ವೆನೆಜುವೆಲಾ ದೇಶದ ಮೇಲೆ ಅಮೆರಿಕವು ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ, ಪತ್ನಿ ಸಿಲಿಯಾರವರನ್ನು ಅಪಹರಣ ಮಾಡಿರುವುದನ್ನು ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ ಪ್ರಕಾಶ್, “ವೆನೆಜುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿದ್ದ ಕಾರಣಕ್ಕಾಗಿ ಮಡುರೋ ಅವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕ ನಡೆಸಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ವೆನೆಜುವೆಲಾ ಮೇಲೆ ಅಮೆರಿಕ ದಾಳಿಗೆ ಖಂಡನೆ: ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಎಡಪಕ್ಷಗಳು
“ಒಂದು ಸಾರ್ವಭೌಮ, ಸ್ವತಂತ್ರ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರ ಒಂದರ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಆಕ್ರಮಣದ ಮೂಲಕ ಅಪಹರಿಸಿರುವುದು ಹಿಂದೆಂದೂ ಕಂಡರಿಯದ ದೌರ್ಜನ್ಯವಾಗಿದೆ. ವೆನೆಜುವೆಲಾ ದೇಶದ ಮೇಲೆ ನಡೆದಿರುವ ದಾಳಿ, ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲಾ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣವಾಗಿದೆ” ಎಂದರು.
ಹಾಗೆಯೇ, “ಕೂಡಲೇ ವೆನೆಜುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೆರಿಕವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಮತ್ತೊಂದು ಸಾರ್ವಭೌಮ ದೇಶದ ಮೇಲೆ ಅಮೆರಿಕ ನಡೆಸಿರುವ ಮಿಲಿಟರಿ ದಬ್ಬಾಳಿಕೆಗೆ ಬಹಳ ದೀರ್ಘ ಇತಿಹಾಸವೇ ಇದೆ. ಈ ಹಿಂದೆ ಇರಾಕ್, ಲಿಬಿಯಾ ಮುಂತಾದ ದೇಶಗಳ ಮೇಲೆ ಆಕ್ರಮಣ ನಡೆಸಿ ಅದರ ಅಧ್ಯಕ್ಷರನ್ನು ಕಗ್ಗೊಲೆ ಮಾಡಿದೆ. ಈಗ ವೆನೆಜುವೆಲಾ ಅಧ್ಯಕ್ಷರ ಮೇಲೆ ಮಾದಕ ವಸ್ತು ಸರಬರಾಜು ಆರೋಪ ಹೊರಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ರೀತಿಯಲ್ಲೇ ಈ ಹಿಂದೆ ಕೂಡ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ರವರ ಮೇಲೆ ಸಮೂಹ ವಿನಾಶಕ ಅಸ್ತ್ರ ಹೊಂದಿರುವ ಆರೋಪ ಹೊರಿಸಿದ್ದರು” ಎಂದು ದೂರಿದ್ದರು.
ಇದನ್ನು ಓದಿದ್ದೀರಾ? ವೆನೆಜುವೆಲಾದ ಮೇಲೆ ಡೊನಾಲ್ಡ್ ಟ್ರಂಪ್ ಬಾಂಬ್ ಹಾಕಿದ್ದು ಯಾಕೆ?
“ಇವೆಲ್ಲವೂ ತನ್ನ ಹಿಡಿತದ ಮಾಧ್ಯಮಗಳನ್ನು ಬಳಸಿ ಅಮೆರಿಕ ನಡೆಸಿರುವ ಅಪಪ್ರಚಾರಗಳೇ ಆಗಿವೆ. ಭಾರತ ದೇಶವೂ ಕೂಡ ಸುಂಕ ಕಡಿತದ ಬೆದರಿಕೆ ಹಾಗೂ ಒತ್ತಡವನ್ನು ಅಮೆರಿಕದಿಂದ ಎದುರಿಸುತ್ತಿದೆ. ಇಂದು ವೆನೆಜುವೆಲಾ ದೇಶಕ್ಕೆ ಒದಗಿರುವ ಪರಿಸ್ಥಿತಿ ಯಾವುದೇ ದೇಶಕ್ಕಾದರೂ ಬರಬಹುದು. ಆದ್ದರಿಂದ ಇಂತಹ ಸಾಮ್ರಾಜ್ಯಶಾಹಿ ದಬ್ಬಾಳಿಕೆ ವಿರುದ್ಧ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗುವಂತೆ ಸಿಪಿಐ(ಎಂ) ಪಕ್ಷ ಶ್ರಮಿಸಲಿದ್ದು ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತದೆ” ಎಂದು ತಿಳಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ, ಚಂದ್ರಪ್ಪ ಹೊಸ್ಕೆರಾ, ಕೆ.ಎಸ್. ವಿಮಲಾ ರಾಜ್ಯ ಸಮಿತಿ ಸದಸ್ಯರಾದ ಟಿ.ಯಶವಂತ, ಸೂರಜ್ ನಿಧಿಯಂಗ್ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





