ಲಿಂಗಾಯತರನ್ನು ಹಲವು ಬಾರಿ ದೂಷಿಸಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯನ್ನು ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನಕ್ಕೆ ಆಹ್ವಾನಿಸಿರುವುದನ್ನು ಬಸವ ಸಂಘಟನೆಗಳು ತೀವ್ರವಾಗಿ ವಿರೋಧಿಸಿದೆ. ಸಮಾವೇಶದಲ್ಲೇ ಬಸವ ಸಂಘಟನೆಗಳ 60ಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟಿಸಿ ಕನ್ನೇರಿ ಸ್ವಾಮಿ ವಿರುದ್ಧ ಘೋಷಣೆ ಕೂಗಿದರು.
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ನಡೆದಿದ್ದು, ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF) ಕನ್ನೇರಿ ಸ್ವಾಮಿಯನ್ನು ಆಹ್ವಾನಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಿಧ ಬಸವ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದರು. ಹಾಗೆಯೇ ಕನ್ನೇರಿ ಸ್ವಾಮಿಯನ್ನು ಬೆಂಗಳೂರಿನಿಂದ ನಿರ್ಬಂಧಿಸಲು ಬೆಂಗಳೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದರು.
ಇದನ್ನು ಓದಿದ್ದೀರಾ? ಮಹಿಳೆಯರಿಗೆ ಅವಮಾನ ಮಾಡಿದ ಕನ್ನೇರಿ ಸ್ವಾಮಿ; ಸಮರ್ಥನೆ ಮಾಡಿಕೊಂಡ ಜಗದೀಶ್ ಶೆಟ್ಟರ್!
ಕನ್ನೇರಿ ಸ್ವಾಮಿ ಮಾತನಾಡಲು ಆರಂಭಿಸುತ್ತಿದ್ದಂತೆಯೇ ಬಸವ ಭಕ್ತರು ಪ್ರತಿಭಟಿಸಿದ್ದು 15 ನಿಮಿಷ ಭಾಷಣವೇ ನಿಂತಿತ್ತು. ಅಲ್ಲಲ್ಲಿ ಕೂತಿದ್ದ ಸಣ್ಣ ಸಣ್ಣ ಗುಂಪುಗಳು ಒಮ್ಮೆಲೇ ಎದ್ದು ಪ್ರತಿಭಟಿಸಲು ಆರಂಭಿಸಿದ್ದು ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದು ಹೊರಗೆ ಕಳುಹಿಸಿದರು. ಇನ್ನು ಬಸವ ಸಂಘಟನೆಗಳು ನಿನ್ನೆಯೇ ಪ್ರತಿಭಟನೆಗೆ ಕರೆ ನೀಡಿದ್ದ ಕಾರಣ ಆಯೋಜಕರು ಮೊದಲೇ ತಯಾರಿ ನಡೆಸಿದ್ದರು ಎನ್ನಲಾಗಿದೆ. ಕನ್ನೇರಿ ಸ್ವಾಮಿ ಸುತ್ತಲೂ ಬೌನ್ಸರ್‌ಗಳಿದ್ದರು.
ಈ ಹಿಂದೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದ ಹನುಮ ಮಾಲಾಧಾರಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕನ್ನೇರಿ ಸ್ವಾಮಿ ಹನುಮ ಮಾಲಾಧಾರಣೆ ಹಾಗೂ ಆರ್‌ಎಸ್‌ಎಸ್ ಪದ್ಧತಿಯನ್ನು ವಿರೋಧಿಸುವ ಬಸವ ತತ್ವದ ಅನುಯಾಯಿಗಳು ಮತ್ತು ಕೆಲ ಲಿಂಗಾಯತ ಮಠಾಧೀಶರುಗಳು “ಬಸವ ತಾಲಿಬಾನಿಗಳು” ಎಂದು ಹೇಳಿದ್ದರು. ಹಾಗೆಯೇ ಅಶ್ಲೀಲ ಪದ ಬಳಕೆ ಮಾಡಿದ್ದರು.
ಈ ಹೇಳಿಕೆಗೆ ಬಸವ ಸಂಘಟನೆಗಳು ಮತ್ತು ಲಿಂಗಾಯತ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕನ್ನೇರಿ ಸ್ವಾಮಿ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ದೂರುಗಳು ದಾಖಲಾಗಿವೆ. ಇನ್ನು ಈಗಾಗಲೇ ಶಾಂತಿ ಕಾಪಾಡುವ ಉದ್ದೇಶದಿಂದ ವಿಜಯಪುರ ಜಿಲ್ಲಾಡಳಿತವು ಕನ್ನೇರಿಗೆ ಸ್ವಾಮಿಗೆ ಜಿಲ್ಲಾ ಪ್ರವೇಶವನ್ನು ಎರಡು ತಿಂಗಳ ಕಾಲ ನಿಷೇಧಿಸಿದೆ.
ಇದನ್ನು ಓದಿದ್ದೀರಾ? ನಾನು ಎಂದೆಂದಿಗೂ ಬಸವಾದಿ ಶರಣರ ಅನುಯಾಯಿ: ಸಿಎಂ ಸಿದ್ದರಾಮಯ್ಯ
ಇನ್ನು ಈ ಕಾರ್ಯಕ್ರಮದಲ್ಲೇ ತನ್ನ ಈ ಹಿಂದೆ ‘ಬಸವ ತಾಲಿಬಾನಿಗಳು’ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕನ್ನೇರಿ ಸ್ವಾಮಿ, “ನಾನು ಈ ಹಿಂದೆ ಇವರು ತಾಲಿಬಾನಿಗಳು ಅಂತ ಹೇಳಿದ್ದೆ. ಆದರೆ ನನಗೆ ಪುರಾವೆ ನೀಡೋಕೆ ಆಗಿರಲಿಲ್ಲ. ಆದರೆ ಈಗ ಪುರಾವೆ ಸಿಕ್ಕಿತು. ಬಸವಣ್ಣನವರ ಹೆಸರು ಹೇಳಿಕೊಂಡು ಇವರು ಮಾಡುವುದು ನೋಡಿದ್ರೆ ನಾಚಿಕೆ ಆಗ್ತದೆ” ಎಂದು ಹೇಳಿಕೊಂಡಿದ್ದಾರೆ.
ಬಸವ ಸಂಘಟನೆಗಳನ್ನು, ಲಿಂಗಾಯತರನ್ನು ಅವಹೇಳನ ಮಾಡಿರುವ ಕನ್ನೇರಿ ಸ್ವಾಮಿ ಅವರನ್ನೇ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನಕ್ಕೆ ಕರೆದಿರುವುದು ತೀವ್ರ ಚರ್ಚೆಯ ವಿಷಯವಾಗಿದೆ. ಈ ವಿಚಾರದಲ್ಲೇ ಆಯೋಜಕರು ಮತ್ತು ಬಸವ ಸಂಘಟನೆಗಳ ನಡುವೆ ಘರ್ಷಣೆ ನಡೆದಿದೆ. “ನಾವು ಕೋಟ್ಯಂತರ ರೂಪಾಯಿ ಹಾಕಿ ಕಾರ್ಯಕ್ರಮ ಮಾಡುತ್ತಿದ್ದೇವೆ. ನಾವೂ ಲಿಂಗಾಯಿತರೇ” ಎಂದು ಆಯೋಜಕರು ಹೇಳಿಕೊಂಡಿದ್ದಾರೆ. “ನೀವು ಲಿಂಗಾಯತರಾಗಿದ್ದರೆ ಬಸವ ದ್ರೋಹಿ ಕನ್ನೇರಿ ಸ್ವಾಮಿಯನ್ನು ಕರೆಸಿದ್ದು ಯಾಕೆ” ಎಂದು ಆಯೋಜಕರನ್ನು ಪ್ರತಿಭಟನಾಕಾರರು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.





