ಕರ್ನಾಟಕ ಸರ್ಕಾರವು 2ನೇ ಜಾತಿ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಅದಕ್ಕಾಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತಯಾರಿ ಆರಂಭಿಸಿದೆ. ಈ ಸಮೀಕ್ಷೆಯು ರಾಜ್ಯದ ಎಲ್ಲ ಸಮುದಾಯಗಳ ನಿರೀಕ್ಷೆಗಳನ್ನು ಈಡೇರಿಸುಬಹುದೇ ಎಂಬ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಚರ್ಚಿಸುವ ಉದ್ದೇಶದಿಂದ ಜಾಗೃತ ಕರ್ನಾಟಕ ಸಂಘಟನೆಯು ಆಗಸ್ಟ್ 30ರ ಶನಿವಾರ ‘ವಿಚಾರ ಸಂಕಿರಣವನ್ನು ಆಯೋಜಿಸಿದೆ. ಕಾರ್ಯಕ್ರಮವು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಾಗೃತ ಕರ್ನಾಟಕದ ಧರಣೀಶ್ ಬೂಕನಕೆರೆ ಮತ್ತು ಪೃಥ್ವಿರಾಜ್, “ಜಾತಿ ಸಮೀಕ್ಷೆಯಲ್ಲಿ ವಿವಿಧ ಸಮುದಾಯಗಳ ಸಂಖ್ಯೆಯ ಪ್ರಶ್ನೆಯೂ ಬರುತ್ತದೆ. ಅಂತಿಮವಾಗಿ, ಸಾಮಾಜಿಕ ನ್ಯಾಯದ ಕುರಿತ ಈ ಮಹತ್ವದ ಪ್ರಕ್ರಿಯೆಯು, ಸಂಖ್ಯೆ, ಮೀಸಲಾತಿಯ ಪ್ರಮಾಣ, ರಾಜಕೀಯ ಪ್ರಾಬಲ್ಯ ಇತ್ಯಾದಿಗಳ ಮೇಲಾಟದಲ್ಲಿ ದಿಕ್ಕು ತಪ್ಪುತ್ತದೆ. ಹೀಗಾಗಬಾರದು ಎಂದರೆ, ನಾಡಿನ ಸಮಸ್ತ ಸಮುದಾಯಗಳೂ ಇದರಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವುದು ಅಗತ್ಯ” ಎಂದು ತಿಳಿಸಿದ್ದಾರೆ.
“ಆದ್ದರಿಂದ, ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ, ಜಾತಿ ಸಮೀಕ್ಷೆ ಕುರಿತು ಪ್ರಾಧ್ಯಾಪಕ ಡಾ. ಎ ನಾರಾಯಣ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ‘ಜಾತಿ ಸಮೀಕ್ಷೆ ಏಕೆ ಬೇಕು? ಸರ್ವ ಸಮುದಾಯಗಳಿಗೂ ಇದರಿಂದ ಇರುವ ಅನುಕೂಲಗಳೇನು?’ ಎಂಬ ವಿಚಾರದ ಬಗ್ಗೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಮತ್ತು ಶೋಷಿತ ವರ್ಗಗಳ ಒಕ್ಕೂಟದ ರಾಮಚಂದ್ರಪ್ಪ ಅವರು ವಿಚಾರ ಮಂಡಿಸಲಿದ್ದಾರೆ. ‘ಜಾತಿ ಸಮೀಕ್ಷೆ ಸಮರ್ಪಕವಾಗಿ ನಡೆಯಲು ಏನು ಮಾಡಬೇಕು?’ ಎಂಬ ವಿಷಯದ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್ ಲಿಂಗಪ್ಪ ಮತ್ತು ವಕೀಲೆ ರಾಜಲಕ್ಷ್ಮಿ ಅಂಕಲಗಿ ಮಾತನಾಡಲಿದ್ದಾರೆ” ಎಂದು ತಿಳಿಸಿದ್ದಾರೆ.

“ಮಧ್ಯಾಹ್ನದ ಗೋಷ್ಠಿಯಲ್ಲಿ ‘ಜಾತಿ ಸಮೀಕ್ಷೆಯ ಫಲಿತಾಂಶ ಪರಿಣಾಮಕಾರಿಯಾಗಿ ಜಾರಿಯಾಗಲು ಏನು ಮಾಡಬೇಕು?’ ಎಂಬ ವಿಚಾರದ ಕುರಿತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್ ದ್ವಾರಕಾನಾಥ್, ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್ ಶ್ರೀನಿವಾಸಾಚಾರಿ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಅಹಿಂದ ಮುಖಂಡ ಸಾಸಲು ಸತೀಶ್, ಕೆ.ಜೆ ಜಯಲಕ್ಷ್ಮಿ ನಾಯಕ, ಇನ್‌ಸೈಟ್ ಅಕಾಡೆಮಿಯ ಜಿ.ಬಿ ವಿಜಯ್, ಬಸವ ಚಿಂತಕ ಸಿದ್ದಪ್ಪ ಮೂಲಗೆ ಮಾತನಾಡಲಿದ್ದಾರೆ” ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮವು ಶನಿವಾರ ಬೆಳಗ್ಗೆ 10:30ಕ್ಕೆ ಆರಂಭವಾಗಲಿದೆ.




