಮ್ಸ್ವಾಟ್ ಅಂತಹ ಪ್ರಖ್ಯಾತ ಅನ್ವೇಷಕರಿದ್ದರು. ನಕ್ಷೆಗಳನ್ನು, ಸೂಚನೆಗಳನ್ನು ಅರ್ಥಮಾಡಿಕೊಂಡು ಅದನ್ನು ಉಪಯುಕ್ತ ಉತ್ಪನ್ನಗಳನ್ನಾಗಿ ಮಾಡಬಲ್ಲ ಸಾಮರ್ಥ್ಯವಿದ್ದ ಕುಶಲಕರ್ಮಿಗಳಿದ್ದರು. ಹಾಗಾಗಿ ಕೈಗಾರಿಕಾ ಕ್ರಾಂತಿ ಸಾಧ್ಯವಾಯಿತು.

ಮೊಕಿರ್ ಅಭಿಪ್ರಾಯದಲ್ಲಿ ನಿರಂತರ ಆರ್ಥಿಕ ಪ್ರಗತಿ ಸಾಧ್ಯವಾಗಬೇಕಾದರೆ ಮೊದಲನೆಯದಾಗಿ ವಿಜ್ಞಾನ ಹಾಗೂ ತಂತ್ರಜ್ಞಾನ ಒಟ್ಟಿಗೆ ವಿಕಾಸವಾಗಬೇಕು. ಎರಡನೆಯದಾಗಿ ವೈಜ್ಞಾನಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಕೆಗೆ ತರುವುದಕ್ಕೆ ಯಾಂತ್ರಿಕ ಸಾಮರ್ಥ್ಯ ಹಾಗೂ ನುರಿತ ಕೆಲಸಗಾರರು ಬೇಕು. ಮೂರನೆಯದಾಗಿಅನ್ವೇಷಣೆಗಳನ್ನು ಹಾಗೂ ತಾಂತ್ರಿಕ ಬದಲಾವಣೆಯನ್ನು ಸಮಾಜ ಒಪ್ಪಿಕೊಳ್ಳಬೇಕು. ಈ ಮೂರರಲ್ಲಿ ಯಾವೊಂದು ಸಾಧ್ಯವಾಗದಿದ್ದರೂ ನಿರಂತರ ಪ್ರಗತಿ ಸಾಧ್ಯವಾಗುವುದಿಲ್ಲ.

ಹದಿನೆಂಟನೇ ಶತಮಾನದ ಮೊದಲು ಗ್ರೀಕ್, ರೋಮ್ ನಾಗರಿಕತೆಗಳು ತತ್ವಶಾಸ್ತ್ರ, ಜ್ಯಾಮಿತಿ, ರಾಜಕೀಯ ವಿಜ್ಞಾನ ಇವುಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದವು. 14ನೇ ಶತಮಾನದವರೆಗೆ ಚೀನಾ ಯುರೋಪಿಗಿಂತ ತಾಂತ್ರಿಕವಾಗಿ ಹೆಚ್ಚು ಮುಂದುವರಿದಿತ್ತು. ಉಳುಮೆ, ಕುಲುಮೆ ಇವೆಲ್ಲಾ ಬೆಳೆದಿತ್ತು. ಬಟ್ಟೆ, ಕಾಗದ, ಪೋರ್ಸಲಿನ್ ಇವುಗಳ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿತ್ತು. ಅಲ್ಲಿಯ ಉತ್ಪನ್ನಗಳು ಯುರೋಪಿಗೆ ಹೋಗುತ್ತಿದ್ದವು. ಆದರೆ ಅಲ್ಲಿಯ ಜ್ಞಾನ ಬಹುತೇಕ ಅನುಭವವನ್ನು ಆಧರಿಸಿದ ಜ್ಞಾನವಾಗಿತ್ತು. ಅದಕ್ಕೆ ಬೇಕಾದ ವಿಜ್ಞಾನ ಬೆಳೆದಿರಲಿಲ್ಲ. ಹಾಗಾಗಿ ಚೀನಾದಲ್ಲಿ ಕೈಗಾರಿಕಾ ಕ್ರಾಂತಿ ಸಾಧ್ಯವಾಗಲಿಲ್ಲ. ಮುಕ್ತ ವಿಜ್ಞಾನ ಹಾಗೂ ಸ್ಪರ್ಧೆಗೆ ಅವಕಾಶ ಇಲ್ಲದ್ದು ಚೀನಾವನ್ನು ತಾಂತ್ರಿಕವಾಗಿ ಸ್ಥಗಿತವಾಗಿಟ್ಟಿತ್ತು. ಯುರೋಪಿನಲ್ಲೂ ಕೈಗಾರಿಕಾ ಕ್ರಾಂತಿಯ ಮೊದಲು ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಜ್ಞಾನದ ನಡುವಿನ ಅಂತರ ದೊಡ್ಡದಾಗಿಯೇ ಇತ್ತು. ನುರಿತ ಕೆಲಸಗಾರರು, ಯಂತ್ರಿಕ ಜ್ಞಾನವಿದ್ದವರು ಇರಲಿಲ್ಲ. ಹಾಗಾಗಿ ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕ ಬಳಕೆಗೆ ತರುವುದಕ್ಕೆ ಸಾಧ್ಯವಾಗಲಿಲ್ಲ. ಡಾವಿನ್ಸಿಯ ಎಷ್ಟೊ ಚಿತ್ರಗಳು ಅವನ ಜೀವಿತ ಕಾಲದಲ್ಲಿ ಪ್ರಯೋಗಕ್ಕೆ ಬರಲೇ ಇಲ್ಲ. ಮೊಕಿರ್ ತಂತ್ರಜ್ಞಾನವನ್ನು ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ನೋಡಲಿಲ್ಲ. ಬದಲಿಗೆ ಕೈಗಾರಿಕಾ ಕ್ರಾಂತಿಗೆ ಕಾರಣವನ್ನಾಗಿ ನೋಡುತ್ತಾನೆ.

istockphoto 492104818 612x612 1

ಅಘಿಯಾನ್ ಹಾಗೂ ಹೌವಿಟ್ ಇಡೀ ಪ್ರಕ್ರಿಯೆಯನ್ನು ಇನ್ನೊಂದು ಆಯಾಮದಿಂದ ನೋಡುತ್ತಾರೆ. ಬದಲಾವಣೆಗಳಿಂದ, ಹೊಸ ಅನ್ವೇಷಣೆಗಳಿಂದ ಯಾವಾಗಲೂ ಎಲ್ಲರಿಗೂ ಅನುಕೂಲವಾಗುವುದಿಲ್ಲ. ಕೆಲವರು ಪಡೆದುಕೊಂಡರೆ ಕೆಲವರು ಕಳೆದುಕೊಳ್ಳುತ್ತಾರೆ. ಹೊಸ ಅನ್ವೇಷಣೆಗಳು ಹಳೆಯ ತಂತ್ರಜ್ಞಾನವನ್ನು ಹೊರದಬ್ಬುತ್ತವೆ. ಚಾಲ್ತಿಯಲ್ಲಿರುವ ಉತ್ಪನ್ನಗಳನ್ನು ಹಾಗೂ ಉತ್ಪಾದನಾ ವಿಧಾನಗಳನ್ನು ಮಾರುಕಟ್ಟೆ ಕಳೆದುಕೊಳ್ಳುತ್ತವೆ. ಒಂದು ಕಾಲದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿದ್ದ ನೋಕಿಯ ಮೊಬೈಲ್ ನಂತದಲ್ಲಿ ನಿರ್ಗಮಿಸಿತು. ಆಪಲ್, ಸ್ಯಾಮ್‌ಸಂಗ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡವು. ಶಿವನ ತಾಂಡವ ನೃತ್ಯದಂತೆ ಹೊಸದರ ಸೃಷ್ಟಿ ಹಾಗೂ ಹಳೆಯದರ ನಾಶ ಒಟ್ಟಿಗೆ ನಡೆಯುತ್ತಿರುತ್ತದೆ. ಜೋಸೆಫ್ ಶುಂಪಿಟರ್ ಇದನ್ನು “ಸೃಜನಶೀಲ ವಿನಾಶ” ಅಂತ ಕರೆದ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಇದೊಂದು “ನಿಲ್ಲದ ಬಿರುಗಾಳಿ” ಅಂತ ವಿವರಿಸಿದ.

ಅಘಿಯಾನ್ ಹಾಗೂ ಹೌವಿಟ್ ಶುಂಪಿಟರ್ ಅವರ ವಿವರಣೆಯನ್ನೇ ಮುಂದುವರಿಸುತ್ತಾ ನಿರಂತರ ಪ್ರಗತಿಗೆ ಈ ಸೃಜನಶೀಲ ವಿನಾಶದ ಪ್ರಕ್ರಿಯೆ ಮುಖ್ಯ ಕಾರಣ ಎಂದು ವಾದಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಹೊಸ ಅನ್ವೇಷಣೆಯೂ ಈಗಿರುವ ತಂತ್ರಜ್ಞಾನಕ್ಕೆ ಪೂರಕವಾಗಿರುವುದಿಲ್ಲ. ಅದೊಂದು ಬದಲಿ ತಂತ್ರಜ್ಞಾನವಾಗಿರುತ್ತದೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಾದ ಹೊಸ ಉತ್ಪನ್ನವು ಹಳೆಯದಕ್ಕೆ ಬದಲಿ ಉತ್ಪನ್ನವಾಗಿರುತ್ತದೆ. ಹೊಸ ಉತ್ಪನ್ನವು ಈಗಿರುವುದಕ್ಕಿಂತ ಉತ್ತಮ ಗುಣಮಟ್ಟದ ಉತ್ಪನ್ನವಾದರೆ ಹಳೆಯದರ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಹಳೆಯ ಉತ್ಪನ್ನ ಮಾರುಕಟ್ಟೆಯಿಂದ ಹೊರಹೋಗುತ್ತದೆ. ಹೊಸ ಯಶಸ್ವಿ ಉದ್ದಿಮೆದಾರರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಾರೆ. ಹಳಬರ ವ್ಯಾಪಾರ ಕಳೆದುಹೋಗುತ್ತದೆ. ಅವರು ಹೊರಹೋಗುತ್ತಾರೆ.

ಸೃಜನಶೀಲ ವಿನಾಶದ ಸಿದ್ದಾಂತವು ಮೂಲಭೂತವಾಗಿ ಸ್ಪರ್ಧೆ ಮತ್ತು ಅನ್ವೇಷಣೆಯ ನಡುವಿನ ಸಂಬಂಧವನ್ನು ತಿಳಿಸುತ್ತದೆ. ಹೊಸದರ ಪ್ರವೇಶ ಹಳೆಯದರ ನಿರ್ಗಮನ ಒಟ್ಟಿಗೆ ನಡೆಯುತ್ತಲೇ ಇರುತ್ತವೆ. ಅಮೇರಿಕಯಲ್ಲಿ ಶೇಕಡ 10ರಷ್ಟು ಉದ್ದಿಮೆಗಳು ಪ್ರತಿ ವರ್ಷ ಆರ್ಥಿಕತೆಯನ್ನು ಪ್ರವೇಶಿಸುತ್ತವೆ. ಹಾಗೆಯೇ ಶೇಕಡ 10ರಷ್ಟು ಉದ್ದಿಮೆಗಳು ಮಾರುಕಟ್ಟೆಯಿಂದ ಹೊರಹೋಗುತ್ತವೆ. ಇದು ಉದ್ಯೋಗಗಳ ವಿಷಯದಲ್ಲೂ ನಿಜ. ಒಂದು ಕಡೆ ಹಲವರು ಉದ್ಯೋಗ ಕಳೆದುಕೊಳ್ಳುತ್ತಿರುತ್ತಾರೆ. ಇನ್ನೊಂದು ಕಡೆ ಉದ್ಯೋಗ ಸೃಷ್ಟಿಯೂ ಆಗುತ್ತಿರುತ್ತದೆ. ಹಾಗೆಯೇ ಪ್ರತಿ ಅನ್ವೇಷಣೆಯೂ ಹಳೆಯ ಅನ್ವೇಷಣೆಯನ್ನು ಆಧರಿಸಿ ಸೃಷ್ಟಿಯಾಗಿರುತ್ತದೆ. ಹಳೆಯದನ್ನುಸುಧಾರಿಸಿಕೊಂಡು ಇನ್ನೊಂದು ಹೆಜ್ಜೆ ಮುಂದಿಡುತ್ತದೆ. ಆರ್ಥಿಕ ಪ್ರಗತಿಯ ದರ ಹೆಚ್ಚಬೇಕಾದರೆ ಈ ವಿನಾಶಕಾರಿ ಪ್ರಕ್ರಿಯೆಯೂ ತೀವ್ರವಾಗಬೇಕು. ಪ್ರಗತಿಯ ಪ್ರಮಾಣ ಸ್ಪರ್ಧೆ ಹಾಗೂ ಸ್ಥಿರತೆಯ ನಡುವಿನ ಸಮತೋಲನವನ್ನು ಅವಲಂಭಿಸಿರುತ್ತದೆ.

6280704554856811930

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಪ್ರಗತಿ ನಿಧಾನವಾಗಿದೆ. ಅನ್ವೇಷಣೆಗಳಾಗುತ್ತಿದ್ದರೂ ಪ್ರಗತಿ ಆ ದರದಲ್ಲಿ ಆಗುತ್ತಿಲ್ಲ. ಅದಕ್ಕೆ ಹಲವು ವಿವರಣೆಗಳನ್ನು ನೀಡಲಾಗುತ್ತಿದೆ. ಮೊದಲನೆಯದಾಗಿ ಅನ್ವೇಷಣೆಗೆ ಹಾಗೂ ಪ್ರಗತಿಗೆ ಸ್ಪರ್ಧಾತ್ಮಕ ಪರಿಸರ ಅವಶ್ಯಕ.

ಸ್ಪರ್ಧಾತ್ಮಕ ವಾತಾವರಣವಿದ್ದಾಗ ಲಭ್ಯವಿರುವ ಸಂಪನ್ಮೂಲಗಳನ್ನು ಹೆಚ್ಚು ಉತ್ಪಾದಕವಾಗಿ ಬಳಸಿಕೊಳ್ಳಲಾಗುತ್ತದೆ. ಗರಿಷ್ಠ ಪ್ರಮಾಣದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಉದ್ದಿಮೆಗಳ ಕೇಂದ್ರೀಕರಣ ಹೆಚ್ಚುತ್ತಿದೆ. ಕೆಲವೇ ಉದ್ದಿಮೆಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿವೆ. ಪ್ರಬಲ ಉದ್ದಿಮೆಗಳು ಹಣದ ಬಲದಿಂದ ಹಾಗೂ ಸರ್ಕಾರದ ನೆರವಿನಿಂದ ಬೇರೆಯವರು ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ತಡೆಯುತ್ತಿವೆ. ಹೊಸ ಅನ್ವೇಷಣೆಗಳಿಗೆ ತಡೆಯೊಡ್ಡುತ್ತಿವೆ. ಇದರಿಂದ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ವಾತಾವರಣ ದುರ್ಬಲವಾಗುತ್ತದೆ. ಉದಾಹರಣೆಗೆ ಇಂದು ಮೈಕ್ರೊಸಾಫ್ಟ್, ಗೂಗಲ್ ಅಂತಹ ಕೆಲವೇ ದೈತ್ಯ ಕಂಪೆನಿಗಳು ಕೃತಕ ಬುದ್ಧಿಮತ್ತೆಯ ಕ್ಷೇತ್ರವನ್ನು ನಿಯಂತ್ರಿಸುತ್ತಿವೆ.

ಮುಕ್ತ ಚಿಂತನೆಗೆ, ಚಿಂತನೆಯ ವಿನಿಮಯಕ್ಕೆ ಅವಕಾಶಗಳು ಕಡಿಮೆಯಾಗುತ್ತಿರುವುದು ಕೂಡ ಅನ್ವೇಷಣೆಗಳ ಇಳಿಕೆಗೆ ಮತ್ತೊಂದು  ಕಾರಣ. ವಿಜ್ಞಾನಕ್ಕೆ ಬೆಂಬಲ ಕಡಿಮೆಯಾಗುತ್ತಿರುವುದು ಸಮಸ್ಯೆಯನ್ನು ಹೆಚ್ಚು ಗಂಭೀರಗೊಳಿಸುತ್ತಿದೆ. ಅಂದರೆ ಅನ್ವೇಷಣೆಗೆ ಬೇಕಾದ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ವಾತಾವರಣ ಮಾಸಿಹೋಗುತ್ತಿದೆ. ಹವಾಮಾನದ ಬದಲಾವಣೆ, ನೈಸರ್ಗಿಕ ಸಂಪನ್ಮೂಲದ ಅಪಬಳಕೆ ಇವೆಲ್ಲಾ ಪ್ರಗತಿಯ ಮೇಲೆ ಋಣಾತ್ಮಕ ಪರಿಣಾಮ ಬೀರುವುದರ ಜೊತೆಗೆ, ತಂತ್ರಜ್ಞಾನದ ಬದಲಾವಣೆಗೆ ವಿರೋಧವನ್ನು ಸೃಷ್ಟಿಸುತ್ತದೆ. ಹೊಸ ಅನ್ವೇಷಣೆಯೊಂದಿಗೆ ಸ್ಪರ್ಧಿಸಲಾರದ ಉದ್ಯಮಿಗಳಿಗೆ, ಹಾಗೂ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಬದಲಾವಣೆಯ ಬಗ್ಗೆ ಮೊದಲೇ ಅಸಮಾಧಾನವಿರುತ್ತದೆ. ಈಗ ಮತ್ತಷ್ಟು ಹೆಚ್ಚಾಗುತ್ತದೆ. ಸರ್ಕಾರಗಳು ಪೂರಕ ಸಂಸ್ಕೃತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಬೇಕಾಗುತ್ತದೆ.

image 83

ಉದ್ಯೋಗ ಕಳೆದುಕೊಂಡವರಿಗೆ ಹೊಸ ಉದ್ಯೋಗ ಕಂಡುಕೊಳ್ಳುವುದಕ್ಕೆ ನೆರವಾಗಬೇಕು. ಅವಶ್ಯಕತೆ ಇದ್ದರೆ ತರಬೇತಿಯನ್ನು ಕೊಡಬೇಕು. ಅನ್ವೇಷಣೆಗಳಿಗೆ ಸಬ್ಸಿಡಿಯನ್ನು ನೀಡಬೇಕಾಗಬಹುದು. ಡೆನ್ಮಾರ್ಕಿನಲ್ಲಿ “ಫ್ಲೆಕ್ಸಿಕ್ಯುರಿಟಿ” ಎಂಬ ವ್ಯವಸ್ಥೆ ಇದೆ. ಇದು ಉದ್ದಿಮೆದಾರರಿಗೆ ‘ಫ್ಲೆಕ್ಸಿ’ಬಿಲಿಟಿ ಒದಗಿಸುತ್ತಲೇ, ಕಾರ್ಮಿಕರ ಸೆ’ಕ್ಯುರಿಟಿ’ಯನ್ನು ಒದಗಿಸುವ ವ್ಯವಸ್ಥೆ. ಉದ್ದಿಮೆದಾರರಿಗೆ ಸೂಕ್ತ ಕೆಲಸಗಾರರನ್ನು ನೇಮಿಸಿಕೊಳ್ಳುವುದಕ್ಕೆ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಂಡವರಿಗೆ ನಿರುದ್ಯೋಗ ಭತ್ಯೆ ಹಾಗೂ ಮರುತರಬೇತಿಯ ವ್ಯವಸ್ಥೆಯೂ ಇರುತ್ತದೆ. ಇದರ ಉದ್ದೇಶ ಉದ್ಯೋಗದಲ್ಲಿ ಚಲನೆಯನ್ನು ತರುವುದು, ನಿರುದ್ಯೋಗವನ್ನು ತಗ್ಗಿಸುವುದು, ಕಾರ್ಮಿಕರಿಗೆ ತೊಂದರೆಯಾಗದಂತೆ ಅನ್ವೇಷಣೆಯನ್ನು ಉತ್ತೇಜಿಸುವುದು.

The Danish Flexicurity Model

ಭಾರತಲ್ಲೂ ಈ ನೋಬೆಲ್ ವಿಜೇತರ ಸಿದ್ಧಾಂತವನ್ನು ಅನುಸರಿಸಬೇಕಾದರೆ, ತಾಂತ್ರಿಕ ಬದಲಾವಣೆಗಳು ಹಾಗೂ ಅನ್ವೇಷಣೆಗಳು ನಡೆಯುವುದಕ್ಕೆ ಬೇಕಾದ ವಾತಾವರಣವನ್ನು ನಿರ್ಮಿಸಬೇಕು. ಅನ್ವೇಷಣೆಗಳು ಒಂದು ನಿರಂತರ ಪ್ರಕ್ರಿಯೆಯಾಗುವಂತೆ ನೋಡಿಕೊಳ್ಳಬೇಕು. ಎಲ್ಲೋ ಒಂದು ಕೃತಕ ಬುದ್ಧಿಮತ್ತೆಯ ಕೇಂದ್ರ ಸ್ಥಾಪನೆಯಾದರೆ, ಅಥವಾ ಒಂದು ಸ್ಯಾಟಲೈಟ್ ಉಡಾವಣೆ ಮಾಡಿಬಿಟ್ಟರೆ ಸಾಲುವುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆಯಾಗಬೇಕು. ಅದು ಸಾಧ್ಯವಾಗಬೇಕಾದರೆ ಅದಕ್ಕಿರುವ ಅಡಚಣೆಗಳನ್ನು ನಿವಾರಿಸಿಕೊಳ್ಳಬೇಕು. ವಿಜ್ಞಾನ ಹಾಗೂ ತಂತ್ರಜ್ಞಾನದ ನಡುವಿನ, ಅನ್ವೇಷಣೆ ಹಾಗೂ ಪ್ರಾಯೋಗಿಕ ಬಳಕೆಯ ನಡುವಿನ, ಕಾರ್ಖಾನೆ ಹಾಗೂ ಪ್ರಯೋಗಾಲಯದ ನಡುವಿನ, ವಿಶ್ವವಿದ್ಯಾನಿಲಯಗಳು ಹಾಗೂ ಕೈಗಾರಿಕೆಗಳ ನಡುವಿನ ಕಂದರ ಕಿರಿದಾಗಬೇಕು. ಬಂಡವಾಳ ಮಾತ್ರವಲ್ಲ, ಜ್ಞಾನವೂ ನಿರಂತರವಾಗಿ ಹರಿದು ಬರುತ್ತಿರುವಂತೆ ನೋಡಿಕೊಳ್ಳಬೇಕು. ಸಂಶೋಧನೆಯ ಮೇಲೆ ಹೂಡಿಕೆ ಮಾಡುವ ಮೂಲಕ ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಮಾಡಬೇಕು. ಚಿಂತನೆಯ ಪ್ರಕ್ರಿಯೆ ಯಾವುದೇ ನಿಯಂತ್ರಣವೂ ಇಲ್ಲದೆ ಮುಕ್ತವಾಗಿ ನಡೆಯುವುದಕ್ಕೆ ಅವಕಾಶವಿರಬೇಕು. ಎಲ್ಲಾ ಬಗೆಯ ಕೇಂದ್ರೀಕರಣವೂ ಅಂತಿಮವಾಗಿ ಸ್ಪರ್ಧಾತ್ಮಕ ವಾತಾವರಣಕ್ಕೆ ಅಡ್ಡಿಯೇ ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

6280704554856811943

ಇದು ಸ್ಥೂಲವಾಗಿ ಈ ಮೂವರು ಹೇಳುವ ಸಂಗತಿಗಳು.

ಪ್ರತಿಕ್ರಿಯೆಗಳು:

ಇದಕ್ಕೆ ಹಲವು ಬಗೆಯ ಪ್ರತಿಕ್ರಿಯೆಗಳು ಇವೆ. ಪ್ರಾಸಂಗಿಕವಾಗಿ ಒಂದೆರಡನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ಸಂಚಿಕೆಗಳಲ್ಲಿಯೂ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಕ್ಕೆ ಪ್ರಯತ್ನಿಸಲಾಗುತ್ತದೆ.

ಹಿಂದಿನ ವರ್ಷ ನೋಬೆಲ್ ಬಹುಮಾನ ಪಡೆದಿದ್ದ ಡೆರೆನ್ ಅಸಿಮೊಗ್ಲು ದೇಶದ ಅಭಿವೃದ್ಧಿಯನ್ನು ಒಂದು ದೇಶದ ಸಂಸ್ಥೆಗಳಲ್ಲಿ ಕಾಣುತ್ತಾರೆ. ಒಂದು ದೇಶ ಹೆಚ್ಚು ಪ್ರಜಾಸತ್ತಾತ್ಮಕವಾದಷ್ಟೂ ಅಲ್ಲಿ ಅಭಿವೃದ್ಧಿ ಹೆಚ್ಚುತ್ತದೆ ಎಂದು ವಾದಿಸುತ್ತಾರೆ.

ಇನ್ನೊಂದು ತುದಿಯಲ್ಲಿ ಮಾರ್ಕ್ಸ್ವಾದಿ ಚಿಂತಕ ಹಾಬ್ಸವಾನ್ ಅನ್ವೇಷಣೆಗಳ ಕೊಡುಗೆಯ ಮಟ್ಟಿಗೆ ಮೊಕಿರ್ ಸಿದ್ದಾಂತವನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಒಂದು ಸಮಾಜ ಈ ಅನ್ವೇಷಣೆಗಳನ್ನು ಯಾಕೆ ಬಯಸುತ್ತದೆ ಹಾಗು ಬಳಸುತ್ತದೆ ಅನ್ನುವುದಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುತ್ತಾರೆ. ಹಾಬ್ಸವಾನ್ ದೃಷ್ಟಿಯಲ್ಲಿ ಈ ಅನ್ವೇಷಣೆಗಳು ತರುವ ಲಾಭ ಅದನ್ನು ಒಪ್ಪಿಕೊಳ್ಳುವುದಕ್ಕೆ ಕಾರಣ. “ಮೊಕಿರ್ ಅನ್ವೇಷಣೆಯ ಪೂರೈಕೆಯ ಮಗ್ಗಲನ್ನು ಕುರಿತಂತೆ ತುಂಬಾ ಚರ್ಚಿಸಿದ್ದಾರೆ. ಆದರೆ ಅದಕ್ಕೆ ಬೇಡಿಕೆಗೆ ಇರುವ ಕಾರಣಗಳನ್ನು ಕುರಿತು ಅಷ್ಟಾಗಿ ಚರ್ಚಿಸುವುದಿಲ್ಲ.” ಎನ್ನುತ್ತಾರೆ. ತಂತ್ರಜ್ಞಾನವನ್ನು ಬಳಸಬೇಕೋ ಬೇಡವೋ, ಅದನ್ನು ಹೇಗೆ ಬಳಸಬೇಕು ಅನ್ನುವುದನ್ನು ನಿರ್ಧರಿಸುವ ಸಾಮಾಜಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಯನ್ನು ಕುರಿತಂತೆ ಮೊಕಿರ್ ಚರ್ಚಿಸುವುದಿಲ್ಲ ಎಂದು ಟೀಕಿಸುತ್ತಾರೆ.

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಂದು ಹೊಸ ರಾಷ್ಟ್ರೀಯ ಚಳುವಳಿ ಬೇಕಾಗಿದೆ

ನಾವ್ಯಾರೂ ಕೋತಿ ಮನುಷ್ಯನಾಗುವುದನ್ನು ನೋಡಿಲ್ಲ. ಆದರೆ ಮನುಷ್ಯರು  ಮಂಗಗಳಾಗುವುದನ್ನು ಆಗೀಗ ನೋಡುತ್ತಿರುತ್ತೇವೆ....

ಭಾರತ ಎಂಬ ಕಲ್ಪನೆಯನ್ನು ರಕ್ಷಿಸೋಣ

ಕೇಡಿನ ಕಾರ್ಮೋಡ ಭಾರತವನ್ನು ಆವರಿಸಿಕೊಂಡಿದೆ. ವಿಭಜನೆ ಹಾಗೂ  ದ್ವೇಷದ ನೆರಳು ಕವಿದುಕೊಂಡಿದೆ....

ಭಾರತದ ಆರ್ಥಿಕ ಸ್ಥಿತಿ-ಸಮಸ್ಯೆ, ಕಾರಣ ಮತ್ತು ಪರಿಹಾರ

ಭಾರತದ ಆರ್ಥಿಕತೆಯ ಸ್ಥಿತಿ ಚೆನ್ನಾಗಿಲ್ಲ, ಬಿಕ್ಕಟ್ಟು ತೀವ್ರವಾಗುತ್ತಿದೆ ಎಂದು ಬಹುಪಾಲು  ಅರ್ಥಶಾಸ್ತ್ರಜ್ಙರು...

ನೋಡಲು ಇಷ್ಟಪಡದೇ ಇರುವರಿಗಿಂತ ದೊಡ್ಡ ಕುರುಡರಿಲ್ಲ | ಪ್ರೋನಬ್ ಸೆನ್

ಭಾರತದ ಆರ್ಥಿಕತೆಯನ್ನು ಕುರಿತಂತೆ ಸೆಪ್ಟೆಂಬರ್ 22 2019 ರಂದು ಪ್ರಧಾನಮಂತ್ರಿಯವರು ಅಮೇರಿಕೆಯಲ್ಲಿ...