ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನವೆಂಬರ್ 26ರಂದು ಬೆಂಗಳೂರು ಚಲೋ ನಡೆಸಲು ತೀರ್ಮಾನಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಮುಖಂಡರು, ಸರಕಾರ ಭೂಮಿ-ಮತ್ತು ವಸತಿ ವಿಚಾರಕ್ಕೆ ಗಟ್ಟಿಯಾದ ತೀರ್ಮಾನವನ್ನು ಮಾಡಲೇಬೇಕೆಂದು ಒತ್ತಾಯಿಸಿ ನಾಡಿನ ದಲಿತ-ಕಾರ್ಮಿಕ-ರೈತ-ಮಹಿಳೆ ಇನ್ನಿತರೆ ಸಮುದಾಯಗಳ ಐಕ್ಯ ವೇದಿಕೆಯಾದ “ಸಂಯುಕ್ತ ಹೋರಾಟ ಕರ್ನಾಟಕ” ನೇತೃತ್ವದಲ್ಲಿ ಇದೇ ನವೆಂಬರ್ 26 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಅರ್ಜಿದಾರರು, ರೈತರು, ಕಾರ್ಮಿಕರು-ಮಹಿಳೆಯರು-ವಿದ್ಯಾರ್ಥಿ-ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದ್ದಾರೆ.
ಸಮಿತಿಯ ಅಹವಾಲುಗಳೇನು?
“ಭಾರತ ಸ್ವತಂತ್ರಗೊಂಡು 79 ವರ್ಷಗಳಾದರೂ ಕೋಟ್ಯಾಂತರ ಬಡ ಕುಟುಂಬಗಳು ಸ್ವತ್ರಂತ್ರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರೂ ತುಂಡು ಭೂಮಿ ಇಲ್ಲವಾಗಿದೆ. ಉಳುಮೆಗೆ ಮಾತ್ರವಲ್ಲ ನೆತ್ತಿಯ ಮೇಲೊಂದು ಸೂರೂ ಇಲ್ಲವಾಗಿದೆ. ಸತ್ತ ಮೇಲೂ ಹೂಳಲು ಪರದಾಡುವ ಪರಿಸ್ಥಿತಿ ಇದೆ. ಭೂಮಿಯಲ್ಲಾ ಬಲಾಢ್ಯರ, ಕಂಪನಿಗಳ ಕೈಯಲ್ಲಿದೆ. ಆದರೂ ತಣಿಯದ ದಾಹ. ಭೂ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯೇತರರೂ ಮನಸೋಇಚ್ಚೆ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಅಭಿವೃದ್ದಿಯ ಹೆಸರಿನಲ್ಲಿ ರೈತರ ಬಳಿ ಇದ್ದಬದ್ದ ಭೂಮಿಯ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಬಡವರ ಪರ ಆಡಳಿತ ನೀಡುತ್ತೇವೆಂದು ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಸಹ ಇದೇ ಹಾದಿಯಲ್ಲಿ ನಡೆಯುತ್ತಿದೆ. ಬಾಯಲ್ಲಿ ಬಡವರ ಪರ ಮನದಲ್ಲಿ ಬಲಾಢ್ಯರು ಎಂಬಂತೆ ನಡೆದುಕೊಳ್ಳುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಆದಿವಾಸಿಗಳನ್ನು ಬಿಡದೆ ಬೀದಿಗೆ ತಳ್ಳುತ್ತಾ ಲಕ್ಷಾಂತರ ಎಕರೆ ಭೂಮಿಗಳನ್ನು ದೇಶದ ಅತ್ಯಂತ ಲೂಟಿಕೋರ ಅಂಬಾನಿ-ಅದಾನಿಗಳಿಗೆ ಮತ್ತು ವಿದೇಶಿ ಕಂಪನಿಗಳಿಗೆ ಗಣಿಗಾರಿಕೆ ಮಾಡಲು ಅನುವು ಮಾಡಿಕೊಡುವ ಮೂಲಕ ಬಕಾಸುರನ ಪಾತ್ರ ವಹಿಸುತ್ತಿದೆ. ದೇಶಪ್ರೇಮದ ಹೆಸರಲ್ಲಿ ವಿದೇಶಿಗರ ಸೇವೆಯಲ್ಲಿ ನಿರತವಾಗಿದೆ ಮೋದಿ ನೇತೃತ್ವದ ಸರಕಾರ.
ರಾಜ್ಯದ ದುಡಿಯುವ ಜನರಿಗೆ ಅದರಲ್ಲೂ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡಲು ಭೂಮಿ ಮಂಜೂರಾತಿ ಸಮಿತಿಗಳನ್ನು ಸರ್ಕಾರ ರಚಿಸಿದ್ದರೂ ಕಾಲಕಾಲಕ್ಕೆ ಸರಿಯಾಗಿ ಸಭೆಗಳಾಗದೆ, ಮಂಜೂರಾತಿಯೂ ಆಗುತ್ತಿಲ್ಲ. ಮಂಜೂರಾತಿಗೆ ಹತ್ತಾರು ಕಾನೂನುಗಳ ವಿಘ್ನಗಳನ್ನು ಮುಂದೆ ಮಾಡಲಾಗುತ್ತಿದೆ. ವಸತಿ ರಹಿತರ ವಿಚಾರಕ್ಕೆ ಸರ್ಕಾರದ ಸರಿಯಾದ ಯೋಜನೆ ಮತ್ತು ಆದ್ಯತೆ ಇಲ್ಲದಿರುವುದರಿಂದ ಕುಟುಂಬಗಳು ಬೆಳೆದಂತೆ ವಾಸಕ್ಕೆ ಜಾಗ ಸಾಕಾಗದೇ ಕುಟುಂಬದೊಳಗೇ ಆಂತರಿಕ ಕಲಹವಾಗಿ ಮಾರ್ಪಾಡಾಗುತ್ತಿದೆ. ಇನ್ನು ಅರಣ್ಯದ ಹೆಸರಿನಲ್ಲಿರುವ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರ ಕಥೆ ಬೇರೆಯೇ ಇದೆ. ಅರಣ್ಯ ಅಧಿಕಾರಿಗಳಂತೂ ಅರಣ್ಯ ವಾಸಿಗಳಿಗೆ, ಸಾಗುವಳಿ ಮಾಡುವ ಜನರಿಗೆ ಒಂದು ರೀತಿಯ ಪೀಡಕರಾಗಿದ್ದಾರೆ. ತಲೆತಲಾಂತರಗಳಿಂದ ಅರಣ್ಯವಾಸಿಗಳಾಗಿ ಜೀವನ ಕಟ್ಟಿಕೊಂಡು ಅರಣ್ಯವನ್ನೂ ಕಾಪಾಡುತ್ತಾ ಬದುಕಿದವರಿಗೆ ನೆಲೆಗೊಂದು ಹಕ್ಕುಪತ್ರ ಬದುಕಿಗೊಂದಿಷ್ಟು ತುಂಡು ಭೂಮಿಯ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಕಳೆದ 60-50 ವರ್ಷಗಳಿಂದಲೂ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿದ್ದರೂ ಭೂಮಿ ಮಂಜೂರಾತಿ ನೀಡದೆ ಈಗ ನಗರ ಮಿತಿಯ ನೆಪದಲ್ಲಿ ಲಕ್ಷಾಂತರ ಸಂಖ್ಯೆಯ ಭೂರಹಿತರು ಭೂಮಿಯಿಂದ ವಂಚನೆಗೊಳಗಾಗುತ್ತಿದ್ದಾರೆ. ಇದು ಬಡವರ ಪಾಲಿಗೆ ಮುಗಿಯದ ಗೋಳಿನ ಕಥೆಗಳ ದೊಡ್ಡ ಸರಮಾಲೆಯೇ ಆಗಿದೆಯಾದರೂ ಸರ್ಕಾರಗಳು ಇದನ್ನು ಸರಿಪಡಿಸುವ, ಬಡವರಿಗೆ ನ್ಯಾಯ ಕೊಡಿಸುವ ವಿಚಾರಕ್ಕೆ ಕೈಹಾಕದೆ ಕಾಲ ತಳ್ಳುತ್ತಲೇ ಇದ್ದಾರೆ. ಬಡವರು ಇನ್ನೆಷ್ಟು ವರ್ಷಗಳ ಕಾಲ ಕಾಯಬೇಕು?
ರಾಜ್ಯದಲ್ಲಿ ಹಲವು ರೀತಿಯ ಹೆಸರಿನಲ್ಲಿ ಭೂಮಿಗಳಿವೆ. ಸರ್ಕಾರಿ, ಗೋಮಾಳ(ಗಾಯರಾಣ), ಹುಲ್ಲುಬನಿ, ಖರಾಬ್, ಖಾರೀಜ್ ಖಾತಾ, ಸೊಪ್ಪಿನ ಬೆಟ್ಟ, ಹರಳು ಪ್ರದೇಶ, ಗುಡ್ಡ ಪ್ರದೇಶ, ಕಲ್ಲು ಪ್ರದೇಶ, ಸೇಂದಿವನ, ಅನಾದೀನ, ಕಾವಲು, ಅಮೃತ ಮಹಲ್ ಕಾವಲು, ಬಾಣೆ, ಪೈಸಾರಿ, ಅರಣ್ಯ, ಸಾಮಾಜಿಕ ಅರಣ್ಯ, ಲ್ಯಾಂಡ್ ಬ್ಯಾಂಕ್ ಇನ್ನಿತರೆ ಹೆಸರಿನಲ್ಲಿರುವ ಈ ಎಲ್ಲಾ ಭೂಮಿಗಳಿಗೆ ಇವುಗಳ ಉಪಯೋಗದ ಬಗ್ಗೆ ಅದರದೇ ಆದ ಕಾನೂನುಗಳನ್ನು ರೂಪಿಸಲಾಗಿದೆ. ಈಗಿನ ಸರ್ಕಾರದ ಪ್ರಕಾರ ಮೇಲಿನ ಯಾವ ಭೂಮಿಗಳನ್ನೂ ಫಾರಂ ನಂ. 50, 53, 57 ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿಯನ್ನು ಮಂಜೂರಾತಿ ಮಾಡಲು ಅವಕಾಶವಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಬಡವರ ಪರ, ಸಂವಿಧಾನ ಪರ ಎಂದು ಸಾಬೀತುಪಡಿಸಲು ಈಗಿರುವ “ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ” ನೀಡಬೇಕು. 5-6 ದಶಕಗಳ ಕಾಲದಿಂದಲೂ ಇರುವ ಸಮಸ್ಯೆಯನ್ನು ರೈತರು ಅಲೆದಲೆದು ಸವಕಳಿಯಾಗಿದ್ದಾರೆ. ಇನ್ನು ಮುಂದೆ ಅರ್ಜಿ ಹಿಡಿದು ಪುನಃ ಅಲೆಸುವುದೆಂದರೆ ಜನರನ್ನು ಹಿಂಸೆಗೆ ಗುರಿಪಡಿಸಿದಂತಾಗುತ್ತದೆ. ಆದ್ದರಿಂದ ಸರಕಾರ ಬಡವರಿಗಾಗಿಯೇ “ವನ್ ಟೈಮ್ ಸೆಟಲ್‍ಮೆಂಟ್” ಅಡಿಯಲ್ಲಿ ಭೂಮಂಜೂರಾತಿ ನೀಡಲು ಕ್ರಮ ಗೈಗೊಳ್ಳಬೇಕು” ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಆಗ್ರಹಿಸಿದೆ
ಪತ್ರಿಕಾಗೋಷ್ಠಿಯಲ್ಲಿ ಸಿರಿಮನೆ ನಾಗರಾಜ್, ಕುಮಾರ ಸಮತಳ, ಕೆ ಮರಿಯಪ್ಪ, ಶ್ರೀರಂಗಾಚಾರಿ, ಸಿದ್ದರಾಜು ಉಪಸ್ಥಿತರಿದ್ದರು.





