ಪ್ರೇಮಾ ಎಸ್. – ಬೀದಿ ವ್ಯಾಪಾರಿಯ ಮಗಳು. ಕನ್ನಡದಲ್ಲಿಯೇ ಸಾಧನೆಗೈದವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ (PG – ಎಂ.ಎ) ಪಡೆದಿದ್ದಾರೆ. ವಿಶ್ವವಿದ್ಯಾಲಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಪದವಿಯ ಜೊತೆಗೆ, 11 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಕನ್ನಡದ ಹಿರಿಮೆಗೆ ಮತ್ತೊಂದು ಗರಿ ತಂದುಕೊಟ್ಟಿದ್ದಾರೆ.
ಬುಧವಾರ, ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿ ವಿಶ್ವವಿದ್ಯಾಲಯದ 60ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ವ್ಯಾಸಂಗ ಮತ್ತು ಅಧ್ಯಯನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತದೆ. ಪದಕ ಪಡೆಯುವವರಲ್ಲಿ ಅತೀ ಹೆಚ್ಚು ಪದಕಗಳನ್ನು ಪ್ರೇಮಾ ಅವರೇ ಬಾಚಿಕೊಳ್ಳಲಿದ್ದಾರೆ.
ಪ್ರೇಮಾ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಳ್ಳಿ ಗ್ರಾಮದವರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಣದಲ್ಲಿನ ತಮ್ಮ ಸಾಧನೆಯನ್ನು ತನ್ನ ಪೋಷಕರಿಗೆ ಅರ್ಪಿಸುತ್ತೇನೆಂದು ಪ್ರೇಮಾ ಹೇಳಿಕೊಂಡಿದ್ದಾರೆ. ಭವಿಷ್ಯದಲ್ಲಿ ಕನ್ನಡದಲ್ಲಿ ಪಿಎಚ್‌ಡಿ ಮಾಡಬೇಕು, ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿದ್ದಾರೆ ಎಂದು ‘ದಿ ಹಿಂದು’ ವರದಿ ಮಾಡಿದೆ.
“ನಾನು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ.ಎ ಪದವಿ ಕನ್ನಡ ವಿಷಯ) ಪೂರ್ಣಗೊಳಿಸಿದ್ದೇನೆ. ನಾನು ಒಂದನೇ ತರಗತಿಯಿಂದಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ, ಕನ್ನಡ ನನ್ನ ನೆಚ್ಚಿನ ವಿಷಯ. ಅದಕ್ಕಾಗಿಯೇ ನಾನು ಕನ್ನಡದಲ್ಲಿ ಎಂಎ ಮಾಡಿದ್ದೇನೆ” ಎಂದು ಪ್ರೇಮಾ ಹೇಳಿದ್ದಾರೆ.
” ನನ್ನ ತಂದೆ ಶರಣಪ್ಪ ಮುದಿಯಪ್ಪ ಮುಕ್ಕಣ್ಣವರ್, ಜಾಲಹಳ್ಳಿ ಕ್ರಾಸ್‌ನಲ್ಲಿ ಕೈಗಡಿಯಾರಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿ. ನನ್ನ ತಾಯಿ ಸಾವಿತ್ರಿ ಹೋಟೆಲ್‌ಗಳಿಗೆ ಚಪಾತಿ ಪೂರೈಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಡತನದಿಂದಾಗಿ ಅವರಿಬ್ಬರೂ ಶಿಕ್ಷಣ ಪಡೆಯಲಾಗಲಿಲ್ಲ. ಆದರೆ, ಅದೇ ಬಡತನ ನನ್ನ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬುದು ಅವರ ಆಶಯವಾಗಿತ್ತು. ಅದರಂತೆ, ಬಡತನದಲ್ಲಿಯೂ ನನಗೆ ಶಿಕ್ಷಣ ಕೊಡಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿದ್ದೇನೆ. ಬಿಎಡ್ ಕೋರ್ಸ್ ಮುಗಿದ ನಂತರ, ಪಿಎಚ್‌ಡಿ ಮುಗಿಸಿ ಸಹಾಯಕ ಪ್ರಾಧ್ಯಾಪಕಿಯಾಗಬೇಕೆಂಬ ಕನಸು ನನಗಿದೆ. ಇದಲ್ಲದೆ, ನಾನು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ. ಆದರೆ ಬೋಧನೆ ನನ್ನ ಆದ್ಯತೆ ಮತ್ತು ಉತ್ಸಾಹದ ಕ್ಷೇತ್ರ ” ಎಂದು ಅವರು ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ
ಪ್ರೇಮಾ ಅವರಂತೆಯೇ, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ (UVCE) ಸಿವಿಲ್ ಎಂಜಿನಿಯರಿಂಗ್ ಪದವೀಧರರಾದ ಹೇಮಂತ್ ಎ.ಎಸ್ ಅವರು ಕೂಡ ಏಳು ಚಿನ್ನದ ಪದಕಗಳು ಮತ್ತು ಮೂರು ನಗದು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಆಟೋ ಚಾಲಕನ ಮಗನಾದ ಹೇಮಂತ್, “ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದೇನೆ. ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಓದಿದ್ದೇನೆ. ನಂತರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನನ್ನ ಡಿಪ್ಲೊಮಾವನ್ನು ಪೂರ್ಣಗೊಳಿಸಿದೆ. 2022ರಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ UVCEಗೆ ಸೇರಿದೆ. ನಾನು ಡಿಪ್ಲೊಮಾ ಮಾಡಿದ್ದರಿಂದ ಎಂಜಿನಿಯರಿಂಗ್‌ನಲ್ಲಿ ಉತ್ತಮ ಅಂಕ ಪಡೆಯಲು ಮತ್ತು ಕಲಿಯಲು ನನಗೆ ಸುಲಭವಾಯಿತು. ಕಳೆದ ವರ್ಷ, ಕ್ಯಾಂಪಸ್ ಆಯ್ಕೆಯ ಮೂಲಕ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದೇನೆ. ಭವಿಷ್ಯದಲ್ಲಿ ನಾನು ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಗುರಿ ಹೊಂದಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಏಳು ವಿದ್ಯಾರ್ಥಿಗಳಲ್ಲಿ ಆರು ಮಂದಿ ಹೆಣ್ಣು ಮಕ್ಕಳೇ ಆಗಿದ್ದಾರೆ. ಭೌತಶಾಸ್ತ್ರ ವಿಭಾಗದ ರುಫಿಯಾ ಕೆ.ಎಂ. ಮತ್ತು ರಸಾಯನಶಾಸ್ತ್ರ ವಿಭಾಗದ ವಿದ್ಯಾಶ್ರೀ ಬಿ.ಎಸ್ – ಈ ಇಬ್ಬರೂ ತಲಾ ಏಳು ಚಿನ್ನದ ಪದಕಗಳನ್ನು ಪಡೆದಿದ್ದು, ಪ್ರೇಮಾ ನಂತರದ ಎರಡನೇ ಸ್ಥಾನ ಪಡೆದಿದ್ದಾರೆ. ವಿದ್ಯಾಶ್ರೀ ಮೂರು ನಗದು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಗೌತಮಿ ಬಿ.ಎಂ. ಮತ್ತು ಗಣಿತ ವಿಭಾಗದ ಲಿಖಿತಾ ಕುಮಾರಿ ಆರ್. ತಲಾ ಆರು ಪದಕಗಳನ್ನು ಪಡೆದಿದ್ದಾರೆ. ಅರ್ಥಶಾಸ್ತ್ರ ವಿಭಾಗದ ವಿಕಾಸ್ ಎಂ ಮತ್ತು ಇತಿಹಾಸ ವಿಭಾಗದ ಹರ್ಷಿತಾ ಎ.ಎನ್ ತಲಾ ಐದು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ.
ಗೌರವ ಡಾಕ್ಟರೇಟ್
ಬೆಂಗಳೂರು ವಿಶ್ವವಿದ್ಯಾನಿಲಯವು ಮೂವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ ಮಾದೇಗೌಡ ಹಾಗೂ ಜೆ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಟಿ.ಬಿ. ಪ್ರಸನ್ನ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.
ಘಟಿಕೋತ್ಸವದಲ್ಲಿ, ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಟ್ಟು 159 ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ. ಒಟ್ಟು 3,573 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.




