“ನೂರು ವರ್ಷಗಳ ಹಿಂದಿನ ಸ್ಪಾನಿಷ್ ಫ್ಲೂ ಹಾಗೂ ಇಂದಿನ ಕರೋನಾದಂತಹ ಜಾಗತಿಕ ಸಾಂಕ್ರಮಿಕಗಳು ಕೇವಲ ಆರೋಗ್ಯದ ತುರ್ತುಪರಿಸ್ಥಿತಿಯಲ್ಲ, ಅವು ನಮ್ಮ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುವ ಎಚ್ಚರಿಕೆಯ ಗಂಟೆಗಳಾಗಿವೆ. ನವಉದಾರವಾದೀ ಧೋರಣೆಗಳಿಂದಾಗಿ ಹದಗೆಟ್ಟಿರುವ ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಮಾರುಕಟ್ಟೆಯ ಏರಿಳಿತಗಳಿಗೆ ಸಿಲುಕಿರುವ ವಿತರಣಾ ವ್ಯವಸ್ಥೆಯನ್ನು ಈ ಲೇಖನವು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಖಾಸಗಿ ಆಸ್ಪತ್ರೆಗಳ ಲಾಭಕೋರತನ ಮತ್ತು ಅಗತ್ಯ ವಸ್ತುಗಳ ಕೃತಕ ಅಭಾವವನ್ನು ಎದುರಿಸಲು, ಬಲಿಷ್ಠವಾದ ‘ಸಾರ್ವಜನಿಕ ಆರೋಗ್ಯ ವ್ಯವಸ್ಥೆ’ ಹಾಗೂ ಎಲ್ಲರಿಗೂ ಲಭ್ಯವಾಗುವ ‘ಸಾರ್ವತ್ರಿಕ ಪಡಿತರ ಪದ್ಧತಿ’ ಇಂದಿನ ಅನಿವಾರ್ಯತೆ ಎಂಬುದನ್ನು ಈ ಬರಹವು ಮನದಟ್ಟು ಮಾಡಿಕೊಡುತ್ತದೆ.”
ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೋ ಬಲಿತೆಗೆದುಕೊಂಡ ಸಂಖ್ಯೆಗೆ ಹೋಲಿಸಿದರೆ ಈಗ ಕರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಕಡಿಮೆ ಇರಬಹುದು. ಆಗ ಅದು ಜಗತ್ತಿನಾದ್ಯಂತ 500 ಮಿಲಿಯನ್ ಜನರಿಗೆ ಸೋಂಕು ತಗುಲಿತ್ತು. ಅಂದರೆ ಆಗಿನ ಜಗತ್ತಿನ ಜನಸಂಖ್ಯೆಯ ಶೇಕಡ 27ರಷ್ಟು ಜನ ಅದರಿಂದ ತೊಂದರೆಗೊಳಗಾಗಿದ್ದರು. ಅವರಲ್ಲಿ ಸುಮಾರು ಶೇಕಡ 10ರಷ್ಟು ಜನ ಸತ್ತಿದ್ದರು (ಈ ಸಂಖ್ಯೆಯ ಬಗ್ಗೆ ವಿಭಿನ್ನ ಅಂದಾಜುಗಳಿವೆ. ಇದು ಒಂದು ಸರಾಸರಿ), ಭಾರತದಲ್ಲೇ 17 ಮಿಲಿಯನ್ ಜನ ಇದರಿಂದ ಪ್ರಾಣಕಳೆದುಕೊಂಡಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕರೋನ ವೈರಾಣುವಿನಿಂದ ಜಗತ್ತಿನಾದ್ಯಂತ ಪೀಡಿತರಾದವರ ಸಂಖ್ಯೆ ಸಧ್ಯಕ್ಕೆ ಎರಡು ಲಕ್ಷ ಮೀರಿಲ್ಲ.
ಸೋಂಕಿತರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು ಶೇಕಡ 3. ಈ ಮಹಾಮಾರಿ ಮುಂದೆ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಈ ಸಾಂಕ್ರಮಿಕ ಖಾಯಿಲೆಗಳೇ ಹಾಗೆ. ವಿಚಿತ್ರವಾಗಿ ನಡೆದುಕೊಳ್ಳುತ್ತವೆ. 1918ರಲ್ಲಿ ಬಂದಿದ್ದ ಸ್ಪಾನಿಷ್ ಜ್ವರ ಹೋಯಿತು ಅಂದುಕೊಳ್ಳುತ್ತಿದ್ದ ಹಾಗೆ, ಮತ್ತೆ ಎರಡನೇ ಬಾರಿ ತೀರಾ ತೀವ್ರವಾಗಿ ಎರಗಿತು. ಕೆಲವೇ ದಿನಗಳಲ್ಲಿ ಮತ್ತೆ ಹೊರಟು ಹೋಯಿತು. ಈಗಿನ ಕರೋನೊ ಕೂಡ ಹಾಗೆ. ಊಹಿಸುವುದಕ್ಕೆ ಸಾಧ್ಯವಿಲ್ಲ.

ಪ್ರೊ. ಪ್ರಭಾತ್ ಪಟ್ನಾಯಕ್ (Prabhat Patnaik) ಅವರು ಭಾರತದ ಪ್ರಸಿದ್ಧ ಆರ್ಥಿಕ ತಜ್ಞ, ಚಿಂತಕ ಮತ್ತು ಲೇಖಕರಾಗಿದ್ದು, Jawaharlal Nehru University ನಲ್ಲಿ ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮುಖ್ಯವಾಗಿ ಮಾರ್ಕ್ಸಿಸ್ಟ್ ಆರ್ಥಿಕ ಚಿಂತನೆ, ಜಾಗತೀಕರಣದ ಪರಿಣಾಮಗಳು ಮತ್ತು ಭಾರತದ ಆರ್ಥಿಕ ನೀತಿಗಳ ಕುರಿತು ವಿಶ್ಲೇಷಣೆ ಮಾಡುವುದರಿಂದ ಪ್ರಸಿದ್ಧರಾಗಿದ್ದಾರೆ. ಸಾಮಾನ್ಯ ಜನರ ಬದುಕಿನ ಮೇಲೆ ಆರ್ಥಿಕ ವ್ಯವಸ್ಥೆಗಳ ಪರಿಣಾಮವನ್ನು ತೀಕ್ಷ್ಣವಾಗಿ ವಿಮರ್ಶಿಸುವ ಅವರು, ಅನೇಕ ಪುಸ್ತಕಗಳು ಮತ್ತು ಲೇಖನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದಾರೆ.
ಆದರೆ ಅದರಿಂದ ನಾವು ಕಲಿಯಬೇಕಾದ ಮೂಲಭೂತ ಪಾಠ ಈಗಾಗಲೇ ಸ್ಪಷ್ಟವಾಗಿದೆ. ಅದು ಬೇಗ ಹೋಗಿಬಿಟ್ಟರೆ ಪರವಾಗಿಲ್ಲ. ನಾವು ತೆರಬೇಕಾದ ಬೆಲೆ ಕಡಿಮೆಯಾಗಬಹುದು. ಆದರೆ ಧೀರ್ಘಕಾಲ ಉಳಿದುಬಿಟ್ಟರೆ ಅದರ ಪರಿಣಾಮ ಘೋರವಾಗಿರಬಹುದು. ಹಿಂದೆಯೇ ನಾವು ಪಾಠ ಕಲಿತಿದ್ದರೆ ಹೀಗಾಗುತ್ತಿರಲಿಲ್ಲ. ವಿಶೇಷವಾಗಿ ಅದು ನಮಗೆ ಎರಡು ಬಹು ಮುಖ್ಯ ಪಾಠಗಳನ್ನು ಕಲಿಸಿದೆ.
ಮೊದಲನೆಯದು ದೇಶದಲ್ಲಿ ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬೇಕು. ಅದು ಇಡೀ ದೇಶದ ಜನರಿಗೆ ದೊರಕುವಂತಿರಬೇಕು. ಭಾರತದಲ್ಲಿ ಇಲ್ಲಿಯವರೆಗೆ ಕೇವಲ 140 ಪ್ರಕರಣಗಳು ಮಾತ್ರ ಕಾಣಿಸಿಕೊಂಡಿದೆ. ಇರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲೇ ಒಂದಿಷ್ಟು ವಿಶೇಷ ವ್ಯವಸ್ಥೆಯನ್ನು ಮಾಡಿಕೊಂಡು ಚಿಕಿತ್ಸೆ ಮಾಡಬಹುದು. ಹಾಗೆಯೇ ಸೋಂಕಿನ ಪರೀಕ್ಷೆ ಮಾಡಿರುವ ಸಂಖ್ಯೆಯೂ ಕಡಿಮೆ ಇರುವುದರಿಂದ ಲಭ್ಯವಿರುವ ಸಾರ್ವಜನಿಕ ವ್ಯವಸ್ಥೆಯಲ್ಲಿ ಅಂತಹ ಕಷ್ಟವಿಲ್ಲದೆ ಪರೀಕ್ಷೆಗೆ ವ್ಯವಸ್ಥೆ ಮಾಡಬಹುದು.
ಆದರೆ ಹೀಗೆ ಪರೀಕ್ಷೆ ಮಾಡಬೇಕಾದವರ ಹಾಗು ಸೊಂಕಿಗೆ ಒಳಗಾದವರ ಸಂಖ್ಯೆ ಹೆಚ್ಚಾದರೆ ಈಗಿರುವ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಸಾಲುವುದಿಲ್ಲ. ಖಾಸಗೀ ಆಸ್ಪತ್ರೆಗಳು ದುಬಾರಿ ಹಣ ಪಡೆಯದೆ ಪರೀಕ್ಷೆಯನ್ನಾಗಲಿ, ಚಿಕಿತ್ಸೆಯನ್ನಾಗಲಿ ಮಾಡುವುದಿಲ್ಲ. ಹಾಗಾಗಿ ಹೆಚ್ಚಿನ ರೋಗಿಗಳು ನರಳಬೇಕಾಗುತ್ತದೆ. ಬಡವರನ್ನು ಇದು ತೀವ್ರವಾಗಿ ಬಾಧಿಸುತ್ತದೆ.
ಸರ್ಕಾರ ಈಗಿನ ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ರೋಗಿಗಳನ್ನು ಪರೀಕ್ಷಿಸಲು ಹಾಗೂ ಚಿಕಿತ್ಸೆ ನೀಡಲು ಖಾಸಗೀ ಆಸ್ಪತ್ರೆಗಳನ್ನು ಒತ್ತಾಯಿಸಿದರೆ ಪರಿಸ್ಥಿತಿ ಬೇರೆಯಾಗಬಹುದು. ಆದರೆ ಅದರ ಸಾಧ್ಯತೆ ಕಡಿಮೆ. ಈತನಕದ ಭಾರತದ ಪರಿಸ್ಥಿತಿಯನ್ನು ನೋಡಿದರೆ ಖಾಸಗಿ ಆಸ್ಪತ್ರೆಗಳು ತುರ್ತಾಗಿ ಸೇರಿಸಿಕೊಳ್ಳಲೇಬೇಕಾಗಿ ಬಂದ ಪ್ರಕರಣಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಸಾಧ್ಯತೆ ಇಲ್ಲ. ದಿಢೀರನೆ ಹೃದಯಾಘಾತ ಆದವರನ್ನೋ, ಅಪಘಾತಕ್ಕೆ ಒಳಗಾದವರನ್ನೋ, ಹೀಗೆ “ಆಯ್ಕೆಯಿಲ್ಲದೆ” ಬಂದವರನ್ನೋ ಹಣ ಕಟ್ಟದೆ ಸೇರಿಸಿಕೊಳ್ಳುವ ಯಾವ ನೀತಿಯೂ ಇಲ್ಲ.
ಸಂಪೂರ್ಣವಾಗಿ ಮಾರುಕಟ್ಟೆಯ ಆರ್ಥಿಕತೆಯನ್ನು ಅನುಸ ರಿಸುವ ಅಮೇರಿಕೆಯ ಹಲವು ರಾಜ್ಯಗಳಲ್ಲಿ ಅಂತಹ ಅವಕಾಶಗಳು ಇವೆ. ತುರ್ತುಚಿಕಿತ್ಸೆ ಬೇಕಾದಾಗ ಪ್ರಮುಖ ಶಸ್ತ್ರಚಿಕಿತ್ಸೆಯೂ ಸೇರಿದಂತೆ ಚಿಕಿತ್ಸೆ ಮಾಡಲಾಗುತ್ತದೆ. ವಿಮಾ ಸೌಲಭ್ಯವಿಲ್ಲದಿದ್ದಾಗಲೂ ಪುಕ್ಕಟೆಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಅಂತಹ ಆಕಸ್ಮಿಕ ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕಾದ ಯಾವ ಒತ್ತಾಯವೂ ಖಾಸಗೀ ಆಸ್ಪತ್ರೆಗಳಿಗಿಲ್ಲ. ಅವುಗಳು ರಿಯಾಯತಿ ದರದಲ್ಲಿ ಭೂಮಿ ಹಾಗೂ ಇತರ ಹಲವು ಅನುಕೂಲಗಳನ್ನು ಸರ್ಕಾರದಿಂದ ಪಡೆದುಕೊಂಡಿರುತ್ತವೆ. ಆದರೂ ಅಲ್ಲಿ ಅಂತಹ ಪ್ರಕರಣಗಳಲ್ಲಿ ಪುಕ್ಕಟೆಯಾಗಿ ಚಿಕಿತ್ಸೆ ನೀಡುವುದಿಲ್ಲ.

ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಖಾಸಗೀ ಕ್ಷೇತ್ರದ ಮೇಲೆ ಅವಲಂಬನೆ ಹೆಚ್ಚುತ್ತಿದೆ. ಹಾಗಾಗಿ ಇಂತಹ ಸಾಂಕ್ರಮಿಕ ಖಾಯಿಲೆಗಳು ವ್ಯಾಪಕವಾದಾಗ ನಿಭಾಯಿಸುವುದು ಕಷ್ಟವಾಗುತ್ತದೆ. ಜಾಗತೀಕರಣದಿಂದಾಗಿ ಇಂತಹ ಸಾಂಕ್ರಮಿಕಗಳು ಆಗಾಗ ಸಂಭವಿಸುತ್ತಿವೆ. ನಿಜ 1918ರ ಇನ್‌ಫ್ಲುಯೆಂಜಾ ಸಾಂಕ್ರಮಿಕದಷ್ಟು ತೀವ್ರವಾಗಿಲ್ಲದೇ ಇರಬಹುದು. ಆದರೆ ಜನ ಅವುಗಳಿಂದ ನರಳುವುದನ್ನು ತಪ್ಪಿಸಬೇಕಾದರೆ ಸಾರ್ವಜನಿಕ ಆರೋಗ್ಯವ್ಯವಸ್ಥೆ ತುಂಬಾ ಅವಶ್ಯಕ.
ಈ ಸಂದರ್ಭದಲ್ಲಿ ಇನ್ನೊಂದು ಪಾಠವನ್ನು ನಾವು ಕಲಿಯಬೇಕು. ಅವಶ್ಯಕ ವಸ್ತುಗಳ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಆವಶ್ಯಕವಾಗಿ ಬೇಕು. ಈ ಸಾಂಕ್ರಮಿಕ ಮಹಾಪಿಡುಗು, ಜಾಗತಿಕ ಆರ್ಥಿಕ ಹಿನ್ನಡೆಯ ಮೇಲೆ ಮಾಡುತ್ತಿರುವ ಪರಿಣಾಮವನ್ನು ಕುರಿತಂತೆ ಹಲವು ಬರಹಗಳು ಬಂದಿವೆ. ಈವರೆಗೂ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಯಾಗಿದ್ದ ಚೀನಾ ಇಂದು ಈ ಮಹಾಮಾರಿಯ ಕೇಂದ್ರವಾಗಿದೆ. ಅಲ್ಲಿ ಉತ್ಪನ್ನ ಕಡಿಮೆಯಾಗಿರುವುದರಿಂದ ಜಗತ್ತಿನ ಒಟ್ಟಾರೆ ಬೇಡಿಕೆಯಲ್ಲೇ ಕುಸಿತವಾಗಿದೆ. ಅಲ್ಲಿಂದ ಜಗತ್ತಿಗೆ ಸರಬರಾಜಾಗುತ್ತಿದ್ದ ಸರಕುಗಳು ಪೂರೈಕೆ ಆಗುತ್ತಿಲ್ಲ. ಅದರಿಂದ ಜಗತ್ತಿನ ಉತ್ಪನ್ನದ ಮೇಲೂ ಪ್ರತಿಕೂಲ ಪರಿಣಾಮವಾಗಿದೆ. ಜೊತೆಗೆ ಪ್ರವಾಸಿಗರ ಹಾಗೂ ಪ್ರಯಾಣಿಕರ ಸಂಖ್ಯೆ ಪೂರ್ಣವಾಗಿ ಕುಸಿದಿದೆ. ಇದರಿಂದ ವಿಮಾನ, ಹೋಟೆಲ್ ಕೈಗಾರಿಕೆ, ಇತ್ಯಾದಿ ಉದ್ದಿಮೆಗಳಿಗೂ ಹಾನಿಯಾಗಿದೆ.
ಅದರ ಪರಿಣಾಮವಾಗಿ ಉಳಿದ ಉದ್ದಿಮೆಗಳೂ ಕುಸಿದಿವೆ. ಈ ಸಾಂಕ್ರಮಿಕದಿಂದ ಜಾಗತಿಕ ಆರ್ಥಿಕತೆ ಕುಸಿಯುವುದು ಅನಿವಾರ್ಯ. ಇದಕ್ಕೆ ಇನ್ನೊಂದು ಆಯಾಮವಿದೆ. ಅದನ್ನು ನಾವು ಅಷ್ಟಾಗಿ ಗಮನಿಸಿಲ್ಲ. ಮಿಲಿಯನ್‌ಗಟ್ಟಲೆ ಜನ ಸಂಪೂರ್ಣವಾಗಿ ಮನೆಯಲ್ಲೇ ಉಳಿದಿರುವುದರಿಂದ ಹೆಚ್ಚಿನ ಅವಶ್ಯಕ ಸರಕುಗಳಿಗೆ ಬೇಡಿಕೆ ಏರುತ್ತದೆ. ಅವರು ಅದನ್ನು ಬಳಕೆಗಾಗಿ ಮಾತ್ರ ಶೇಖರಿಸಿಕೊಳ್ಳುವುದಿಲ್ಲ. ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಎಲ್ಲರೂ ಶೇಖರಿಸಿಕೊಳ್ಳುತ್ತಿದ್ದಾರೆ. ಇದರಿಂದ ಮುಂದೆ ಕೊರತೆ ಉಂಟಾಗಬಹುದು ಎನ್ನುವ ಭಯದಿಂದಲೂ, ಹತಾಶೆಯಿಂದ ಜನ ತುಂಬಿಟ್ಟುಕೊಳ್ಳುತ್ತಿದ್ದಾರೆ. ಜನ ಮನೆ ಬಿಟ್ಟು ಆಚೆ ಹೋಗಲಾಗದ ಪರಿಸ್ಥಿತಿ ಬಂದಾಗ, ಅದೂ ಧೀರ್ಘಕಾಲ ಪರಿಸ್ಥಿತಿ ಮುಂದುವರಿಯಬಹುದು ಎಂಬ ಆತಂಕ ಆವರಿಸಿಕೊಂಡಾಗ ತಮ್ಮ ಅವಶ್ಯಕತೆಗಿಂತ ಹೆಚ್ಚಾಗಿ ಸೇರಿಸಿಟ್ಟುಕೊಳ್ಳುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಜೊತೆಗೆ ಹಾಗೆ ಅತಿಯಾಗಿ ಸ್ಪಾಕ್ ಮಾಡಿಕೊಳ್ಳುವುದರಿಂದ ಕೊರತೆ ಬೀಳಬಹುದೆಂಬ ಲೆಕ್ಕಾಚಾರದಿಂದ ಕಾಳಸಂತೆಕೋರರು ದಾಸ್ತಾನುಗಳನ್ನು ಕೂಡಿಡುವುದು ಹೆಚ್ಚಾಗುತ್ತದೆ. ಅದರಿಂದ ಸರಕುಗಳ ಬೆಲೆ ಮತ್ತಷ್ಟು ಹೆಚ್ಚುತ್ತದೆ. ಹೀಗೆ ಈ ಸಾಂಕ್ರಮಿಕದಿಂದ ವಿವಿಧ ಅವಶ್ಯಕ ವಸ್ತುಗಳ ತೀವ್ರ ಕೊರತೆಯುಂಟಾಗುತ್ತದೆ.
ಈ ಪ್ರಕ್ರಿಯೆ ಭಾರತದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಸಾಂಕ್ರಮಿಕ ತೀವ್ರವಾದರೆ ಬರುವ ದಿನಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಬಹುದು. ಅದು ದುಡಿಯವ ಜನತೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಅವರೆಲ್ಲಾ ಸಾರ್ವಜನಿಕ ಪಡಿತರ ಪದ್ಧತಿಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಬಗ್ಗೆ ಯೋಚಿಸಬೇಕಾಗಿಲ್ಲ ಅನ್ನಬಹುದು. ಆದರೆ ಈ ವಾದ ಎರಡು ಕಾರಣಕ್ಕೆ ಸರಿಯಿಲ್ಲ. ಒಂದು ಸಾರ್ವಜನಿಕ ಪಡಿತರ ಪದ್ಧತಿಯಲ್ಲಿ ಎಲ್ಲಾ ಅವಶ್ಯಕ ವಸ್ತುಗಳನ್ನು ವಿತರಿಸುವುದಿಲ್ಲ. ಎರಡನೆಯದಾಗಿ ಎಲ್ಲಾ ಕಾರ್ಮಿಕರು ಸಾರ್ವಜನಿಕ ವಿತರಣ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಬರವುದಿಲ್ಲ. ಎಪಿಲ್ ಮತ್ತು ಬಿಪಿಎಲ್ ನಡುವೆ ವ್ಯತ್ಯಾಸ ಕಲ್ಪಿಸಿದ ನಂತರ ಸಾರ್ವಜನಿಕ ವಿತರಣ ವ್ಯವಸ್ಥೆ ಕೇವಲ ಬಿಪಿಎಲ್ ಇರುವವರಿಗೆ ಮಾತ್ರ ಸೀಮಿತವಾಯಿತು. ದೊಡ್ಡ ಸಂಖ್ಯೆಯ ಜನ ಅದರ ವ್ಯಾಪ್ತಿಯಿಂದ ಹೊರಗುಳಿದರು. ಹಾಗಾಗಿ ಮುಂದೆ ಜನ ಅತಿಯಾಗಿ ಸ್ಟಾಕ್ ಮಾಡಿಕೊಳ್ಳುವುದರಿಂದ ಹಾಗು ಕಾಳಸಂತೆಕೋರರ ಹಾವಳಿಯಿಂದ ಸರಕುಗಳು ಮಾಯವಾಗತೊಡಗಿದಾಗ ಈ ಜನ ತೊಂದರೆಗೆ ಒಳಗಾಗುತ್ತಾರೆ. ಇದೇ ಕಾರಣಕ್ಕೆ ಕೇವಲ ಆಹಾರಧಾನ್ಯಗಳು ಮಾತ್ರವಲ್ಲದೆ ಬಹುತೇಕ ಎಲ್ಲಾ ಅವಶ್ಯಕ ಪದಾರ್ಥಗಳನ್ನು ಮಾರುವ ಸಮಗ್ರ ಸಾರ್ವಜನಿಕ ವಿತರಣಾ ವ್ಯವಸ್ಥೆ ಅವಶ್ಯಕ.
ಈ ಕಷ್ಟ ಕಾಲದಲ್ಲಿ ಇಂತಹ ವ್ಯವಸ್ಥೆಯ ಅವಶ್ಯಕತೆ ನಮಗೆ ಗೋಚರವಾಗುತ್ತದೆ. ಆದರೆ ಇಂತಹ ಸಂದರ್ಭಗಳು ಅಪರೂಪವೇನಲ್ಲ. ಹಾಗಾಗಿ ವಿಭಿನ್ನ ಅವಶ್ಯಕ ವಸ್ತುಗಳನ್ನು ಮಾರುವ ವ್ಯವಸ್ಥೆ ಆರ್ಥಿಕತೆಯ ಒಂದು ಶಾಶ್ವತ ಲಕ್ಷಣವಾಗಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಸಾಂಕ್ರಮಿಕ ಮಹಾಮಾರಿ ಒಂದು ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯುದ್ಧದ ಸಮಯದಲ್ಲಿ ಆಗುವಂತೆ ಈಗಲೂ ಕೊರತೆಗಳು ಉಂಟಾಗುತ್ತದೆ. ಅಷ್ಟೇ ಅಲ್ಲ ಅದನ್ನು ಕೃತಕವಾಗಿ ಸೃಷ್ಟಿಸಲಾಗುತ್ತದೆ. ಅದಕ್ಕೆ ಸಾರ್ವತ್ರಿಕ ವಿತರಣಾ ವ್ಯವಸ್ಥೆ ಒಂದು ಅವಶ್ಯಕ ಪರಿಹಾರ. ಸಧ್ಯಕ್ಕೆ ಮಾತ್ರವಲ್ಲ ಅದು ಆರ್ಥಿಕತೆಯ ಒಂದು ಶಾಶ್ವತ ಭಾಗವಾಗಿಬಿಡಬೇಕು. ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಒಂದು ಸಾರ್ವತ್ರಿಕ ವಿತರಣಾ ವ್ಯವಸ್ಥೆ ಇಂದು ತುಂಬಾ ಅವಶ್ಯಕ ಅನ್ನವುದು ಸ್ಪಷ್ಟ. ನವಉದಾರವಾದೀ ವ್ಯವಸ್ಥೆ ಎರಡನ್ನೂ ನಾಶ ಮಾಡಿದೆ. ಅದು ಶಿಕ್ಷಣ ಹಾಗೂ ಆರೋಗ್ಯ ಸೇವೆಯಂತಹ ಅವಶ್ಯಕ ಸೇವೆಗಳನ್ನು ಖಾಸಗೀಕರಣವನ್ನು ಪ್ರೋತ್ಸಾಹಿಸಿದೆ. ಅದು ಎಂಎನ್‌ಸಿಗಳು ಸೇರಿದಂತೆ ಖಾಸಗೀ ವ್ಯಾಪಾರಿಗಳನ್ನು ಆಹಾರಧಾನ್ಯಗಳ ಮಾರುಕಟ್ಟೆಗೆ ಕರೆತಂದಿದೆ. ಶ್ರೀಮಂತ ರಾಷ್ಟ್ರಗಳು ಜಾಗತಿಕ ವ್ಯಾಪಾರಿ ಸಂಘಟನೆಯ ಮಾತುಕತೆಯ ಸಂದರ್ಭದಲ್ಲಿ ಭಾರತವು ಪಡಿತರ ಪದ್ಧತಿಯನ್ನು ನಿಲ್ಲಿಸಬೇಕೆಂದು ಬಯಸಿದವು. ಧಾನ್ಯಗಳನ್ನು ರೈತರಿಂದ ಕೊಂಡುಕೊಳ್ಳುವ ವ್ಯವಸ್ಥೆಯನ್ನು ನಿಲ್ಲಿಸಲು ಒತ್ತಾಯಿಸಿದವು. ಆದರೆ ಯಾವುದೇ ಭಾರತೀಯ ಸರ್ಕಾರವೂ ಇದಕ್ಕೆ ಧೈರ್ಯ ಮಾಡಲಿಲ್ಲ. ಹಾಗಾಗಿ ಇಂದಿಗೂ ನಮ್ಮಲ್ಲಿ ಭಾಗಶಃವಾದರೂ ಪಡಿತರ ಪದ್ಧತಿ ಉಳಿದುಕೊಂಡಿದೆ. ಅದು ಬಿಪಿಎಲ್ ರೂಪದಲ್ಲಿ ಅಸ್ತಿತ್ವದಲ್ಲಿದೆ. ಈ ಬದಲಾವಣೆಯನ್ನು ತಂದ ನವಉದಾರವಾದೀ ಆಡಳಿತವೂ ದೇಶವನ್ನು ಇಂತಹ ಮಹಾಮಾರಿಯ ಉಪಟಳಕ್ಕೆ ಪದೇ ಪದೇ ಒಡ್ಡುತ್ತಲೇ ಇದೆ. ಈ ಬದಲಾವಣೆಗಳನ್ನು ತಪ್ಪಿಸಿ ಮತ್ತೆ ಹಳೆಯ ವ್ಯವಸ್ಥೆಯನ್ನು ತರಬೇಕಾಗಿದೆ.
ಪ್ರಸ್ತುತ ಮಹಾಮಾರಿಯಿಂದ ನಾವು ಕಲಿಯಬೇಕಾದ ಒಟ್ಟಾರೆ ಪಾಠವೆಂದರೆ ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಗೂ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತೆ ಪರಿಚಯಿಸಬೇಕು. ಇಲ್ಲದೇ ಹೋದರೆ ಹಲವು ಪ್ರಶಸ್ತ ಜೀವಗಳನ್ನು ಅನಾವಶ್ಯಕವಾಗಿ ಕಳೆದುಕೊಳ್ಳಬೇಕಾಗುತ್ತದೆ.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




