ಸರ್ಕಾರವು ನೂತನವಾಗಿ ರಚಿಸಿರುವ ಜಿಬಿಎ ಆಡಳಿತ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಾಗೂ ಪಾರದರ್ಶಕ ಆಡಳಿತವನ್ನು ಖಾತ್ರಿಪಡಿಸಲು ಪ್ರತ್ಯೇಕವಾಗಿ ಉಪಲೋಕಾಯುಕ್ತರನ್ನು ನೇಮಿಸಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಹಿಂದಿನ ಬಿಬಿಎಂಪಿ ಆಡಳಿತಾವಧಿಯಲ್ಲಿ ಲಕ್ಷಾಂತರ ಕೋಟಿ ರೂ. ಹಣವನ್ನು ಲೂಟಿ ಮಾಡಿದರು ಬಿಡಿಗಾಸು ಚಪ್ತಿ ಮಾಡಲು ಸಾಧ್ಯವಾಗಿಲ್ಲ ಮತ್ತು ಯಾರಿಗೂ ಇದುವರೆಗೂ ಶಿಕ್ಷೆ ಆಗಿಲ್ಲ. ಇದೇ ರೀತಿಯ ಭ್ರಷ್ಟ ಆಡಳಿತ ಈಗಿನ ಜಿಬಿಎದಲ್ಲಿ ಮುಂದುವರಿದುಕೊಂಡು ಬರುತ್ತಿದೆ” ಎಂದು ಆರೋಪಿಸಿದರು.
“ಭ್ರಷ್ಟ ವ್ಯವಸ್ಥೆಯಿಂದಾಗಿ ಬೆಂಗಳೂರಿಗರು ಎಲ್ಲ ವಲಯಗಳಲ್ಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ಈಗಿರುವ ಕಾನೂನಿನಲ್ಲಿ ತಪ್ಪಿಸಿಕೊಳ್ಳಲು ಸಾಕಷ್ಟು ನೆರವು ಸಿಗುತ್ತಿದೆ. ಗುತ್ತಿಗೆದಾರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅವರ ವಿರುದ್ಧವು ಕಠಿಣ ಕ್ರಮ ತೆಗೆದುಕೊಳ್ಳಲು ಕಾನೂನು ತಿದ್ದುಪಡಿ ಮಾಡಬೇಕಾಗಿದೆ. ಉಪಲೋಕಾಯುಕ್ತರಿಗೆ ಜಿಬಿಎ ಕೇಂದ್ರ ಕಚೇರಿಯಲ್ಲಿಯೇ ಸಕಲ ವ್ಯವಸ್ಥೆಗಳುಳ್ಳ ಕಚೇರಿಯನ್ನು ನೀಡಬೇಕು. ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ, “ಈಗಿರುವ ಕಾನೂನಿನಲ್ಲಿ ಗುತ್ತಿಗೆದಾರರನ್ನು ನೇರವಾಗಿ ಆರೋಪಿಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟ ಗುತ್ತಿಗೆದಾರರನ್ನು ಕಾನೂನಿನ ಅಂಕುಶಕ್ಕೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




