ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣದ ಅಪಾರ್ಟ್‌ಮೆಂಟ್ ಮಾಲೀಕರ ಸಂಘವು ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳದಂತಹ ಪ್ರಕರಣಗಳನ್ನು ಸ್ವತಃ ವಿಚಾರಣೆ ನಡೆಸಿ ಬರೋಬ್ಬರಿ 3 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ. ಇತ್ತೀಚೆಗೆ ಈ ಅಪರಾಧ ಬಹಿರಂಗವಾಗಿದ್ದು, ಕಾನೂನುಬಾಹಿರವಾಗಿ ದಂಡ ವಸೂಲಿ ಮಾಡಿ, ಅಪರಾಧವನ್ನು ಮುಚ್ಚಿಟ್ಟಿದ್ದಕ್ಕಾಗಿ ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಾವಿಡೆಂಟ್ ಸನ್‌ವರ್ತ್ ಅಪಾರ್ಟ್‌ಮೆಂಟ್ ಮಾಲೀಕರ ಸಂಘ, ಅಪಾರ್ಟ್‌ಮೆಂಟ್ ಆವರಣಕ್ಕೆ ಭದ್ರತಾ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಟೈಕೋ ಸೆಕ್ಯುರಿಟಿ ಸರ್ವಿಸಸ್, ಟೈಕೋ ಸೆಕ್ಯುರಿಟಿ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಬ್ಬಂದಿ, ಮುಖ್ಯ ಭದ್ರತಾ ಅಧಿಕಾರಿ ಚಂದ್ರಹಾಸ ಮತ್ತು ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಸಂಘದ ಸದಸ್ಯರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಕೋಲಾರ | ಚುರುಕಾದ RTO ತಪಾಸಣೆ; ಒಂದೇ ತಿಂಗಳಲ್ಲಿ 680 ಕೇಸ್, ₹6 ಲಕ್ಷ ದಂಡ ವಸೂಲಿ
ಈ ಸಂಬಂಧ ಅನಾಮಧೇಯ ಅರ್ಜಿ ದಾಖಲಾಗಿದ್ದು, ಡಿಸೆಂಬರ್ 16ರಂದು ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ದೂರಿನ ಪ್ರಕಾರ, ಸಂಘವು ನಿಯಮವನ್ನು ದುರುಪಯೋಗಪಡಿಸಿಕೊಂಡು ಮಾದಕವಸ್ತು ಸೇವನೆ ಮತ್ತು ಅಕ್ರಮ ಮಾದಕವಸ್ತು ಬಳಕೆ, ಕಳ್ಳತನ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಅಪರಾಧಗಳಲ್ಲಿ ತೊಡಗಿರುವ ನಿವಾಸಿಗಳಿಂದ ಮೂರು ತಿಂಗಳಲ್ಲಿ ಒಟ್ಟು 3.30 ಲಕ್ಷ ರೂ. ದಂಡವನ್ನು ಸಂಗ್ರಹಿಸಿದೆ!
ಭದ್ರತಾ ಅಧಿಕಾರಿ ಚಂದ್ರಹಾಸ ಯಾವುದೇ ಅನುಮತಿಯಿಲ್ಲದೆ ಅಪಾರ್ಟ್‌ಮೆಂಟ್‌ಗಳಿಗೆ ಪ್ರವೇಶಿಸಿ, ಶೋಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ದಂಡವನ್ನು ಸಂಗ್ರಹಿಸಿ, ನಂತರ ವಶಪಡಿಸಿಕೊಂಡ ಮಾದಕವಸ್ತುಗಳನ್ನು ನಾಶಪಡಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಎಫ್‌ಐಆರ್ ಪ್ರಕಾರ ಸಂಘವು 2023ರ ಜೂನ್‌ನಿಂದ ಸಣ್ಣ ಸಮಸ್ಯೆಗಳಿಗೂ ನಿವಾಸಿಗಳಿಂದ ದಂಡವನ್ನು ಸಂಗ್ರಹಿಸುತ್ತಿದೆ. ಕೆಲವು ಬಾರಿ ಮಾತ್ರ ದಂಡವನ್ನು ಸಂಗ್ರಹಿಸಿದ ಭದ್ರತಾ ಸಂಸ್ಥೆಯು ಸಂಘದ ಬ್ಯಾಂಕ್ ಖಾತೆಗೆ ಮೊತ್ತವನ್ನು ವರ್ಗಾಯಿಸಿದೆ.
ಸದ್ಯ ಈ ಪ್ರಕರಣವು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ನೆಟ್ಟಿಗರು ಅಪಾರ್ಟ್‌ಮೆಂಟ್ ಅಸೋಸಿಯೇಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳ, ಮಾದಕ ದ್ರವ್ಯ ಸೇವನೆಯಂತಹ ಗಂಭೀರ ಪ್ರಕರಣಗಳನ್ನು ಪೊಲೀಸರಿಗೆ ತಿಳಿಸದೆ ಕೇವಲ ದಂಡ ವಸೂಲಿ ಮಾಡಿ ಆರೋಪಿಗಳನ್ನು ಬಿಟ್ಟಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಪೊಲೀಸರ ಕ್ರಮಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ.
ಈ ರೀತಿ ಹಲವು ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ಗಳು ಕಾರ್ಯನಿರ್ವಹಿಸುತ್ತಿದ್ದು ಅದರ ವಿರುದ್ಧ ಕ್ರಮಕೈಗೊಳ್ಳುವುದು ಅತ್ಯಗತ್ಯ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಹಾಗೆಯೇ ನಿವಾಸಿಗಳ ಮೂಲಭೂತ ಹಕ್ಕುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಜನರ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲಾಗುತ್ತದೆ, ಅಧಿಕಾರವಿಲ್ಲದಿದ್ದರೂ ದಂಡ ವಿಧಿಸಲಾಗುತ್ತದೆ. ಇವೆಲ್ಲವೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ನೆಟ್ಟಿಗರ ವಾದವಾಗಿದೆ.





