ಪ್ರಕರಣವೊಂದರಿಂದ ಆರೋಪಿಯನ್ನು ರಕ್ಷಿಸಲು ಲಂಚ ಪಡೆಯುತ್ತಿದ್ದ ವೇಳೆ ಮಹಿಳಾ ಪಿಎಸ್‌ಐವೊಬ್ಬರು ಲೋಕಾಯುಕ್ತರಿಗೆ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಗೋಂವಿದಪುರ ಪಿಎಸ್‌ಐ ಸಾವಿತ್ರಿ ಬಾಯಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಸಿ ವಂಚಿಸಿದ್ದ ಮತ್ತು ಯುವತಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಎಚ್‌ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಯೂನಸ್‌ನನ್ನು ಬಂಧಿಸಲಾಗಿತ್ತು. ಆತನನ್ನು ಪ್ರಕರಣದಿಂದ ಬಜಾವ್ ಮಾಡಲು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ ಪಿಎಸ್‌ಐ ಸಾವಿತ್ರಿ ಅವರು ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿ ಯೂನಸ್ ಬಳಿ ಪಿಎಸ್‌ಐ ಸಾವಿತ್ರಿ ಅವರು 1.25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಯೂನಸ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಯೂನಸ್ ಬಳಿ ಸಾವಿತ್ರಿ ಅವರು ಲಂಚ ಪಡೆಯುವಾಗ ‘ರೆಡ್‌ಹ್ಯಾಂಡ್’ಆಗಿ ಹಿಡಿದಿದ್ದಾರೆ.




