“ದಲಿತ ಮಹಿಳೆಯರು ಬರೆಯಲು ಬರದವರೇನಲ್ಲ. ಆದರೆ ಅಭಿವ್ಯಕ್ತಿಯ ತೊಡಕುಗಳಿವೆ. ನಾನೂ ಆ ತೊಡಕುಗಳನ್ನು ಅನುಭವಿಸಿದಳು. ದಲಿತ ಸಾಹಿತಿಗಳು ದಲಿತ ಮಹಿಳೆಯರ ಸಾಹಿತ್ಯಕ್ಕೆ ಬೆಂಬಲ ನೀಡಿಲ್ಲ. ಎಂಬುದನ್ನು ನೇರ, ನಿಷ್ಠುರವಾಗಿ ಹೇಳಬಹುದು. ಬೆಂಬಲದ ಅನಿವಾರ್ಯತೆಯಿದೆ” ಎಂದು ಲೇಖಕಿ, ರಂಗಕರ್ಮಿ ಮತ್ತು ದಲಿತ ಚಳುವಳಿಯ ಹೋರಾಟಗಾರ್ತಿ ದು. ಸರಸ್ವತಿ ಹೇಳಿದರು.
ಶನಿವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಸೃಜನಶೀಲ(ಸಮಕಾಲೀನ) ಗೋಷ್ಠಿಯಲ್ಲಿ ‘ದಮನಿತರ ಸಾಹಿತ್ಯ- ಮುಖ್ಯಧಾರೆಗೆ ವಿಲೀನವಾಗಿದೆಯೇ..?’ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, “ದಲಿತ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಒಪ್ಪಿಕೊಂಡಿದೆ. ಆದರೆ ದಲಿತ ಸಾಹಿತ್ಯದಲ್ಲಿ ಮಹಿಳಾ ಸಾಹಿತಿಗಳನ್ನು ಹುಡುಕುವುದು ಕಷ್ಟ” ಎಂದರು.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ
“ಅಷ್ಟಕ್ಕೂ ದಲಿತ ಮಹಿಳೆಯರಿಗೆ ಬರವಣಿಗೆ ಬರುವುದಿಲ್ಲ ಎಂದಲ್ಲ. ಬರೆಯುವ ಆಸೆಯಿದೆ, ಅದೆಷ್ಟೋ ಮಹಿಳೆಯರು ಬರೆದು ಅದನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಿದ್ದಾರೆ, ಪ್ರಕಟಿಸುತ್ತಿಲ್ಲ. ನಮ್ಮ ಬದುಕು ಕನ್ನಡ ವರ್ಣಮಾಲೆಗೆ ಒಗ್ಗದು ಎಂಬ ಭಾವನೆ ದಲಿತ ಹೆಣ್ಣು ಮಕ್ಕಳದ್ದು. ತಮ್ಮ ಸಾಮರ್ಥ್ಯವನ್ನು ತಾವೇ ನಂಬದ ಸ್ಥಿತಿಯಲ್ಲಿ ದಲಿತ ಹೆಣ್ಣು ಮಕ್ಕಳು ಇದ್ದಾರೆ. ಆದರೆ ಹೆಣ್ಣು ಮಕ್ಕಳು ಬರೆದಾಗ ತಳಪಾಯ ಅಲುಗಾಡುತ್ತದೆ, ಯಜಮಾನ್ಯದ ತಳಪಾಯ ಅಲುಗಾಡಬೇಕು” ಎಂದು ಅಭಿಪ್ರಾಯಿಸಿದರು.
ಈ ಗೋಷ್ಠಿಯಲ್ಲೇ ಧಾರ್ಮಿಕ ಅಲ್ಪಸಂಖ್ಯಾತ ಸಾಹಿತಿಗಳ ಬಗ್ಗೆ ಮಾತನಾಡಿದ ಲೇಖಕಿ, ಕವಯತ್ರಿ ಸಬಿಹಾ ಭೂಮಿಗೌಡ, “ಕ್ರೈಸ್ತ ಸಮುದಾಯ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ನಾವು ನೋಡುವಾಗ ಕ್ರೈಸ್ತ ಮಿಷನರಿಗಳತ್ತ ಗಮನಹರಿಯುತ್ತದೆ. ಕ್ರೈಸ್ತ ಸಾಹಿತಿಗಳು ಕನ್ನಡ ಮತ್ತು ಕೊಂಕಣಿ ಭಾಷಾ ಸಾಹಿತ್ಯದ ನಡುವೆ ಸೇತುವೆಯಾಗಿ ಕೆಲಸ ಮಾಡಿದವರು” ಎಂದು ಶ್ಲಾಘಿಷಿಸಿದರು.
“ಅದೆಷ್ಟೋ ಕ್ರೈಸ್ತರು ತಮ್ಮ ಹೆಸರಿನಲ್ಲಿ ಬರೆಯುವುದಿಲ್ಲ. ಕಾವ್ಯನಾಮ ಬದಲಾಯಿಸುತ್ತಾರೆ. ಈ ಬಗ್ಗೆ ನಾನು ಸಾಹಿತಿಗಳ ಬಳಿ ಪ್ರಶ್ನಿಸಿದಾಗ ‘ನಮ್ಮ ಹೆಸರಲ್ಲಿದ್ದರೆ ಪತ್ರಿಕೆಗಳು ಲೇಖನ ಪ್ರಕಟಿಸುವುದಿಲ್ಲ’ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳ ಸ್ಥಿತಿಯೂ ಹೀಗೆಯೇ ಆಗಿದೆ. ಈ ವೇಳೆ ಕಾವ್ಯ ನಾಮದ ಅಗತ್ಯ ಯಾಕೆ ಬಂತು ಎಂಬ ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಳ್ಳಬೇಕಾಗುತ್ತದೆ” ಎಂದು ಹೇಳಿದರು.
“ದಮನಿತರ ಸಾಹಿತ್ಯ ಎಂದು ಹೇಳುವಾಗ ನಾವು ಯಾರ ಸಾಹಿತ್ಯವನ್ನು ದಮನಿತರ ಸಾಹಿತ್ಯ ಎಂದು ಪರಿಗಣಿಸುವುದು ಎಂಬ ಪ್ರಶ್ನೆ ಹುಟ್ಟುತ್ತದೆ. ಕುವೆಂಪು ಅವರ ಸಾಹಿತ್ಯವನ್ನೇ? ಅಥವಾ ಮಾದರ ಚೆನ್ನಯ್ಯರ ಸಾಹಿತ್ಯವನ್ನೇ? ಇಲ್ಲಿ ಜಾತಿ ಬರದು. ಸಾಹಿತ್ಯ ಮುಖ್ಯವಾಗುತ್ತದೆ” ಎಂದರು. “ಜಾಗತಿಕ ಮಟ್ಟದಲ್ಲಿ ದಮನಿತರ ಸಾಹಿತ್ಯವಿದೆ. ಇಲ್ಲಿ ದಮನಿತರ ಸಾಹಿತ್ಯ ಮುಖ್ಯಧಾರೆಗೆ ವಿಲೀನವಾಗುವ ಪ್ರಶ್ನೆಯಿಲ್ಲ. ದಮನಿತರ ಸಾಹಿತ್ಯವೇ ಮುಖ್ಯಧಾರೆ” ಎಂದು ಕವಯತ್ರಿ, ವಿಮರ್ಶಕಿ ಎನ್ ಕೆ ಲೋಲಾಕ್ಷಿ ಅಭಿಪ್ರಾಯಿಸಿದರು.





