ರಾಜ್ಯ ಸರ್ಕಾರವು ಈಗಾಗಲೇ ನೂತನವಾಗಿ ರಚಿಸಿರುವ ಜಿಬಿಎ ಆಡಳಿತ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ಪಾರದರ್ಶಕತೆಯನ್ನು ತರಲು ಪ್ರತ್ಯೇಕವಾಗಿ ಉಪಲೋಕಾಯುಕ್ತರನ್ನು ನೇಮಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, “ಈ ಹಿಂದಿನ ಬಿಬಿಎಂಪಿ ಆಡಳಿತಾವಧಿಯಲ್ಲಿ ಇತ್ತೀಚಿನ ದಶಕಗಳಲ್ಲಿ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಿದರೂ ಬಿಡಿಗಾಸು ಸಹ ಜಪ್ತಿ ಮಾಡಲು ಸಾಧ್ಯವಾಗಿಲ್ಲ. ಯಾರಿಗೂ ಇದುವರೆಗೂ ಶಿಕ್ಷೆ ಆಗಿಲ್ಲ. ಇದೇ ರೀತಿಯ ಭ್ರಷ್ಟ ಆಡಳಿತ ಈಗಿನ ಜಿಬಿಎ ದಲ್ಲಿ ಮುಂದುವರಿದುಕೊಂಡು ಬರುತ್ತಿದೆ. ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಬೆಂಗಳೂರಿಗರು ಎಲ್ಲ ವಲಯಗಳಲ್ಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ” ಎಂದರು.
“ಇಲ್ಲಿನ ಗುತ್ತಿಗೆದಾರರಿಗೆ ಈಗಿರುವ ಕಾನೂನಿನಲ್ಲಿ ತಪ್ಪಿಸಿಕೊಳ್ಳಲು ಸಾಕಷ್ಟು ನೆರವು ಸಿಗುತ್ತಿದೆ. ಗುತ್ತಿಗೆದಾರರನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ವಿರುದ್ಧವು ಕಠಿಣ ಕ್ರಮ ತೆಗೆದುಕೊಳ್ಳಲು ಕಾನೂನು ತಿದ್ದುಪಡಿಯನ್ನು ಮಾಡಬೇಕಾಗಿದೆ. ಉಪಲೋಕಾಯುಕ್ತರಿಗೆ ಜಿಬಿಎ ಕೇಂದ್ರ ಕಚೇರಿಯಲ್ಲಿಯೇ ಸಕಲ ವ್ಯವಸ್ಥೆಗಳುಳ್ಳ ಕಚೇರಿಯನ್ನು ನೀಡಬೇಕು. ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ” ಎಂದು ಹೇಳಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ, “ಈಗಿರುವ ಕಾನೂನಿನಲ್ಲಿ ಗುತ್ತಿಗೆದಾರರನ್ನು ನೇರವಾಗಿ ಆರೋಪಿಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟ ಗುತ್ತಿಗೆದಾರರನ್ನು ಸಹ ಕಾನೂನಿನ ಅಂಕುಶಕ್ಕೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ , ರಾಜ್ಯ ಕಾರ್ಯದರ್ಶಿ ರವಿಕುಮಾರ್ ಭಾಗವಹಿಸಿದ್ದರು.





