ಕೆಪಿಸಿಸಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜ.27ರಂದು ಬೆಳಿಗ್ಗೆ 10.30ಕ್ಕೆ ‘ನರೇಗಾ ಬಚಾವ್ ಸಂಗ್ರಾಮ್’- ಆಂದೋಲನದ ಅಡಿಯಲ್ಲಿ ಬೃಹತ್ ಪ್ರತಿಭಟನೆ ಮತ್ತು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.
ಮನರೇಗಾ ಯೋಜನೆಯ ಹೆಸರು ಬದಲಾಯಿಸಿದ್ದಲ್ಲದೇ ರಾಜ್ಯಕ್ಕೆ ಹೆಚ್ಚು ಆರ್ಥಿಕ ಹೊರೆ ಹೊರಿಸಿದ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಮತ್ತು ಉಳಿದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಾರ್ಮಿಕ ಸಂಘಟನೆಗಳೂ ತಿದ್ದುಪಡಿ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿವೆ. ತಮಿಳುನಾಡು ಸರ್ಕಾರ ಈಗಾಗಲೇ ಜಿ ರಾಮ್ ಜಿ ಕಾಯ್ದೆ ವಿರುದ್ಧ ನಿರ್ಣಯ ಕೈಗೊಂಡಿದೆ. ಕರ್ನಾಟಕ ಸರ್ಕಾರ ಇದೇ ಉದ್ದೇಶದಿಂದ ವಿಶೇಷ ಅಧಿವೇಶನ ನಡೆಸುತ್ತಿದೆ. ರಾಜ್ಯಪಾಲರು ಜಂಟಿ ಅಧಿವೇಶ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ ಕಾರಣ ವಿವಾದ ಉಂಟಾಗಿದ್ದು, ಕಾಯ್ದೆ ಕುರಿತ ಚರ್ಚೆ ನಡೆಯುವ ಬದಲು ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಮಾತಿನ ಜಟಾಪಟಿಗೆ ಎರಡು ದಿನಗಳ ಕಲಾಪ ಬಲಿಯಾಗಿದೆ.





