ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಮುಸ್ಲಿಂ ನಿವಾಸಿಗಳು ವಾಸವಾಗಿದ್ದ 300ಕ್ಕೂ ಹೆಚ್ಚು ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಧ್ವಂಸಗೊಳಿಸಿತ್ತು. ವ್ಯಾಪಕ ಆಕ್ರೋಶ-ಒತ್ತಡಕ್ಕೆ ಒಳಗಾದ ಸರ್ಕಾರ, ಸಂತ್ರಸ್ತರಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆಗಳನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ, ಕೋಗಿಲು ಬಳಿಯ ಥಣಿಸಂದ್ರದಲ್ಲೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳು ಸುಮಾರು 24 ಮನೆಗಳನ್ನು ಏಕಾಏಕಿ ಉರುಳಿಸಿದ್ದಾರೆ. ಹಲವು ಕುಟುಂಬಗಳನ್ನು ಬೀದಿಗೆ ದಬ್ಬಿದ್ದಾರೆ.
ಥಣಿಸಂದ್ರದ ಸಾರಾಯಿಪಾಳ್ಯದಲ್ಲಿ ಸರ್ಕಾರಿ (ಬಿಡಿಎ) ಭೂಮಿ ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಮನೆಗಳನ್ನು ಕೆಡವಿದ್ದಾರೆ. ಮನೆಗಳನ್ನು ಕಳೆದುಕೊಂಡ ಹೆಚ್ಚಿನವರು ಮುಸ್ಲಿಂ ಸಮಯದಾಯಕ್ಕೆ ಸೇರಿದವರು ಮತ್ತು ತಮಿಳು ನಿವಾಸಿಗಳಾಗಿದ್ದಾರೆ. ಈ ಭೂಮಿ ಬಿಡಿಎಗೆ ಸೇರಿದ್ದಲ್ಲ. ಇದು ನಮ್ಮ ಸ್ವಂತ ಆಸ್ತಿಯೆಂದು ಸಂತ್ರಸ್ತರು ವಾದಿಸಿದ್ದಾರೆ.
“ಹಲವು ವರ್ಷಗಳಿಂದ ನಾವು ಇಲ್ಲಿಯೇ ವಾಸಿಸುತ್ತಿದ್ದೇವೆ. ನಾವು ಈ ಭೂಮಿಯನ್ನು ಖರೀದಿಸಿ, ಮನೆ ಕಟ್ಟಿಕೊಂಡಿದ್ದೇವೆ. ನಮ್ಮ ಬಳಿ ಭೂಮಿ ಖರೀದಿ ಮತ್ತು ನೋಂದಣಿಯ ದಾಖಲೆಗಳಿವೆ. ಇ-ಖಾತಾ ಕೂಡ ಇದೆ. ಈ ಭೂಮಿ ಬಿಡಿಎಗೆ ಸೇರಿದ್ದಲ್ಲ. ಆದರೂ, ಯಾವುದೇ ನೋಟಿಸ್ ಕೂಡ ಕೊಡದೆ, ಏಕಾಏಕಿ ಮನೆಗಳನ್ನು ಕಡೆವಿದ್ದಾರೆ” ಎಂದು ಸಂತ್ರಸ್ತರು ವಿವರಿಸಿದ್ದಾರೆ.
ಅಧಿಕಾರಿಗಳ ದೌರ್ಜನ್ಯವನ್ನು ವಿವರಿಸಿರುವ ಸಾರಾಯಿಪಾಳ್ಯದ ನಿವಾಸಿ, ಮನೆ ಕಳೆದುಕೊಂಡ ಸಂತ್ರಸ್ತೆ ಸುಮೈಯಾ ಸುಲ್ತಾನ್, “ನಾವು ಎಲ್ಲ ದಾಖಲೆಗಳನ್ನು ಹೊಂದಿದ್ದರೂ, ನಮ್ಮ ಮನೆಯನ್ನು ಕೆಡವಲಾಗಿದೆ. ನಾವು ಆಸ್ತಿ ತೆರಿಗೆ, ವಿದ್ಯುತ್ ಬಿಲ್‌ಗಳನ್ನು ಪಾವತಿಸುತ್ತಿದ್ದೇವೆ. ಕಾವೇರಿ ನೀರು ಸರಬರಾಜು ಕೂಡ ಇದೆ. ಆದರೆ, ಅಧಿಕಾರಿಗಳು ನಮಗೆ ನೋಟಿಸ್ ಕೂಡ ನೀಡಿದೆ, ಪ್ರತಿಕ್ರಿಯೆ ಕೇಳದೆ, ಏಕಾಏಕಿ ನಮ್ಮ ಜಾಗಕ್ಕೆ ನುಗ್ಗಿ, ಮನೆಗಳನ್ನು ಉರುಳಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಕಾರ್ಯಾಚರಣೆಯನ್ನು ಬಿಡಿಎ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದು, “ಭೂಮಿಯು ಬಿಡಿಎಗೆ ಸೇರಿದೆ. ಎಲ್ಲ ಕಾರ್ಯವಿಧಾನಗಳನ್ನು ಅನುಸರಿಸಿ ಕಾರ್ಯಾಚಾರಣೆ ನಡೆಸಿದ್ದೇವೆ” ಎಂದು ಹೇಳಿದ್ದಾರೆ.
ಈ ಪ್ರದೇಶವು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ. ಆದರೆ, ಈವರೆಗೆ ತಮ್ಮ ಸಂಕಷ್ಟವನ್ನು ಆಲಿಸಲು ಸಚಿವರು ಸ್ಥಳಕ್ಕೆ ಬಂದಿಲ್ಲವೆಂದು ಸಂತ್ರಸ್ತರು ಕಿಡಿಕಾರಿದ್ದಾರೆ.
ಅಧಿಕಾರಿಯ ಪ್ರಕಾರ, 22 ಮನೆಗಳನ್ನು ಕೆಡವಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಹತ್ತಿರದ ಸಮುದಾಯ ಭವನದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಒದಗಿಸಲಾಗಿದೆ.




