ಕಡ್ಡಾಯ ಇ-ಖಾತಾ ಪರಿಶೀಲನಾ ಮಾನದಂಡಗಳನ್ನು ಉಲ್ಲಂಘಿಸಿ ಆಸ್ತಿಗಳನ್ನು ನೋಂದಾಯಿಸಲು ‘ಕಾವೇರಿ 2.0’ ಸಾಫ್ಟ್‌ವೇರ್‌ಅನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಐವರು ಸಬ್-ರಿಜಿಸ್ಟ್ರಾರ್‌ಗಳನ್ನು ಅಮಾನತುಗೊಳಿಸಿ ಅಂಚೆಚೀಟಿ ಮತ್ತು ನೋಂದಣಿ ಇಲಾಖೆ ಆದೇಶಿಸಿದೆ.
ಈ ಐವರು ಸಬ್-ರಿಜಿಸ್ಟ್ರಾರ್‌ಗಳು ಆಸ್ತಿಗಳ ನೋಂದಣಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಗಳ ಕುರಿತು ನಡೆಸಲಾದ ಪ್ರಾಥಮಿಕ ವಿಚಾರಣೆಯಲ್ಲಿ ಅಕ್ರಮ ನಡೆದಿರುವುದು ಬಂಹಿರಂಗವಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
“ಕಾವೇರಿ 2.0ಅಲ್ಲಿ ಆಸ್ತಿ ನೋಂದಣಿ ಮಾಡುವಾಗ, ಒಂದು ವೇಳೆ ಆಸ್ತಿ ನೋಂದಣಿಗಳು ನ್ಯಾಯಾಲಯದ ಆದೇಶಗಳನ್ನು ಒಳಗೊಂಡಿದ್ದರೆ, ಅಂತಹ ಆಸ್ತಿಗಳಿಗೆ ‘ನ್ಯಾಯಾಲಯ ಆದೇಶ ಆಧಾರಿತ ನೋಂದಣಿ’ ಆಯ್ಕೆ ಅಡಿಯಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ವಿನಾಯಿತಿ ನೀಡಲಾಗುತ್ತದೆ. ಆದರೆ, ಸರ್ಜಾಪುರ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನ್ಯಾಯಾಲಯದ ಯಾವುದೇ ಆದೇಶವನ್ನು ಹೊಂದಿರದ ಆಸ್ತಿಗಳಿಗೂ ಈ ವಿನಾಯಿತಿ ಅಡಿಯಲ್ಲಿ ಮಾರಾಟ ಪತ್ರಗಳನ್ನು ನೋಂದಾಯಿಸಲಾಗಿದೆ. ವಿನಾಯಿತಿ ಆಯ್ಕೆಯನ್ನು ದುರುಯೋಗ ಮಾಡಿಕೊಳ್ಳಲಾಗಿದೆ” ಎಂದು ನೋಂದಣಿ ಮಹಾನಿರ್ದೇಶಕರು (ಐಜಿಆರ್) ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ‘ಬೌದ್ಧಿಕ ದಿಗ್ಗಜರಲ್ಲ, ಅಸಭ್ಯ ಜನಪ್ರಿಯವಾದಿ ಪ್ರಚೋದಕರು’ ಎಂಬ ಟೀಕೆಯನ್ನು RSS ಎದುರಿಸಿದ್ದು ಹೀಗೆ?!
“ನ್ಯಾಯಾಲಯದ ಆದೇಶವನ್ನು ಅನುಸರಿಸುವ ‘ನ್ಯಾಯಾಲಯ ಆದೇಶ ಆಧಾರಿತ ನೋಂದಣಿ’ ಆಯ್ಕೆಯನ್ನು ಬಳಕೆ ಮಾಡಿಕೊಂಡು ಆಸ್ತಿ ನೋಂದಣಿಗೆ ಕಡ್ಡಾಯವಾಗಿರುವ ಇ-ಖಾತಾಗಳಿಲ್ಲದೆಯೇ ಮಾರಾಟ ಪತ್ರಗಳನ್ನು ನೋಂದಾಯಿಸಲು ಅನುವು ಮಾಡಿಕೊಡಲಾಗಿದೆ. ಇದು ಗಂಭೀರ ಅಕ್ರಮವಾಗಿದೆ” ಎಂದು ಇಲಾಖೆ ತಿಳಿಸಿದೆ.
ವಿಚಾರಣೆಯ ನಂತರ, ಸರ್ಜಾಪುರ ಸಬ್-ರಿಜಿಸ್ಟ್ರಾರ್ ರವಿ ಸಂಕನ ಗೌಡ ಅವರನ್ನು ತಕ್ಷಣದ ಅಮಾನತುಗೊಳಿಸಲಾಗಿದೆ. ಅಂತಯೇ, ಇದೇ ರೀತಿಯ ಅಕ್ರಮಗಳು ಮತ್ತು ನಿಯಮ ಉಲ್ಲಂಘಟನೆಗಳು ಬಾಣಸವಾಡಿ, ವರ್ತೂರು ಹಾಗೂ ಹಲಸೂರು ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಕಂಡುಬಂದಿವೆ. ಅಲ್ಲಿ ಮಾರಾಟ ಪತ್ರಗಳನ್ನು ನೋಂದಾಯಿಸುವುದಕ್ಕೂ ಮೊದಲು ಪಾಲಿಸಬೇಕಾದ ಇ-ಸ್ವಥು ಸಾಫ್ಟ್‌ವೇರ್‌ನಿಂದ ಇ-ಖಾತಾ ವಿವರಗಳನ್ನು ಲಗತ್ತಿಸುವ ಪ್ರಕ್ರಿಯೆಯನ್ನು ನಿರ್ಲಕ್ಷಿಸಲಾಗಿದೆ. ಆದ್ದರಿಂದ, ಅಲ್ಲಿನ ಅಧಿಕಾರಿಗಳಾದ ಎನ್ ಸತೀಶ್ ಕುಮಾರ್, ಶ್ರೀಧರ್ (ಪ್ರಭಾರಿ ಸಬ್-ರಿಜಿಸ್ಟ್ರಾರ್), ಗಿರೀಶ್ ಚಂದ್ರ ಮತ್ತು ಆರ್ ಪ್ರಭಾವತಿ ಅರನ್ನು ಅಮಾನತು ಮಾಡಲಾಗಿದೆ ಎಂದು ಇಲಾಖೆ ಹೇಳಿದೆ.




