ಬೆಂಗಳೂರು ಮೆಟ್ರೋದ ಒಂದು ಸ್ಟೇಷನ್ ಸ್ಫೋಟಿಸಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿ ಅಪರಿಚಿತ ವ್ಯಕ್ತಿಯೊಬ್ಬರು ಬಿಎಂಆರ್‌ಸಿಎಲ್‌ನ ಅಧಿಕೃತ ಇಮೇಲ್‌ಗೆ ಸಂದೇಶ ಕಳುಹಿಸಿದ್ದಾರೆ.
ಈ ಬೆದರಿಕೆ ಇಮೇಲ್ ನವೆಂಬರ್ 14ರ ರಾತ್ರಿ 11.30ರ ಸುಮಾರು ಬಂದಿದೆ. ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಿನ್ನೆಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬಿಎಂಆರ್‌ಸಿಎಲ್ ಎಫ್‌ಐಆರ್ ದಾಖಲಿಸಿದೆ. ನವೆಂಬರ್ 14ರಂದೇ ಇಮೇಲ್ ಬಂದಿದ್ದರೂ ಇಮೇಲ್ ಪರಿಶೀಲನೆ ನಡೆಸಿ ಬಳಿಕ ಬಿಎಂಆರ್ ಸಿಎಲ್ ಅಧಿಕಾರಿ ದೂರು ನೀಡಿದ್ದಾರೆ.
“ನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧ” ಎಂದು ಇಮೇಲ್‌ನಲ್ಲಿ ಅಪರಿಚಿತ ವ್ಯಕ್ತಿ ಬರೆದುಕೊಂಡಿದ್ದಾನೆ.
ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯ ಐಪಿ ವಿಳಾಸ, ಇಮೇಲ್ ಖಾತೆಯ ಮಾಹಿತಿ ಹಾಗೂ ಇತರ ತಾಂತ್ರಿಕ ವಿವರಗಳನ್ನು ಪಡೆದು ಸೈಬರ್ ತಜ್ಞರ ತಂಡ ಆಗುಂತಕ ಪತ್ತೆಗೆ ಮುಂದಾಗಿದ್ದಾರೆ.
ಬೆದರಿಕೆ ಹಿನ್ನೆಲೆ ಮೆಟ್ರೋ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮೆಟ್ರೋ ನಿಲ್ದಾಣಕ್ಕೆ ಸ್ಫೋಟದ ಬೆದರಿಕೆ ಬಂದಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.





