ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಮತ್ತೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ರಾಜಧಾನಿಯ ಮಧ್ಯಭಾಗದಲ್ಲಿ ಬುಧವಾರ ರಾತ್ರಿ ಪೂರ್ತಿ ಗುಡುಗು ಸಹಿತ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಮಳೆಗಾಳಿ ತೀವ್ರಗೊಂಡಿರುವ ಪರಿಣಾಮವಾಗಿ ಎಲ್ಲಡೆ ಮಳೆ ಸುರಿಯುತ್ತಿದೆ. ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆಯಿಂದ ಬಿಸಿಲು ಹಾಗೂ ಸೆಕೆ ವಾತಾವರಣ ಕಂಡು ಬಂತು. ಮಧ್ಯಾಹ್ನ ನಗರದ ವಿವಿಧ ಭಾಗದಲ್ಲಿ ಮಳೆ ಸುರಿಯಿತು.ರಾತ್ರಿ 9.30ರ ಸುಮಾರಿಗೆ ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್, ಸದಾಶಿವನಗರ, ವಿಧಾನಸೌಧ, ಶಾಂತಿನಗರ, ಚಾಮರಾಜಪೇಟೆ ಸೇರಿದಂತೆ ಮೊದಲಾದ ಕಡೆ ಧಾರಾಕಾರ ಮಳೆ ಸುರಿಯಿತು. ಮಳೆಯಿಂದ ಅವಾಂತರವ ಸೃಷ್ಟಿಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದು ಅಲ್ಲಲ್ಲಿ ಕಂಡು ಬಂತು.
ಬೆಂಗಳೂರಿನಲ್ಲಿ ಕೆಲವೆಡೆ ಮರಗಳು ಧರೆಗುರುಳಿವೆ. ಸಿಬಿ ರಸ್ತೆ, ಹೊರಮಾವು, ಕಸ್ತೂರಿನಗರ ಮತ್ತು ವಿಂಡ್ಸರ್ ಮ್ಯಾನರ್ ಸುತ್ತಮುತ್ತ ಸಂಚಾರ ನಿಧಾನವಾಗಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿ, ಯಾವ ಮಾರ್ಗಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ ಮತ್ತು ವಾಹನ ಸಂಚಾರದ ಬಗ್ಗೆ ತಿಳಿಸಿದ್ದಾರೆ. ಸಿಬಿ ರಸ್ತೆ ಬಳಿ ನೀರು ನಿಂತಿರುವುದರಿಂದ ಎಎಸ್‌ಸಿ ಸೆಂಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
ಹೊರಮಾವು ಬಳಿ ನೀರು ನಿಂತಿರುವುದರಿಂದ ರಾಮಮೂರ್ತಿನಗರದ ಕಡೆಗೆ, ಇನ್ನು ಕಸ್ತೂರಿನಗರದ ಬಳಿ ನೀರು ನಿಂತಿರುವುದರಿಂದ ಹೆಬ್ಬಾಳ ಕಡೆಗೆ ಮತ್ತು ವಿಂಡ್ಸರ್ ಮ್ಯಾನರ್ ಬಳಿ ಕೂಡ ನೀರು ನಿಂತಿರುವುದರಿಂದ ಪಿಜಿ ಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ತಿಳಿಸಿದ್ದಾರೆ.
ಚಂದ್ರಿಕಾ ಹೊಟೇಲ್‌ನಿಂದ ಎಲ್‌ಆರ್‌ಡಿಇ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ, ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಿಂದ ಶಿವಶಂಕರ್ ವೃತ್ತದ ಕಡೆಗೆ ಮತ್ತು ಶಿವಶಂಕರ್ ವೃತ್ತದಿಂದ ಚಾಮರಾಜಪೇಟೆ 5ನೇ ಮುಖ್ಯ ರಸ್ತೆ ಕಡೆಗೆ ಹೋಗುವ ರಸ್ತೆಯಲ್ಲಿ ಮತ್ತು ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ಮರ ಬಿದ್ದಿರುವುದರಿಂದ ಸುಮನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ.
“ಸಂಚಾರಸಲಹೆ“
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 11, 2025
ಸಿಬಿ ರಸ್ತೆ ಬಳಿ ನೀರು ನಿಂತಿರುವುದರಿಂದ ಎಎಸ್‌ಸಿ ಸೆಂಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
"Traffic advisory"
Due to waterlogging the road from CB Road towards ASC Centre. is having slow-moving traffic. pic.twitter.com/iBg4mTYDMZ





