ವಿಶ್ವದಲ್ಲೇ ಅತ್ಯಂತ ಚಿಕ್ಕ ಜಾನುವಾರು ತಳಿಗಳಲ್ಲಿ ಒಂದಾದ ಪುಂಗನೂರು ಹಸುಗಳನ್ನು ಹೈನುಗಾರಿಕೆಯ ಹೊರತಾಗಿಯೂ ಮುದ್ದಿಗಾಗಿ ಸಾಕುವ ಸಂಪ್ರದಾಯ ನಗರ ಜೀವನದಲ್ಲಿ ದಿನೇ ದಿನೆ ಹೆಚ್ಚುತ್ತಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯಮಿ ರಂಜಿತಾ ಅವರು ಪುಂಗನೂರು ಹಸುಗಳನ್ನು ಮನೆಯಲ್ಲಿ ಮುದ್ದಿಗಾಗಿ ಸಾಕಿ ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಅರುಣ್ ಕುಮಾರ್ ಎಂ ಅವರು ಹೆಬ್ಬಾಳದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಪುಂಗನೂರು ಹಸುಗಳನ್ನು ನಾಯಿ, ಬೆಕ್ಕುಗಳಂತೆ ಪ್ರೀತಿಗಾಗಿ ಸಾಕಿದ್ಕಿದಾರೆ.
ಒಂದೂವರೆ ವರ್ಷದ ಈ ಹಸುಗಳು ಮೊಣಕಾಲು ಎತ್ತರದಲ್ಲಿದ್ದು, ಇವುಗಳು ವಾಸಿಸಲು ಸುಸಜ್ಜಿತವಾದ ಕೋಣೆಯನ್ನು ನಿರ್ಮಿಸಿದ್ದಾರೆ. ಸ್ವಯಂ ಚಾಲಿತ ನೀರಿನ ಸಂಗ್ರಹ ತೊಟ್ಟಿ, ಫ್ಯಾನ್ ಮತ್ತು ಸೂಕ್ತ ವಿದ್ಯುತ್ ಬೆಳಕಿನ ವ್ಯವಸ್ಥೆ ಸಹ ಮಾಡಿದ್ದಾರೆ.
ಅರುಣ್ ಕುಮಾರ್ ಅವರು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದು, ಅವು ಮನೆಗೆ ಆರೋಗ್ಯ ಮತ್ತು ಸಮೃದ್ಧಿ ತರುತ್ತವೆ ಎನ್ನುವ ನಂಬಿಕೆಯಲ್ಲಿ ಪುಂಗನೂರು ಹಸುಗಳನ್ನುಸಾಕಿದ್ದಾರೆ. ಇದರಲ್ಲಿ ಒಂದು ಗಂಡು ಮತ್ತು ಹೆಣ್ಣು ಇದೆ. ಇವರ ಮನೆಯಲ್ಲಿ ಮುದ್ದು ನಾಯಿಗಳು ಸಹ ಇವೆ. ಅವರ ಮಕ್ಕಳು ಹಸುಗಳ ಜೊತೆ ಆಟವಾಡುವುದು ಕಂಡು ಹಸು ಸಾಕಿದ್ದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ. ಹುಲ್ಲು, ಪುಡಿಮಾಡಿದ ಜೋಳ ಹಾಗೂ ನೆಲಗಡಲೆ ಸಿಪ್ಪೆಗಳನ್ನು ಹಸುಗಳಿಗೆ ಆಹಾರವಾಗಿ ಕೊಡುತ್ತಿದ್ದಾರೆ.

ಗೌರಿ ಮತ್ತು ಶಂಕರ ಎಂದು ಹೆಸರಿಟ್ಟಿರುವ ಈ ಹಸುಗಳನ್ನು ಆಂಧ್ರಪ್ರದೇಶದದಿಂದ ಅರುಣ್ ಕುಮಾರ್ ಖರೀದಿಸಿ ತಂದಿದ್ದಾರೆ. ಬೆಂಗಳೂರಿನ ಅನಿರುದ್ಧ ರವೀಂದ್ರ, ತೇಜಸ್ವಿ ಸೂರ್ಯ ಅವರು ಪುಂಗನೂರು ಹಸುಗಳನ್ನು ಸ್ವಾಗತಿಸಿಕೊಂಡಿರುವ ವಿಡಿಯೋ ಜನಪ್ರಿಯತೆ ಗಳಿಸಿದ ನಂತರ ಬೆಂಗಳೂರಿನ ಹೆಚ್ಚಿನ ನಿವಾಸಿಗಳು ಪುಂಗನೂರು ಹಸು ಖರೀದಿಗೆ ಮುಂದೆ ಬರುತ್ತಿದ್ದಾರೆ.
ಗಿಡ್ಡ ತಳಿಯ ಹಸುಗಳನ್ನು ಮನೆಯಲ್ಲಿ, ಫ್ಲಾಟ್‌ಗಳಲ್ಲಿಯೂ ಸಾಕುವುದರಲ್ಲಿ ಯಾವುದೇ ಹಾನಿ ಇಲ್ಲ. ಗಾಳಿ, ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯಕರ ವಾಸಸ್ಥಳದ ಪ್ರವೇಶ ಉತ್ತಮವಾಗಿರಬೇಕು. ನಾಯಿಗಳಂತೆ ಅವುಗಳಿಗೆ ತರಬೇತಿ ನೀಡಬಹುದು ಎನ್ನುತ್ತಾರೆ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ವಸಂತ್ ಶೆಟ್ಟಿ.

“ಪುಂಗನೂರು ಹಸು ಭಾರತದ ಅಪರೂಪದ ಮತ್ತು ಪ್ರಾಚೀನ ತಳಿಯ ಹಸುವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಈ ಹಸುವಿನ ಮೂಲವಾಗಿದ್ದು, ಕೇವಲ ಇರಡುವರೆ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಕುಬ್ಜ ಹಸುಗಳನ್ನು ಮನೆಯೊಳಗೂ ಸಾಕಬಹುದು. ಈ ಹಸುಗಳನ್ನು ಮನೆಯಲ್ಲಿ ಸಾಕೋದು ಹಾಗೂ ನಿರ್ವಹಣೆ ತುಂಬಾನೇ ಸುಲಭ” ಎಂದು ಪುಂಗನೂರು ಹಸು ಸಾಕಿದ ಉದ್ಯಮಿ ರಂಜಿತಾ ಹೇಳುವ ಮಾತಿದು.





