ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಜ್ಞೆಗಳನ್ನು ಗಾಳಿಗೆ ತೂರಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆವಿಕಂ) ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಜಲಮಂಡಳಿ) ಅಧಿಕಾರಿಗಳ ಉದ್ಧಟತನ ಬೆಳಕಿಗೆ ಬಂದಿದೆ. ನ್ಯಾಯಾಲಯದ ಆದೇಶ ಸಂಖ್ಯೆ 79/2021 ಪಾಲನೆ ಮಾಡದ ಈ ಸಾರ್ವಜನಿಕ ಸೇವಕರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸದೆ ಕಳ್ಳಾಟ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಹಿಂದಿನ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ 2021ನೇ ಸಾಲಿನಲ್ಲಿ ಮಹತ್ವದ ಆದೇಶ ಹೊರಡಿಸಿದ್ದರು. ಇದರ ಅನ್ವಯ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ‘ನಗದು ಘೋಷಣೆ ವಹಿ’ಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡುವುದು ಅವರ ಆದ್ಯ ಕರ್ತವ್ಯವಾಗಿದೆ.
ಆದರೆ, ಈ ನಿಯಮದ ಪಾಲನೆ ಕುರಿತು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೋರಿದಾಗ ಜಲಮಂಡಳಿ ಹಾಗೂ ಬೆವಿಕಂ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಉಡಾಫೆಯ ಹಿಂಬರಹ ನೀಡಿದ್ದಾರೆ. ಬೆವಿಕಂನ ಕೇಂದ್ರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಉಪ ಪ್ರಧಾನ ವ್ಯವಸ್ಥಾಪಕಿ (ಪ್ರಭಾರ) ಪುಷ್ಪಲತಾ ಎ. ಅವರು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8(1)(ಇ) ಹಾಗೂ 8(1)(ಜೆ) ಅಡಿ ಇದು ‘ವೈಯಕ್ತಿಕ ಮಾಹಿತಿ’ ಎಂದು ನೆಪವೊಡ್ಡಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ.



ಜಲಮಂಡಳಿಯ ಮುಖ್ಯ ಅಭಿಯಂತರರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಕೂಡ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ಸಬೂಬು ಹೇಳಿ ಮಾಹಿತಿ ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ಕರಾರುವಕ್ಕಾದ ಮಾಹಿತಿ ಕೇಳಿದಾಗ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8(1)(ಜೆ) ಜೊತೆಗೆ (ಇ) ನಿಯಮಗಳನ್ನು ಮುಂದಿಟ್ಟುಕೊಂಡು ಜಾರಿಕೊಳ್ಳುವುದು ಈಚೆಗೆ ಸಾಮಾನ್ಯವಾಗಿದೆ. ಮೇಲಧಿಕಾರಿಗಳು, ವಾರ್ಷಿಕ ವರದಿ ಕೇಳುವ ಮಾಹಿತಿ ಆಯೋಗಗಳು ಸರಿಯಾದ ರೀತಿಯಲ್ಲಿ ನಿಗಾವಹಿಸದೆ ಇರುವುದೇ ಇಂತಹ ಅಧಿಕಾರಿಗಳ ಉದ್ಧಟತನಕ್ಕೆ ಮುಖ್ಯ ಕಾರಣ.
ಇದನ್ನೂ ಓದಿ: ಬೆಂಗಳೂರು | ಹಾರ್ನ್ ವಿಚಾರ: ವೃದ್ಧನ ಮೇಲೆ ಅಮಾನುಷವಾಗಿ ಹಲ್ಲೆಗೈದ ಆರೋಪಿ ಬಂಧನ
ಇಂತಹ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ನೇರ ದ್ರೋಹ ಬಗೆಯುತ್ತಿದ್ದಾರೆ. ಬೆವಿಕಂ ಹಾಗೂ ಜಲಮಂಡಳಿಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಈ ಕೂಡಲೇ ಸಂಬಂಧಪಟ್ಟ ಉನ್ನತ ಮೇಲಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಇಂತಹ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.





