ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು (DWCCs) ಸ್ಥಗಿತಗೊಂಡಿವೆ. 118 ಘಟಕಗಳಿಗೆ ಹೊಸ ಟೆಂಡರ್ ಕರೆಯಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ತಿಳಿಸಿದೆ.
ನಗರದಲ್ಲಿ 198 DWCCಗಳಿದ್ದವು. ಅವುಗಳ ಪೈಕಿ, 80 ಘಟಕಗಳನ್ನು ಮುಚ್ಚಲಾಗಿದೆ. ಈಗ, ಸುಮಾರು 120 DWCCಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ನಿರ್ವಹಣೆಗಾಗಿ BSWML ಟೆಂಡರ್‌ಗಳನ್ನು ಆಹ್ವಾನಿಸಲಾಗುತ್ತದೆ ಎಂದು BSWML ಹೇಳಿದೆ.
ಗುರುತಿಸಲಾದ 80 DWCCsಗಳ ಟೆಂಡರ್ 2020ರಲ್ಲಿಯೇ ಕೊನೆಗೊಂಡಿದೆ. ಆದರೂ, ಅವುಗಳಲ್ಲಿ ಕೆಲವು ಘಟಕಗಳು ಕಾರ್ಯಾಚರಣೆಯನ್ನು ಮುಂದುವರೆಸಿದ್ದವು. ಈಗ, ಅವುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.
ಈಗ 118 DWCCs ಘಟಕಗಳಿಗೆ ಹೊಸ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಒಂದು ವಾರದೊಳಗೆ ಘಟಕಗಳ ನಿರ್ವಹಣೆಗಾಗಿ ತ್ಯಾಜ್ಯ ತೆಗೆಯುವವರು, ಸ್ವಸಹಾಯ ಗುಂಪುಗಳು (SHG), ಸರ್ಕಾರೇತರ ಸಂಸ್ಥೆಗಳು ಹಾಗೂ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗುತ್ತದೆ ಎಂದು BSWML ವಿವರಿಸಿದೆ.
ಟೆಂಡರ್ ಪ್ರಕ್ರಿಯೆ ಮುಗಿದ ನಂತರ, ಒಣ ತ್ಯಾಜ್ಯದ ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡಣೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು BSWML ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ತಿಳಿಸಿದ್ದಾರೆ.
“DWCCಗಳ ಕಾರ್ಯಕ್ಷಮತೆಯನ್ನು BSWML ಮೇಲ್ವಿಚಾರಣೆ ಮಾಡಬೇಕು. ಬೆಂಗಳೂರು ದಿನಕ್ಕೆ 6,500 ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದರಲ್ಲಿ ಸುಮಾರು 55-60% ಹಸಿ ತ್ಯಾಜ್ಯ, 30-35% ಒಣ ತ್ಯಾಜ್ಯ ಹಾಗೂ ಉಳಿದವು ವೈದ್ಯಕೀಯ ಮತ್ತು ಇತರ ತ್ಯಾಜ್ಯಗಳು. ಅವುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಗ್ರಹಿಸಲಾಗುವ ಒಣ ತ್ಯಾಜ್ಯವನ್ನು ಏನು ಮಾಡಲಾಗುತ್ತಿದೆ ಎಂಬುದನ್ನು BSWML ಟ್ರ್ಯಾಕ್ ಮಾಡಬೇಕು” ಎಂದು ಘನತ್ಯಾಜ್ಯ ನಿರ್ವಹಣಾ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ವಿ. ರಾಮಪ್ರಸಾದ್ ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.




