[2005ರಲ್ಲಿ ಜಾರಿಗೆ ಬಂದ ಭಾರತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ಈಗ 20 ವರ್ಷಗಳನ್ನು ಪೂರೈಸಿದೆ. ಈ ಲೇಖನದಲ್ಲಿ, ಜೀನ್ ಡೇಜ್ ಮತ್ತು ರಾಹುಲ್ ಆರ್ ಅವರು ಈ ಯೋಜನೆಯ ಸಾಧನೆಗಳು, ವೈಫಲ್ಯಗಳು ಮತ್ತು ಭವಿಷ್ಯದ ಕುರಿತು ಕೆಲವು ಚಿಂತನೆಗಳನ್ನು ಮಂಡಿಸಿದ್ದಾರೆ. ಅಧಿಕೃತ ಅಂಕಿ-ಅಂಶಗಳ ಆಧಾರಿತ 10 ಚಾರ್ಟ್‌ಗಳ ಮೂಲಕ, ಅವರು ಉದ್ಯೋಗ ಸೃಷ್ಟಿ, ಅಂಚಿನಲ್ಲಿರುವ ಗುಂಪುಗಳ ಭಾಗವಹಿಸುವಿಕೆ, ನೈಜ ವೇತನ, ಆಡಳಿತಾತ್ಮಕ ವೆಚ್ಚ ಇತ್ಯಾದಿ ಅಂಶಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ್ದಾರೆ]
ಇಂದು ‘ಮನರೇಗಾ’ ಎಂದು ಕರೆಯಲ್ಪಡುವ ಈ ಕಾಯ್ದೆಯು ಭಾರತದ ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕಾರಗೊಂಡು ಇಪ್ಪತ್ತು ವರ್ಷಗಳು ಕಳೆದಿವೆ. ಅಂದು ಇದಕ್ಕೆ ಎಲ್ಲ ಪಕ್ಷಗಳ ಬೆಂಬಲವಿತ್ತು. ಆದರೂ ಆ ಕಾಲದ ಅನೇಕ ಅರ್ಥಶಾಸ್ತ್ರಜ್ಞರಿಗೆ ಈ ಕಾಯ್ದೆಯ ಉಪಯುಕ್ತತೆಯ ಬಗ್ಗೆ ಅನುಮಾನವಿತ್ತು. ನಿಜ, ಕಾಯ್ದೆಯನ್ನು ಜಾರಿಗೆ ತಂದ ಶುರುವಿನಲ್ಲಿ ಕಾಯ್ದೆಯ ಅನುಷ್ಠಾನದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡವು. ಆದಾಗ್ಯೂ, ಇಷ್ಟು ದೀರ್ಘಕಾಲದವರೆಗೆ, ಅದರಲ್ಲೂ ಭಾರತದಂತಹ ದೊಡ್ಡ ದೇಶದಲ್ಲಿ ಉದ್ಯೋಗ ಖಾತರಿ ಕಾಯ್ದೆಯೊಂದನ್ನು ಯಶಸ್ವಿಯಾಗಿ ಮತ್ತು ಸುಸ್ಥಿರವಾಗಿ ನಡೆಸಬಹುದು ಎಂಬುದಕ್ಕೆ ಮನರೇಗಾದ ಅನುಭವ ಒಂದು ದೊಡ್ಡ ಪುರಾವೆ.
ಈ ಯೋಜನೆಯ ಸಾಧನೆಗಳು, ವೈಫಲ್ಯಗಳು ಮತ್ತು ಭವಿಷ್ಯದ ಬಗ್ಗೆ ಸಾಮೂಹಿಕವಾಗಿ ಅವಲೋಕಿಸಲು ಇದು ಸರಿಯಾದ ಸಮಯ. ಪ್ರಾರಂಭಕ್ಕೆ, ಮನರೇಗಾದ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್‌ನಲ್ಲಿ (MIS) ಲಭ್ಯವಿರುವ ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಮನರೇಗಾದ ಹಲವು ಪ್ರಮುಖ ಪ್ರವೃತ್ತಿಗಳನ್ನು ಇಲ್ಲಿ ಅವಲೋಕಿಸಲಾಗಿದೆ. ದುರದೃಷ್ಟವಶಾತ್ ಮನರೇಗಾಕ್ಕೆ ಸಂಬಂಧಿಸಿದಂತೆ 2014-15ಕ್ಕೂ ಮುಂಚಿನ ದತ್ತಾಂಶಗಳು ಈಗ ಪೋರ್ಟಲ್‌ನಲ್ಲಿ ಲಭ್ಯವಿಲ್ಲ. ಇದು ಉದ್ದೇಶಪೂರ್ವಕವೋ ಅಥವಾ ಅಲ್ಲವೋ ತಿಳಿಯದು. ಆದರೆ ಅದು ಯೋಜನೆ ರೂಪಪಡೆದುಕೊಳ್ಳುತ್ತಿದ್ದ ನಿರ್ಣಾಯಕ ಅವಧಿ. ಅದು ಯೋಜನೆಯನ್ನು ‘ಆಚರಣೆಗೆ ತರುತ್ತಾ, ಅನುಭವದಿಂದ ಕಲಿಯುತ್ತಿದ್ದ’ ಕಾಲ. ಆ ಸಮಯದ ಮಾಹಿತಿಯ ಕೊರತೆ ನಿಜವಾಗಿ ದೊಡ್ಡ ನಷ್ಟ. ಆದರೂ, ವಿವಿಧ ವಿಶ್ವಾಸಾರ್ಹ ಮೂಲಗಳಿಂದ ನಾವು ಆ ಕಾಲದ ದತ್ತಾಂಶಗಳನ್ನು ಸಂಗ್ರಹಿಸಿ ಬಳಸಿದ್ದೇವೆ. ಇವೆಲ್ಲಾ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು.

ಅನುಭವದ ದೃಷ್ಟಿಯಿಂದ 2011-12 ಒಂದು ಪ್ರಮುಖ ಮೈಲಿಗಲ್ಲು. ಆ ವರ್ಷದಲ್ಲಿ ಮನರೇಗಾ ಯೋಜನೆಯಿಂದಾಗಿ ಸೃಷ್ಟಿಯಾದ ಉದ್ಯೋಗಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಅಂದಾಜುಗಳನ್ನು ಎರಡು ಸ್ವತಂತ್ರ ಸಮೀಕ್ಷೆಗಳು ದೃಢೀಕರಿಸಿವೆ. ಒಂದು ನ್ಯಾಷನಲ್ ಸ್ಯಾಂಪಲ್ ಸಮೀಕ್ಷೆಯ (NSS) 68ನೇ ಸುತ್ತಿನ ವರದಿ ಮತ್ತು ಮತ್ತೊಂದು ಇಂಡಿಯಾ ಹೂಮನ್ ಡೆವಲಪ್‌ಮೆಂಟ್ ಸರ್ವೆ(IHDS-2). ನಂತರದ ವರ್ಷಗಳಲ್ಲಿ ಅಂದರೆ 2013 ಮತ್ತು 2014ರ ಆರಂಭದಲ್ಲಿ ಈ ಕಾಯಿದೆಯ ಅನುಸೂಚಿಗಳಲ್ಲಿ (Schedules) ಒಂದಾದ ಮೇಲೊಂದರಂತೆ ಹಲವು ತಿದ್ದುಪಡಿಗಳನ್ನು ತರಲಾಯಿತು. ಇದರಿಂದ ಮನರೇಗಾ ಅನುಷ್ಠಾನದಲ್ಲಿ ಗಣನೀಯವಾದ ಬದಲಾವಣೆಗಳಾದವು. ವಿಶೇಷವಾಗಿ ಆ ಅವಧಿಯಲ್ಲಿ ಯೋಜನೆ ಹೆಚ್ಚೆಚ್ಚು ಕೇಂದ್ರೀಕರಣಗೊಳ್ಳತೊಡಗಿತು ಹಾಗೂ ಡಿಜಿಟಲೀಕರಣಗೊಂಡಿತು. ಹೀಗಾಗಿ, ಈ ಎರಡು ವರ್ಷಗಳು ಮನರೇಗಾ ಬೆಳವಣಿಗೆಯ ತುಲನಾತ್ಮಕ ಅಧ್ಯಯನಕ್ಕೆ ಹೆಚ್ಚು ಉಪಯುಕ್ತವಾಗುತ್ತವೆ.
ಇಲ್ಲಿ ನೀಡಲಾಗಿರುವ ಎಲ್ಲ ನಕ್ಷೆಗಳಲ್ಲಿ ಲಭ್ಯವಿರುವ ಅಧಿಕೃತ ಮನರೇಗಾ ದತ್ತಾಂಶಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಮನರೇಗಾ ಉದ್ಯೋಗಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಅಂಕಿಅಂಶಗಳು ಉತ್ತೇಕ್ಷಿತವಾಗಿರುವ ಸಾಧ್ಯತೆ ಹೆಚ್ಚು. ಮನರೇಗಾ ಹಣವನ್ನು ದುರುಪಯೋಗಪಡಿಸಿಕೊಳ್ಳುವ ದೃಷ್ಟಿಯಿಂದ ದಾಖಲಿಸಿದ ನಕಲಿ ಕೆಲಸದ ದಿನಗಳು ಇದರಲ್ಲಿ ಸೇರಿಕೊಂಡಿವೆ. ಇದನ್ನು ಬೇರೆ ಪ್ರತ್ಯೇಕ ಲೇಖನದಲ್ಲಿ ಚರ್ಚಿಸಲಾಗಿದೆ. (ಡೇಜ್ ಮತ್ತು ಸೋಮಂಚಿ, ಮುಂಬರಲಿರುವುದು).

ಉದ್ಯೋಗ ಸೃಷ್ಟಿ
2008-09ರಲ್ಲಿ ಮನರೇಗಾ ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಯಿತು. ಇಡೀ ದೇಶಕ್ಕೆ ವಿಸ್ತಾರಗೊಂಡ ಮೊದಲ ವರ್ಷ ಸೃಷ್ಟಿಯಾದ ವಾರ್ಷಿಕ ಉದ್ಯೋಗದ ‘ಮಾನವ ದಿನಗಳನ್ನು’ (Person-days) ಚಿತ್ರ 1 ತೋರಿಸುತ್ತದೆ. ಹೆಚ್ಚಿನ ವರ್ಷಗಳಲ್ಲಿ, 200-300 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು.
ಎರಡು ಸಂದರ್ಭಗಳಲ್ಲಿ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳು ಸೃಷ್ಟಿಯಾಗಿದ್ದನ್ನು ಗಮನಿಸಬಹುದು. ಒಮ್ಮೆ 2009-10ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿತ್ತು. ಇನ್ನೊಮ್ಮೆ 2020-22ರ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಮಾನವ ದಿನಗಳ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯಾಗಿತ್ತು. ಅಂದರೆ ಸಂಕಷ್ಟದ ಸಮಯದಲ್ಲಿ ಮನರೇಗಾ ಆಸರೆಯನ್ನು ಒದಗಿಸಿದೆ. ಇದು ಅದರ ಪ್ರಮುಖ ಗುಣ.
ವಿಶೇಷವಾಗಿ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ, ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಊರಿಗೆ ಹಿಂತಿರುಗಿದ ಕಾರ್ಮಿಕರಿಗೆ ಮನರೇಗಾ ಅವಶ್ಯಕ ಉದ್ಯೋಗ ಒದಗಿಸಿ ಆಸರೆಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷ ಅಂದರೆ 2014-15ರಲ್ಲಿ ಮಾತ್ರ ಉದ್ಯೋಗ ಸೃಷ್ಟಿ 200 ಕೋಟಿ ಮಾನವ ದಿನಗಳಿಗಿಂತ ಕಡಿಮೆ (166 ಕೋಟಿ) ಆಗಿತ್ತು. ನರೇಂದ್ರ ಮೋದಿಯವರ ಸರ್ಕಾರಕ್ಕೆ ಮನರೇಗಾ ಬಗ್ಗೆ ತಾತ್ಸಾರವಿತ್ತು ಮತ್ತು ಆ ಸಮಯದಲ್ಲಿ ಸರ್ಕಾರವು ಈ ಯೋಜನೆಯನ್ನು ಕೇವಲ ಕೆಲವು ಆಯ್ದ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನ ನಡೆಸಿತ್ತು. ಆ ವರ್ಷದಲ್ಲಿ ಕಂಡುಬಂದ ಕುಸಿತಕ್ಕೆ ಬಹುಶಃ ಇದು ಕಾರಣವಿರಬಹುದು. ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ಬದಲಿಸಿದ್ದು ಕೂಡ ಉದ್ಯೋಗ ಕಮ್ಮಿಯಾಗುವುದಕ್ಕೆ ಕಾರಣವಿದ್ದಿರಬಹುದು. 2023-24ರಲ್ಲಿ, ಮನರೇಗಾ 309 ಕೋಟಿ ಮಾನವ ದಿನಗಳಷ್ಟು ಉದ್ಯೋಗವನ್ನು ಸೃಷ್ಟಿಸಿದೆ. ಅಂದರೆ ಸರಾಸರಿ 6 ಕೋಟಿ ಕುಟುಂಬಗಳಿಗೆ ತಲಾ 50 ದಿನಗಳ ಕೆಲಸ ನೀಡಿದಂತಾಗುತ್ತದೆ.

ಒಟ್ಟು ಉದ್ಯೋಗದ ಮಾರುಕಟ್ಟೆಯಲ್ಲಿ ಮನರೇಗಾದ ಪಾಲು ಕೇವಲ ಶೇ. 2ರಷ್ಟಿದ್ದರೂ, ಬಡ ಕುಟುಂಬಗಳಿಗೆ ಇದು ಬದುಕಿನ ಆಸರೆಯಾಗಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸಿದೆ. 2023-24ರಲ್ಲಿ ಸುಮಾರು 50 ಲಕ್ಷ ಕುಟುಂಬಗಳು ಪೂರ್ಣ 100 ದಿನಗಳ ಕಾಲ ಕೆಲಸ ಮಾಡಿವೆ. ನಿರ್ದಿಷ್ಟ ಗುಂಪಿನ ಜನರಿಗೆ ಅಥವಾ ಕುಟುಂಬಗಳಿಗೆ ಮನರೇಗಾ ಬದುಕಿನ ಅತ್ಯಂತ ಮುಖ್ಯ ಮೂಲವಾಗಿತ್ತು. ಕೇವಲ ರಾಷ್ಟ್ರೀಯ ಸರಾಸರಿಯನ್ನು ನೋಡಿದರೆ ನಿಜವಾದ ಚಿತ್ರಣ ತಿಳಿಯುವುದಿಲ್ಲ. 2023-24ರಲ್ಲಿ 50 ಲಕ್ಷ ಕುಟುಂಬಗಳು ಪೂರ್ಣ ನೂರು ದಿನಗಳು, ಅಂದರೆ ಗರಿಷ್ಠ ಲಭ್ಯವಿರುವ ಅವಧಿಯ ಪೂರ್ತಿ ಮನರೇಗಾ ಯೋಜನೆಯಲ್ಲಿ ದುಡಿದಿದ್ದಾರೆ.
ಮನರೇಗಾ ಯೋಜನೆಗೆ ಕೇಂದ್ರ ಸರ್ಕಾರ ಮಾಡುತ್ತಿರುವ ವೆಚ್ಚ ನಿಜವಾಗಿ ತುಂಬಾ ಕಡಿಮೆ. 2009-10ರಲ್ಲಿ ಅದು ಭಾರತದ ಒಟ್ಟು ಜಿಡಿಪಿಯ ಶೇಕಡ 0.6ರಷ್ಟಿತ್ತು. ಇಂದು ಅದು ಶೇ. 0.3 ರಿಂದ 0.4ರಷ್ಟಿದೆ. ಇಷ್ಟು ದೊಡ್ಡ ಪ್ರಮಾಣದ ಉದ್ಯೋಗ ಕಾರ‍್ಯಕ್ರಮಕ್ಕೆ ಇದು ದೊಡ್ಡ ಆರ್ಥಿಕ ಹೊರೆಯೇ ಅಲ್ಲ.
ಪ್ರಾದೇಶಿಕ ಹಂಚಿಕೆ
ಮನರೇಗಾ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಿದೆ. ಆದರೆ ಉದ್ಯೋಗದ ಹಂಚಿಕೆ ರಾಜ್ಯಗಳ ನಡುವೆ ಸಮವಾಗಿ ಆಗಿಲ್ಲ, ತುಂಬಾ ವ್ಯತ್ಯಾಸವಿದೆ. ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ, ಬಿಹಾರ ರಾಜ್ಯಗಳು ಕ್ರಮವಾಗಿ ಉದ್ಯೋಗ ಸೃಷ್ಟಿಯಲ್ಲಿ ಮುಂದಿವೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಜನಸಂಖ್ಯೆಗೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಾಗಿರುವುದು ಕಡಿಮೆ ಎಂದೇ ಹೇಳಬೇಕು. ಆದರೂ ಜನಸಂಖ್ಯೆ ಹೆಚ್ಚಿರುವುದರಿಂದ ಉದ್ಯೋಗ ಸಿಕ್ಕವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಅತಿಹೆಚ್ಚು ಉದ್ಯೋಗ ಸೃಷ್ಟಿಸಿದ ಐದು ರಾಜ್ಯಗಳ ಪಟ್ಟಿಯಲ್ಲಿ ಅವು ಸೇರಿಕೊಂಡಿವೆ. ಹಾಗಾಗಿ ಮನರೇಗಾ ಉದ್ಯೋಗ ಹಂಚಿಕೆಯನ್ನು ವಿಶ್ಲೇಷಿಸಲು ಉತ್ತಮ ಮಾರ್ಗವೆಂದರೆ ಗ್ರಾಮೀಣ ಜನಸಂಖ್ಯೆಗೆ ಅನುಗುಣವಾಗಿ ಮಾನವ ದಿನಗಳನ್ನು ರಾಜ್ಯವಾರು ವಿಂಗಡಿಸುವುದು.

ಚಿತ್ರ-2ರಲ್ಲಿ ತಲಾ ಉದ್ಯೋಗದ ಸಂಖ್ಯೆಯನ್ನು ಎರಡು ನಕ್ಷೆಗಳಲ್ಲಿ ನೀಡಲಾಗಿದೆ. ಒಂದರಲ್ಲಿ 2011-12ನ್ನು ಇನ್ನೊಂದರಲ್ಲಿ 2023-24ನ್ನು ಹೋಲಿಕೆಗೆ ಆರಿಸಿಕೊಳ್ಳಲಾಗಿದೆ. ತಲಾ ಜನಸಂಖ್ಯೆಯ ಆಧಾರದ ಮೇಲೆ ನೋಡಿದರೆ ಎರಡೂ ವರ್ಷಗಳಲ್ಲಿ ಏಳು ಪ್ರಮುಖ ರಾಜ್ಯಗಳಾದ ಆಂಧ್ರಪ್ರದೇಶ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ, ತಮಿಳುನಾಡು ಹಾಗೂ ತೆಲಂಗಾಣ ಸಾಪೇಕ್ಷವಾಗಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದವು. ಈ ಎಲ್ಲ ರಾಜ್ಯಗಳು ಮನರೇಗಾವನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ ರಾಜ್ಯಗಳು. 2023-24ರಲ್ಲಿ ಅತಿ ಹೆಚ್ಚಿನ ಪ್ರಮಾಣದ ಮನರೇಗಾ ಉದ್ಯೋಗ ಸೃಷ್ಟಿಯಾಗಿರುವುದು ಕೆಲವು ಸಣ್ಣ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಲಡಾಖ್‌ನಲ್ಲಿ.
2011-12ರಲ್ಲಿ ಕೆಲವು ರಾಜ್ಯಗಳು ಮನರೇಗಾವನ್ನು ತುಂಬಾ ಕಡಿಮೆ ಬಳಸಿಕೊಂಡಿದ್ದವು. ಬಿಹಾರ, ಗುಜರಾತ್, ಒಡಿಶಾ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಂತಹ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳೂ ಇದನ್ನು ಸರಿಯಾಗಿ ಬಳಸಿ ಕೊಂಡಿರಲಿಲ್ಲ. 2023-24ರಲ್ಲಿ ಇವುಗಳಲ್ಲಿ ಕೆಲವು ರಾಜ್ಯಗಳಲ್ಲಿ ಸುಧಾರಣೆಯಾಗಿದೆ. ಆದರೆ, ಮನರೇಗಾ ಉದ್ಯೋಗದ ಪ್ರಮಾಣ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ತುಂಬ ಕಡಿಮೆ ಇತ್ತು.
ಗುಜರಾತ್ ವಿಷಯದಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ, ಅದು ಸಾಪೇಕ್ಷವಾಗಿ ಉತ್ತಮ ಸ್ಥಿತಿಯಲ್ಲಿದ್ದ ರಾಜ್ಯ ಮತ್ತು ಅಲ್ಲಿನ ರಾಜಕೀಯ ನಾಯಕತ್ವ ಮನರೇಗಾದಲ್ಲಿ ಎಂದೂ ಆಸಕ್ತಿಯನ್ನು ತೋರಿರಲಿಲ್ಲ. ಆದರೆ ಮಹಾರಾಷ್ಟ್ರದ ನಿರಾಸಕ್ತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಅದು ತನ್ನದೇ ಆದ ಉದ್ಯೋಗ ಖಾತರಿ ಕಾಯ್ದೆಯನ್ನು 1970ರಲ್ಲೇ ಜಾರಿಗೆ ತಂದಿತ್ತು.
ಬಡತನ ಮತ್ತು ಮನರೇಗಾ
ಛತ್ತೀಸ್‌ಗಢದಂತಹ ಬಡ ರಾಜ್ಯಗಳಲ್ಲಿ ತಲಾ ಮನರೇಗಾ ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗಿರುವಂತೆಯೇ, ಸಾಪೇಕ್ಷವಾಗಿ ಉತ್ತಮ ಸ್ಥಿತಿಯಲ್ಲಿರುವ ತಮಿಳುನಾಡಿನಂತಹ ರಾಜ್ಯಗಳಲ್ಲೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಕಡಿಮೆ ಉದ್ಯೋಗ ಸೃಷ್ಟಿಯಾಗಿರುವ ರಾಜ್ಯಗಳಲ್ಲಿ ಬಡ ರಾಜ್ಯಗಳು ಹಾಗೂ ಶ್ರೀಮಂತ ರಾಜ್ಯಗಳೂ ಸೇರಿವೆ. ರಾಜ್ಯಗಳ ಬಡತನ ಹಾಗೂ ಉದ್ಯೋಗದ ನಡುವೆ ‘ವಿಲೋಮ ಸಂಬಂಧ’ (Inverse relationship) ಇದೆ ಎಂದು ಕೆಲವೊಮ್ಮೆ ವಾದಿಸಲಾಗುತ್ತದೆ. ಅಂದರೆ ಮನರೇಗಾ ಅನುದಾನವು ಅತಿಯಾಗಿ ಶ್ರೀಮಂತ ರಾಜ್ಯಗಳಿಗೆ ಹೋಗುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ನೇಮಿಸಿದ ಸಮಿತಿಯು ಇತರ ವಿಷಯಗಳ ಜೊತೆಗೆ ಈ ಬಗ್ಗೆಯೂ ಪರಿಶೀಲಿಸಿದೆ. ಶ್ರೀಮಂತ ರಾಜ್ಯಗಳ ಮನರೇಗಾ ವೆಚ್ಚದ ಮೇಲೆ ಮಿತಿಯನ್ನು ವಿಧಿಸುವ ಉದ್ದೇಶದಿಂದ ಸಚಿವಾಲಯವು ಸಮಿತಿಗೆ ಈ ಬಗ್ಗೆ ಪರಿಶೀಲಿಸಲು ತಿಳಿಸಿದ್ದಿರಬಹುದು. ಸಮಿತಿಯ ವರದಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಅದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಹಲವು ಬಾರಿ ಕೇಳಿದ್ದರೂ ಅದನ್ನು ಪ್ರಕಟಿಸಿಲ್ಲ. ಕೆಲವು ಮಾಧ್ಯಮಗಳ ವರದಿಯ ಪ್ರಕಾರ, ಸಮಿತಿಯು ಮಂತ್ರಾಲಯದ ಕೋರಿಕೆಗೆ ಸ್ವಲ್ಪ ಮಟ್ಟಿಗೆ ಒಪ್ಪಿಕೊಂಡಿದೆ. ಆದರೆ, ರಾಜ್ಯಗಳ ಬಡತನ ಮತ್ತು ಮನರೇಗಾ ಉದ್ಯೋಗದ ನಡುವೆ ಯಾವುದೇ ‘ವಿಲೋಮ ಸಂಬಂಧ’ ಕಂಡುಬಂದಿಲ್ಲ.

ಚಿತ್ರ 3ರಲ್ಲಿ 2023-24ನ್ನು ಹೋಲಿಕೆಯ ವರ್ಷವನ್ನಾಗಿಟ್ಟುಕೊಂಡು ಇದನ್ನು ಗಮನಿಸಲಾಗಿದೆ. ಈ ಚಿತ್ರದಲ್ಲಿ ತಲಾ ಮನರೇಗಾ ಉದ್ಯೋಗವನ್ನು ಹಾಗೂ ಗ್ರಾಮೀಣ ಪ್ರದೇಶದ ಮಾಸಿಕ ತಲಾ ಖರ್ಚನ್ನು(MPCE) ಹೋಲಿಸಲಾಗಿದೆ. ಆ ವರ್ಷದ ಬಡತನದ ಅಂದಾಜು ಲಭ್ಯವಿಲ್ಲದ ಕಾರಣ ಹೀಗೆ ಮಾಡಲಾಗಿದೆ. ರಾಜ್ಯಗಳ ಬಡತನದ ಮಟ್ಟ ಮತ್ತು ಮನರೇಗಾ ಉದ್ಯೋಗದ ನಡುವೆ ಗಣನೀಯವಾದ ಯಾವುದೇ ಋಣಾತ್ಮಕ ಸಂಬಂಧ ಕಂಡುಬಂದಿಲ್ಲ. 2009-10 ಹಾಗೂ 2011-12ರ ಗ್ರಾಮೀಣ ಬಡತನದ ಅಂದಾಜು ಲಭ್ಯವಿದೆ. ಆದರೆ ಆಗಲೂ ಮನರೇಗಾ ತಲಾ ಉದ್ಯೋಗಕ್ಕೂ ಬಡತನಕ್ಕೂ ನಡುವೆ ಯಾವುದೇ ಸಂಬಂಧವೂ ಕಾಣಿಸುವುದಿಲ್ಲ.
ಅನೇಕರು ಮನರೇಗಾ ಅನುದಾನವು ಕೇವಲ ಶ್ರೀಮಂತ ರಾಜ್ಯಗಳಿಗೆ ಹೋಗುತ್ತಿದೆ ಎಂದು ವಾದಿಸುತ್ತಾರೆ. ನಿಜವಾಗಿ ಬಡತನ ಹಾಗೂ ಮನರೇಗಾ ಉದ್ಯೋಗ ಸೃಷ್ಟಿಯ ನಡುವೆ ಧನಾತ್ಮಕ ಸಂಬಂಧ ಇದ್ದರೆ ಒಳ್ಳೆಯದಿತ್ತು. ಬಿಹಾರ ಹಾಗೂ ಜಾರ್ಖಂಡ್ನಂತಹ ಬಡ ರಾಜ್ಯಗಳಲ್ಲಿ ಹೆಚ್ಚಿನ ಮನರೇಗಾ ಉದ್ಯೋಗವನ್ನು ಸೃಷ್ಟಿಸುವುದಕ್ಕೆ ಹಾಗೂ ಅದಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವುದಕ್ಕೆ ಸಾಧ್ಯವಾಗಿದ್ದರೆ ಒಳ್ಳೆಯದಿತ್ತು. ಈ ರಾಜ್ಯಗಳಿಗೆ ಹಾಗೆ ಮಾಡುವುದಕ್ಕೆ ನಿಜವಾಗಿ ಅಡ್ಡಿಯಾಗಿರುವುದು ಅಲ್ಲಿನ ಆಡಳಿತಾತ್ಮಕ ಸಾಮರ್ಥ್ಯದ ಕೊರತೆಯೋ ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯೋ ಹೇಳುವುದು ಕಷ್ಟವಾಗಬಹುದು.
ಬಹುಶಃ ಎರಡೂ ಕಾರಣಗಳಿರಬಹುದು. ಆದರೆ ವಾಸ್ತವವೆಂದರೆ, ಶ್ರೀಮಂತ ರಾಜ್ಯಗಳ ಮನರೇಗಾ ವೆಚ್ಚದ ಮೇಲೆ ಮಿತಿ ಹೇರುವುದರಿಂದ ಬಡ ರಾಜ್ಯಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ. ಬದಲಾಗಿ ಹಾಗೆ ಮಾಡುವುದರಿಂದ ‘ಬೇಡಿಕೆಗೆ ತಕ್ಕ ಕೆಲಸ’ ಎಂಬ ಮೂಲ ತತ್ವಕ್ಕೇ ಧಕ್ಕೆಯಾಗುತ್ತದೆ. ರಾಜ್ಯಗಳ ಒಳಗೆ ಮನರೇಗಾ ಉದ್ಯೋಗವು ಹೆಚ್ಚಾಗಿ ಅವಶ್ಯಕತೆ ಇರುವವರಿಗೇ ತಲುಪಿದೆ. ಮನರೇಗಾ ನಡೆಯುತ್ತಿರುವ ಪ್ರದೇಶಗಳನ್ನು ಗಮನಿಸಿದರೆ, ಕೆಲಸ ಮಾಡುತ್ತಿರುವವರು ಬಹುತೇಕ ಬಡ ಕುಟುಂಬಗಳಿಂದ ಬಂದಿರುವುದು ತಿಳಿಯುತ್ತದೆ. ಇದನ್ನು ಹಲವಾರು ಅಧ್ಯಯನಗಳು ಸ್ಪಷ್ಟಪಡಿಸಿವೆ.

ಋತುಮಾನದ ಪ್ರವೃತ್ತಿ (Seasonal Patterns)
ಕೃಷಿ ಕೆಲಸಗಳು ಕಡಿಮೆ ಇರುವ ಕಾಲದಲ್ಲಿ ನರೇಗಾ ಆಸರೆಯಾಗುತ್ತದೆ ಎಂಬುದನ್ನು ಚಿತ್ರ 4 ವಿವರಿಸುತ್ತದೆ. 2023-24ರಲ್ಲಿ, ನರೇಗಾ ಉದ್ಯೋಗವು ಏಪ್ರಿಲ್-ಮೇ-ಜೂನ್ ತಿಂಗಳುಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇವು ಬೇಸಿಗೆಯ ಒಣ ತಿಂಗಳುಗಳಾಗಿದ್ದು, ಹೊಲಗಳಲ್ಲಿ ಕೆಲಸ ಕಡಿಮೆಯಿರುತ್ತದೆ. ಒಟ್ಟು ನರೇಗಾ ಮಾನವ ದಿನಗಳಲ್ಲಿ ಶೇ.40ಕ್ಕಿಂತ ಹೆಚ್ಚು ಈ ಮೂರು ತಿಂಗಳುಗಳಲ್ಲೇ ಸೃಷ್ಟಿಯಾಗಿವೆ. ಆಶ್ಚರ್ಯವೆನಿಸಿದರೂ, ಜುಲೈ 2023ರಲ್ಲೂ ಸಾಕಷ್ಟು ಪ್ರಮಾಣದ ನರೇಗಾ ಕೆಲಸ ನಡೆದಿದೆ. ಇದು ಭಾರತದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯ ಕಾಲವಾಗಿದೆ. ವಾಸ್ತವವಾಗಿ ಇದರಲ್ಲಿ ಒಂದಿಷ್ಟು ಕೆಲಸಗಳು ಬೇಸಿಗೆಯಲ್ಲಿ ನಡೆದಿದ್ದು, ಯಾವುದೋ ಕಾರಣದಿಂದಾಗಿ ಪೋರ್ಟಲ್‌ನಲ್ಲಿ ನಂತರದ ದಿನಾಂಕದಲ್ಲಿ ನಮೂದಾಗಿರುವ ಸಾಧ್ಯತೆಯೂ ಇದೆ. ವರ್ಷದ ಉಳಿದ ಅವಧಿಯಲ್ಲಿ, ಮನರೇಗಾ ಉದ್ಯೋಗವು ಪ್ರತಿ ತಿಂಗಳು ಸುಮಾರು 20 ಕೋಟಿ ಮಾನವ ದಿನಗಳಷ್ಟಿತ್ತು. ಇದು 2023-24ರಲ್ಲಿ ಗಮನಿಸಿದ ಅಂಶ. ಆದರೆ ರಾಷ್ಟ್ರ ಮಟ್ಟದಲ್ಲಿ ಇತರ ವರ್ಷಗಳಲ್ಲೂ ನರೇಗಾ ಉದ್ಯೋಗದ ಹಂಚಿಕೆಯು ಬಹುತೇಕ ಇದೇ ರೀತಿಯಲ್ಲಿ ಆಗಿದೆ. ರಾಜ್ಯ ಮಟ್ಟದಲ್ಲಿ ಮಾತ್ರ ಸ್ಥಳೀಯ ಕೃಷಿ ಚಟುವಟಿಕೆಗಳ ಸ್ವರೂಪಕ್ಕೆ ಅನುಗುಣವಾಗಿ ಈ ಅಂಕಿಅಂಶಗಳಲ್ಲಿ ಗಣನೀಯ ವ್ಯತ್ಯಾಸಗಳು ಕಂಡುಬರುತ್ತವೆ.
ಮಹಿಳೆಯರ ಪಾಲ್ಗೊಳ್ಳುವಿಕೆ
ಆರಂಭದಿಂದಲೂ ಗ್ರಾಮೀಣ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಮನರೇಗಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ತಮ್ಮ ಸ್ವಂತ ದುಡಿಮೆಗೆ ಮನರೇಗಾ ಮಹಿಳೆಯರಿಗೆ ಒಂದು ಅಪರೂಪದ ಅವಕಾಶವನ್ನು ಒದಗಿಸಿದೆ. ಮನೆಯ ಸಮೀಪದಲ್ಲೇ ಕೆಲಸ ಸಿಗುತ್ತದೆ. ಕೆಲಸದ ವಾತಾವರಣ ಹೆಚ್ಚು ಸುರಕ್ಷಿತವಾಗಿರುತ್ತದೆ. ಪುರುಷರಷ್ಟೇ ವೇತನ ಇವರಿಗೂ ಸಿಗುತ್ತದೆ. ಸರ್ಕಾರಿ ಕೆಲಸ ಹೆಚ್ಚು ಗೌರವದ ಕೆಲಸ ಅನ್ನುವ ಭಾವನೆ ಕೆಲವು ಮಹಿಳೆಯರಲ್ಲಿ ಇರುವುದೂ ಇದಕ್ಕೆ ಕಾರಣವಿರಬಹುದು. ಕೆಲಸವನ್ನು ಹಂಚುವಾಗ ʼಮಹಿಳೆಯರಿಗೆ ಆದ್ಯತೆ ಕೊಡಬೇಕುʼ ಎಂದು ಕಾಯ್ದೆ ತಿಳಿಸುತ್ತದೆ. ʻಕನಿಷ್ಠ ಮೂರನೇ ಒಂದರಷ್ಟು ಮಹಿಳೆಯರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕುʼ ಎಂದು ಹೇಳುತ್ತದೆ. ಆದರೆ ಹೆಚ್ಚಿನ ರಾಜ್ಯಗಳಲ್ಲಿ ಇದಕ್ಕಾಗಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಬರಲಿಲ್ಲ. ಅದರಷ್ಟಕ್ಕೆ ಮಹಿಳೆಯರ ʼಕೋಟಾʼ ಭರ್ತಿಯಾಯಿತು.

2008-09ರಲ್ಲಿ ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಿದಾಗ ರಾಷ್ಟ್ರ ಮಟ್ಟದಲ್ಲಿ ಮನರೇಗಾ ಮಾನವ ದಿನಗಳಲ್ಲಿ ಮಹಿಳಾ ಕಾರ್ಮಿಕರ ಪಾಲು ಸುಮಾರಾಗಿ ಶೇಕಡ 50ರಷ್ಟಿತ್ತು. ಅದು ಕ್ರಮೇಣ ಹೆಚ್ಚುತ್ತಾ ಬಂದಿದೆ (ಚಿತ್ರ-5). ಈಗ ಅದು ಶೇಕಡ 60ರಷ್ಟಾಗಿದೆ, ಇನ್ನೂ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿ ತೋರಬಹುದು. ಆದರೆ ಮನರೇಗಾದ ನೈಜ ಕೂಲಿ ಸ್ಥಗಿತವಾಗಿದೆ. ಇದನ್ನು ಮುಂದೆ ಚರ್ಚಿಸಲಾಗಿದೆ. ಮಾರುಕಟ್ಟೆ ಕೂಲಿಗಿಂತ ಮನರೇಗಾ ಕೂಲಿ ಕಡಿಮೆಯಾದಂತೆ, ಪುರುಷರು ಬೇರೆ ಕೆಲಸಗಳಿಗೆ ಹೋಗುತ್ತಿದ್ದರು. ಅನಿವಾರ್ಯವಾಗಿ ಮಹಿಳೆಯರು ಮತ್ತು ವಯಸ್ಸಾದವರು ಮಾತ್ರ ಉಳಿದುಕೊಳ್ಳುತ್ತಿದ್ದರು. ಈ ಹಿನ್ನಲೆಯಲ್ಲಿಯೂ ಇದನ್ನು ನೋಡಬೇಕು.
ಉದ್ಯೋಗ ಸೃಷ್ಟಿಯಲ್ಲಿ ಆದಂತೆ, ಮನರೇಗಾ ಉದ್ಯೋಗದಲ್ಲಿಯೂ ಮಹಿಳೆಯರ ಪಾಲು ವಿವಿಧ ರಾಜ್ಯಗಳ ನಡುವೆ ಗಣನೀಯವಾಗಿ ಬದಲಾಗುತ್ತದೆ. ಚಿತ್ರ 6ನ್ನು ನೋಡಿ(2011-12 ಮತ್ತು 2023-24ರ ಎರಡು ನಕ್ಷೆಗಳು). ಪ್ರಮುಖವಾಗಿ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ, ಯೋಜನೆ ಆರಂಭವಾದ ನಂತರ ಹಲವು ವರ್ಷಗಳವರೆಗೆ ಮಹಿಳೆಯರ ಪಾಲು ನಿಗದಿಪಡಿಸಿದ ಕನಿಷ್ಠ ಮೂರನೇ ಒಂದು ಭಾಗಕ್ಕಿಂತ (ಒಂದು ತೃತೀಯಾಂಶ) ಕಡಿಮೆ ಇತ್ತು.

2011-12ರಲ್ಲಿ, ಈ ಕನಿಷ್ಠ ಮಿತಿಯನ್ನು ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯದ ಹಲವಾರು ರಾಜ್ಯಗಳಲ್ಲಿ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ, 2023-24ರ ಹೊತ್ತಿಗೆ (ಅದಕ್ಕಿಂತಲೂ ಮುಂಚೆಯೇ), ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಮನರೇಗಾ ಕೆಲಸದಲ್ಲಿ ಮಹಿಳೆಯರ ಪಾಲು ಮೂರನೇ ಒಂದಕ್ಕಿಂತ ಹೆಚ್ಚೇ ಇತ್ತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಾಲು
2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಪಾಲು ಕ್ರಮವಾಗಿ ಶೇಕಡ 16.6 ಮತ್ತು 8.6 ರಷ್ಟಿತ್ತು. ಒಟ್ಟಾರೆ ಮನರೇಗಾ ಮಾನವ ದಿನಗಳಲ್ಲಿ ಅವರ ಪಾಲು ಆರಂಭದಿಂದಲೂ ಹೆಚ್ಚೇ ಇತ್ತು (ಚಿತ್ರ 7ನ್ನು ಗಮನಿಸಿ). ಆದರೆ ಇವರಲ್ಲಿನ ಬೆಳವಣಿಗೆಯು ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಕಂಡುಬಂದಂತೆ ಒಂದು ಸರಳ ಮಾದರಿಯಲ್ಲಿಲ್ಲ.
2006-07 ಮತ್ತು 2010-11ರ ನಡುವೆ, ಪರಿಶಿಷ್ಟ ಬುಡಕಟ್ಟು (ST) ವರ್ಗದವರ ಪಾಲು ಸ್ಥಿರವಾಗಿ ಕುಸಿದರೆ, ಪರಿಶಿಷ್ಟ ಜಾತಿಯವರ(SC) ಪಾಲು ಹೆಚ್ಚಾಯಿತು. ಇದರಲ್ಲಿ ಆಶ್ಚರ್ಯವೇನಿಲ್ಲ; ಏಕೆಂದರೆ ಇದು ಮನರೇಗಾ ಕ್ರಮೇಣ ಇಡೀ ದೇಶಕ್ಕೆ ವಿಸ್ತರಣೆಯಾದ ಅವಧಿಯಾಗಿತ್ತು. ಆರಂಭದಲ್ಲಿ (ಫೆಬ್ರವರಿ 2, 2006) ಕಾಯ್ದೆ ಜಾರಿಗೆ ಬಂದ 200 ಜಿಲ್ಲೆಗಳಲ್ಲಿ ಹೆಚ್ಚಿನವು ಬುಡಕಟ್ಟು ಜನಸಂಖ್ಯೆ ಹೆಚ್ಚಿದ್ದ ಜಿಲ್ಲೆಗಳಾಗಿದ್ದವು. ಯೋಜನೆ ವಿಸ್ತರಣೆಯಾದಂತೆ, ಒಟ್ಟು ಉದ್ಯೋಗದಲ್ಲಿ ಪರಿಶಿಷ್ಟ ಬುಡಕಟ್ಟಿನವರ ಪಾಲು ಸಾಪೇಕ್ಷವಾಗಿ ಕಡಿಮೆಯಾಗಿ ಪರಿಶಿಷ್ಟ ಜಾತಿಯವರ ಪಾಲು ಹೆಚ್ಚಾಯಿತು. ಆದರೆ, 2010-11 ಮತ್ತು 2011-12ರ ನಡುವೆ ಇವೆರಡೂ ವರ್ಗಗಳ ಪಾಲು ಏಕೆ ಕುಸಿಯಿತು ಎಂಬುದು ಇಂದಿಗೂ ಒಗಟಾಗಿಯೇ ಇದೆ. ಅದರಲ್ಲೂ ಪರಿಶಿಷ್ಟ ಜಾತಿಯವರ ಪಾಲು ತೀವ್ರವಾಗಿ ಕುಸಿದಿದೆ. ಇದಕ್ಕೆ ಯಾವುದೇ ಸ್ಪಷ್ಟ ವಿವರಣೆ ದೊರೆತಿಲ್ಲ. 2011-12ರ ನಂತರ ಪರಿಶಿಷ್ಟ ಬುಡಕಟ್ಟಿನವರ ಪಾಲು ಸುಮಾರಾಗಿ ಅಷ್ಟೇ ಉಳಿದಿದೆ, ಆದರೆ ಪರಿಶಿಷ್ಟ ಜಾತಿಯವರ ಪಾಲು ಸ್ವಲ್ಪ ಕಡಿಮೆಯಾಗಿದೆ.
ಈ ಕುಸಿತದ ಹೊರತಾಗಿಯೂ, 2023-24ರಲ್ಲಿ ಮನರೇಗಾ ಕೆಲಸದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ಒಟ್ಟು ಪಾಲು (ಶೇ. 37), ಅವರ ಒಟ್ಟು ಜನಸಂಖ್ಯೆಯ ಪಾಲಿಗಿಂತ(ಸುಮಾರು ಶೇ. 25) ಇನ್ನೂ ಗಣನೀಯವಾಗಿ ಹೆಚ್ಚೇ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವರ ಒಟ್ಟು ಪಾಲು ಕಡಿಮೆಯಾಗಲು ಪ್ರಾರಂಭವಾಗಿದೆ. ಈ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ.

ವಾಸ್ತವವಾಗಿ, ಮಾರುಕಟ್ಟೆ ಕೂಲಿಗಿಂತ ಮನರೇಗಾ ಕೂಲಿ ದರವು ಕುಸಿಯಲು ಪ್ರಾರಂಭವಾದಾಗಲೇ ಈ ವರ್ಗಗಳ ಪಾಲೂ ಕಡಿಮೆಯಾಗತೊಡಗಿದೆ. ಸಾಮಾನ್ಯವಾಗಿ ಮಾರುಕಟ್ಟೆ ಕೂಲಿ ಕಡಿಮೆಯಾದಾಗ ಬಡವರು ಮನರೇಗಾದತ್ತ ಹೆಚ್ಚು ಆಕರ್ಷಿತರಾಗಬೇಕಿತ್ತು, ಆದರೆ ಇಲ್ಲಿ ವಿಭಿನ್ನ ಪ್ರವೃತ್ತಿ ಕಂಡುಬರುತ್ತಿದೆ.
ನೈಜ ಕೂಲಿ
ಯೋಜನೆಯ ಆರಂಭಿಕ ಹಂತದಲ್ಲಿ, ಮನರೇಗಾ ಕಾರ್ಮಿಕರಿಗೆ ಕಾಯ್ದೆಯ ಸೆಕ್ಷನ್ 6(2)ರ ಅಡಿಯಲ್ಲಿ ಆಯಾ ರಾಜ್ಯದ ಕೃಷಿ ಕಾರ್ಮಿಕರಿಗೆ ಅನ್ವಯವಾಗುವ ಕನಿಷ್ಠ ವೇತನವನ್ನು ಪಡೆಯುವ ಹಕ್ಕಿತ್ತು. ಆ ಸಮಯದಲ್ಲಿ ಮನರೇಗಾ ಕೂಲಿಯು ಮಾರುಕಟ್ಟೆ ಕೂಲಿಗಿಂತ ಹೆಚ್ಚಾಗಿರುತ್ತಿತ್ತು; ಕೆಲವು ರಾಜ್ಯಗಳಲ್ಲಂತೂ ಇದು ಗಣನೀಯವಾಗಿ ಹೆಚ್ಚಿತ್ತು. ಆದರೆ 2009ರಲ್ಲಿ ಕೇಂದ್ರ ಸರ್ಕಾರವು ತನ್ನ ಕಾರ್ಯವೈಖರಿಯನ್ನು ಬದಲಿಸಿ, ಕಾಯ್ದೆಯ ಸೆಕ್ಷನ್ 6(1) ಅನ್ನು ಜಾರಿಗೆ ತಂದಿತು. ಇದು ಕೇಂದ್ರ ಸರ್ಕಾರಕ್ಕೆ ಮನರೇಗಾ ಕೂಲಿ ದರಗಳನ್ನು ನಿಶ್ಚಯಿಸುವ ಅಧಿಕಾರವನ್ನು ನೀಡಿತು.
ಇದರ ಅಡಿಯಲ್ಲಿ ದಿನಕ್ಕೆ ₹100 ರೂಪಾಯಿಯ ಏಕರೂಪದ ಕೂಲಿ ದರವನ್ನು ಜಾರಿಗೆ ತರಲಾಯಿತು. ಕೃಷಿ ಕಾರ್ಮಿಕರ ಕನಿಷ್ಠ ವೇತನವು ₹100 ರೂಪಾಯಿಗಿಂತ ಹೆಚ್ಚಿದ್ದ ಕೆಲವು ರಾಜ್ಯಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚಿನ ಹಣವನ್ನು ನೀಡಲಾಯಿತು. ಅಂದಿನಿಂದ, ಕೇಂದ್ರ ಸರ್ಕಾರವು ಪ್ರತಿ ವರ್ಷ ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕಕ್ಕೆ(CPI-AL) ಅನುಗುಣವಾಗಿ ಕೂಲಿಯನ್ನು ಪರಿಷ್ಕರಿಸತೊಡಗಿತು. ಸರಳವಾಗಿ ಹೇಳುವುದಾದರೆ, ನೈಜ ಮೌಲ್ಯದಲ್ಲಿ (Inflation-adjusted) ಮನರೇಗಾ ಕೂಲಿಯು ಕಳೆದ ಹಲವು ವರ್ಷಗಳಿಂದ ಹೆಚ್ಚಾಗದೆ ಸ್ಥಗಿತಗೊಂಡಿದೆ.

ಈ ನಡುವೆ, ಕಾರ್ಮಿಕ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಯೊಂದು ಸಂಭವಿಸಿತು: ದೀರ್ಘಕಾಲ ನಿಧಾನವಾಗಿ ಏರುತ್ತಿದ್ದ ಕೃಷಿ ಕ್ಷೇತ್ರದ ನೈಜ ಕೂಲಿ ದರಗಳು 2007ರ ಸುಮಾರಿಗೆ ಸ್ಥಿರವಾಗಿ ಏರಲು ಪ್ರಾರಂಭಿಸಿ, 2014ರವರೆಗೆ ಮುಂದುವರಿದವು. ಅದರ ನಂತರ, ಮತ್ತೆ ಕೂಲಿ ಏರಿಕೆಯ ದರ ಬಹುತೇಕ ಸ್ಥಗಿತಗೊಂಡಿತು. ಲೇಬರ್ ಬ್ಯೂರೋ ಸಂಗ್ರಹಿಸಿದ ‘ಗ್ರಾಮೀಣ ಭಾರತದ ಕೂಲಿ ದರಗಳ’ ದತ್ತಾಂಶದಿಂದ ಈ ಪ್ರವೃತ್ತಿಗಳು ಸ್ಪಷ್ಟವಾಗಿ ಕಂಡುಬರುತ್ತವೆ (ಚಿತ್ರ 8ನ್ನು ಗಮನಿಸಿ).
ಕೂಲಿ ದರಗಳ ಲೆಕ್ಕಾಚಾರ ಮತ್ತು ಪ್ರವೃತ್ತಿ
ಈ ನಕ್ಷೆಯಲ್ಲಿ ಬಳಸಿರುವ ಅಖಿಲ ಭಾರತ ಮನರೇಗಾ ಕೂಲಿ ದರಗಳನ್ನು ನೇರವಾಗಿ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್‌ನಿಂದ ಪಡೆಯಲಾಗಿದೆ. ನೇರ ಮಾಹಿತಿ ಲಭ್ಯವಿಲ್ಲದ ವರ್ಷಗಳಲ್ಲಿ, ಒಟ್ಟು ವೇತನ ವೆಚ್ಚವನ್ನು ಮನರೇಗಾ ಉದ್ಯೋಗದ ಒಟ್ಟು ಮಾನವ ದಿನಗಳಿಂದ ಭಾಗಿಸುವ ಮೂಲಕ ಲೆಕ್ಕ ಹಾಕಲಾಗಿದೆ (ನೇರ ಮಾಹಿತಿ ಲಭ್ಯವಿರುವ ವರ್ಷಗಳಲ್ಲಿ ಈ ಎರಡೂ ವಿಧಾನಗಳು ಒಂದೇ ರೀತಿಯ ಫಲಿತಾಂಶವನ್ನು ನೀಡುತ್ತವೆ).
ಲಿಂಗಾಧಾರಿತ ಕೃಷಿ ಕೂಲಿಯನ್ನು ಲೆಕ್ಕ ಹಾಕಲು ಮೂರು ಉದ್ಯೋಗಗಳ ಕೂಲಿಯ ಸರಾಸರಿಯನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಆರಂಭಿಕ ಕೃಷಿ ಚಟುವಟಿಕೆಗಳು ಮತ್ತು ಕೊಯ್ಲಿನ ಸಮಯದ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ. ಬಿತ್ತನೆ, ನಾಟಿ ಮತ್ತು ಕಳೆ ತೆಗೆಯುವುದನ್ನು ‘ಆರಂಭಿಕ ಚಟುವಟಿಕೆಗಳು’ ಎಂದು ಹಾಗೂ ಕೊಯ್ದು, ಒಕ್ಕಣೆ ಮತ್ತು ತೂರುವುದನ್ನು ‘ಕೊಯ್ಲಿನ ಸಮಯದ ಚಟುವಟಿಕೆಗಳು’ ಎಂದು ವರ್ಗೀಕರಿಸಲಾಗಿದೆ. ಈ ಎರಡೂ ಗುಂಪಿನ ಚಟುವಟಿಕೆಗಳಿಗೆ ಕೂಲಿ ದರಗಳು ಬಹುತೇಕ ಒಂದೇ ಸಮನಾಗಿವೆ. ಎಲ್ಲ ನಗದು ಕೂಲಿಯನ್ನು ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ ಬಳಸಿ 2014-15ರ ಬೆಲೆಗಳಿಗೆ ಅನುಗುಣವಾಗಿ ‘ನೈಜ ವೇತನ’ಕ್ಕೆ ಪರಿವರ್ತಿಸಲಾಗಿದೆ.
ಇಲ್ಲಿ ಒಂದು ಸ್ಪಷ್ಟವಾದ ಪ್ರವೃತ್ತಿಯನ್ನು ಗಮನಿಸಬಹುದು: ಆರಂಭದಲ್ಲಿ ಮನರೇಗಾ ಕೂಲಿಯು ಕೃಷಿ ಕೂಲಿಗಿಂತ ಸ್ವಲ್ಪ ಹೆಚ್ಚಿತ್ತು. ಆದರೆ ಮಾರುಕಟ್ಟೆ ಕೂಲಿ ಸ್ಥಿರವಾಗಿ ಏರತೊಡಗಿದಾಗ, ಮನರೇಗಾ ಕೂಲಿಯ ನೈಜ ಮೌಲ್ಯದಲ್ಲಿ ಏರಿಕೆಯಾಗಲಿಲ್ಲ; ಅದು ಸ್ಥಗಿತಗೊಂಡಿತು. ಹಾಗಾಗಿ ಅದು ಮಾರುಕಟ್ಟೆ ಕೂಲಿಗಿಂತ ಹಿಂದೆ ಬಿತ್ತು. 2014-15ರ ಹೊತ್ತಿಗೆ, ಮನರೇಗಾ ಕೂಲಿಯು ಪುರುಷ ಕೃಷಿ ಕಾರ್ಮಿಕರ ಕೂಲಿಯ ಕೇವಲ ಮೂರರಲ್ಲಿ ಎರಡು (2/3) ಭಾಗದಷ್ಟಾಯಿತು. ನಂತರದ ದಿನಗಳಲ್ಲಿ ಈ ಅಂತರವು ಹಾಗೆಯೇ ಮುಂದುವರಿಯಿತು.

ನೈಜ ವೇತನ ಸ್ಥಗಿತಗೊಂಡಿದ್ದರ ಜೊತೆಗೆ, ಕೂಲಿಯ ಪಾವತಿಯಲ್ಲೂ ಸಮಸ್ಯೆಗಳು ಪ್ರಾರಂಭವಾದವು (ಮುಖ್ಯವಾಗಿ ವಿಳಂಬಿತ ಪಾವತಿಗಳು, ಪಾವತಿಗಳನ್ನು ಬೇರೆ ಖರ್ಚುಗಳಿಗೆ ಬಳಸಿಕೊಂಡಿದ್ದು, ತಿರಸ್ಕೃತಗೊಂಡ ಅಥವಾ ತಡೆಹಿಡಿಯಲಾದ ಪಾವತಿಗಳು). ಇದರಿಂದ ಅನೇಕ ಗ್ರಾಮೀಣ ಕಾರ್ಮಿಕರಿಗೆ ಮನರೇಗಾದ ಮೇಲಿದ್ದ ಆಸಕ್ತಿ ಕಡಿಮೆಯಾಗತೊಡಗಿತು. ಆದರೂ ಅಧಿಕೃತವಾಗಿ ಉದ್ಯೋಗದ ಪ್ರಮಾಣ ಕಡಿಮೆಯಾಗಲಿಲ್ಲ. ಇದಕ್ಕೆ ಬಹುಶಃ ಎರಡು ಸಾಧ್ಯತೆಗಳಿವೆ:
- ಆರಂಭದಿಂದಲೂ ಮನರೇಗಾ ಕೆಲಸಕ್ಕಿದ್ದ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲಾಗಿರಲಿಲ್ಲ (ಅಂದರೆ ಇನ್ನೂ ಪೂರೈಕೆಯಾಗದ ಬೇಡಿಕೆ ಇತ್ತು).
- ಮನರೇಗಾ ಮಾನವ ದಿನಗಳ ಲೆಕ್ಕಾಚಾರದಲ್ಲಿ ನಕಲಿ ದಿನಗಳ ಪಾಲು ಹೆಚ್ಚುತ್ತಿರಬಹುದು. ದುರದೃಷ್ಟವಶಾತ್, ಅಧಿಕೃತ ಅಂಕಿಅಂಶಗಳು ಈ ಬಗ್ಗೆ ಯಾವುದೇ ಬೆಳಕು ಚೆಲ್ಲುವುದಿಲ್ಲ.
ಆಡಳಿತಾತ್ಮಕ ವೆಚ್ಚ ಚಿತ್ರ 9ರಲ್ಲಿ ಇಲ್ಲಿಯವರೆಗೆ ಅಷ್ಟಾಗಿ ಗಮನ ಸೆಳೆಯದೇ ಇದ್ದ ಒಂದು ಅಂಶ ಕಾಣುತ್ತದೆ. ಅದೇನೆಂದರೆ 2014-15 ರಿಂದ ಮನರೇಗಾ ಒಟ್ಟು ವೆಚ್ಚದಲ್ಲಿ ಆಡಳಿತಾತ್ಮಕ ವೆಚ್ಚದ ಪಾಲು ತೀವ್ರವಾಗಿ ಕುಸಿದಿದೆ.
ಆಡಳಿತಾತ್ಮಕ ವೆಚ್ಚ
ಈ ಕಾಯ್ದೆಯ ಅಡಿಯಲ್ಲಿ, ಆಡಳಿತಾತ್ಮಕ ವೆಚ್ಚಗಳಿಗೆ ಭತ್ಯೆಯನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಪಾವತಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಆರಂಭದಲ್ಲಿ, ಸಂಬಂಧಿತ ರಾಜ್ಯದ ಒಟ್ಟು ಮನರೇಗಾ ವೆಚ್ಚದ ಗರಿಷ್ಠ ಶೇ.4ರಷ್ಟನ್ನು ಆಡಳಿತಾತ್ಮಕ ಭತ್ಯೆಯಾಗಿ ನಿಗದಿಪಡಿಸಲಾಗಿತ್ತು; ಈ ಮಾನದಂಡವು ಇಂದಿಗೂ ಅನ್ವಯಿಸುತ್ತದೆ(ಭಾರತ ಸರ್ಕಾರ, 2024). ನೈಜ ಆಡಳಿತಾತ್ಮಕ ವೆಚ್ಚಗಳು ಒಂದೇ ಸಮನೆ ಏರುತ್ತಾ ಹೋಗಿದ್ದರಿಂದ 2014-15ರಲ್ಲಿ ಅದು ಶೇಕಡ 6ರಷ್ಟಾಯಿತು. ಆದರೆ ನಂತರದ ದಿನಗಳಲ್ಲಿ ನಿರಂತರವಾಗಿ ಕುಸಿಯುತ್ತಾ ಬಂದು, ಕೊನೆಗೆ ಆರಂಭದಲ್ಲಿದ್ದ ಶೇಕಡ 3-4ಕ್ಕೆ ಬಂದು ಮುಟ್ಟಿವೆ.
ಆಡಳಿತಾತ್ಮಕ ವೆಚ್ಚಗಳು ಕಡಿಮೆಯಿರುವುದು ಒಳ್ಳೆಯ ವಿಷಯವೆಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ಇದು ಹಾಗಲ್ಲ. ಮನರೇಗಾ ಅನುಷ್ಠಾನದಲ್ಲಿ ಆಡಳಿತಾತ್ಮಕ ವೆಚ್ಚಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಏಕೆಂದರೆ ಇವು ಗ್ರಾಮ ಉದ್ಯೋಗ ಸಹಾಯಕರು, ಕಾರ್ಯಕ್ರಮ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್‌ಗಳು, ಕಿರಿಯ ಇಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿಯನ್ನು ಒಳಗೊಂಡ ಬೃಹತ್ ಪೂರಕ ವ್ಯವಸ್ಥೆಗೆ ಹಣ ಒದಗಿಸುತ್ತವೆ. ಕೇವಲ ಅವರ
ಸಂಬಳಕ್ಕೆ ಮಾತ್ರವಲ್ಲದೆ ಅವರಿಗೆ ಅಗತ್ಯವಿರುವ ಸೌಲಭ್ಯಗಳಿಗೂ ಇದು ಬಳಕೆಯಾಗುತ್ತದೆ. ಸಾಮಾಜಿಕ ಲೆಕ್ಕಪರಿಶೋಧನೆಗಳಿಗೂ (Social Audits) ಆಡಳಿತಾತ್ಮಕ ವೆಚ್ಚಗಳಿಂದಲೇ ಧನಸಹಾಯ ನೀಡಲಾಗುತ್ತದೆ. ಈ ನಿರ್ಣಾಯಕ ಬೆಂಬಲ ವ್ಯವಸ್ಥೆಗೆ ಶೇ. 6ರಷ್ಟು ಹಣವನ್ನು ನಿಗದಿಮಾಡಿರುವುದು ದೊಡ್ಡ ಮೊತ್ತವೇನಲ್ಲ.

ಈ ವ್ಯವಸ್ಥೆಯಿಂದ ಇನ್ನೂ ಹಲವು ಅಂತರ್ಗತ ಉಪಯೋಗಗಳಿವೆ. ಇದು ಗ್ರಾಮ ಪಂಚಾಯತ್‌ಗಳಿಗೆ ಮತ್ತು ಬ್ಲಾಕ್ ಕಚೇರಿಗಳಿಗೆ ಅತ್ಯಗತ್ಯ ಸಂಪನ್ಮೂಲವಾಗಿದೆ ಹಾಗೂ ಕೌಶಲ್ಯ ಅಭಿವೃದ್ಧಿಗೂ ಇದರ ಕೊಡುಗೆ ಮಹತ್ವದ್ದು. ಈ ದೃಷ್ಟಿಕೋನದಿಂದ ನೋಡಿದಾಗ, 2014-15ರಿಂದ ಆಡಳಿತಾತ್ಮಕ ವೆಚ್ಚಗಳ ಪಾಲಿನಲ್ಲಿ ಕಂಡುಬಂದಿರುವ ತೀವ್ರ ಕುಸಿತವು ನಿಜಕ್ಕೂ ಆತಂಕದ ವಿಷಯವಾಗಿದೆ. ಪ್ರಾಯಶಃ, ಆಡಳಿತಾತ್ಮಕ ವೆಚ್ಚ ಕಡಿಮೆಯಾಗಿದ್ದು ಆ ಅವಧಿಯಲ್ಲಿ ಮನರೇಗಾ ಅನುಷ್ಠಾನದ ಗುಣಮಟ್ಟ ಹದಗೆಡಲು ಕಾರಣವೂ ಆಗಿರಬಹುದು.
ಕೂಲಿ ಪಾವತಿಗಳು
ನಮ್ಮ ಕೊನೆಯ ಚಿತ್ರವು ಅತ್ಯಂತ ಪ್ರಮುಖ ವಿಷಯವಾದ ಕೂಲಿ ಪಾವತಿಯಲ್ಲಿನ ವಿಳಂಬಕ್ಕೆ ಸಂಬಂಧಿಸಿದೆ. ಈ ವಿಷಯದ ಬಗ್ಗೆ ಮನರೇಗಾದ MIS ವ್ಯವಸ್ಥೆಯಿಂದ ಸ್ಪಷ್ಟ ಮಾಹಿತಿ ಸಿಗುವುದಿಲ್ಲ ಮತ್ತು ಕೆಲವು ಸಂದರ್ಭಗಳಲ್ಲಿ ಅದು ದಾರಿ ತಪ್ಪಿಸುತ್ತದೆ. ಕಾಯ್ದೆಯ ಪ್ರಕಾರ, ಕೆಲಸ ಮುಗಿದ 14 ದಿನಗಳ ಒಳಗೆ ಕಾರ್ಮಿಕರಿಗೆ ವೇತನ
ಪಾವತಿಯಾಗಬೇಕು. ಅದು ಅವರ ಹಕ್ಕು. ಆದರೆ ಯೋಜನೆ ಜಾರಿಯಾಗಿ 20 ವರ್ಷಗಳ ನಂತರವೂ ಇದು ಕೇವಲ ಕನಸಾಗಿಯೇ ಉಳಿದಿದೆ.
ಮನರೇಗಾ ಕೂಲಿ ಪಾವತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:
ಮೊದಲ ಹಂತ: ‘ಫಂಡ್ ಟ್ರಾನ್ಸ್‌ಫರ್ ಆರ್ಡರ್’ (FTO) ಸಿದ್ಧಪಡಿಸುವುದು. ಇದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.
ಎರಡನೇ ಹಂತ: ಇದು ಕೇಂದ್ರದ ಜವಾಬ್ದಾರಿಯಾಗಿದ್ದು, ಕೇಂದ್ರ ಸರ್ಕಾರವು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸುತ್ತದೆ.
ನಿಯಮಗಳ ಪ್ರಕಾರ, ಪ್ರತಿಯೊಂದು ಹಂತವು ಏಳು ದಿನಗಳೊಳಗೆ ಪೂರ್ಣಗೊಳ್ಳಬೇಕು. ಆದರೆ, 10 ರಾಜ್ಯಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, 2016-17ರಲ್ಲಿ ಅರ್ಧದಷ್ಟು ಪಾವತಿಗಳಿಗೆ ಮೊದಲ ಹಂತ ಪೂರೈಸಲು 15 ದಿನಗಳಿಗಿಂತ ಹೆಚ್ಚು ಕಾಲ ಬೇಕಾಗಿತ್ತು. ಇಂದು ಮೊದಲ ಹಂತದ ವಿಳಂಬಗಳು ಕಡಿಮೆಯಾಗಿವೆ. ಆದರೆ, ಎರಡನೇ ಹಂತದಲ್ಲಿ ಇಂದಿಗೂ ವಿಳಂಬವಾಗುತ್ತಿದೆ. ಮುಖ್ಯವಾಗಿ ಹಣಕಾಸು ವರ್ಷ ಮುಗಿಯುವ ಮೊದಲೇ ಮನರೇಗಾ ನಿಧಿ ಖಾಲಿಯಾಗುವುದರಿಂದ ಕೂಲಿ ಪಾವತಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತವೆ. ಈ ಎರಡನೇ ಹಂತದ ವಿಳಂಬಗಳ ಬಗ್ಗೆ ಎಂಐಎಸ್ ವರದಿ ಮಾಡುವುದಿಲ್ಲ.

ಇತ್ತೀಚಿನ ಅಧ್ಯಯನವೊಂದು (ಭೀಮರಶೆಟ್ಟಿ ಮತ್ತು ಇತರರು, 2025) 2021-22ರಲ್ಲಿ 3.1 ಕೋಟಿಗೂ ಹೆಚ್ಚು ಪಾವತಿಗಳನ್ನು ವಿಶ್ಲೇಷಿಸಿ ವಿಭಿನ್ನ ಚಿತ್ರಣವನ್ನು ನೀಡಿದೆ (ಚಿತ್ರ 10). ಕೇವಲ ಶೇಕಡ 37ರಷ್ಟು ಪಾವತಿಗಳು ಮಾತ್ರ ನಿಗದಿತ 7 ದಿನಗಳೊಳಗೆ ಪೂರ್ಣಗೊಂಡಿವೆ. ಸುಮಾರು ಶೇಕಡ 42ರಷ್ಟು ಪಾವತಿಗಳು FTO ಆದ ಮೇಲೂ 15 ದಿನಗಳಿಗಿಂತ ಹೆಚ್ಚು ವಿಳಂಬವಾಗಿವೆ. ಈ ವಿಳಂಬದ ಪ್ರಮಾಣವು ಬಿಹಾರದಲ್ಲಿ 21% ಇದ್ದರೆ, ಪಶ್ಚಿಮ ಬಂಗಾಳದಲ್ಲಿ 64% ರಷ್ಟಿದೆ. ಇಲ್ಲಿ ರಾಜಕೀಯ ಪಕ್ಷಪಾತದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅಲ್ಲದೆ, ಆಧಾರ್ ಆಧಾರಿತ ಪಾವತಿಗಳು (APBS) ಬ್ಯಾಂಕ್ ಖಾತೆ ಆಧಾರಿತ ಪಾವತಿಗಳಿಗಿಂತ ವೇಗವಾಗಿಲ್ಲ ಎಂದು ಅಧ್ಯಯನವು ತೋರಿಸಿದೆ. ಈ ಸಂಕೀರ್ಣ ವ್ಯವಸ್ಥೆಯಿಂದ ಕಾರ್ಮಿಕರಿಗೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚಾಗಿದೆ.
ಕೊನೆಯದಾಗಿ, ಮನರೇಗಾದ ಸಂಕ್ಷಿಪ್ತ ಇತಿಹಾಸವು ನಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಮನರೇಗಾ ಬಡವರಿಗೆ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ, ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ ದೊಡ್ಡ ಮಟ್ಟದ ಆಸರೆಯನ್ನು ಒದಗಿಸಿದೆ. ಆದರೆ, ಈ ಸಾಧನೆಗಳು ಕೇವಲ ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ. ಅನೇಕ ಬಡ ರಾಜ್ಯಗಳಲ್ಲಿ ‘ಬೇಡಿಕೆಗೆ ತಕ್ಕ ಕೆಲಸ’ ಎಂಬ ಮೂಲ ತತ್ವವು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅಧಿಕೃತ ಅಂಕಿಅಂಶಗಳನ್ನು ಕುಟುಂಬ ಸಮೀಕ್ಷೆಗಳಂತಹ ಸ್ವತಂತ್ರ ಮೂಲಗಳಿಂದ ದೃಢಪಡಿಸಿಕೊಳ್ಳಬೇಕಾದ ಅಗತ್ಯವಿದೆ. 2011-12ರ ನಂತರ ಇಂತಹ ಸಮೀಕ್ಷೆಗಳ ಕೊರತೆಯಿರುವುದು ದೊಡ್ಡ ಕಂದಕವಾಗಿದೆ. ಮನರೇಗಾ ಬಡದೇಶವೊಂದರಲ್ಲಿ ಉದ್ಯೋಗ ಖಾತರಿಯನ್ನು ಸುಸ್ಥಿರವಾಗಿ ನಡೆಸಬಹುದು ಎಂಬುದನ್ನು ಸಾಬೀತುಪಡಿಸಿದೆ. ಆದರೆ ಕೆಲಸ ಕೇಳಿದ ತಕ್ಷಣ ಕೆಲಸ ಸಿಗುವ ‘ಕೆಲಸದ ಹಕ್ಕನ್ನು’ ಪ್ರಾಯೋಗಿಕವಾಗಿ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳಿಸಲು ನಾವು ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ.
ಜೀನ್ ಡ್ರೇಜ್ ಮತ್ತು ರಾಹುಲ್ ಆರ್
ಕೃಪೆ: (ಐಡಿಯಾಸ್ ಫಾರ್ ಇಂಡಿಯಾ-ಜುಲೈ 21, 2025)

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





