ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನವಶ್ಯಕವಾಗಿ ಅನುತ್ತೀರ್ಣರಾಗುತ್ತಿದ್ದಾರೆ. ಕನ್ನಡ ನಾಡಿನ ಮಕ್ಕಳು ಅನವಶ್ಯಕವಾಗಿ ಹಿಂದಿ ಕಲಿಯುತ್ತಿರುವುದು, ಇದರಿಂದ ನಯಾಪೈಸೆ ಪ್ರಯೋಜನ ಇಲ್ಲ. ತಾಯ್ನುಡಿಯಾಗಿ ಕನ್ನಡ, ಸಂಪರ್ಕ ನುಡಿಯಾಗಿ ಇಂಗ್ಲಿಷ್ – ಎರಡು ನುಡಿ ಪದ್ಧತಿಯನ್ನು ಶಾಲಾ ಹಂತದಲ್ಲಿ ಜಾರಿಗೊಳಿಸಬೇಕು. ಆದ ಕಾರಣ ಕನ್ನಡಪರ ಸಂಘಟನೆಗಳು ಒಂದುಗೂಡಿ ಹಿಂದಿ ವಿರೋಧಿ ಕರ್ನಾಟಕ ವೇದಿಕೆಯ ಮುಖಾಂತರ ಸರ್ಕಾರದ ಮೇಲೆ ಈ ವಿಷಯ ಕುರಿತು ಒತ್ತಡ ತರಲು ಎಸ್‌ಎಸ್‌ಎಲ್‌ಸಿ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.
ಕಳೆದ ಎರಡು ತಿಂಗಳಿಗಳಿಂದಲೂ ಪಾಸ್ ವಿಥೌಟ್ ಹಿಂದಿ ಮತ್ತು ಶಾಲಾ ಶಿಕ್ಷಣದಲ್ಲಿ ಹಿಂದಿ ಕೈಬಿಡುವಂತೆ ವ್ಯವಸ್ಥಿತವಾಗಿ ಕನ್ನಡಪರ ಸಂಘಟನೆಗಳಿಂದ ಹೋರಾಟ ನಡೆಯುತ್ತಿದೆ, ರಾಜ್ಯ ಸರ್ಕಾರ ಈ ವಿಷಯದ ಕಡೆ ಗಮನ ಹರಿಸುತ್ತಿಲ್ಲ, ಆದಕಾರಣ ಎಸ್ ಎಸ್ ಎಲ್ ಸಿ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಮುತ್ತಿಗೆ ಹಾಕಲಾಯಿತು. ಹಾಗಾಗಿ ಇಲಾಖೆಯ ನಿರ್ದೇಶಕರಾದ ಮಹೇಶ್ ರವರು ಸ್ಪಂದಿಸಲೇಬೇಕಾದ ಸಂದರ್ಭ ಉಂಟಾಗಿ ಮಹೇಶ್ ರವರಿಗೆ ಹಿಂದಿ ವಿರೋಧಿ ಕರ್ನಾಟಕ ವೇದಿಕೆ ಕಡೆಯಿಂದ ಸರ್ಕಾರಕ್ಕೆ 5 ಬೇಡಿಕೆಗಳಿರುವ ಮನವಿ ಪತ್ರವನ್ನು ಸಲ್ಲಿಸಲಾಯಿತು.
2026-27ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎರಡು ನುಡಿ ಕಲಿಕಾ ಪದ್ಧತಿಯನ್ನು ಜಾರಿಗೊಳಿಸಬೇಕು. ಥೋರಟ್ ಆಯೋಗದ ವರದಿಯನ್ನು ಶಾಸನಸಭೆಯಲ್ಲಿ ಹಾಗೂ ಸಾರ್ವಜನಿಕ ಚರ್ಚೆಗೆ ಒದಗಿಸಬೇಕು. ದ್ವಿಭಾಷಾ ನೀತಿ ಜಾರಿಯಾಗುವವರೆಗೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯಗೊಳಿಸದಂತೆ ಸರ್ಕಾರವು ಆದೇಶ ಹೊರಡಿಸಬೇಕು. ಈ ಹಿಂದಿನ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳಲ್ಲಿ ಹಿಂದಿ ಭಾಷೆಯಲ್ಲಿ ನಪಾಸಾದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣರೆಂದು ಘೋಷಿಸಿ ಅವರ ಶೈಕ್ಷಣಿಕ ಮುನ್ನಡೆಗೆ ಅವಕಾಶ ನೀಡಬೇಕು. ಹಿಂದಿ ಭಾಷಾ ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಬೇಕು ಮತ್ತು ಈಗಾಗಲೆ ನೇಮಕಗೊಂಡಿರುವ ಶಿಕ್ಷಕರನ್ನು ಕನ್ನಡ ಭಾಷಾ ಶಿಕ್ಷಕರಾಗಿ ನಿಯೋಜಿಸಲು ಕ್ರಮವಹಿಸಿ ಅದಕ್ಕೆ ಸೂಕ್ತ ಶೈಕ್ಷಣಿಕ ಅರ್ಹತೆ ಪಡೆಯಲು ನಿಯಮಗಳನ್ನು ರೂಪಿಸಬೇಕು. ಕರ್ನಾಟಕ ರಾಜ್ಯದ ಯಾವುದೇ ಹಂತದ ಶಿಕ್ಷಣ ಪಠ್ಯಕ್ರಮದೊಳಗೆ ‘ಹಿಂದಿ ಭಾಷೆಯು ರಾಷ್ಟ್ರ ಭಾಷೆ ‘ ಎಂಬ ಬಿಂಬಿಸುವ ಕಲ್ಪಿತ ವಿಷಯವನ್ನು ತೆಗೆದು ಹಾಕಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಸ್ ವಿತೌಟ್ ಹಿಂದಿʼ ಎಂಬ ನಿಯಮವನ್ನು ಕರ್ನಾಟಕ ಸರ್ಕಾರವು ಈ ತಕ್ಷಣ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಮಾ. 30 ರಂದು ಹಿಂದಿ ಭಾಷಾ ಪರೀಕ್ಷೆ ನಡೆಯುವ ದಿನದಂದು ಎಲ್ಲ ಕನ್ನಡಪರ-ದಲಿತ-ರೈತ-ಜನಪರ ಸಂಘಟನೆಗಳು ಸೇರಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ
ಜಾಣಗೆರೆ ವೆಂಕಟರಾಮಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಸಾರಾ ಗೋವಿಂದು, ಕರವೇ ಶಿವರಾಮೇಗೌಡ, ದ್ರಾವಿಡ ಕನ್ನಡಿಗರು ಅಭಿ ಒಕ್ಕಲಿಗ, ಶೇ ಬೋ ರಾಧಾಕೃಷ್ಣ, ಪಾರ್ವತೀಶ್ ಬಿಳಿದಾಳೆ, ಕದಂಬ ಪಡೆ ಚೇತನ್, ಯುವ ಕನ್ನಡಿಗರ ವೇದಿಕೆ ರಾಮ್ ಪ್ರಸಾದ್, ವಿಜಯ್ ಕುಮಾರ್, ಶಿವಕುಮಾರ್ , ಪದ್ಮ, ಮಂಜುಳ ಇತರರು ಮುಂತಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.





