ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ‘ಬೆಂಗಳೂರು ಚಲೋ’ ಬೃಹತ್ ಹೋರಾಟ ನಡೆಸಿದೆ. ರಾಜ್ಯದ ಸರ್ಕಾರದ ಮುಂದೆ 15 ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದೆ.
ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೂಲಂಕುಷ ಚರ್ಚೆ ನಡೆಸಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ, ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿತ ಸಚಿವರುಗಳ ಸಮ್ಮುಖದಲ್ಲಿ, ಜನಚಳವಳಿಗಳ ವಿಶೇಷ ಸಭೆ ಕರೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ ಬೀಜ ಮಸೂದೆ 2025, ಕೃಷಿ ಮಾರುಕಟ್ಟೆ ಕುರಿತು ರಾಷ್ಟ್ರೀಯ ಧೋರಣಾ ಚೌಕಟ್ಟು, ವಿದ್ಯುತ್ ಕರಡು ಮಸೂದೆ-2025 ನ್ನು ಕೈಬಿಡಬೇಕು. ಹಾಗೆಯೇ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ಮತ್ತು ಶ್ರಮ ಶಕ್ತಿ ನೀತಿ 2025 ನ್ನು ರದ್ದುಪಡಿಸಬೇಕು. ಈ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುವುವುದಿಲ್ಲ ಎಂದು ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯಿಸಿ ತಿರಸ್ಕರಿಸಬೇಕು ಮತ್ತು ಇದರ ಜಾರಿಗೆ ಯಾವುದೇ ರೀತಿಯ ನಿಯಮಗಳನ್ನು ರಚಿಸಬಾರದು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
“ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ತಂದಿದ್ದ “ಭೂ ಸುಧಾರಣಾ ತಿದ್ದುಪಡಿ ಕಾಯ್ದೆ”, “APMC ತಿದ್ದುಪಡಿ ಕಾಯ್ದೆ”, “ಜಾನುವಾರು ಕಾಯ್ದೆ”, “ಮತಾಂತರ ನಿಷೇಧ ಕಾಯ್ದೆ” ಮುಂತಾದವುಗಳನ್ನು ಕರ್ನಾಟಕ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ರದ್ದುಗೊಳಿಸಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತ ಸ್ನೇಹಿಯಾಗಿ ಬಲಗೊಳಿಸಬೇಕು. LIC, ಬ್ಯಾಂಕ್ ಒಳಗೊಂಡಂತೆ ಹಣಕಾಸು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ನಿಲ್ಲಬೇಕು” ಎಂದು ಒತ್ತಾಯಿಸಿದ್ದಾರೆ.
“ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಚುನಾವಣಾ ಆಯೋಗದ ಮೂಲಕ ತರಲಾಗುತ್ತಿರುವ SIR [ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ] ಅನ್ನು ಅಗತ್ಯ ತಿದ್ದುಪಡಿ ತರುವ ತನಕ ಜಾರಿ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಧೃಡ ನಿಲುವು ತಾಳಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
“ಘನತೆಯ ಬದುಕನ್ನು ಖಾತ್ರಿಗೊಳಿಸಲು ಎಲ್ಲಾ ಶ್ರಮಜೀವಿಗಳಿಗೆ 36 ಸಾವಿರ ಕನಿಷ್ಠ ವೇತನವನ್ನು ಘೋಷಣೆ ಮಾಡಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು. ಎಂ.ಎಸ್. ಸ್ವಾಮಿನಾಥನ್ ವರದಿ ಶಿಫಾರಸಿನಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೆ C2+50% ಆಧಾರದಲ್ಲಿ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿ ಶಾಸನಾತ್ಮಕಗೊಳಿಸಬೇಕು. ರಾಜ್ಯ ಸರ್ಕಾರ ಕೃಷಿ ಬೆಲೆ ಆಯೋಗವನ್ನು ಶಾಶ್ವತ ಆಯೋಗವನ್ನಾಗಿ ರೂಪಿಸಿ ಅದಕ್ಕೆ ಶಾಸನಾತ್ಮಕ ಬಲವನ್ನು ನೀಡಬೇಕು” ಎಂದು ಹೋರಾಟಗಾರರು ಆಗ್ರಹ.
“ರೈತರ ಎಲ್ಲಾ ಕೃಷಿ ಸಾಲಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 50 ರ ಅನುಪಾತದಲ್ಲಿ ಮನ್ನಾ ಮಾಡಬೇಕು ಹಾಗೂ ಕೇರಳ ಮಾದರಿಯಲ್ಲಿ ಋಣಮುಕ್ತ ಕಾಯಿದೆಯನ್ನು ಜಾರಿಗೆ ತರಬೇಕು. “ಉಳುವವನಿಗೇ ಭೂಮಿ” ಎಂಬಂತೆ ಇಂದು “ಪ್ರತಿಯೊಬ್ಬರಿಗೂ ಸೂರು” ಎಂಬ ನಿನಾದವನ್ನು ಸರ್ಕಾರ ಹೊರಡಿಸಬೇಕು. ನಿವೇಶನ ಹಾಗೂ ಮನೆ ಇಲ್ಲದೆ ಪರದಾಡುತ್ತಿರುವ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ಕಲ್ಪಿಸಲು ಸಮಗ್ರ ಹಾಗೂ ದಿಟ್ಟ ನೀತಿಯನ್ನು ರೂಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಸಂಯುಕ್ತ ಹೋರಾಟ ಕರ್ನಾಟಕದ ಹಕ್ಕೊತ್ತಾಯಗಳು:
- ದೇವನಹಳ್ಳಿ ಭೂಸ್ವಾಧೀನ ರದ್ದು ಘೋಷಣೆಯನ್ನು ಕೂಡಲೇ ಗೆಜೆಟ್‌ನಲ್ಲಿ ಪ್ರಕಟಿಸಬೇಕು. [ಡಿನೋಟಿಫೈ ಮಾಡಬೇಕು].
- ರಾಮನಗರ ತಾಲ್ಲೂಕು ಬಿಡದಿ ಹೋಬಳಿ ಬೈರಮಂಗಲ-ಕಂಚುಗಾರನಹಳ್ಳಿ ವ್ಯಾಪ್ತಿಯ ಫಲವತ್ತಾದ ಸಂಪೂರ್ಣ ನೀರಾವರಿ ಕೃಷಿ ಭೂಮಿಯನ್ನು ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಕೈಬಿಡಬೇಕು. ಈ ಸಂಬಂಧ ಕಾನೂನು ಬಾಹಿರವಾಗಿ ಹಾಗೂ ರೈತ ವಿರೋಧಿಯಾಗಿ ವರ್ತಿಸುತ್ತಿರುವ ರಾಮನಗರ ಜಿಲ್ಲಾಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು.
- ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಆಂಧೇನಳ್ಳಿ, ಮುತ್ತೆನಲ್ಲೂರು, ಸೊಳ್ಳೆಪುರ ಮುಂತಾದ ಗ್ರಾಮಗಳಲ್ಲಿ ಫಲವತ್ತಾದ ಭೂಮಿಯನ್ನು KIADB ಬಲವಂತವಾಗಿ ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದನ್ನು ಕೈಬಿಡಬೇಕು.
- ಹಾಗೆಯೇ ತುಮಕೂರು ನಂದಿಹಳ್ಳಿ ಬೈಪಾಸ್, ಬೆಂಗಳೂರು ಪಿ ಆರ್ ಆರ್, ಕಾರವಾರ ಬಳಿಯ ಖೇಣಿ ಸೇರಿದಂತೆ ರಾಜ್ಯದಲ್ಲಿ ಎಲ್ಲಿಯೂ ಬಲವಂತದ ಭೂಸ್ವಾಧೀನ ನಡೆಸಬಾರದು. BMIC, NICE ಯೋಜನೆ ರದ್ದುಪಡಿಸಬೇಕು. 2013ರ ಭೂ ಸ್ವಾಧೀನ ಕಾಯ್ದೆಗೆ ವ್ಯತಿರಿಕ್ತವಾಗಿರುವ ರಾಜ್ಯದ ಎಲ್ಲಾ ಕರಾಳ ಭೂಸ್ವಾಧೀನ ಕಾಯ್ದೆಗಳನ್ನು ರದ್ದುಪಡಿಸಬೇಕು
- ರಾಜ್ಯದ ಬಗರ್ ಹುಕುಂ ರೈತರನ್ನು ಎಲ್ಲಿಯೂ ಒಕ್ಕಲೆಬ್ಬಿಸಬಾರದು. ಸಾಗುವಳಿ ಮಾಡುತ್ತಾ ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೂ ‘ಒನ್ ಟೈಂ ಸೆಟಲ್ಮೆಂಟ್’ ಆಧಾರದಲ್ಲಿ ಭೂಮಿ ಮಂಜೂರು ಮಾಡಬೇಕು. ರೈತರು ಸಾಗುವಳಿ ಪಡೆದು ಸ್ವಾಧೀನಾನುಭವದಲ್ಲಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಒಕ್ಕಲೆಬ್ಬಿಸದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.
- ಅರಣ್ಯವಾಸಿಗಳನ್ನು ಸದಾ ಒಕ್ಕಲೇಳುವ ಆತಂಕದಿಂದ ಪಾರು ಮಾಡಬೇಕು. 2006 ರ ಅರಣ್ಯ ಕಾಯ್ದೆಯ ಪ್ರಕಾರ ಆದಿವಾಸಿಗಳಿಗೂ ಹಾಗೂ ಎಲ್ಲಾ ಅರಣ್ಯವಾಸಿಗಳಿಗೂ ಭೂಮಿ ಹಕ್ಕು ನೀಡಬೇಕು.
- ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಕುಟುಂಬಗಳು ಸ್ವಂತದ ಸೂರಿಲ್ಲದೆ ಪರದಾಡುತ್ತಿದ್ದುನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ನಿವೇಶನಕ್ಕಾಗಿ ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡಬೇಕು. ಮನೆ ನಿರ್ಮಾಣಕ್ಕೆ ಸಹಾಯ ಧನವನ್ನು 5 ಲಕ್ಷಕ್ಕೆ ಏರಿಸಬೇಕು.
- ರಾಜ್ಯದ ಪಡಿತರ ವ್ಯವಸ್ಥೆಯನ್ನು ವಿಸ್ತರಿಸಿ ರಾಗಿ, ಜೋಳ, ಸಿರಿಧಾನ್ಯ, ಎಣ್ಣೆ ಮುಂತಾದ ವಸ್ತುಗಳನ್ನೂ ನೀಡಬೇಕು. ಇದಕ್ಕೆ ಬೇಕಾಗಿರುವ ಎಲ್ಲಾ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ MSP ದರದಲ್ಲಿ ಕೊಳ್ಳಬೇಕು. ಅಲ್ಲದೆ ಹಾಸ್ಟೆಲ್, ಆಸ್ಪತ್ರೆ, ಜೈಲು, ಬಿಸಿ ಊಟ ಇತ್ಯಾದಿ ಸರ್ಕಾರಿ ಯೋಜನೆಗಳಿಗೆ ರೈತರಿಂದಲೇ ನೇರವಾಗಿ ಉತ್ಪನ್ನಗಳನ್ನು ಖರೀದಿಸಬೇಕು.
- ಕಬ್ಬಿಗೆ FRP ಯನ್ನು 9.5 ರಿಕವರಿ ಆಧಾರದ ಮೇಲೆ ನಿಗದಿ ಮಾಡಬೇಕು ಮತ್ತು ಅಗತ್ಯ ವಸ್ತುಗಳ ಪಟ್ಟಿಯಿಂದ ಸಕ್ಕರೆಯನ್ನು ಹೊರತಂದು ಗ್ರಾಹಕರಿಗೆ ಕಡಿಮೆ ದರದಲ್ಲಿ, ವಾಣಿಜ್ಯ ಉದ್ದೇಶಕ್ಕೆ ಹೆಚ್ಚಿನ ದರದಲ್ಲಿ ನಿಗದಿಗೊಳಿಸಬೇಕು. ಎಥೆನಾಲ್ ಉತ್ಪಾದನೆ ಮಿತಿ ನಿಗದಿಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಹೆಚ್ಚಿನ ಅವಕಾಶ ನೀಡಬೇಕು. ಹೊರದೇಶದಿಂದ ಸಕ್ಕರೆ ಆಮದನ್ನು ನಿಲ್ಲಿಸಬೇಕು. ತೂಕ ಹಾಗೂ ರಿಕವರಿ ಟೆಸ್ಟಿನಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಬೇಕು. ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿಯನ್ನು ಕೂಡಲೇ ಪಾವತಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ SAP [ರಾಜ್ಯ ಸಲಹಾ ಬೆಲೆ] ನೀಡಲು ಕಾನೂನು ರೂಪಿಸಬೇಕು.
- ಮೆಕ್ಕೆ ಜೋಳವನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಕೊಳ್ಳಲು ಕೇಂದ್ರ ಸರ್ಕಾರ ಮುಂದೆಬರಬೇಕು. ಮೆಕ್ಕೆಜೋಳದ ಆಮದನ್ನು ತಕ್ಷಣ ನಿಲ್ಲಿಸಬೇಕು. ರಾಜ್ಯ ಸರ್ಕಾರ ಪರಿಣಾಮಕಾರಿ ರೀತಿಯಲ್ಲಿ ರೈತರ ನೆರವಿಗೆ ಧಾವಿಸಬೇಕು.
- ಹತ್ತಿ, ಹಾಲು, ಮೀನು ಮುಂತಾದ ಕೃಷಿ ಉತ್ಪನ್ನಗಳ ಆಮದಿನ ಮೇಲೆ ನೀಡಿರುವ ಸುಂಕ ವಿನಾಯಿತಿಯನ್ನು ರದ್ದುಗೊಳಿಸಬೇಕು. ದೇಶದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ಯಾವುದೇ ಆಮದು ಅಥವಾ ರಫ್ತಿಗೆ ಅವಕಾಶ ನೀಡಬಾರದು.
- ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳವನ್ನು ಕಟ್ಟುನಿಟ್ಟಾಗಿ ತಡೆಯಬೇಕು ಹಾಗೂ ಅವುಗಳನ್ನೂ RBI ನಿಯಮಾವಳಿಗಳಡಿ ತಂದು ನಿಯಂತ್ರಣ ಸಾಧಿಸಬೇಕು.
- ಕೃಷಿ ಪಂಪ್ ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸಂಪರ್ಕ ವೆಚ್ಚವನ್ನು ರೈತರ ಮೇಲೆಯೇ ಹೇರುವ ನೀತಿ ರದ್ದಾಗಬೇಕು.
- ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ಏರಿಸಿ, ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಮತ್ತು ಕೃಷಿ ಕ್ಷೇತ್ರಕ್ಕೂ ಅನ್ವಯಿಸಬೇಕು.
- ಕಟ್ಟಡ ಕಾರ್ಮಿಕರಂತೆಯೇ ಎಲ್ಲಾ ಅಸಂಘಟಿತ ಕಾರ್ಮಿಕರಿಗೂ, ಫಲಾನುಭವಿ ವರ್ಗದ ಮೇಲೆ ಸೆಸ್ ಹಾಕುವ ಮೂಲಕ ಕಲ್ಯಾಣ ಮಂಡಳಿಗಳನ್ನು ರೂಪಿಸಬೇಕು.
- ಎಲ್ಲಾ ವಲಸೆ ಕಾರ್ಮಿಕರನ್ನು ನೋಂದಾವಣೆ ಮಾಡಿ ಅಗತ್ಯ ರಕ್ಷಣೆ, ಪಡಿತರ, ಮೂಲಸೌಲಭ್ಯಗಳನ್ನು ಒದಗಿಸಲು ಸಮಗ್ರ ಕ್ರಮ ತೆಗದುಕೊಳ್ಳಬೇಕು.
- ಕಾರ್ಮಿಕ ವರ್ಗಕ್ಕೆ ನೆರವಾಗಲು ಎಲ್ಲಾ ತಾಲ್ಲೂಕು ಪ್ರದೇಶಗಳಲ್ಲಿ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ “ಕಾರ್ಮಿಕ ನೆರವು ಕೇಂದ್ರಗಳನ್ನು” ತೆರೆಯಬೇಕು.
- SCPS/TPS ಹಣದ ವಿತರಣೆ, ವಿನಿಯೋಗ, ಸಾಧಕ-ಬಾಧಕಗಳ ಕುರಿತು ಸಮಗ್ರ ಚರ್ಚಿಸಲು ಹಾಗೂ ಮೌಲ್ಯಮಾಪನ ಮಾಡಲು “ಅವಲೋಕನ ಸಭೆ” ಕರೆಯಬೇಕು.
- ಖಾಸಗೀ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ವಿದ್ಯಾರ್ಥಿ ವೇತನ ಈ ಹಿಂದಿನಂತೆ ಮುಂದುವರಿಸಬೇಕು. ಹಾಸ್ಟೆಲುಗಳ ಸಂಖ್ಯೆ ಹಾಗೂ ಆಹಾರ ಭತ್ಯ ಹೆಚ್ಚಳ ಮಾಡಬೇಕು.
- ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಲು, ಸಮಾಜದಲ್ಲಿ ಲಿಂಗ ಸಂವೇದನೆಯನ್ನು ಹೆಚ್ಚಿಸಲು ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಸರ್ಕಾರ ಸಮಗ್ರ ಕ್ರಿಯಾಯೋಜನೆ ರೂಪಿಸಬೇಕು.
- ಮದ್ಯಪಾನದ ಹೆಚ್ಚಳದ ನಿಯಂತ್ರಣಕ್ಕೆ ಸರ್ಕಾರ ಕ್ರಮವಹಿಸಬೇಕು. ಮಹಿಳಾ ಗ್ರಾಮ ಸಭೆಗಳ ನಿರ್ಣಯ ಅಂತಿಮವಾಗಬೇಕು. ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಗ್ರಾಮಗಳಲ್ಲಿ ಮಹಿಳಾ ಸುರಕ್ಷಾ ಹಾಗೂ ಜಾಗೃತ ಸಮಿತಿಗಳನ್ನು ರಚಿಸಿ ಅದಕ್ಕೆ ಅರೆನ್ಯಾಯಿಕ ಅಧಿಕಾರವನ್ನು ನೀಡಬೇಕು.
- ಬಡಜನರ ಬದುಕಿಗೆ ಬಹುಮುಖ್ಯ ಆಧಾರಗಳಾಗಿರುವ ಸಾರ್ವಜನಿಕ ಆಹಾರ ವಿತರಣೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸರ್ಕಾರ ಕ್ರಮವಹಿಸಬೇಕು.
- ಯಾವುದೇ ಹೊಸ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಬೇಕು. ಗಣಿಗಾರಿಕೆಯಿಂದ ಸಂತ್ರಸ್ತವಾಗಿರುವ ರೈತ, ಕುಟುಂಬಗಳ ಪುನ:ಶ್ಚೇತನಕ್ಕೆ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.




