ಚಾರ್ಟರ್ಡ್ ವಿಮಾನದ ಕರ್ತವ್ಯದಲ್ಲಿದ್ದಾಗ ತನ್ನ ಮೇಲೆ ಪೈಲಟ್ ಅತ್ಯಾಚಾರ ಎಸಗಿದ್ದಾನೆಂದು ಮಹಿಳಾ ಸಹ-ಪೈಲಟ್ ಆರೋಪಿಸಿದ್ದಾರೆ. ಘಟನೆಯು ಬೆಂಗಳೂರಿನಲ್ಲಿ ನಡೆದಿದ್ದು, ಸಂತ್ರಸ್ತೆ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಘಟನೆ ಬೆಂಗಳೂರಿನಲ್ಲಿ ನಡೆದಿದ್ದ ಕಾರಣ ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.
ಸಂತ್ರಸ್ತೆ ದಾಖಲಿಸಿರುವ ದೂರಿನ ಪ್ರಕಾರ, ನವೆಂಬರ್ 18ರಂದು ಘಟನೆ ನಡೆದಿದೆ. ಸಂತ್ರಸ್ತ ಮಹಿಳಾ ಸಹ-ಪೈಲಟ್ ಮತ್ತು ಇಬ್ಬರು ಪುರುಷ ಪೈಲಟ್‌ಗಳು ಬೇಗಂಪೇಟೆ ವಿಮಾನ ನಿಲ್ದಾಣದಿಂದ ಪುಟ್ಟಪರ್ತಿ ಮೂಲಕ ಬೆಂಗಳೂರಿಗೆ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸಿದ್ದರು. ಮರುದಿನ ಅವರನ್ನು ಮತ್ತೊಂದು ವಿಮಾನ ಚಾಲನೆಗೆ ನಿಯೋಜಿಸಿದ್ದರಿಂದ, ಮೂವರೂ ಹೋಟೆಲ್‌ನಲ್ಲಿ ತಂಗಿದ್ದರು.
ಅಂದು ರಾತ್ರಿ, ಪೈಲಟ್ ರೋಹಿತ್ ಶರಣ್ ಎಂಬಾತ ಧೂಮಪಾನ ಮಾಡಲು ತನ್ನೊಂದಿಗೆ ಹೊರಗೆ ಬರುವಂತೆ ಮಹಿಳಾ ಸಹ-ಪೈಲಟ್‌ಅನ್ನು ಒತ್ತಾಯಿಸಿದ್ದಾನೆ. ಆತನ ಮಾತಿಗೆ ಮಣಿದು ಆತನೊಂದಿಗೆ ಹೊರ ಹೋಗಲು ಸಂತ್ರಸ್ತೆ ಒಪ್ಪಿಕೊಂಡಿದ್ದಾರೆ. ಆದರೆ, ಆತ ಹೊರಗೆ ಕರೆದೊಯ್ಯುವ ಬದಲು, ತಾನು ತಂಗಿದ್ದ ಕೊಠಡಿ ಬಳಿ ಹೋಗಿದ್ದಾನೆ. ಆತನ ಕೊಠಡಿಯ ಬಾಗಿಲ ಬಳಿ ಹೋಗುತ್ತಿದ್ದಂತೆಯೇ, ಆರೋಪಿಯು ಆಕೆಯನ್ನು ಬಲವಂತವಾಗಿ ಕೊಠಡಿಯೊಳಕ್ಕೆ ಎಳೆದಿದ್ದಾನೆ. ಆಕೆಯ ಮೇಲೆ ಹಲ್ಲೆಗೈದು, ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯು ನವೆಂಬರ್ 20ರಂದು ಹೈದರಾಬಾದ್‌ಗೆ ಮರಳಿದ್ದು, ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ವಿಮಾನ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿದ್ದಾರೆ. ಬಳಿಕ, ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದೀಗ, ಬೆಂಗಳೂರು ಪೊಲೀರಿಗೆ ವರ್ಗಾಯಿಸಿದ್ದಾರೆ.




