ಕೌಶಿಕ್ ಬಸು ಅವರು Cornell Universityನಲ್ಲಿ ಇಂಟರ್ನ್ಯಾಷನಲ್ ಸ್ಟಡೀಸ್ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು. 2009ರಿಂದ 2012ರವರೆಗೆ ಭಾರತ ಸರ್ಕಾರದ ಪ್ರಮುಖ ಸಲಹೆಗಾರರಾಗಿದ್ದರು. 2012ರಿಂದ 2016ರವರೆಗೆ World Bankನ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು. ಇದು The New York Timesನಲ್ಲಿ ಪ್ರಕಟವಾದ ಅವರ ಲೇಖನದ ಅನುವಾದವಾಗಿದೆ.

ಸರ್ಕಾರ ತುಂಬಾ ಬಲವಾಗಿದ್ದರೆ ಅಂತಹ ದೇಶಗಳಲ್ಲಿ ಅಂತಿಮವಾಗಿ ಆರ್ಥಿಕತೆ ಬಳಲುತ್ತದೆ. ಭಾರತ ಕೂಡ ಅದೇ ಹಾದಿ ಹಿಡಿಯುವ ಅಪಾಯದಲ್ಲಿದೆ. ಈ ಮೊದಲು ಇಲ್ಲಿ ಆರ್ಥಿಕತೆ ತೃಪ್ತಿಕರವಾಗೇ ಇತ್ತು. World Bank ಬೇರೆ ಬೇರೆ ದೇಶಗಳಲ್ಲಿ ಉದ್ಯಮ ನಡೆಸಲು ಇರುವ ವಾತಾವರಣ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ತೌಲನಿಕವಾಗಿ ಅಧ್ಯಯನ ಮಾಡಿ ಒಂದು ವರದಿಯನ್ನು ಪ್ರತಿ ವರ್ಷ ಪ್ರಕಟಿಸುತ್ತದೆ. ಈ ವರ್ಷವೂ ಅದು 190 ದೇಶಗಳಲ್ಲಿ ಅಂತಹ ಒಂದು ಅಧ್ಯಯನ ಮಾಡಿ ಒಂದು ವರದಿಯನ್ನು ಪ್ರಕಟಿಸಿದೆ. ಕಳೆದ ವರ್ಷ ಭಾರತ 77ನೇ ಸ್ಥಾನದಲ್ಲಿತ್ತು. ಈಗ ಅದರ ಸ್ಥಿತಿ ಸುಧಾರಿಸಿ ಅದು 63ನೇ ಸ್ಥಾನಕ್ಕೆ ಬಂದಿದೆ. ಭಾರತದ ಹಾಗೆ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಚೀನಾ ಮೊದಲಾದ ಹತ್ತು ದೇಶಗಳು ಈ ವರದಿಯಲ್ಲಿ ಪ್ರಗತಿಯನ್ನು ಸಾಧಿಸಿವೆ. ಆದರೆ ಭಾರತದಲ್ಲಿ ಪ್ರಮುಖ ಸೂಚಿಗಳು ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿವೆ.
2014ರಲ್ಲಿ ಅಧಿಕಾರಕ್ಕೆ ಬಂದರೆ ಭಾರತವನ್ನು ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಪ್ರಬಲವಾದ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇನೆ ಎಂಬ ಭರವಸೆಯನ್ನು Narendra Modi ನೀಡಿದ್ದರು. ಆಯ್ಕೆಯೂ ಆದರು. ಈ ವರ್ಷ ಮತ್ತೆ ಚುನಾಯಿತರಾದ ಮೇಲೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದರು. ಅಂದರೆ ಆರ್ಥಿಕತೆಯನ್ನು ಈಗ ಇರುವುದರ ದುಪ್ಪಟ್ಟು ಬೆಳೆಸುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದ ವರಮಾನದ ಬೆಳವಣಿಗೆಯ ದರ ಈ ವರ್ಷದ ಎರಡನೇ ಪಾದದಲ್ಲಿ ಕೇವಲ ಶೇಕಡಾ 5ರಷ್ಟಿದೆ. ಕಳೆದ ವರ್ಷ ಅದು ಶೇಕಡಾ 8ರಷ್ಟಿತ್ತು. 2019ರಲ್ಲಿ ಭಾರತದ ಬೆಳವಣಿಗೆಯ ದರ ಶೇಕಡಾ 7.3ರಷ್ಟು ಇರುತ್ತದೆ ಎಂದು International Monetary Fund ಏಪ್ರಿಲಿನಲ್ಲಿ ಅಂದಾಜು ಮಾಡಿತ್ತು. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿ ತನ್ನ ಅಂದಾಜನ್ನು ಅದು ಶೇಕಡಾ 6.1ಕ್ಕೆ ಇಳಿಸಿದೆ. 2003ರಿಂದ 2011ರವರೆಗೆ ಬೆಳವಣಿಗೆ ದರ ಸುಮಾರು ಶೇಕಡಾ 8.5ರಷ್ಟಿತ್ತು. 2005ರಿಂದ 2008ರ ಅವಧಿಯಲ್ಲಿ ಭಾರತದ ಆರ್ಥಿಕತೆಯ ವಾರ್ಷಿಕ ಬೆಳವಣಿಗೆ ಶೇಕಡಾ 9ಕ್ಕಿಂತ ಹೆಚ್ಚಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ದಿಢೀರನೆ ತೀರಾ ಕಡಿಮೆಯಾಗಿದೆ. ಇದು ಅನಿರೀಕ್ಷಿತವಾಗಿದ್ದು, ಕಳವಳಕಾರಿಯಾಗಿದೆ.
ವಿವರಗಳನ್ನು ಗಮನಿಸಿದರೆ ಈ ಕುಸಿತ ಸ್ಪಷ್ಟವಾಗುತ್ತದೆ. ಪ್ರಯಾಣಿಕರ ಕಾರು ಮಾರಾಟ ಇಳಿಯುತ್ತಿದೆ. 2018ಕ್ಕೆ ಹೋಲಿಸಿದರೆ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಅದು ಶೇಕಡಾ 23ರಷ್ಟು ಕುಸಿದಿದೆ ಎಂದು ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘ ತಿಳಿಸಿದೆ. ರಫ್ತು ಹಲವಾರು ದಿನಗಳಿಂದ ಮಂದಗೊಂಡಿದೆ. Standard & Poor’s ಭಾರತೀಯ ಹಣಕಾಸು ವಲಯದ ಹೆಚ್ಚುತ್ತಿರುವ ಅಪಾಯದ ಬಗ್ಗೆ ಎಚ್ಚರಿಸಿದೆ. ಈಗಿನ ನಿರುದ್ಯೋಗ ದರ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ತಲುಪಿದೆ.
ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿರುವುದರ ಜೊತೆಗೆ ಅಸಮಾನತೆಯೂ ಹೆಚ್ಚುತ್ತಿದೆ. Oxfam ಪ್ರಕಾರ 2001ರಲ್ಲಿ ಶೇಕಡಾ 73ರಷ್ಟು ಸಂಪತ್ತು ಶೇಕಡಾ 1ರಷ್ಟು ಶ್ರೀಮಂತ ಜನರಿಗೆ ಹೋಗುತ್ತಿತ್ತು. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಅಸಮಾನತೆ ಹದಗೆಡುತ್ತಿತ್ತು. ಆದರೆ ಬೆಳವಣಿಗೆ ನಿಧಾನವಾಗುತ್ತಿರುವುದರಿಂದ ಮತ್ತು ನಿರುದ್ಯೋಗ ಹೆಚ್ಚುತ್ತಿರುವುದರಿಂದ ಅದರ ಪರಿಣಾಮ ಇನ್ನಷ್ಟು ನೋವುಂಟುಮಾಡುತ್ತಿದೆ. ಕೆಲವು ಅಂದಾಜುಗಳ ಪ್ರಕಾರ ಆರ್ಥಿಕ ಬೆಳವಣಿಗೆ ಋಣಾತ್ಮಕವಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಭಾರತದಲ್ಲಿ ಉದ್ಯಮ ನಡೆಸಲು ಬೇಕಾದ ವಾತಾವರಣ ಸುಧಾರಿಸುವುದಕ್ಕೆ ಹೇಗೆ ಸಾಧ್ಯ?
ಒಂದು ದೇಶದಲ್ಲಿನ ಉದ್ಯಮ ನಡೆಸಲು ಇರುವ ಪರಿಸ್ಥಿತಿ ಎಷ್ಟು ಸಲೀಸಾಗಿದೆ ಎಂದು ನಿರ್ಧರಿಸಲು World Bank ಆಯಾ ದೇಶದ ಲಿಖಿತ ಕಾನೂನುಗಳನ್ನು ಗಮನಿಸುತ್ತದೆ; ಆದರೆ ಆಚರಣೆಯಲ್ಲಿ ಅದು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಪರಿಗಣಿಸುವುದಿಲ್ಲ. ವರದಿಯ ಪ್ರಕಾರ, ವ್ಯವಹಾರ ನಡೆಸುವುದಕ್ಕೆ ವಾತಾವರಣ ಎಷ್ಟು ಸುಲಭವಾಗಿದೆ ಎಂದು ಲೆಕ್ಕ ಹಾಕುವುದಕ್ಕೆ ಬಳಸುವ ಅಂಕಿಅಂಶದಲ್ಲಿ ಸುಮಾರು ಮೂರನೇ ಎರಡರಷ್ಟು ಕಾನೂನಿನ ಪಠ್ಯವನ್ನು ಆಧರಿಸಿರುತ್ತದೆ. ಅಂದರೆ ಸರ್ಕಾರಗಳು ಬೇಕಾದರೆ ತಮ್ಮ ದೇಶದ ಸೂಚ್ಯಾಂಕವನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ನಿಯಮಗಳನ್ನು ಬದಲಾಯಿಸಬಹುದು. ಆದರೆ ಆ ಬದಲಾವಣೆಗಳು ವಾಸ್ತವದಲ್ಲಿ ಪರಿಣಾಮಕಾರಿಯಾಗದೇ ಇರಬಹುದು. ನಿಜವಾದ ಪ್ರಗತಿಯಲ್ಲಿ ಕಾನೂನುಗಳು ಹೇಗೆ ಜಾರಿಗೆ ಬರುತ್ತವೆ ಎಂಬುದೇ ಮುಖ್ಯ.

ಇತ್ತೀಚಿನ ದಿನಗಳಲ್ಲಿ ಇಡೀ ಸಮಾಜದಲ್ಲಿ ಒಡಕು ಹೆಚ್ಚುತ್ತಿದೆ. ಸರ್ಕಾರದ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಪ್ರಮುಖ ಆರ್ಥಿಕ ಅಂಶಗಳ ವಿಷಯದಲ್ಲಂತೂ ಈ ವಿಶ್ವಾಸದ ಕೊರತೆ ಸ್ಪಷ್ಟವಾಗಿದೆ. ಹೂಡಿಕೆಯ ಕುಸಿತ ವಿಶ್ವಾಸದ ಕುಸಿತವನ್ನು ಪರೋಕ್ಷವಾಗಿ ಸೂಚಿಸುತ್ತದೆ. ಅರ್ಥಶಾಸ್ತ್ರಜ್ಞರು “ಹೂಡಿಕೆ” ಎಂದಾಗ ರಾಷ್ಟ್ರೀಯ ಉತ್ಪನ್ನದ ಒಂದು ಭಾಗವನ್ನು ಮಾತ್ರ ಪರಿಗಣಿಸುತ್ತಾರೆ. ಅದರಲ್ಲಿ ಆಹಾರ, ಬಟ್ಟೆ, ವಸತಿ ಇತ್ಯಾದಿ ಬಳಕೆಯ ವಸ್ತುಗಳು ಸೇರುವುದಿಲ್ಲ. ಕೇವಲ ಮುಂದಿನ ಉತ್ಪಾದಕತೆಯನ್ನು ಹೆಚ್ಚಿಸಬಲ್ಲ ಯಂತ್ರಗಳು, ಕಾರ್ಖಾನೆಗಳು ಮತ್ತು ಮೂಲಸೌಕರ್ಯಗಳು ಮಾತ್ರ ಸೇರಿರುತ್ತವೆ.
ದುಡಿಯುವ ಜನ ಹೇರಳವಾಗಿ ಇರುವ ರಾಷ್ಟ್ರಗಳಲ್ಲಿ ಹೂಡಿಕೆ ಹೆಚ್ಚಿದಂತೆ ಒಟ್ಟಾರೆ ಬೆಳವಣಿಗೆಯೂ ಹೆಚ್ಚುತ್ತದೆ. ಇದನ್ನು ಆರ್ಥಿಕ ಸಿದ್ಧಾಂತಗಳೂ ಹೇಳುತ್ತವೆ; ವಾಸ್ತವ ಬದುಕಿನಲ್ಲೂ ಪುರಾವೆಗಳು ದೊರೆಯುತ್ತವೆ. Robert Solow ಅವರ ಪ್ರಖ್ಯಾತ ಸಿದ್ಧಾಂತವೂ ಇದನ್ನೇ ಸೂಚಿಸುತ್ತದೆ. ವಿಶೇಷವಾಗಿ 1980ರ ದಶಕದಲ್ಲಿ ವೇಗವಾಗಿ ಬೆಳೆದ ಪೂರ್ವ ಏಷ್ಯನ್ ಆರ್ಥಿಕತೆಗಳ ಉದಾಹರಣೆಗಳು ಇದನ್ನು ಪುಷ್ಟೀಕರಿಸುತ್ತವೆ.
1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಹಲವು ವರ್ಷಗಳ ಕಾಲ ಭಾರತದಲ್ಲಿ ಹೂಡಿಕೆಯ ಪ್ರಮಾಣ ಕಡಿಮೆಯೇ ಇತ್ತು. 1970ರವರೆಗೆ ಹೂಡಿಕೆ ಜಿಡಿಪಿಯ ಶೇಕಡಾ 20ನ್ನು ಮೀರುವುದಿಲ್ಲ. 2004–05ರಲ್ಲಿ ಅದು ಮೊಟ್ಟಮೊದಲಿಗೆ ಶೇಕಡಾ 30ರ ಗಡಿಯನ್ನು ದಾಟಿತು. 2011–12ರಲ್ಲಿ ಶೇಕಡಾ 39ರಷ್ಟಾಯಿತು. 1980ರಲ್ಲಿ ಭಾರತ ಪೂರ್ವ ಏಷ್ಯನ್ ಆರ್ಥಿಕತೆಗಳನ್ನು ಹೋಲುವಂತೆ ಬೆಳೆಯತೊಡಗಿತು. ನಂತರ ಹೂಡಿಕೆ ಇಳಿಮುಖವಾಗತೊಡಗಿತು. 2016–17ರಲ್ಲಿ ಅದು ಮತ್ತೆ ಶೇಕಡಾ 30ಕ್ಕೆ ಇಳಿಯಿತು.
ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಉದ್ಯಮಿಗಳಿಗೆ ವಿಶ್ವಾಸ ಹೆಚ್ಚಿರುತ್ತದೆ; ಕುಸಿದರೆ ವಿಶ್ವಾಸವೂ ಕುಸಿಯುತ್ತದೆ. ಸದ್ಯದ ಪರಿಸ್ಥಿತಿ ಹಾಗೂ ಭವಿಷ್ಯದ ಬಗ್ಗೆ ವಿಶ್ವಾಸ ಇದ್ದರೆ ಉದ್ದಿಮೆ ಹೂಡಿಕೆ ಮಾಡುತ್ತದೆ; ಇಲ್ಲದಿದ್ದರೆ ಹಿಂದೇಟು ಹಾಕುತ್ತದೆ. ಸರ್ಕಾರ ಮಾರುಕಟ್ಟೆಯಲ್ಲಿ ತೀವ್ರವಾಗಿ ಹಸ್ತಕ್ಷೇಪ ಮಾಡಿದರೆ ವಿಶ್ವಾಸ ಕುಂದುತ್ತದೆ. ಉದಾಹರಣೆಗೆ 2016ರಲ್ಲಿ ಸರ್ಕಾರ ನೋಟುಗಳನ್ನು ರದ್ದುಗೊಳಿಸಿದಾಗ ವಿಶ್ವಾಸಕ್ಕೆ ಹೊಡೆತ ಬಿತ್ತು. ರಾಜಕೀಯ ಅಸಹನೆ ಅಥವಾ ಅಧಿಕಾರಶಾಹಿ ಪ್ರವೃತ್ತಿಯೂ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ.
ಅರ್ಥಶಾಸ್ತ್ರಜ್ಞರು ಇದನ್ನು ಒಪ್ಪಿಕೊಳ್ಳಲು ಹಿಂಜರಿಯಬಹುದು. ಆದರೆ ಒಂದು ದೇಶದ ಆರ್ಥಿಕ ಸ್ಥಿತಿ ಅದರ ರಾಜಕೀಯ ವ್ಯವಸ್ಥೆಯನ್ನೂ ಅವಲಂಬಿಸಿದೆ. ಸ್ವಾತಂತ್ರ್ಯಾನಂತರ ಭಾರತ ಪ್ರಜಾಸತ್ತೆ, ವಾಕ್ ಸ್ವಾತಂತ್ರ್ಯ, ಮುಕ್ತ ಮಾಧ್ಯಮ, ಧರ್ಮನಿರಪೇಕ್ಷತೆ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿತು. ದ್ವಿತೀಯ ಮಹಾಯುದ್ಧದ ನಂತರ ಅನೇಕ ದೇಶಗಳು ಸ್ವಾತಂತ್ರ್ಯ ಪಡೆದವು. ಇಂಡೋನೇಷಿಯಾ ಮತ್ತು ಘಾನಾದಂತಹ ದೇಶಗಳ ನಾಯಕರು ಪ್ರಗತಿಪರ ರಾಜಕೀಯವನ್ನು ಸ್ಥಾಪಿಸಲು ಪ್ರಯತ್ನಿಸಿದರು; ಆದರೆ ದಂಗೆಗಳು, ಗೊಂದಲಗಳು ಹಾಗೂ ಮಿಲಿಟರಿ ಆಡಳಿತಗಳಿಂದ ಆ ಪ್ರಯತ್ನಗಳು ವಿಫಲವಾದವು. ಭಾರತ ಮಾತ್ರ ತನ್ನ ಉದಾರ ಸಂವಿಧಾನ, ನಿಯಮಿತ ಚುನಾವಣೆಗಳು ಹಾಗೂ ಬಲವಾದ ಸುಪ್ರೀಂ ಕೋರ್ಟ್‌ನಿಂದ ಅಪವಾದವಾಗಿ ಉಳಿಯಿತು.
ಸ್ವಾತಂತ್ರ್ಯದ ಪ್ರಾರಂಭದ ದಶಕಗಳಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಿತ್ತು. ಪ್ರಗತಿಪರ ರಾಜಕೀಯಕ್ಕೆ ಆದ್ಯತೆ ನೀಡಿದ ಆಯ್ಕೆ ಸರಿಯೇ ಎಂಬ ಚರ್ಚೆ ಸಾಧ್ಯ; ಆದರೆ ಅದರಿಂದ ದೊರೆತ ರಾಜಕೀಯ ಬಂಡವಾಳವನ್ನು, ವಿಶೇಷವಾಗಿ 1990ರ ದಶಕದ ಸುಧಾರಣೆಗಳ ನಂತರ ಮತ್ತು 2003ರ ಯಶಸ್ಸಿನ ನಂತರ ಕಳೆದುಕೊಳ್ಳುವುದು ಅಪರಾಧವಾಗುತ್ತದೆ. ಭಾರತದ ಆರ್ಥಿಕತೆಯ ಬುನಾದಿ ಇನ್ನೂ ಬಲವಾಗಿದೆ. ಆದರೆ ಉದಾರ ಮನೋಭಾವ ಕುಂದಿರುವುದರಿಂದ ವಿಶ್ವಾಸ ಕುಸಿದಿದೆ ಮತ್ತು ಆರ್ಥಿಕ ಹಿನ್ನಡೆ ಉಂಟಾಗಿದೆ. ಭಾರತ ಮತ್ತೆ ತನ್ನ ಪ್ರಗತಿಪರ ಪರಂಪರೆಯನ್ನು ನೆನಪಿಸಿಕೊಂಡು ಅದನ್ನಾಧರಿಸಿ ಆರ್ಥಿಕತೆಯನ್ನು ಕಟ್ಟಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಆರ್ಥಿಕತೆಯನ್ನು ಮತ್ತೆ ಚೇತರಿಸಬಹುದು.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




