ನಾವ್ಯಾರೂ ಕೋತಿ ಮನುಷ್ಯನಾಗುವುದನ್ನು ನೋಡಿಲ್ಲ. ಆದರೆ ಮನುಷ್ಯರು ಮಂಗಗಳಾಗುವುದನ್ನು ಆಗೀಗ ನೋಡುತ್ತಿರುತ್ತೇವೆ. ತಾನು ಕಂಡೇ ಇಲ್ಲದ್ದನ್ನು, ಯಾರೂ ಯಾವುತ್ತೂ ಕಾಣದ್ದನ್ನು ಕಲ್ಪಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯ ಮನುಷ್ಯನಿಗೆ ಮಾತ್ರ ಸಾಧ್ಯ. ಚಿಂಪಾಂಜಿಗಳಿಗೆ ಕೆಲವು ಗುರುತುಗಳನ್ನು ಗ್ರಹಿಸಿಕೊಳ್ಳಲಿಕ್ಕೆ ಸಾಧ್ಯವಾಗಬಹುದು, ಕೆಲವು ಪದಗಳನ್ನೂ ಕಲಿಯಬಹುದು. ಆದರೆ ಯಾವುದೇ ಚಿಂಪಾಂಜಿಗೂ ಗಣೇಶನನ್ನೋ ಅಥವಾ ಒಂದು ಯುನಿಕಾರ್ನನನ್ನೋ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಈ ಗುಣವನ್ನು ಅಲ್ಲಗೆಳೆಯುವ ಬಲಪಂಥೀಯ ಜನಪ್ರಿಯ ರಾಜಕೀಯ ಜಗತ್ತಿನ ಎಲ್ಲೆಡೆ ಬೆಳೆಯುತ್ತಿದೆ.

“ದಲಿತರು ಅಂದರೆ ಮಲ ತೆಗೆಯುವವರು. ಅವರು ಸತ್ತ ಪ್ರಾಣಿಗಳನ್ನು, ಮನುಷ್ಯರ ಕಕ್ಕಸ್ಸನ್ನು ಮುಟ್ಟುವ ಜನ. ಅವರ ಕೈಯಲ್ಲಿ ಕೈಯಲ್ಲಿ ನೀರೇ ಕುಡಿಯುವುದಿಲ್ಲ. ಇನ್ನು ಅವರಿಗೆ ಮಗಳನ್ನು ಕೊಡುವುದೆ?” ಹಾಗೆ “ಮುಸಲ್ಮಾನರು ಕಡುಕರು, ಬಾಂಬು ಹಾಕಿ ಮುಗ್ಧ ಜನರನ್ನು ಕೊಲ್ಲೋ ಜನ. ಹಿಂಸೆ ಅವರ ಭಾಗವಾಗಿಬಿಟ್ಟಿದೆ.” ಹಾಗೆ ಹೇಳುತ್ತಾರೆ “ಕರಿಯರು ಅಂದ್ರೆ ಡ್ರಗ್ಸ್ ಮಾರೋರು ಅಂತ ಯಾರಿಗೆ ತಾನೆ ಗೊತ್ತಿಲ್ಲ. ಕ್ರಿಮಿನಲ್ಲುಗಳು. ಜೈಲು ತುಂಬಾ ಅವರೇ ತುಂಬಿಕೊಂಡಿದ್ದಾರೆ. ಅವರು ನಮಗೆ ಸಮಾನರಾಗೋದಕ್ಕೆ ಹೇಗೆ ಸಾಧ್ಯ?”
ದಲಿತರೇನು ಮಲ ತೆಗೆಯಬೇಕು ಅಂತ ಬಯಸಿಕೊಂಡು ತೆಗೆಯುತ್ತಿಲ್ಲ. ಹಾಗೆಯೇ ನೀಗ್ರೋಗಳು ತಮ್ಮದು ಗುಲಾಮಗಿರಿಯ ಹಾಗೂ ಅನ್ಯಾಯದ ಚರಿತ್ರೆ ಆಗಿರಲಿ ಅಂತ ಬಯಸಿರಲಿಲ್ಲ. ಕೊಲ್ಲೋದು ರಾಜಕೀಯ ಪ್ರತಿ ರೋಧದ ಒಂದು ರೂಪ. ಇಂದು ಮುಸ್ಲಿಂ ಭಯೋತ್ಪಾದಕತೆ ಆ ಹಿಂಸೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಸಾಮಾನ್ಯವಾಗಿ ಇಂತಹ ಹಿಂಸೆಯಲ್ಲಿ ಮುಗ್ಧರೆ ಸಾಯುತ್ತಿದ್ದರು. ಹಲವು ಬಂಗಾಲಿಗಳು ಮತ್ತು ಮಹಾರಾಷ್ಟ್ರದ (ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ್ ಸಾವಕರ್ ಸೇರಿದಂತೆ) ಹಿಂದುಗಳು ಇದನ್ನು ಬ್ರಿಟೀಷರ ವಿರುದ್ಧ ಬಳಸಿದ್ದರು. ಯಹೂದಿ ಮಿಲಿಟರಿ ಮಂದಿ ಬ್ರಿಟೀಷರ ವಿರುದ್ಧ ಬಳಸಿದ್ದರು. ಆಗ ಅದು ಪ್ಯಾಲೆಸ್ಟೈನ್ ಆಗಿತ್ತು. ಐರಿಷ್ ಕ್ಯಾಥೊಲಿಕ್ಸರು ಇತ್ತೀಚಿನ ಕೆಲವು ವರ್ಷಗಳವರೆಗೆ ತಮ್ಮ ಇಂಗ್ಲಿಷ್ ದನಿಗಳ ವಿರುದ್ಧ ಬಳಸಿದ್ದರು. ಈಗ ಆ ಚರಿತ್ರೆ ಹೆಚ್ಚು ಕಮ್ಮಿ ಕಾಣೆಯಾಗಿದೆ. 2001ರ ನಂತರ ಮುಸ್ಲಿಮರು ಮಾತ್ರ ಭಯೋತ್ಪಾದಕರಾಗಿದ್ದಾರೆ. ಇದೇ ರೀತಿಯ ಪದಶಃ ವಿವರಣೆ ಕೊಡೊ ಪ್ರವೃತ್ತಿ ಭೂಮಿ ಚಪ್ಪಟೆಯಾಗಿದೆ ಎಂಬ ಚಳುವಳಿಗೂ ಸ್ಪೂರ್ತಿ ನೀಡಿದೆ. ಅಮೇರಿಕೆಯಲ್ಲಿ ಟ್ರಂಪ್ ಬೆಂಬಲಿಗರಲ್ಲಿ ಇದು ತುಂಬಾ ಜನಪ್ರಿಯವಾಗಿದೆ: “ನನಗೆ ಭೂಮಿ ಚಪ್ಪಟೆಯಾಗಿ ಕಾಣುತ್ತಿದೆ. ಅಷ್ಟೇ ಅಲ್ಲ ಬೈಬಲಿನಲ್ಲೂ ಹಾಗೆ ಹೇಳಿದೆ.” ಜೊತೆಗೆ ಪಾಪ ಡಾರ್ವಿನನ್ನು ಕೂಡ ಬೈಬಲ್ ಗೆಳೆಯರು, ಹಾಗೂ ನಮ್ಮ ಹಿಂದಿ ವಲಯದವರು ಟೀಕಿಸುತ್ತಿದ್ದಾರೆ. ಡಾರ್ವಿನ್ ಹೇಳೋದು ಅವರ ಧರ್ಮಗ್ರಂಥಗಳಿಗೆ ಅನುಗುಣವಾಗಿ ಇಲ್ಲವಂತೆ. ಇಂತಹ ನಿಲುವುಗಳನ್ನು ಸಮಾಜದ ಮೇಲ್ ಸ್ತರದದವರ ವಿಜ್ಞಾನ ಹಾಗೂ ಸಮಾಜವಿಜ್ಞಾನದ ಆಚರಣೆಗಳಿಗೆ ತಲಸಮುದಾಯದ ಸವಾಲು ಅಂತ ಭಾವಿಸುವ ಅಪಾಯ ಇದೆ. ಆದರೆ ಅದು ತಪ್ಪು. ಮತ್ತು ಅಂತಿಮವಾಗಿ ಅವರನ್ನು ಒಲೈಕೆ ಮಾಡಿದಂತೆ ಆಗುತ್ತದೆ. ರಸ್ತೆಯಲ್ಲಿನ ಹೆಂಗಸು ವಿಜ್ಞಾನದ ಸತ್ಯ ಅದರಷ್ಟಕ್ಕೆ ಕಾಣಬೇಕು ಅಂತ ಕೇಳುವುದಿಲ್ಲ. ಅವಳು ನಮ್ಮ ನಾಯಕರಷ್ಟೇ ಅಥವಾ ಅವ ರಿಗಿಂತ ಹೆಚ್ಚು ಅಮೂರ್ತ ಕಲ್ಪನೆಗಳನ್ನು ಗ್ರಹಿಸಿಕೊಳ್ಳಬಳ್ಳಲು. ಯಾಕೆಂದರೆ ಅವಳನ್ನು ಸಿನಿಸಿಸಂ ಅಷ್ಟೊಂದು ಕಾಡುವುದಿಲ್ಲ. ಅವಳು ದಿನ ಮೈಕ್ರೋವೇವ್ ಬಳಸುತ್ತಾಳೆ. ಬೆಂಕಿಯಿಲ್ಲದೆ ಶಾಖವನ್ನು ಅದು ಹೇಗೆ ಸೃಷ್ಟಿಸುತ್ತದೆ ಎಂದು ಪ್ರಶ್ನೆ ಕೇಳೊಲ್ಲ. ಅವಳಿಗೆ ಅಷ್ಟು ಜಾಣತನ ಇದೆ. ವಿಜ್ಞಾನದ ಕೆಲಸ ಮಾಡುವ ಎಷ್ಟೋ ವಿಷಯಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ ಅನ್ನೊದು ಅವಳಿಗೆ ಗೊತ್ತು. ವಿಕಾಸ ತನ್ನ ಮುಂದೆ ನಡೆಯಬೇಕು ಅಂತ ಅವಳು ಕೇಳುವುದಿಲ್ಲ. ನಮ್ಮಲ್ಲಿ ಹೆಚ್ಚಿನವರಿಗೆ ಮುಸ್ಲಿಮರನ್ನು ದ್ವೇಷಿಸುವುದಕ್ಕೆ ಆಗಲಿ, ದಲಿತರನ್ನು ಕೀಳಾಗಿ ಕಾಣುವುದಕ್ಕೆ ಆಗಲಿ ಪ್ರತ್ಯಕ್ಷ ಅನುಭವ ಕಾರಣ ಅಲ್ಲ ಅನ್ನೋದು ಸತ್ಯ. ನಮ್ಮ ದಿನನಿತ್ಯದ ಅನುಭವ ಅಂದರೆ ಮುಸ್ಲಿಮರು ನಮ್ಮ ನೆರೆಹೊರೆಯ ಇತರರಿಗಿಂತ ಭಿನ್ನವೇನಲ್ಲ. ಆದರೆ ಸಮಸ್ಯೆ ಅಂದರೆ ಈಗ ನಮ್ಮ ಅಕ್ಕಪಕ್ಕದಲ್ಲಿ ಮುಸ್ಲಿಮರು ವಾಸಿಸುತ್ತಿಲ್ಲ. ಗಾಬರಿ ಮೂಡಿಸಿ ಅವರಷ್ಟಕ್ಕೆ ಅದೃಶ್ಯರಾಗುವಂತೆ ಮಾಡಿದ್ದೇವೆ. ಅವರು ನಮಗೆ ಕಾಣಿಸುವುದು ವೃತ್ತಪುತ್ರಿಕೆಯ ಪುಟಗಳಲ್ಲಿ ಅಥವಾ ಮಾಂಸದ ಅಂಗಡಿಗಳಲ್ಲಿ. ಅದು ನಮ್ಮ ಪೂರ್ವಾಗ್ರಹವನ್ನು ಮತ್ತಷ್ಟು ಬಲಗೊಳಿಸುತ್ತದೆ.
ಇನ್ನು ಕೆಳಜಾತಿಯ ಅಳಿಯನ ವಿಷಯಕ್ಕೆ ಬಂದರೆ, ಅವನ ಮೋಹಕ ಗುಣ, ಐಹಿಕ ಜಗತ್ತಿನ ಯಶಸ್ಸು ಅವರಿಗೂ ವಿರೋಧಿಸುವುದಕ್ಕೆ ಕಷ್ಟ ಆಗುತ್ತದೆ. ಅದಕ್ಕೆ ಅವನು ‘ಅಪಾಯಕಾರಿ’ಯಾಗಿ ಕಾಣುತ್ತಾನೆ. ಹಾಗಾಗಿಯೇ ಕಾಪ್ ಪಂಚಾಯತಿಗಳು ಸೇರಿ ಅವರನ್ನು ಹೆದರಿಸಿಬೆದರಿಸಬೇಕಾಗಿದೆ.
ಈ ಸಂಕುಚಿತ ಮನಸ್ಸು ಮತ್ತು ಪೂರ್ವಾಗ್ರಹದ ಕಥೆಗಳಲ್ಲಿ ಆರ್ಗಾನಿಕ್ ಆಗಿದ್ದು ಅಥವಾ ಸತ್ಯ ಅನ್ನುವಂತಹದ್ದು ಏನೂ ಇಲ್ಲ. ಇಲ್ಲೊಂದಿಷ್ಟು ಕೊಂಕು, ಅಲ್ಲೊಂದಿಷ್ಟು ಅರ್ಧ ಸತ್ಯ ಸೇರಿಕೊಂಡು ಜಾಗರೂಕತೆಯಿಂದ ಇವೆಲ್ಲವನ್ನು ಕಟ್ಟಲಾಗಿದೆ. ಇಂದು ಪದ್ಮವಾತಿ, ನಾಳೆ ಅಯೋದ್ಯ ಇವೆಲ್ಲಾ ನಿರಂತರವಾಗಿ ಯುದ್ಧವೊಂದು ನಡೆಯುತ್ತಿದೆ. ತಮಗೆ ಅದರಲ್ಲಿ ಅಪಜಯವಾಗಬಹುದು ಅನ್ನುವ ಭಾವನೆಯನ್ನು ಜನರಲ್ಲಿ ಮೂಡಿಸುವ ಮೂಲಕ ಉರಿಯ ಆರದ ಹಾಗೇ ನೋಡಿಕೊಳ್ಳುತ್ತಿವೆ. ಬೇರೆ ಏನೂ ವಿಷಯ ಇಲ್ಲದೇ ಹೋದಾಗ ವಿಕಾಸದ ವಿಷಯವನ್ನು ಯಾಕೆ ಪ್ರಯತ್ನಿಸಬಾರದು? ಯಾರಾದೂ ಈ ಯುದ್ಧಲ್ಲಿ ತೊಡಗಿಕೊಳ್ಳಬಹುದು. ಹೀಗೆ ನಾವೆಲ್ಲಾ ಕೋತಿಗಳಾಗುತ್ತಿರುವುದು. ನಿಜವಾಗಿ ಆತಂಕಕಾರಿ ವಿಷಯ ಅಂದರೆ ಈ ಕುರಿತು ಏನೂ ಮಾಡದೇ ಇರುವುದು. ನನ್ನದೇ ವಿಷಯಕ್ಕೆ ಬಂದರೆ ಕೈ ಹಿಸುಕಿಕೊಂಡು ಒಳ್ಳೆಯ ಶಿಕ್ಷಣ ಬೇಕು ಅಂತ ಮಾತನಾಡುತ್ತೇನೆ. ನಿಜ ಹೇಳಬೇಕೆಂದರೆ ಆಶೋಕ ವಿಶ್ವ ವಿದ್ಯಾನಿಲಯದಲ್ಲಿ ಮತ್ತು ಅಹಮದಾಬಾದ್ ವಿಶ್ವವಿದ್ಯಾನಿಲಯದಲ್ಲಿ ಒಳ್ಳೆ ಕೆಲಸಗಳು ಆಗುತ್ತಿವೆ. ಭಾರತಕ್ಕೆ ಒಂದು ಉದಾರವಾದಿ ಶಿಕ್ಷಣದ ಅದ್ಭುತವಾದ ಕೆಲಸ ಅಲ್ಲಿ ನಡೆಯುತ್ತಿದೆ. ಹಾಗೆಯೇ ಚೆನ್ನೈನಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಅಂತಹ ಸಂಸ್ಥೆಗಳಲ್ಲೂ ಒಳ್ಳೆ ಕೆಲಸ ಆಗುತ್ತಿದೆ.

ಆದರೆ ತುಂಬಾ ಕಡಿಮೆ. ತುಂಬಾ ಸಮಯ ಉಳಿದಿಲ್ಲ. ನಮ್ಮ ದೇಶವನ್ನು ಉಳಿಸಲು, ಅಥವಾ ನಮ್ಮಲ್ಲಿ ಅನೇಕರು ಇದೆ ಅಂದುಕೊಂಡಿದ್ದ ದೇಶವನ್ನು ಉಳಿಸಲು ಒಂದು ಚಳುವಳಿಯನ್ನು ಮಾಡಬೇಕಾಗಿದೆ. ಮುಕ್ತತತೆಯ, ಕುತೂಹಲದ, ಸಂವಾದದದ, ಅಮೂರ್ತತೆಯ, ಔದಾರ್ಯತೆ, ಗಾಂಭಿರ್ಯದ ನಮ್ಮ ಸಂಪ್ರದಾಯಗಳನ್ನು ವಿಜ್ರಂಭಿಸಲು ಒಂದು ಚಳುವಳಿಯನ್ನು ಹುಟ್ಟುಹಾಕಬೇಕಾಗಿದೆ. ಧಾರ್ಮಿಕ ಜನರ, ನಿರೀಶ್ವರವಾದಿಗಳು, ಭಾವುಕತೆಯ ಹಾಗೆಯೇ ವಿಚಾರವಂತಿಕೆಯ ಮತ್ತು ಭಾರತದ್ದೇ ಆದ ಎರಡರ ವಿಶಿಷ್ಟ ಮಿಶ್ರಣದ ಚಳುವಳಿ. ಒಂದು ಹೊಸ ರಾಷ್ಟ್ರೀಯ ಚಳುವಳಿ.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




