ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನ್ಯಾಯ ಹಾಗೂ ಮುಕ್ತ ಚುನಾವಣೆಗಾಗಿ ಭಾರತದ ಪ್ರಜೆಗಳಾಗಿ ನಾವು ಜನತಂತ್ರ ವ್ಯವಸ್ಥೆ ಹಾಗೂ ಸಂವಿಧಾನವನ್ನು ಕಾಪಾಡಬೇಕಿದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಗಳಾದ ಸಂಜಯ್ ಹೆಗ್ಡೆ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ‘ಗೌರಿ ದಿನ’ ದ ಕಾರ್ಯಕ್ರಮದ ಅಂಗವಾಗಿ ನಡೆದ ‘ಅಪಾಯದ ಸುಳಿಯಲ್ಲಿ ಭಾರತದ ಪ್ರಜಾತಂತ್ರ: ಚುನಾವಣಾ ಪ್ರಕ್ರಿಯೆಯ ಆಯುಧೀಕರಣ’ ವಿಷಯವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಧರ್ಮದವರನ್ನು ದೇಶದಿಂದ ಹೊರಗಾಗಲು ಅವರನ್ನು ಚುನಾವಣಾ ವ್ಯಸ್ಥೆಯಿಂದ ಹೊರಗಿಡಲು ಕಳೆದ ಒಂದು ದಶಕದಿಂದ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಸಿಎಎ ಕಾಯ್ದೆ, ಚುನಾವಣಾ ಆಯೋಗದ “ಎಸ್‌ಐಆರ್’ ಕಾಯ್ದೆ ಇದಕ್ಕೆ ನಿದರ್ಶನಗಳಾಗಿವೆ. ಕೇಂದ್ರದ ಇವೆಲ್ಲ ಪ್ರಯತ್ನಗಳು ಮುಸ್ಲಿಮರನ್ನು ಹೊರಗಾಕುವ ಹುನ್ನಾರವಾಗಿದೆ ಎಂದು ಸಂಜಯ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಎಸ್‌ಐಆರ್(ವಿಶೇಷ ತೀವ್ರ ಪರಿಷ್ಕರಣೆ) ಯೋಜನೆ ಕೂಡ ಒಂದು ಪಕ್ಷಕ್ಕೆ ಮತ ಹಾಕುವವರನ್ನು ಹೊರತುಪಡಿಸಿ ಮುಸ್ಲಿಮರನ್ನು ಮತದಾನ ಹಕ್ಕುಗಳಿಂದ ಹೊರಗಿಡುವ ಯೋಜನೆಯಾಗಿದೆ. ಪ್ರಮುಖ ಮಾನ್ಯತೆ ಪಡೆದ ಗುರುತಿನ ಚೀಟಿಯಾದ ಆಧಾರ್‌ಅನ್ನು ಪರಿಗಣಿಸಲು ಆಯೋಗ ತಯಾರಿರಲಿಲ್ಲ. ಸುಪ್ರೀಂ ಕೋರ್ಟ್ ತಪರಾಕಿಯ ನಂತರ ಆಧಾರ್ ಗುರುತಿನ ಚೀಟಿಯನ್ನು ಕೂಡ ಮಾನ್ಯತೆಯನ್ನಾಗಿ ಪರಿಗಣಿಸಿತು. ಸ್ವಾತಂತ್ರ್ಯ ಬಂದ ನಂತರ, ಸಂವಿಧಾನ ರಚನೆಯಾದಾಗ ಮೌಲಾನಾ ಆಜಾದ್, ಬಿ ಆರ್ ಅಂಬೇಡ್ಕರ್, ನೆಹರು ಆದಿಯಾಗಿ ಎಲ್ಲರೂ ದೇಶದಲ್ಲಿರುವ ಎಲ್ಲರೂ ಭಾರತದ ಪ್ರಜೆಗಳು. ಅವರೆಲ್ಲರೂ ಇಲ್ಲಿರಲು ಸರ್ವಸ್ವತಂತ್ರರು ಎಂದು ಹೇಳಿದ್ದರು. ಆದರೆ ಧರ್ಮದ ಆಧಾರದ ಮೇಲೆ ವಿಭಜಿಸುವ ಕೋಮು ಭಾವನೆ ಹೊಂದಿರುವ ಕೇಂದ್ರ ಸರ್ಕಾರ ಮುಸ್ಲಿಮ್ ಸಮುದಾಯವನ್ನು ಹೊರಗಿಡುವ ದುಷ್ಟ ಪ್ರಯತ್ನ ಮಾಡುತ್ತಿದೆ ಎಂದು ಸಂಜಯ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ-ಕ್ಸಿ-ಪುಟಿನ್ ಭೇಟಿ: ಅಮೆರಿಕ ವಿರುದ್ಧ ಪ್ರಬಲ ಗುಂಪು ರಚನೆ ಸಾಧ್ಯವೇ?
1971ರ ಬಾಂಗ್ಲಾದೇಶದ ವಿಮೋಚನೆಯ ಸಂದರ್ಭದಲ್ಲೂ ಕೂಡ ಈ ಮೊದಲು ಭಾರತದಿಂದ ವಲಸೆ ಹೋಗಿ ಬಾಂಗ್ಲಾದೇಶದ ಪ್ರಜೆಗಳಾಗಿರುವವರು ಮರಳಿ ಭಾರತಕ್ಕೆ ಬರಬಹುದೆಂದು ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ ಹೇಳಿತ್ತು. ಅಸ್ಸಾಂ ಸಂಸ್ಕೃತಿ ಕೂಡ ಬಾಂಗ್ಲಾದೇಶದಿಂದ ವಲಸೆ ಬಂದ ನಾಗರಿಕರ ಸಮ್ಮಿಳತವಾಗಿದೆ. ಆದರೆ ಈಗಿನ ಸರ್ಕಾರ ಬಾಂಗ್ಲಾ ಮುಸ್ಲಿಮರು ಹೆಚ್ಚಾಗಿದ್ದಾರೆ ಅವರು ನಮ್ಮ ದೇಶದವರಲ್ಲ ಎಂದು ಸಾರ್ವಜನಿಕರಲ್ಲಿ ಸುಳ್ಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಪೌರತ್ವ ಎಂದರೆ ಹಕ್ಕುಗಳನ್ನು ಹೊಂದುವ ಹಕ್ಕು, ಮತ್ತು ಭಾರತೀಯ ಪೌರತ್ವವು ಹಕ್ಕು ಮತ್ತು ಮನ್ನಣೆ ಎರಡೂ ಆಗಿದೆ. ವಿಭಜಿತ ದೇಶದಲ್ಲಿ, ಭಾರತದಲ್ಲಿ ಉಳಿಯಲು ಆಯ್ಕೆ ಮಾಡಿದವರು ನಿಸ್ಸಂದೇಹವಾಗಿ ಭಾರತೀಯರು ಎಂಬುದಕ್ಕೆ ಇದು ಒಂದು ಮಾನ್ಯತೆಯಾಗಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, ಒಂದು ಆತಂಕಕಾರಿ ಪ್ರವೃತ್ತಿ ಹೊರ ಹೊಮ್ಮಿದೆ. ಮುಸ್ಲಿಂ ಎಂಬ ಕಾರಣಕ್ಕ ಭಾರತೀಯ ನಾಗರಿಕನನ್ನು ಪೌರತ್ವದ ದಾಖಲೆ ಪುರಾವೆಗಳಿದ್ದರೂ ಅವರನ್ನು ದೇಶದಿಂದ ಹೊರದೂಡುವುದು ಅಪಾಯಕಾರಿ ವ್ಯವಸ್ಥೆಯನ್ನು ಬಹಿರಂಗಪಡಿಸುತ್ತದೆ.ಇದು ಒಂದು ಪ್ರತ್ಯೇಕ ಘಟನೆಯಲ್ಲ. ಅಸ್ಸಾಂನಂಥ ರಾಜ್ಯಗಳಲ್ಲಿ ಮುಂದುವರಿಯುತ್ತಿವೆ. ನಮ್ಮ ದೇಶದಲ್ಲಿ ಬದುಕಲು ಅವರಿಗೆ ಎಲ್ಲ ರೀತಿಯ ಹಕ್ಕುಗಳಿದ್ದರೂ ಮುಸ್ಲಿಂ ಎಂಬ ಕಾರಣಕ್ಕಾಗಿ ಅವರನ್ನು ದೇಶದಿಂದ ಹೊರದಬ್ಬಲು ಯತ್ನಿಸಲಾಗುತ್ತಿದೆ ಎಂದು ಸಂಜಯ್ ಹೆಗ್ಡೆ ಬಿಜೆಪಿ ಸರ್ಕಾರಗಳ ಕೋಮುವಾದ ನೀತಿಯ ಬಗ್ಗೆ ವಿವರವಾಗಿ ತಿಳಿಸಿದರು.





