ಸಾರಿಗೆ ಸಂಸ್ಥೆಯೊಳಗಿನ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕ ಜಯದೇವ್ ಎಂ ಅವರು ದೀರ್ಘ ಕಾನೂನು ಹೋರಾಟದ ನಂತರ ಜಯಗಳಿಸಿದ್ದಾರೆ. ಸಂಸ್ಥೆಯ ಉನ್ನತ ಅಧಿಕಾರಿಗಳ ಪಿತೂರಿಯ ನಡುವೆಯೂ ಸತ್ಯಕ್ಕೆ ಜಯ ಸಿಕ್ಕಿರುವುದು ಈಗ ಸಾರಿಗೆ ವಲಯದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ಸ್ಯಾಟಲೈಟ್ ಡಿಪೋ-6ರಲ್ಲಿ ಕೆಲಸ ಮಾಡುತ್ತಿದ್ದ ನೌಕರರು ರಜೆ ಪಡೆಯಲು ಅಥವಾ ಪ್ರತಿದಿನದ ಕರ್ತವ್ಯ ಹಂಚಿಕೆಗಾಗಿ ಅಧಿಕಾರಿಗಳಿಗೆ ಲಂಚ ನೀಡಬೇಕಾದ ಅನಿವಾರ್ಯತೆ ಇತ್ತು. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಅಧಿಕಾರಿಗಳು ತಲಾ 5,000 ದಿಂದ 10,000 ರೂಪಾಯಿಗಳವರೆಗೆ ಹಣ ಪಡೆಯುತ್ತಿದ್ದರು. ಈ ಅಕ್ರಮವನ್ನು ಪತ್ತೆಹಚ್ಚಿದ ಜಯದೇವ್ ಎಂ ಅವರು, ಸಾಕ್ಷಿ ಸಮೇತ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ದೂರು ನೀಡಿದ್ದರು.


ದೂರು ನೀಡಿದ ಹಿನ್ನೆಲೆಯಲ್ಲಿ ಜಯದೇವ್ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಅಧಿಕಾರಿಗಳು, ಅವರ ಹೆಸರಿನಲ್ಲೇ ನಕಲಿ ಪತ್ರ ಸೃಷ್ಟಿಸಿದರು. “ನನ್ನ ಕುಟುಂಬ ಮಂಗಳೂರಿನಲ್ಲಿದೆ, ಅಲ್ಲಿಗೆ ವರ್ಗಾವಣೆ ಮಾಡಿ” ಎಂದು ಜಯದೇವ್ ಅವರ ಸಹಿಯನ್ನು ಫೋರ್ಜರಿ ಮಾಡಿ ಅಧಿಕಾರಿಗಳೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ನಕಲಿ ದಾಖಲೆಯನ್ನು ನಂಬಿ ಸಚಿವರು ನೀಡಿದ ಶಿಫಾರಸನ್ನು ಬಳಸಿ, ಅಧಿಕಾರಿಗಳು ಜಯದೇವ್ ಅವರನ್ನು ಮಂಗಳೂರಿಗೆ ವರ್ಗಾವಣೆ ಮಾಡಿದ್ದರು.
ವರ್ಗಾವಣೆಯ ಹಿಂದಿನ ಕುತಂತ್ರವನ್ನು ಅರಿತ ಜಯದೇವ್, ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಫೋರ್ಜರಿ ಪ್ರಕರಣದ ಸತ್ಯಾಂಶವನ್ನು ವಿವರಿಸಿದರು. ಪ್ರಕರಣದ ಗಂಭೀರತೆ ಅರಿತ ಸಚಿವರು, ತಕ್ಷಣವೇ ತಮ್ಮ ಶಿಫಾರಸು ಪತ್ರವನ್ನು ಹಿಂಪಡೆದು, ವರ್ಗಾವಣೆ ರದ್ದುಪಡಿಸಿ ಯಥಾಸ್ಥಿತಿ ಕಾಪಾಡುವಂತೆ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರಿಗೆ ಸೂಚಿಸಿದರು.


ಇದನ್ನೂ ಓದಿ: ಬೆಂಗಳೂರು | ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್: ಮಹಿಳೆ ವಿರುದ್ಧ ಎಸ್‌ಡಿಪಿಐ ಮುಖಂಡನಿಂದ ದೂರು
ಆದರೆ, ಸಚಿವರ ಸೂಚನೆ ಮತ್ತು ಫೋನ್ ಕರೆಯ ಹೊರತಾಗಿಯೂ ಎಂಡಿ ಅವರು ವರ್ಗಾವಣೆ ರದ್ದತಿಗೆ ವಿಳಂಬ ಮಾಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಇದರ ಹಿಂದೆ ಮುಖ್ಯ ಸಂಚಾರ ವ್ಯವಸ್ಥಾಪಕ ಜೆ. ಅಂತಣಿ ಜಾರ್ಜ್ ಅವರ ಪಿತೂರಿ ಇದೆ ಎಂದು ಜಯದೇವ್ ಆರೋಪಿಸಿದ್ದಾರೆ. ಸದ್ಯ ಈ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಾದ ಜೆ. ಅಂತಣಿ ಜಾರ್ಜ್, ಎಟಿಎಸ್ ನೇತ್ರಾವತಿ ಎನ್ ಮತ್ತು ಸಚಿನ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಪ್ರಸ್ತುತ ಜಯದೇವ್ ಎಂ ಅವರು ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.





