ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಯುತ್ತಿದೆ. ಸಾವಿರಾರು ರೈತ-ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನರೆದಿದ್ದರು. ಬೆಳಗ್ಗೆಯಿಂದ ಹೋರಾಟ ನಡೆಯುತ್ತಿದ್ದರೂ, ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ, ಪ್ರತಿಭಟನೆಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಪ್ರತಿಭಟನಾಕಾರರು ವಿಧಾನಸೌಧದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದು, ಅವರನ್ನು ಪೊಲೀಸರು ರಸ್ತೆಯಲ್ಲಿಯೇ ತಡೆದಿದ್ದಾರೆ.
ಬೆಳಗಿನಿಂದಲೂ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಹಕ್ಕೊತ್ತಾಯಗಳನ್ನು ಆಲಿಸಿ, ಚರ್ಚಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮ್ಮದ್, ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದ್ದರು. ಆದರೆ, ಸಂಜೆಯಾದರೂ, ಯಾರೊಬ್ಬ ಸಚಿವರೂ ಪ್ರತಿಭಟನಾ ಸ್ಥಳದತ್ತ ಬಂದಿಲ್ಲ. ಇದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ರಸ್ತೆಗೆ ಇಳಿದು, ಹೋರಾಟ ಮುಂದುವರೆಸಿದ್ದಾರೆ.
ಮೂರು ಗಂಟೆಗೆ ಬರುತ್ತೇನೆಂದು ಐದು ಗಂಟೆಯಾದರೂ ಧರಣಿ ಸ್ಥಳಕ್ಕೆ ಬಾರದ ಸಂಬಂಧಪಟ್ಟ ಸಚಿವರ ನಡೆಯಿಂದಾಗಿ ತಾಳ್ಮೆ ಕಳೆದುಕೊಂಡ ಕಾರ್ಮಿಕರು ಮತ್ತು ರೈತ ಮಹಿಳೆಯರು ವಿಧಾನಸೌಧ ಮುತ್ತಿಗೆ ಯತ್ನಿಸಿದರು. ರಸ್ತೆಗಿಳಿದ ಪ್ರತಿಭಟಕಾರರನ್ನು ತಡೆದ ಪೊಲೀಸರು, ಎರಡು ಹಂತದಲ್ಲಿ ತಡೆಗೋಡೆ ನಿರ್ಮಿಸಿ, ಪೊಲೀಸ್ ಬ್ಯಾರಿಕೇಡ್ ಹಾಕಿ, ಕಬ್ಬಿಣದ ಗೇಟಿನಿಂದ ರೈತರನ್ನೂ ತಡೆದರು.




