ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಮತ್ತು ಸಿಬ್ಬಂದಿಗಳು ‘ಬೆಂಗಳೂರು ಚಲೋ’ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜನವರಿ 29ರಿಂದ ಪ್ರತಿಭಟನೆ ನಡೆಯಲಿದ್ದು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಈ ನಡುವೆ ಗುರುವಾರ ಗೈರಾದರೆ ‘ನೋ ವರ್ಕ್ ನೋ ಪೇ’ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.
ವೇತನ ಮತ್ತು ವೇತನ ಪರಿಷ್ಕರಣೆಗೆ ಸಂಬಂಧಿಸಿದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ. 2022ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ ಒಟ್ಟು 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯು ಜನವರಿ 29ರ ಗುರುವಾರ ಬೆಂಗಳೂರು ಚಲೋಗೆ ಕರೆ ನೀಡಿದೆ.
ಇದನ್ನು ಓದಿದ್ದೀರಾ? ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಬೆಂಗಳೂರು ಚಲೋ ಹೊರಟ ಗುಬ್ಬಿ ತಾಲ್ಲೂಕು ಶಿಕ್ಷಕರು
ಆದರೆ 29ರಂದು ಅನಿವಾರ್ಯ ಬಿಟ್ಟು ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು. ಕೆಲಸಕ್ಕೆ ಹಾಜರಾಗದ ನೌಕರರಿಗೆ ‘ನೋ ವರ್ಕ್ ನೋ ಪೇ’ ಜಾರಿ ಮಾಡಬೇಕು. ಅಂದರೆ ಆ ದಿನದ ವೇತನ ನೀಡಬಾರದು ಎಂದು ಅಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷ ಸೂಚಿಸಿದ್ದಾರೆ.
ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಅನಿವಾರ್ಯವಾದರೆ ನೌಕರರ ವಾರದ ರಜೆಯನ್ನೂ ರದ್ದುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅಕ್ರಂ ಪಾಷ ತಿಳಿಸಿದ್ದಾರೆ.





