ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಜ್ರ (AC) ಸಾಪ್ತಾಹಿಕ ಪಾಸ್ ದರದ ಪರಿಷ್ಕರಣೆ ಮಾಡಿದೆ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಾರ್ವಜನಿಕರಿಗೆ ಹೆಚ್ಚು ಸುಲಭ ಮತ್ತು ಕೈಗೆಟಕುವ ಪ್ರಯಾಣಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ವಜ್ರ AC ಬಸ್‌ಗಳ ಸಾಪ್ತಾಹಿಕ ಪಾಸ್ ದರವನ್ನು ಪರಿಷ್ಕರಿಸಿದೆ.
2025ರ ಆಗಸ್ಟ್ 1 ರಿಂದ ರೂ. 750ಕ್ಕೆ ವಿತರಣೆಯಾಗುತ್ತಿದ್ದ ವಜ್ರ ಸಾಪ್ತಾಹಿಕ ಪಾಸ್ ಈಗ ಕಡಿತ ದರದಲ್ಲಿ ಲಭ್ಯವಾಗಲಿದೆ.
ಹೊಸ ದರ ಪ್ರಯಾಣಿಕರಿಗೆ ಹೆಚ್ಚುವರಿ ಲಾಭ ನೀಡಲಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.
ಸಾರ್ವಜನಿಕರನ್ನು ಸಾರ್ವಜನಿಕ ಸಾರಿಗೆಯ ಬಳಕೆಗೆ ಪ್ರೋತ್ಸಾಹಿಸುವುದು ಮತ್ತು ಸ್ಪರ್ಧಾತ್ಮಕ ದರವನ್ನು ನೀಡುವ ಉದ್ದೇಶದಿಂದ ಬಿಎಂಟಿಸಿ ದರ ಕಡಿತ ಮಾಡಿದೆ ಎಂದು ಹೇಳಿದೆ.
ವಜ್ರ ಸೇವೆಯ ವಾರದ ಪಾಸ್ ಹಳೆಯ ದರ (ಟೋಲ್ ಶುಲ್ಕ ಹೊರತುಪಡಿಸಿ) ರೂ. 750, ಪರಿಷ್ಕೃತ ದರ ರೂ. 700 (ಟೋಲ್ ಶುಲ್ಕ ಹೊರತುಪಡಿಸಿ) ಇರಲಿದೆ ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ‘ದಿ ಬೆಸ್ಟ್’ ಪಾದಚಾರಿ ಮಾರ್ಗ ಯಾವುದು ಗೊತ್ತಾ?
ಬಿಎಂಟಿಸಿ, ಟುಮ್ಯಾಕ್ ಆಪ್ ಮೂಲಕ ವಜ್ರ ಸಾಪ್ತಾಹಿಕ ಪಾಸ್‌ಗಳನ್ನು ಡಿಜಿಟಲ್ ಮಾದರಿಯಲ್ಲಿ ವಿತರಿಸುತ್ತಿದೆ. ಪ್ರಯಾಣಿಕರು ಸುಲಭವಾಗಿ ಆಪ್ ಮೂಲಕವೇ ಪಾಸ್ ಪಡೆಯಬಹುದು ಎಂದು ತಿಳಿಸಿದೆ.
ಈ ದರ ಪರಿಷ್ಕರಣೆ ಮೂಲಕ ಹೆಚ್ಚಿನ ಪ್ರಯಾಣಿಕರು BMTC ವಜ್ರ ಸೇವೆಗಳ ಸೌಕರ್ಯ ಮತ್ತು ಆರಾಮವನ್ನು ಪಡೆಯಲು ಅನುಕೂಲವಾಗಲಿದೆ.





