ಬೆಂಗಳೂರು ಚಲೋ | ಭೂಮಿ-ವಸತಿ ಹಕ್ಕಿಗಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭ

Date:

ಭೂಮಿ ಹಕ್ಕು, ನಿವೇಶನ ಹಾಗೂ ವಸತಿಗಾಗಿ ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಕೆಯಾಗಿವೆ. ಆದರೆ, ಅರ್ಜಿಗಳ ವಿಲೇವಾರಿ ಮಾಡಲಾಗಿಲ್ಲ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ನಿವೇಶನ ಹಂಚಿಕೆ ಮಾಡಬೇಕು. ನೆನೆಗುದಿಗೆ ಬಿದ್ದಿರುವ ಭೂ ವಿವಾದವನ್ನು ಪರಿಹರಿಸಿ ಬಡವರಿಗೆ ಹಕ್ಕುಪತ್ರ ನೀಡಬೇಕು ಎಂದು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಒತ್ತಾಯಿಸಿದೆ.

‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ನೇತೃತ್ವದಲ್ಲಿ ಭೂಮಿ, ವಸತಿ ಹಾಗೂ ನಿವೇಶನ ವಂಚಿತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಚಲೋ’ ಘೋಷಣೆಯಡಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮೊಂದಿಗೆ ಸಭೆ ನಡೆಸಿ, ಕ್ರಮ ಕೈಗೊಳ್ಳುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಧರಣಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡ ಕುಮಾರ್ ಸಮತಳ, “ವಸತಿ ಮತ್ತು ಭೂಮಿ ಹಕ್ಕಿಗಾಗಿ ನಾವು 2016ರಿಂದ ಹಲವು ಸುತ್ತಿನ ಹೋರಾಟ ಮಾಡಿದ್ದೇವೆ; ಭೂಮಿ ಹಕ್ಕಿಗಾಗಿ ರಾಜ್ಯದಲ್ಲಿ 34 ಲಕ್ಷ ಅರ್ಜಿ ಹಾಕಿದ್ದು, ಸರ್ಕಾರಿ ಕಚೇರಿಗಳಿಗೆ ಜನ ಅಲೆದಾಡಿ ಬಸವಳಿದಿದ್ದಾರೆ. ಬಡವರು ಸ್ವತಂತ್ರವಾಗಿ ಬದುಕಬೇಕು ಎಂಬ ಕಾಳಜಿ ಸರ್ಕಾರಕ್ಕೆ ಇಲ್ಲವಾಗಿದೆ. ಆದ್ದರಿಂದ, ನಾವೆಲ್ಲಾ ಸಮಾನ ಮನಸ್ಕ ಸಂಘಟನೆ ಸೇರಿಕೊಂಡು ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಭೂಮಿ ಹಾಗೂ ವಸತಿಗಾಗಿ ರಾಜ್ಯದಲ್ಲಿ 57 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ; ಕೋಟ್ಯಾಂತರ ಜನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದು, ಅವರಿಗೆ ಈಗ ಭೂಮಿ ಸಿಗುವ ಭರವಸೆ ಸಿಕ್ಕಿದೆ. ಆದರೆ, 10 ವರ್ಷಗಳ ಹಿಂದೆ ಈ ಭರವಸೆ ಇರಲಿಲ್ಲ. ಅರ್ಜಿದಾರರಲ್ಲಿ ಭರವಸೆ ಹುಟ್ಟಿಸುವ ಕೆಲಸವನ್ನು ಕಳೆದ ಎಂಟು ವರ್ಷದಿಂದ ನಮ್ಮ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮಾಡಿದೆ” ಎಂದರು.

“ಫಾರ್ಮ್‌ 53, 57 ರಲ್ಲಿ ಹಲವರು ಅರ್ಜಿ ಹಾಕಿದ್ದಾರೆ. ಆದರೆ, ತಹಶೀಲ್ದಾರ್ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶೇ.95 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಸರ್ಕಾರ ಭೂಮಿ ಕೊಡಲ್ಲ ಎಂದು ಹೇಳಿದರೆ ನಾವು ಸುಮ್ಮನಾಗಬೇಕಾ? ಇದಕ್ಕೆ ಪರಿಹಾರ ಏನು ಎಂದು ನಾವು ಸರ್ಕಾರಕ್ಕೆ ಹೇಳಿದ್ದೇವೆ. ಹೇಗೆ ಭೂಮಿ ಹಂಚಿಕೆ ಮಾಡಬೇಕು ಎಂಬದನ್ನೂ ನಾವು ಹೇಳುತ್ತಿದ್ದೇವೆ. ಮುಖ್ಯವಾಗಿ, ನಮ್ಮ ಜನರು ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಅವರ ಹೆಸರಿಗೆ ಪರಭಾರೆ ಮಾಡಿ. ಅಲ್ಲಿ ಜನ ಉಳುಮೆ ಮಾಡುತ್ತಿದ್ದಾರೆ, ಅದಕ್ಕೆ ನಮ್ಮ ಬಳಿ ಸಾಕ್ಷಿ ಇದೆ” ಎಂದು ಹೇಳಿದರು.

“ಭೂಮಿ ಕೊಡುವುದಕ್ಕೆ ಹಲವಾರು ಕಾನೂನುಗಳು ಅಡ್ಡಿ ಬರುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕಾನೂನನ್ನು ಬದಲಾವಣೆ ಮಾಡಿ ಜನರಿಗೆ ಭೂಮಿ ಕೊಡಿ ಎಂದು ಒತ್ತಾಯಿಸುತ್ತೇವೆ. ಅರ್ಜಿ ಸಲ್ಲಿಸಿರುವವರಿಗೆ ‘ಒನ್‌ ಟೈಮ್‌ ಸೆಟಲ್‌ಮೆಂಟ್’ ಮಾಡಿ, ನಂತರ ಕಾನೂನು ಪಾಲನೆ ಮಾಡಿ. ಬೇರೆಯವರಿಂದ ಭೂಮಿ ಖರೀದಿಸಿ ಎಂದು ನಾವು ಹೇಳುತ್ತಿಲ್ಲ; ಬಂಡವಾಳಶಾಹಿಗಳಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರ ಸಾವಿರಾರು ಎಕರೆ ಭೂಮಿ ನೀಡುತ್ತಿದೆ. ಅದಕ್ಕಾಗಿ ಕಾನೂನನ್ನೂ ಬದಲಿಸಿದೆ. ಎಲ್ಲ ಜಾತಿಯ ಭೂರಹಿತರಿಗೆ ಭೂಮಿ ನೀಡಿ ಸಾಮಾಜಿಕ ನ್ಯಾಯ ಪಾಲಿಸಬೇಕು” ಎಂದು ಕುಮಾರ್ ಒತ್ತಾಯಿಸಿದರು.

ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, “ಭೂಮಿ ಮತ್ತು ವಸತಿ ಹಕ್ಕು ಸಮಿತಿ ಅಡಿಯಲ್ಲಿ ಎಂಟು ವರ್ಷಗಳ ಹೋರಾಟದ ಪ್ರತಿಫಲವಾಗಿ ದೊಡ್ಡಮಟ್ಟದ ವಿಜಯ ಕೊನೆಯ ಹಂತಕ್ಕೆ ಬಂದಿದೆ. ಸುಮಾರು ಮೂರು ಲಕ್ಷ ಕುಟುಂಬಕ್ಕೆ ಹಕ್ಕು ಪತ್ರ ಸಿಗುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ದೇಶದ ಯಾವುದೇ ರಾಜ್ಯದಲ್ಲಿ ಈ ಬೆಳವಣಿಗೆ ನಡೆದಿಲ್ಲ” ಎಂದರು.

“ಎಚ್‌.ಎಸ್‌. ದೊರೆಸ್ವಾಮಿ ಅವರು ಭೂಮಿ ಹೋರಾಟ ಮಾಡುವಂತೆ ನಮ್ಮನ್ನು ಜಾಗೃತಗೊಳಿಸಿದರು. ಆದ್ದರಿಂದ, ಅವರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ನಮ್ಮ ಹೋರಾಟ ಇಂದು ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, 2018 ರಿಂದ ಸತತ ಹೋರಾಟ ಮಾಡಿದ ಸಮಿತಿಯ ಎಲ್ಲ ನಾಯಕರೂ ಈ ಹಂತದವರೆಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಕೃಷ್ಣ ಬೈರೇಗೌಡ ಅವರಿಗೂ ಇದರ ಶ್ರೇಯಸ್ಸು ಸಿಗಬೇಕು” ಎಂದು ಹೇಳಿದರು.

“ನಮ್ಮ ಹೋರಾಟದ ಅರಿವಿರುವ ಇಬ್ಬರೂ ನಾಯಕರು ಅರ್ಜಿಗಳ ವಿಲೇವಾರಿಗೆ ಒಪ್ಪಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡುತ್ತೇವೆ ಎಂದು ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೂರು ಲಕ್ಷ ಜನರಿಗೆ ಈಗ ಹಕ್ಕುಪತ್ರ ಸಿಗುತ್ತಿದೆ. ಆದರೆ, 12 ಲಕ್ಷ ಅರ್ಜಿಗಳು ತಿರಸ್ಕಾರದ ಪಟ್ಟಿಯಲ್ಲಿವೆ; ಇಲ್ಲಿರುವ ಬಹುಪಾಲು ಜನ ಇದೇ ಪಟ್ಟಿಯಲ್ಲಿ ಇದ್ದಾರೆ. ಈಗ ನಾವು ಹೋರಾಟ ಮಾಡದೇ ಇದ್ದರೆ, ಮುಂದೆ ಭೂಮಿ ಹಕ್ಕು ಪಡೆದುಕೊಳ್ಳಲು ಸಾಧ್ಯವಿಲ್ಲ! ಈ ಡಿಸೆಂಬರ್ ಒಳಗೆ ಆಗದೇ ಇದ್ದರೆ.. ನಮಗೆ ಮುಂದೆ ಭೂಮಿ ಸಿಗುವುದಿಲ್ಲ. ಆದ್ದರಿಂದ, ಡಿಸೆಂಬರ್‌ವರೆಗೂ ನಿರಂತರ ಹೋರಾಟ ನಡೆಯಬೇಕು” ಎಂದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಾದ ಸಿರಿಮನೆ ನಾಗರಾಜ್ ಮಾತನಾಡಿ, “ರಾಜ್ಯದಾದ್ಯಂತ 37 ಲಕ್ಷ ಜನ ಬಗರ್ ಹುಕುಂ ಅಡಿ ಅರ್ಜಿ ಹಾಕಿದ್ದಾರೆ; ವಸತಿಗಾಗಿ 27 ಲಕ್ಷ ಜನ ಅರ್ಜಿ ಹಾಕಿದ್ದಾರೆ. ಇವರ ಕುಟುಂಬದವರೆಲ್ಲಾ ಸೇರಿದರೆ ಕನಿಷ್ಠ ಮೂರು ಕೋಟಿ ಜನ ತಮ್ಮ ಹಕ್ಕಿಗಾಗಿ ಕಾಯುತ್ತಿದ್ದಾರೆ. ಸರ್ಕಾರ ಒಂದಲ್ಲ ಒಂದು ದಿನ ಹಕ್ಕುಪತ್ರ ನೀಡುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ರಾಜ್ಯದ ಮೂಲೆಮೂಲೆಯಿಂದ ಹೋರಾಟಕ್ಕೆ ಜನ ಬಂದಿದ್ದಾರೆ; ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು. ವರ್ಷದಲ್ಲಿ ಮೂರು ಭಾರಿ ರಾಜಧಾನಿ ಬೆಂಗಳೂರಿಗೆ ಬಂದು ಹೋರಾಟ ಮಾಡುತ್ತಿದ್ದಾರೆ” ಎಂದರು.

“ಕಟ್ಟಕಡೆಯ ಮನುಷ್ಯನಿಗೂ ಭೂಮಿ ಮತ್ತು ವಸತಿ ಸಿಗಬೇಕು, ಬಡತನದಿಂದ ಜನರು ಹೊರಬರಬೇಕು ಎಂಬ ಮಹಾತ್ಮ ಗಾಂಧಿ ಮಾತನ್ನು ಎಚ್‌.ಎಸ್‌. ದೊರೆಸ್ವಾಮಿ ಹೇಳುತ್ತಿದ್ದರು. ಅವರು ಸಾಯುವ ಹಿಂದಿನ ದಿನ ಕೂಡ ಈ ಬಗ್ಗೆ ಮಾತನಾಡಿ, ಹೋರಾಟ ಮುಂದುವರಿಸುವಂತೆ ಹೇಳಿದ್ದರು. ಕೊಡಗಿನ ಕುಶಾಲನಗರದಲ್ಲಿ ನಾವು ನಡೆಸಿದ ದಿಡ್ಡಹಳ್ಳಿ ಹೋರಾಟದಿಂದ 600 ಮನೆಗಳು ನಿರ್ಮಾಣ ಆಗಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರ ಹೋರಾಟ ನಡೆಯುತ್ತಿದೆ; ಹಲವಾರು ಕಡೆ ಅಲೆಮಾರಿಗಳಿಗೆ ವಸತಿ ಸಿಕ್ಕಿದೆ” ಎಂದು ಹೇಳಿದರು.

“ಸರ್ಕಾರಿ ಭೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ, ಬಡ ಜನರಿಗೆ ಭೂಮಿ ಸಿಗುತ್ತಿಲ್ಲ. ಶ್ರೀಮಂತರಿಗೆ ಗುತ್ತಿಗೆ ನೀಡುವುದಕ್ಕೆ ಮಾತ್ರ ಸರ್ಕಾರ ಕಾನೂನು ಬದಲಾವಣೆ ಮಾಡುತ್ತೆ; ಬಳ್ಳಾರಿಯಲ್ಲಿ 3 ಸಾವಿರ ಎಕರೆ ಭೂಮಿ ಗುತ್ತಿಗೆ ನೀಡಲು ಕಾನೂನೂನಿಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಬಡವರಿಗೆ ಮನೆ ಕೊಡಲು ಕಾನೂನು ತಿದ್ದುಪಡಿ ಮಾಡಲು ಸಾಧ್ಯವಿಲ್ಲವಾ? 40 ಸಾವಿರ ಎಕರೆ ಭೂಮಿಯನ್ನು ಬೆಂಗಳೂರಿನ ಸುತ್ತಮುತ್ತ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ; ಬಡವರಿಗೆ ಭೂಮಿ ಮತ್ತು ಮನೆ ಕೊಡುವುದಕ್ಕೆ ಕಾನೂನು ಅಡ್ಡಿ ಎನ್ನುತ್ತಾರೆ. ಕಾನೂನಿಗೆ ತಿದ್ದುಪಡಿ ಮಾಡಬೇಕು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಬೇಕು” ಎಂದು ಅವರು ಒತ್ತಾಯಿಸಿದರು.

ಮಡಿಕೇರಿಯ ರೈತಸಂಘ ಮುಖಂಡ ನಿರ್ವಾಣಪ್ಪ ಮಾತನಾಡಿ, “ಭೂಮಿ ಮತ್ತು ವಸತಿಗಾಗಿ ನಾವು ಹಲವು ಸುತ್ತಿನ ಹೋರಾಟ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಎಂದು ಹೇಳುತ್ತಿರುವ ಸರ್ಕಾರ ಅದನ್ನು ಎಲ್ಲರಿಗೂ ತಲುಪಿಸುತ್ತಿಲ್ಲ. ಗ್ಯಾರಂಟಿ ಶಾಶ್ವತವಲ್ಲ ಎಂಬುದು ನಮಗೆಲ್ಲಾ ಗೊತ್ತಿದೆ, ಸಿದ್ದರಾಮಯ್ಯ ಅವರು ಅಧಿಕಾರದಿಂದ ಇಳಿದ ಕೂಡಲೇ ಎಲ್ಲವೂ ಬದಲಾಗುತ್ತದೆ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಬಡವರ ಪರ ಕಾಳಜಿ ಇಲ್ಲ. ನಮಗೆ ಶಾಶ್ವತ ಪರಿಹಾರವಾಗಿ ಮನೆ, ಭೂಮಿ, ಉದ್ಯೋಗ ಹಾಗೂ ಆರೋಗ್ಯದ ರಕ್ಷಣೆ ಬೇಕು” ಎಂದು ಆಗ್ರಹಿಸಿದರು.

“ಕಾಂಗ್ರೆಸ್ ಸರ್ಕಾರ ಬಡವರಿಗೆ ಭೂಮಿ ಕೊಡಬೇಕು; ಭೂಮಿ ವಿಷಯದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯವಿದೆ. ಹಲವು ಹಳ್ಳಿಗಳಲ್ಲಿ ಜನರು ಸತ್ತರೆ ಹೆಣ ಹೂಳಲು ಜಾಗವಿಲ್ಲ. ಕೊಡಗಿನ ಹಲವು ಆದಿವಾಸಿಗಳು ಪ್ಲಾಸ್ಟಿಕ್ ಶೆಡ್‌ನಲ್ಲಿ ವಾಸ ಮಾಡುತ್ತಿದ್ದಾರೆ; ಅಲ್ಲಿ ಬಡತನ ಹೆಚ್ಚಾಗಿದೆ. ಆದಿವಾಸಿ, ಬಡವರು ಹಾಗೂ ದಲಿತರನ್ನು ಎಲ್ಲ ಪಕ್ಷದ ನಾಯಕರು ಒಟ್ಟಾಗಿ ಶೋಷಣೆ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೂತು ಚರ್ಚೆ ಮಾಡಿ, ಬಡವರಿಗೆ ಎಷ್ಟು ಕೂಲಿ ಕೊಡಬೇಕು ಎಂದು ನಿರ್ಧರಿಸುತ್ತಾರೆ” ಎಂದರು.

ಈ ವರದಿ ಓದಿದ್ದೀರಾ?: ಭೂ ಸುಧಾರಣಾ ಖಾತೆ ಸಚಿವರಾಗಿ, ಸ್ವಂತ ಭೂಮಿಯನ್ನೇ ಬಿಟ್ಟುಕೊಟ್ಟ ಸುಬ್ಬಯ್ಯ ಶೆಟ್ಟಿ

ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “78 ವರ್ಷಗಳ ಸ್ವಾತಂತ್ರ್ಯ ಭಾರತದಲ್ಲಿ ಈಗಲೂ ವಸತಿ ಬೇಕು ಎಂದು ಕೇಳುತ್ತಿರುವುದು ನಾಚಿಕೆಗೇಡಿನ ವಿಚಾರ. ಪ್ರಾಕೃತಿಕವಾಗಿ ಬಂದಿರುವ ಭೂಮಿಯುನ್ನು ಬಡವರಿಗೆ ಯಾಕೆ ಕೊಡುತ್ತಿಲ್ಲ? ಇಷ್ಟು ವರ್ಷ ನಾವು ವೋಟ್ ಹಾಕಿದ್ದು ಇದಕ್ಕಾಗಿಯೇ? ಯಾವಾಗಲೂ ನಾವು ಬೀದಿಯಲ್ಲೇ ಇರಬೇಕಾ” ಎಂದು ಅವರು ಆಕ್ರೋಶ ಹೊರಹಾಕಿದರು.

“ರಾಜಕಾರಣಿಗಳ ಇಡೀ ಕುಟುಂಬ ಉದ್ದಾರ ಆಗಲಿ ಎಂಬ ಕಾರಣಕ್ಕೆ ನಾವು ವೋಟ್ ಹಾಕಿದ್ದಾ? ನಾವೇನು ನೂರಾರು ಎಕರೆ ಕೇಳುತ್ತಿಲ್ಲ; ಒಂದು ಮನೆ ಕೇಳುತ್ತಿದ್ದೇವೆ. ನಮಗೆ ಭೂಮಿ ಕೊಟ್ಟರೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುವ ಅಗತ್ಯವಿಲ್ಲ. ಸಂವಿಧಾನವೇ ಪ್ರತಿಯೊಂದು ಕುಟುಂಬಕ್ಕೆ ಭೂಮಿ ಇರಬೇಕು ಎಂದು ಹೇಳುತ್ತದೆ. ಆದರೆ, 78 ವರ್ಷ ಕಳೆದರೂ ಈವರೆಗೆ ಭೂಮಿ ಸಿಕ್ಕಿಲ್ಲ, ಸರ್ಕಾರದ ಭೂಮಿಯನ್ನು ಸುಗ್ರೀವಾಜ್ಞೆ ಮೂಲಕ ಬಡವರಿಗೆ ಹಂಚಿಕೆ ಮಾಡಬೇಕು” ಎಂದು ಅಂಬಣ್ಣ ಆಗ್ರಹಿಸಿದರು.

ಸರ್ಕಾರದ ಪರವಾಗಿ ಆಗಮಿಸಿ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್, “ಸುಮಾರು ವರ್ಷಗಳಿಂದ ಭೂಮಿ ವಿವಾದ ಇದೆ, ಕಾಗೋಡು ತಿಮ್ಮಪ್ಪನವರು ಹಲವು ಭಾರಿ ಸದನದಲ್ಲಿ ಮಾತನಾಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನ ಕ್ರಮ ತೆಗೆದುಕೊಳ್ಳಲು ಅಡ್ಡಬರುತ್ತಿದೆ. ಅರಣ್ಯ ಒತ್ತುವರಿ ಮಾಡಬಾರದು ಎಂದು ಕೋರ್ಟ್‌ ಹೇಳಿದೆ. ಭೂಮಿ ಹಂಚಿಕೆ ಕೇವಲ ಸಾಮಾಜಿಕ ನ್ಯಾಯವಲ್ಲ, ಮಾನವೀಯ ಹಕ್ಕು. ಆದ್ದರಿಂದ, ಕಾನೂನು ಬದಲಾಗಬೇಕು. ಮುಖ್ಯಮಂತ್ರಿಗಳ ಮೇಲೆ ನನಗೆ ನಂಬಿಕೆ ಇದೆ.. ಅವರ ಜೊತೆಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ” ಎಂದು ಅವರು ಭರವಸೆ ನೀಡಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ: ಮಂದಕೃಷ್ಣ ಮಾದಿಗ ಆರೋಪ

ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್‌, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ...

ಒಳಮೀಸಲಾತಿ ಹೋರಾಟ | ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ: ಮಾರಸಂದ್ರ ಮುನಿಯಪ್ಪ

ಸಿದ್ದರಾಮಯ್ಯ ಅವರು ಸಮಾಜವಾದದ ಬಗ್ಗೆ ಮಾತನಾಡುತ್ತಾರೆ. ನುಡಿದಂತೆ ನಡೆದಂತೆ ಸರ್ಕಾರವೆಂದು ಹೇಳುತ್ತಾರೆ....

ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಬರಲಿದೆ ಒಳಮೀಸಲಾತಿ ಹೋರಾಟ: ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು...

ಬೆಂಗಳೂರು | ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಮೊಳಗುತ್ತಿದೆ ಘೋಷ

ಸರ್ಕಾರವು ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ...