ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅಸಭ್ಯ ಪದ ಬಳಸಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಗೆ ರಾಜ್ಯ ಕಾಂಗ್ರೆಸ್ ದೂರು ನೀಡಿದೆ.
ಜುಲೈ 1ರಂದು ವಿಧಾನಸೌಧದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅಸಭ್ಯ ಪದ ಬಳಸಿದ್ದು, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ದೂರು ನೀಡಿದ್ದಾರೆ.
ಎನ್ ರವಿ ಕುಮಾರ್ ಈಗಾಗಲೇ ಕಲಬುರಗಿಯ ಜಿಲ್ಲಾಧಿಕಾರಿಗಳ ವಿರುದ್ದವು ಸಹ ಈ ರೀತಿ ಪದ ಬಳಸಿ ಕ್ಷಮೆ ಕೋರಿದ್ದಾರೆ. ಇವರು ಮಹಿಳಾ ಸಮಾಜಕ್ಕೆ ಅತ್ಯಂತ ಅಗೌರವ ತೋರಿಸಿರುವ ಇಂತಹ ಅಸಭ್ಯ ವ್ಯಕ್ತಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಬಳಸಿರುವ ಅಸಂಸದೀಯ ಪದವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ‘ಶಾಲಿನಿ ರಜನೀಶ್ ಹಗಲು ಸಿಎಂಗೆ, ರಾತ್ರಿ ಸರ್ಕಾರಕ್ಕೆ ಕೆಲಸ’: ನಾಲಿಗೆ ಹರಿಬಿಟ್ಟ ಬಿಜೆಪಿಯ ಎನ್ ರವಿಕುಮಾರ್
ಪ್ರತಿಭಟನೆ ಸಂದರ್ಭದಲ್ಲಿ ರವಿ ಕುಮಾರ್ ಅವರು ‘ಮುಖ್ಯ ಕಾರ್ಯದರ್ಶಿ ಶಾಲಿನಿ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ” ಎಂದು ಹೇಳಿದ್ದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟಿಸುತ್ತಿರುವ ವೇಳೆ ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂ ಎನ್ ಕರಿಬಸವನಗೌಡ ಅವರೊಂದಿಗೆ ಮಾತನಾಡುತ್ತಿರುವಾಗ ರವಿಕುಮಾರ್ ಈ ಹೇಳಿಕೆ ನೀಡಿದ್ದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ಎಪ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮೈಸೂರಿನ ‘ಒಡನಾಡಿ’ ಸಂಸ್ಥೆಯ ಪರಶುರಾಮ್ ಎಂ.ಎಲ್. ಮತ್ತು ಸ್ಟ್ಯಾನ್ಲಿ ಕೆ.ವಿ. ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.





