ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ಸಾಮಾಜಿಕ ಜಾಲತಾಣ ವೇದಿಕೆ ಫೇಸ್‌ಬುಕ್‌ನಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವ ಹಿಂದುತ್ವ ಕೋಮುವಾದಿ ಕಾರ್ಯಕರ್ತನ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಕಾರ್ಯದರ್ಶಿ ಲಬೀದ್ ಶಫಿ ಅವರು ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ, “ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತೆ ಯು.ಟಿ ಫರ್ಜಾನ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದಕ್ಕೆ ಡಾ. ಸಿದ್ದು ಪುಜಾರಿ ( Dr Siddu Pujari – Dr Revanasiddayya) ಎಂಬಾತ ಅಶ್ಲೀಲ ಕಮೆಂಟ್ ಹಾಕಿದ್ದಾರೆ. ಮುಸ್ಲಿಮರು ಹಾಗೂ ನ್ಯಾಯ ಪರವಾದ ಜನರ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ” ಎಂದು ಶಫಿ ಆರೋಪಿಸಿದ್ದಾರೆ.
“ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವ ಆತನ ಉದ್ದೇಶವು ಸಮಾಜದ ಶಾಂತಿಯನ್ನು ಕದಡುವುದಾಗಿದೆ. ಪೈಗಂಬರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಚಿತ್ರಿಸಿದ ಆತನ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ದೂರಿನ ಜೊತೆಗೆ ಸಿದ್ದು ಪುಜಾರಿ ಎಂಬಾತ ಕಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನೂ ಲಬೀದ್ ಶಫಿ ಪೊಲೀಸರಿಗೆ ಒದಗಿಸಿದ್ದಾರೆ.




