ಕನ್ನಡದ ನೆಲ, ಜಲ, ರಾಜ್ಯಭಾಷೆ ಕನ್ನಡದ ಗೌರವಕ್ಕಾಗಿ ನಡೆದ ದೀರ್ಘ ಚಳವಳಿಗಳ ಸಂಕೇತವಾಗಿ, ಕನ್ನಡಪರ ಎಲ್ಲಾ ಸಂಘಟನೆಗಳು, ಚಳವಳಿಗಾರರು, ಸಾಹಿತ್ಯ-ಸಾಂಸ್ಕೃತಿಕ ವೇದಿಕೆಗಳು ಹಾಗೂ ಯುವ ಹೋರಾಟಗಾರರು ಇತಿಹಾಸದಲ್ಲೇ ಮೊದಲ ಬಾರಿಗೆ ಒಂದಾಗಿ ಜನರಾಜ್ಯೋತ್ಸವ ಆಚರಿಸಲು ಮುಂದಾಗಿದ್ದಾರೆ.
ಇದೇ ಡಿಸೆಂಬರ್ 28 ರಂದು ನಡೆಯುವ, ಈ ಐತಿಹಾಸಿಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ‘ಸಿದ್ದರಾಮಯ್ಯ’ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಗ್ರ್ಯಾಂಡ್ ನಲ್ಲಿ ನಡೆಯುವ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ವಿಶೇಷವೆನೆಂದರೆ ಕನ್ನಡಕ್ಕಾಗಿ ಶ್ರಮಿಸಿದ ಎಲ್ಲಾ ಸಂಘಟನೆಗಳು, ನಾಯಕರು ವೇದಿಕೆಯಲ್ಲಿ ಹೊಂದಾಗಲಿದ್ದಾರೆ.
ಕರ್ನಾಟಕ ಹೆಸರಿನ ನಾಮಕರಣವಾಗಿ 51ನೇ ವರ್ಷದ ಹೊಸ್ತಿಲಲ್ಲಿರುವ ಕನ್ನಡಿಗರ ಘನತೆಯ ಬದುಕಿನ ಹಿಂದೆ ಕನ್ನಡ ಸಂಘಟನೆಗಳ ತ್ಯಾಗ, ಹೋರಾಟದ ಪಥವಿದೆ. ಈ 50 ವರ್ಷಗಳಲ್ಲಿ ಕನ್ನಡ ಸಂಘಟನೆಗಳು ಸಾಧಿಸಿದ್ದೇನು? ವಿಫಲತೆಗಳೇನು ಎಂಬ ಅವಲೋಕನ ನಡೆಯಬೇಕಿದೆ. ಕನ್ನಡ ಸಂಘಟನೆಗಳನ್ನು ಎಲ್ಲಾ ಸರ್ಕಾರಗಳು ಹೇಗೆ ನಡೆಸಿಕೊಂಡಿದೆ? ಕನ್ನಡಿಗರ ಉದ್ಯೋಗ, ಮೀಸಲಾತಿ, ದ್ವಿಭಾಷಾ ನೀತಿ, ಹಿಂದಿ ಹೇರಿಕೆ ಬಗ್ಗೆ ಚರ್ಚೆ ನಡೆಯಿತು. ಒಂದು ಕಾಲದಲ್ಲಿ ವಿಧಾನಸಭೆಯಲ್ಲಿದ್ದ ಕನ್ನಡ ಹೋರಾಟಗಾರರ ಪ್ರಾತಿನಿಧ್ಯ ಈಗ ಯಾಕೆ ಇಲ್ಲವಾಗಿದೆ? ಕನ್ನಡಿಗರ ಉದ್ಯೋಗ, ಮೀಸಲಾತಿ, ದ್ವಿಭಾಷಾ ನೀತಿ, ಹಿಂದಿ ಹೇರಿಕೆಯ ಬಗ್ಗೆ ಕನ್ನಡ ಚಳವಳಿಗಾರರೆಲ್ಲರೂ ಒಂದೆಡೆ ಕುಳಿತು ಮುಕ್ತವಾಗಿ ಚರ್ಚಿಸಲಿದ್ದಾರೆ.
ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂದಿನ ಶಾಸಕರಾಗಿದ್ದ, ಕನ್ನಡದ ಹಿರಿಯ ಹೋರಾಟಗಾರ ‘ವಾಟಾಳ್ ನಾಗರಾಜ್’ ಅವರನ್ನು ಕೋಟ್ಯಂತರ ಕನ್ನಡಿಗರ ಪರವಾಗಿ ಸನ್ಮಾನಿಸಲಾಗುವುದು ಎಂದು ನಿರ್ಣಯಿಸಲಾಗಿದೆ. ಈ ‘ಜನರಾಜ್ಯೋತ್ಸವ’ದ ಮೂಲಕ ಸರ್ಕಾರಕ್ಕೊಂದು ಸ್ಪಷ್ಟ ಸಂದೇಶ ನೀಡಲಾಗುವುದು ಎಂದು ಈಗಾಗಲೇ ಜನರಾಜ್ಯೋತ್ಸವಕ್ಕಾಗಿ ರಚಿಸಿದ” ಕನ್ನಡ ಚಳವಳಿಗಾರರ ಸಮಿತಿ” ಸ್ಪಷ್ಟಪಡಿಸಿದೆ.
ಕನ್ನಡವೆಂದರೆ ಕೇವಲ ಭಾಷೆಯಲ್ಲ. ಅದೊಂದು ಬದುಕು. ಕನ್ನಡವೆಂದರೆ ಎಂದರೆ ರೈತರು, ಕಾರ್ಮಿಕರು, ಉದ್ಯಮಿಗಳು, ನೌಕರರು, ಸಾಹಿತಿಗಳು, ಚಿಂತಕರು, ನೆಲ, ಜಲ ಎಲ್ಲವೂ ಆಗಿದೆ. 50 ವರ್ಷದ ಹಿಂದೆ ದೇವರಾಜ್ ಅರಸು ನೇತೃತ್ವದ ಸರ್ಕಾರ ಕರ್ನಾಟಕ ನಾಮಕರಣಕ್ಕೆ ಒಪ್ಪದೇ ಇದ್ದಾಗ ವಾಟಾಳರು ‘ಕರ್ನಾಟಕ ಖಾಸಗಿ ವಿದೇಯಕ ಬೆಂಬಲಿಸಲು ಸದನವನ್ನು ಕೋರಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಸದನದಲ್ಲಿ ಸುದೀರ್ಘ ಹೋರಾಟ ನಡೆಸಿ ಮುಖ್ಯಮಂತ್ರಿಯಿಂದಲೇ ಕರ್ನಾಟಕ ನಾಮಕರಣ ವಿಧೇಯಕವನ್ನು ಮಂಡಿಸುವಲ್ಲಿ ಯಶಸ್ವಿಯಾಗುತ್ತಾರೆ. 50 ವರ್ಷದ ಬಳಿಕ ಕನ್ನಡಿಗರ ಈ ಹೋರಾಟವನ್ನು ನೆನಪಿಸುವ ಕಾರ್ಯಕ್ರಮವಾಗಿ ಜನರಾಜ್ಯೋತ್ಸವ ನಡೆಯಲಿದೆ ಎಂದು ಸಮಿತಿ ಹೇಳಿದೆ.
ಹಾಗಾಗಿಯೇ ವಾಟಾಳರು ಐದು ಬಾರಿ ಶಾಸಕರಾಗಿ ಕನ್ನಡದ ಜನಸಮುದಾಯವನ್ನು ಪ್ರತಿನಿಧಿಸಿದ್ದಾರೆ. ವಾಟಾಳರಿಗೆ ಸನ್ಮಾನಿಸುವ ಸಂದರ್ಭದಲ್ಲಿ, ವಾಟಾಳರು ವಿಧಾನಸಭೆಯಲ್ಲಿ ಭಾಷಣ ಮಾಡಿ ಕನ್ನಡಕ್ಕಾಗಿ ಸಭಾತ್ಯಾಗ ಮಾಡಿದ ಪ್ರಸಂಗಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಎರಡು ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಆ ಬಳಿಕ ಸಂಜೆ ಕನ್ನಡದ ಖ್ಯಾತ ಜನಪದ ಗಾಯಕರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ, ಸಿನಿಮಾ ರಂಗದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಬರಲಿದ್ದಾರೆ.
ಸಂಘಟನೆಗಳ ಹೆಸರು ಬೇರೆ ಬೇರೆ ಇದ್ದಾಗ್ಯೂ, ಎಲ್ಲಾ ಕನ್ನಡ ಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವ ಪ್ರತಿಜ್ಞೆಯನ್ನು ಚಳವಳಿಗಾರರು ಕೈಗೊಂಡಿದ್ದಾರೆ. ಭಿನ್ನಾಭಿಪ್ರಾಯಗಳನ್ನೂ, ಸಂಘಟನಾ ಇತಿಮಿತಿಗಳನ್ನು ಮೀರಿ – ಕನ್ನಡದ ಹಿತ, ಕನ್ನಡಿಗರ ಹಕ್ಕು, ನಾಡಿನ ಗೌರವಕ್ಕಾಗಿ ‘ಒಂದು ಬಳಗ’ವಾಗಿ ಕಾರ್ಯನಿರ್ವಹಿಸುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಬಾರಿ ಡಿಸೆಂಬರ್ 28 ರಂದು ಜನರಾಜ್ಯೋತ್ಸವ ಆಚರಣೆ ನಡೆಯಲಿದ್ದು ಮುಂದೆ ಪ್ರತಿ ವರ್ಷ ಒಂದು ದಿನಾಂಕ ನಿರ್ಧರಿಸಿ, ಶಾಶ್ವತ ‘ಜನರಾಜ್ಯೋತ್ಸವ’ವಾಗಿ ಆಚರಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಜ್ಯದ ಭಾಷಾ ಹಕ್ಕು, ಹೋರಾಟಗಳ ಸ್ಮರಣೆ, ಕನ್ನಡ ನೀತಿಯ ವಿಮರ್ಶೆ–ವಿಶ್ಲೇಷಣೆ–ನಿರ್ಣಯಗಳ ದಿನವಾಗಿ ಘೋಷಿಸಲಾಗುತ್ತದೆ ಎಂದು ಸಮಿತಿ ಹೇಳಿದೆ.
ಯಾವುದೇ ಸಂಘಟನೆಗಳು, ನಾನು ಎಂಬ ಮೇಲರಿಮೆ ಇಲ್ಲದೆ, ಮತ್ತೊಂದು ಸಂಘಟನೆಯನ್ನು ಕೀಳಂದಾಜಿಸದೇ ಎಲ್ಲರೂ ‘ಕನ್ನಡದ ಕಟ್ಟಾಳುಗಳು’ ಎಂಬ ಒಂದೇ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಮತ್ತು ಕನ್ನಡದ ವಿಷಯಗಳಲ್ಲಿ ಒಂದಾಗಲು ಚಳವಳಿಗಾರರು ಈ ಹಿಂದೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಪ್ರತಿಜ್ಞೆ ಮಾಡಲಾಗಿದೆ.





