2020ರಲ್ಲಿ ನಡೆದಿದ್ದ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದ್ದ ವಾಜಿದ್ ಪಾಷಾ ಕೆ.ಎಂ ಅವರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಈ ಪ್ರಕರಣದಲ್ಲಿ ವಿಚಾರಣೆಯಲ್ಲಿನ ವಿಳಂಬವನ್ನು ಜಾಮೀನು ನೀಡಲು ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಬಂಧಿತ ಆರೋಪಿ ವಾಜಿದ್ ಪಾಷಾ ಅವರು, ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ. ತಮ್ಮ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ. ವಿಚಾರಣೆಯೂ ನಡೆಯದೆ, ಕಳೆದ ಐದು ವರ್ಷಗಳಿಂದ ಜೈಲಿನಲ್ಲಿ ಇರಿಸಲಾಗಿದೆ. ತಮಗೆ ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್ ಮುದಗಲ್ ಮತ್ತು ವೆಂಕಟೇಶ್ ನಾಯಕ್ ಟಿ. ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಅರ್ಜಿಯನ್ನು ತಿರಸ್ಕರಿಸುವಾಗ, “ಹಕ್ಕುಗಳ ನಿಜವಾದ ಮೂಲ ಕರ್ತವ್ಯ. ನಮ್ಮ ಕರ್ತವ್ಯಗಳನ್ನು ನಾವೆಲ್ಲರೂ ನಿರ್ವಹಿಸಿದ್ದರೆ ಮಾತ್ರ, ಹಕ್ಕುಗಳನ್ನು ಪಡೆಯಲು ಸಾಧ್ಯ” ಎಂಬ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಪೀಠವು ಉಲ್ಲೇಖಿಸಿದೆ.
”ಅರ್ಜಿದಾರರು ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ, ಪೊಲೀಸರಿಗೆ ಗಾಯಗಳನ್ನುಂಟು ಮಾಡಿದ್ದಾರೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಹಾಗೂ ಧಾರ್ಮಿಕ ಆಧಾರದ ಮೇಲೆ ಜನರ ನಡುವಿನ ಸಾಮರಸ್ಯವನ್ನು ಹಾಳುಮಾಡಿದ್ದಾರೆ ಎಂಬುದಕ್ಕೆ ಪ್ರಾಥಮಿಕವಾಗಿ ಪುರಾವೆಗಳಿವೆ. ಅರ್ಜಿದಾರರು ಸಂವಿಧಾನದ 21 ನೇ ವಿಧಿಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದೆ.
2020ರಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವ ಪೋಸ್ಟ್ ವಿರುದ್ಧದ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯ ಪ್ರತಿಭಟನೆಯು ಗಲಭೆಗೆ ತಿರುಗಿತ್ತು. ಗಲಭೆಯಲ್ಲಿ ಬೆಂಕಿ ಹಚ್ಚುವಿಕೆ, ವಿಧ್ವಂಸಕ ಕೃತ್ಯಗಳು ಹಾಗೂ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ 145ಕ್ಕೂ ಹೆಚ್ಚು ಜನರಿದ್ದ ಗುಂಪಿನಲ್ಲಿ ವಾಜಿದ್ ಕೂಡ ಪ್ರಮುಖ ಆರೋಪಿ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ವಾಜಿದ್ ಅವರು ಗಲಭೆ ನಡೆಸಿದ್ದ ‘ಭಯೋತ್ಪಾದಕ ಗ್ಯಾಂಗ್’ನ ಸದಸ್ಯರಾಗಿದ್ದಾರೆ. ಸಹ-ಆರೋಪಿಗಳೊಂದಿಗೆ ಪಿತೂರಿ ನಡೆಸಿ, ಗಲಭೆಗೆ ಜನರನ್ನು ಪ್ರೇರೇಪಿಸಿದ್ದಾರೆ. ಪೊಲೀಸ್ ಠಾಣೆಯನ್ನು ಸುಟ್ಟುಹಾಕುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ‘ವಿಕಾಸ್ ಭಾರತ್ ಶಿಕ್ಷಾ ಅಧಿಷ್ಠಾನ’ ಮಸೂದೆ: ಕೇಂದ್ರದಿಂದ ಉನ್ನತ ಶಿಕ್ಷಣದ ಅತಿಕ್ರಮಣ; ಮಸೂದೆ ಹೇಳುವುದೇನು?
ವಾಜಿದ್ ಮತ್ತು ಇತರ 145 ಮಂದಿ ವಿರುದ್ಧ ಯುಎಪಿಎ ಸೆಕ್ಷನ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 436 (ಬೆಂಕಿ ಅಥವಾ ಸ್ಫೋಟಕ ವಸ್ತು ಬಳಸಿ ದುಷ್ಕೃತ್ಯ), 353 (ಸರ್ಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಹಾಗೂ ಕರ್ನಾಟಕ ಆಸ್ತಿ ವಿನಾಶ ಮತ್ತು ನಷ್ಟ ತಡೆ ಕಾಯ್ದೆ-1981 (ಕೆಪಿಡಿಎಲ್‌ಪಿ) ನಿಬಂಧನೆಗಳ ಅಡಿಯಲ್ಲಿ ಪ್ರಕರಣದ ದಾಖಲಿಸಿ, 2020ರಲ್ಲಿ ಬಂಧಿಸಲಾಗಿತ್ತು.
5 ವರ್ಷಗಳಿಂದ ಜೈಲಿನಲ್ಲಿರುವ ವಾಜಿದ್, ತಮ್ಮ ವಿರುದ್ಧದ ಆರೋಪಗಳನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ವಾಜಿದ್ ಅವರು ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿ ಜಾಮೀನು ಕೋರಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ, ವಿಚಾರಣಾ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಕೂಡ ಅವರ ಅರ್ಜಿಯನ್ನು ತಿರಸ್ಕರಿಸಿದೆ.




