ಕೇಂದ್ರದ ಹೊಸ ಮಸೂದೆಯು (ವಿಬಿ-ಜಿ ರಾಮ್-ಜಿ) ಉದ್ಯೋಗ ಖಾತರಿ ಯೋಜನೆಯನ್ನು ಸುಧಾರಿಸುವ ಬದಲಿಗೆ ರಾಜ್ಯಗಳನ್ನು ನಿರುತ್ಸಾಹಗೊಳಿಸುತ್ತಿದೆ ಮತ್ತು ಕಾರ್ಮಿಕರ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ಕೃಷಿ ಕಾಯ್ದೆಗಳಂತೆ ಈ ಮಸೂದೆಯೂ ಸಾರ್ವಜನಿಕ ಒತ್ತಡದಿಂದ ರದ್ದಾಗಬೇಕು. ಇಲ್ಲದಿದ್ದರೆ, ಇದು ಒಂದು ಐತಿಹಾಸಿಕ ಯುಗದ ಅಂತ್ಯವಾಗಲಿದೆ.
ಇಪ್ಪತ್ತು ವರ್ಷಗಳ ಹಿಂದೆ, ಭಾರತವು ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು (NREGA) ಜಾರಿಗೆ ತರುವ ಮೂಲಕ ಜಗತ್ತಿಗೆ ಮಾದರಿಯಾಗಿತ್ತು. ಉದ್ಯೋಗ ಖಾತರಿ ಕಲ್ಪನೆ ಸಂಪೂರ್ಣವಾಗಿ ಹೊಸದೇನಲ್ಲ. ಬಿಕ್ಕಟ್ಟಿನ ಸಮಯದಲ್ಲಿ ಪರಿಹಾರವಾಗಿ ಸಾರ್ವಜನಿಕ ಕಾಮಗಾರಿಗಳನ್ನು ಬಳಸುವ ಸುದೀರ್ಘ ಇತಿಹಾಸ ಭಾರತಕ್ಕಿದೆ. ಮಹಾರಾಷ್ಟ್ರವು 1970ರ ದಶಕದ ಆರಂಭದಿಂದಲೇ ತನ್ನ ಉದ್ಯೋಗ ಖಾತರಿ ಯೋಜನೆಯ ಮೂಲಕ ದಾರಿ ತೋರಿಸಿತ್ತು. ಆದರೆ ನರೇಗಾ ಈ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿತು ಮತ್ತು ಜಗತ್ತಿಗೆ ಸ್ಪೂರ್ತಿಯಾಯಿತು. ಇದು ಪಕ್ಷದ ಎಲ್ಲೆ ಮೀರಿ ಬೆಳೆದಿದ್ದ ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು ಮತ್ತು ಸಂಸತ್ತಿನಲ್ಲಿ ಸರ್ವಾನುಮತದ ಬೆಂಬಲ ಪಡೆದಿತ್ತು.
ಈ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿತ್ತು ಎನ್ನುವುದಕ್ಕೆ ಆರು ವರ್ಷಗಳ ನಂತರ, 2011-12ರಲ್ಲಿ ಪುರಾವೆಗಳೂ ಸಿಕ್ಕವು. ಆ ವೇಳೆಗೆ ‘ಮನರೇಗಾ’ (MGNREGA ಎಂದು ಮರುನಾಮಕರಣಗೊಂಡಿತ್ತು) ಅಧಿಕೃತವಾಗಿ ವರ್ಷಕ್ಕೆ 5 ಕೋಟಿ ಗ್ರಾಮೀಣ ಕುಟುಂಬಗಳಿಗೆ 200 ಕೋಟಿಗೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಕೊಟ್ಟಿತ್ತು. ಉದ್ಯೋಗ ಪಡೆದುಕೊಂಡವರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಮತ್ತು ಶೇಕಡ 40ಕ್ಕಿಂತ ಹೆಚ್ಚು ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರು. ಈ ಅಧಿಕೃತ ಅಂಕಿಅಂಶಗಳನ್ನು 68ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತು ಎರಡನೇ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯಂತಹ ಸ್ವತಂತ್ರ ಸಮೀಕ್ಷೆಗಳು ಪುಷ್ಟಿಕರಿಸಿದ್ದವು. ಗ್ರಾಮೀಣ ವೇತನದಲ್ಲೂ ಹಿಂದೆಂದಿಗಿಂತ ಹೆಚ್ಚಿನ ಏರಿಕೆ ಕಾಣತೊಡಗಿತು.
ಮನರೇಗಾ ಉತ್ಪಾದಕ ಕೆಲಸಗಳನ್ನು ಕಸಿದುಕೊಳ್ಳಲಿಲ್ಲ. ಬದಲಿಗೆ ಆರ್ಥಿಕ ದಕ್ಷತೆ ಮತ್ತು ಒಟ್ಟು ಉತ್ಪಾದಕತೆಯನ್ನು ಹೆಚ್ಚಿಸಿತು ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಮನರೇಗಾದ ಆರಂಭಿಕ ವರ್ಷಗಳಲ್ಲಿನ ಕಂಡುಬಂದ ಉತ್ಸಾಹ ಮತ್ತು ಹುರುಪಿನಿಂದ ಈ ಸಾಧನೆಗಳು ಸಾಧ್ಯವಾದವು.

ನಂತರದ ದಿನಗಳಲ್ಲಿ, ಅನುಷ್ಠಾನಕ್ಕೆ ಅಡೆತಡೆಗಳು ಪ್ರಾರಂಭವಾದವು. ಕೇಂದ್ರೀಕರಣ, ಅನುದಾನದ ಕೊರತೆ, ವೇತನ ಪಾವತಿಯಲ್ಲಿ ವಿಳಂಬ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯ ಇತ್ಯಾದಿ ಕಾರಣಗಳು ಕಾರ್ಯಕ್ರಮಕ್ಕೆ ಅಪಾರ ಹಾನಿ ಮಾಡಿದವು. ಕೋವಿಡ್- 19ರ ಬಿಕ್ಕಟ್ಟಿನ ಸಮಯದಲ್ಲಿ ಇದು ಸ್ವಲ್ಪ ಚೇತರಿಸಿಕೊಂಡಂತೆ ಕಂಡರೂ, ಮನರೇಗಾಕ್ಕೆ ಹಳೆಯ ಮೆರಗು ಮರಳಿ ಬರಲಿಲ್ಲ. ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಬಹುದು. ಆದರೆ ಇದಕ್ಕೆ ಪ್ರಬಲ ರಾಜಕೀಯ ಬದ್ಧತೆ ಬೇಕು.
ಆದರೆ, ‘ವಿಬಿ-ಜಿ ರಾಮ್-ಜಿ’ (VB-G RAM-G) ಮಸೂದೆ 2025 ಇದಕ್ಕೆ ವಿರುದ್ಧವಾದ ಹಾದಿಯಲ್ಲಿ ಸಾಗುತ್ತಿದೆ. ಇದು ಐತಿಹಾಸಿಕ ಕಾಯ್ದೆಯನ್ನು ಕೇಂದ್ರ ನಿರ್ದೇಶಿತ ಯೋಜನೆಯಾಗಿ ಬದಲಿಸಲು ಪ್ರಯತ್ನಿಸುತ್ತಿದೆ. ಈ ಮಸೂದೆಯಡಿಯಲ್ಲಿ ಕೇಂದ್ರವು ಸಂಪೂರ್ಣ ಅಧಿಕಾರವನ್ನು ತನ್ನ ಕೈಯಲ್ಲಿಟ್ಟುಕೊಳ್ಳುತ್ತಿದೆ. ಆದರೆ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ಹೊರಲು ಸಿದ್ದವಿಲ್ಲ. ಉದ್ಯೋಗ ನೀಡುವುದು. ನಿರುದ್ಯೋಗ ಭತ್ಯೆ ಪಾವತಿಸುವುದು, ವಿಳಂಬ ಪಾವತಿಗೆ ಕಾರ್ಮಿಕರಿಗೆ ಪರಿಹಾರ ನೀಡುವುದು ಮತ್ತು ಸಮರ್ಪಕ ಹಣಕಾಸು ಒದಗಿಸುವಂತಹ ಎಲ್ಲ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಲಾಗಿದೆ.
‘ವಿಬಿ-ಜಿ ರಾಮ್-ಜಿ’ ಯೋಜನೆಯನ್ನು ಎಲ್ಲಿ ಮತ್ತು ಯಾವಾಗ ಜಾರಿಗೆ ತರಬೇಕು ಎಂದು ನಿರ್ಧರಿಸುವ ‘ಸ್ವಿಚ್ ಆಫ್’ ಅಧಿಕಾರ ಕೇಂದ್ರದ ಕೈಯಲ್ಲಿದೆ. ಇದು ಉದ್ಯೋಗ ಖಾತರಿಯ ಮೂಲ ಉದ್ದೇಶವನ್ನೇ ಸೋಲಿಸುತ್ತದೆ ಇದು ಖಾತ್ರಿಯಾಗಿ ಅನ್ವಯವಾಗುತ್ತದೆ ಎನ್ನುವ ಖಾತ್ರಿಯೇ ಇಲ್ಲದೆ ಉದ್ಯೋಗ ಖಾತರಿ ನೀಡಿದಂತೆ!
ಹಣಕಾಸಿನ ಹಂಚಿಕೆಯಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಕೇಂದ್ರ ಮುಕ್ತವಾಗಿ ಧನಸಹಾಯ ಮಾಡುತ್ತದೆ ತತ್ತ್ವದ ಮೇಲೆ ಮನರೇಗಾ ಆಧಾರಿತವಾಗಿತ್ತು. ಹೊಸ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳು ಮಾಡಬಹುದಾದ ವೆಚ್ಚದ ಮಿತಿಯನ್ನು ನಿಗದಿಪಡಿಸುತ್ತದೆ. ನಿಗದಿಪಡಿಸಿದ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳುತ್ತವೆ. ಅದಕ್ಕೂ ಮೀರಿದ ಎಲ್ಲ ಹಣಕಾಸನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ.
ಕೇಂದ್ರ ಸರ್ಕಾರವು ತನ್ನ ವಿವೇಚನಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಅಪಾಯ ಕೇವಲ ಕಲ್ಪನೆಯಲ್ಲ; ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ವರ್ಷಗಳಿಂದ ಮನರೇಗಾ ಹಣಕಾಸು ಸ್ಥಗಿತಗೊಳಿಸಿರುವುದನ್ನು ನಾವು ನೋಡಿದ್ದೇವೆ. ಈ ಕಠಿಣ ಕ್ರಮಕ್ಕೆ ಕಾರಣಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲೂ ಸ್ಪಷ್ಟಪಡಿಸಿಲ್ಲ. ಇದರ ಹಿಂದಿನ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ.
ಹೊಸ ಹಣಕಾಸು ವ್ಯವಸ್ಥೆಯಿಂದ ಮನರೇಗಾ ದುರ್ಬಲಗೊಳ್ಳಲಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರಗಳು ಕೇವಲ ಶೇಕಡ 25ರಷ್ಟು ಸಾಮಗ್ರಿ ವೆಚ್ಚವನ್ನು ಮಾತ್ರ ಭರಿಸಬೇಕಾಗಿತ್ತು. ಉಳಿದೆಲ್ಲಾ ವೆಚ್ಚವನ್ನು ಕೇಂದ್ರವೇ ನೀಡುತ್ತಿತ್ತು. ಇದು ರಾಜ್ಯಗಳಿಗೆ ಯೋಜನೆಯನ್ನು ಹುರುಪಿನಿಂದ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿತ್ತು. ಹೊಸ 40% ಪಾಲುದಾರಿಕೆಯ ಮಾದರಿಯು ಇದಕ್ಕೆ ದೊಡ್ಡ ಅಡ್ಡಿಯಾಗಲಿದೆ.
ಮನರೇಗಾ ಯಶಸ್ಸಿಗೆ ಕೆಲಸದ ಬೇಡಿಕೆಯಷ್ಟೇ ಮುಖ್ಯವಾಗಿದ್ದು ರಾಜ್ಯಗಳಿಗೆ ಕೇಂದ್ರ ನೀಡುತ್ತಿದ್ದ ಆರ್ಥಿಕ ಬೆಂಬಲ. ರೈತರು ಬಾವಿ ನಿರ್ಮಾಣ, ತೋಟಗಾರಿಕೆಗೆ ಉತ್ಸುಕರಾಗಿದ್ದಾರೆ; ಕೆರೆ- ರಸ್ತೆಗಳ ಅಗತ್ಯವಿದೆ. ವೆಚ್ಚದ ಹೊರೆ ಹೆಚ್ಚಾದಂತೆ, ವಿಶೇಷವಾಗಿ ಬಡ ರಾಜ್ಯಗಳು ಹೊಸ ಯೋಜನೆಗಳ ಅನುಮೋದನೆಯನ್ನು ನಿಧಾನಿಸಬಹುದು ಅಥವಾ ತಡೆಹಿಡಿಯಬಹುದು. ಈ ಮಸೂದೆಯ ಪ್ರಕಾರ ಉದ್ಯೋಗ ನೀಡುವ ಜವಾಬ್ದಾರಿ ರಾಜ್ಯಗಳದ್ದು, ಆದರೆ ಹಣಕಾಸಿನ ಖಾತರಿ ಕೇಂದ್ರ ನೀಡುವುದಿಲ್ಲ. ಇದನ್ನು ರಾಜ್ಯಗಳು ವಿರೋಧಿಸುವುದು ನ್ಯಾಯಸಮ್ಮತವಾಗಿದೆ.
ಮಸೂದೆಯನ್ನು ಬೆಂಬಲಿಸುವ ಕೆಲವು ಅರ್ಥಶಾಸ್ತ್ರಜ್ಞರು ಇದರಿಂದ ಬಡ ರಾಜ್ಯಗಳಿಗೆ ಹೆಚ್ಚಿನ ಹಣ ಸಿಗುತ್ತದೆ ಎಂದು ವಾದಿಸುತ್ತಾರೆ. ಆದರೆ ಬಡ ರಾಜ್ಯಗಳಿಗೆ ನೆರವಾಗಲು ಅಲ್ಲಿನ ವೇತನ ದರಗಳನ್ನು ಹೆಚ್ಚಿಸುವುದು ಸರಿಯಾದ ಮಾರ್ಗವೇ ಹೊರತು. ವೆಚ್ಚದ ಹೊರೆಯನ್ನು ರಾಜ್ಯಗಳ ಮೇಲೆ ಹೇರುವುದಲ್ಲ.
ಎರಡು ವಿಷಯಗಳು ಈ ಮಸೂದೆಯ ವಿನಾಶಕಾರಿ ಸ್ವರೂಪದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆದಿವೆ:
- ಕಾಯ್ದೆಯ ಹೆಸರನ್ನು ಮನರೇಗಾ ಬದಲಿಗೆ ‘ವಿಕಸಿತ್’ ಭಾರತ್ ಜಿ ರಾಮ್ ಜಿ’ ಎಂದು ಬದಲಿಸಿರುವುದು. ಹೆಸರನ್ನು ಬದಲಿಸುವುದು ಸಮಯ ಮತ್ತು ಹಣದ ಪೋಲು ಮಾತ್ರವಲ್ಲ, ಕಾಯ್ದೆಗಿದ್ದ ಪಕ್ಷಾತೀತ ಸ್ವರೂಪವನ್ನೂ ನಾಶಪಡಿಸುತ್ತದೆ. ದುರದೃಷ್ಟವಶಾತ್, ವಿರೋಧ ಪಕ್ಷಗಳು ಮಸೂದೆಯ ಆಳವಾದ ಸಮಸ್ಯೆಗಳನ್ನು ಚರ್ಚಿಸುವ ಬದಲಿಗೆ ಹೆಸರು ಬದಲಾವಣೆಯ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.
- ಉದ್ಯೋಗದ ಮಿತಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿರುವುದು. ಕೇಂದ್ರವು ಇದನ್ನು ದೊಡ್ಡ ಸುಧಾರಣೆಯಂತೆ ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಶೇಕಡ 2ರಷ್ಟು ಕುಟುಂಬಗಳು ಮಾತ್ರ ಪ್ರಸ್ತುತ 100 ದಿನಗಳ ಕೆಲಸ ಪಡೆಯುತ್ತಿವೆ. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆಯಾಗದಿರುವಾಗ, ಅದನ್ನು ಹೆಚ್ಚಿಸುವುದು ಕೇವಲ ತೋರಿಕೆಯ ಕ್ರಮವಾಗಿದೆ. ಇದರ ಬದಲಿಗೆ ವೇತನ ದರವನ್ನು ಹೆಚ್ಚಿಸುವುದರಿಂದ ಜನರಿಗೆ ಹೆಚ್ಚು ಉಪಯೋಗವಾಗುತ್ತಿತ್ತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಂದ್ರದ ಹೊಸ ಮಸೂದೆಯು ಉದ್ಯೋಗ ಖಾತರಿ ಯೋಜನೆಯನ್ನು ಸುಧಾರಿಸುವ ಬದಲಿಗೆ ರಾಜ್ಯಗಳನ್ನು ನಿರುತ್ಸಾಹಗೊಳಿಸುತ್ತಿದೆ ಮತ್ತು ಕಾರ್ಮಿಕರ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ಕೃಷಿ ಕಾಯ್ದೆಗಳಂತೆ ಈ ಮಸೂದೆಯೂ ಸಾರ್ವಜನಿಕ ಒತ್ತಡದಿಂದ ರದ್ದಾಗಬೇಕು. ಇಲ್ಲದಿದ್ದರೆ, ಇದು ಒಂದು ಐತಿಹಾಸಿಕ ಯುಗದ ಅಂತ್ಯವಾಗಲಿದೆ.
ಜೀನ್ ಡ್ರೇಜ್

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





