ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಕುರಿತು ತನಿಖೆ ಎದುರಿಸಿದ್ದ ವಕೀಲೆ ಎಸ್.ಜೀವಾ (35) ಆತ್ಮಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿಗೆ ವಹಿಸಲಾಗಿದೆ. ಜೀವಾ ಆತ್ಮಹತ್ಯೆಯ ಕುರಿತು ಅವರ ಸಹೋದರಿ ಸಂಗೀತಾ ನೀಡಿದ್ದ ದೂರಿನನ್ವಯ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿಗೆ ವಹಿಸಿ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಜೀವಾಳ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ಅವರನ್ನು ವಿಚಾರಣೆಗೊಳಪಡಿಸಿದ್ದರು. ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದ, ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಮೆಟೀರಿಯಲ್ಸ್ ಪೂರೈಸುತ್ತಿದ್ದ ಜೀವಾ ನವೆಂಬರ್ 22ರಂದು ಬನಶಂಕರಿ ಠಾಣೆ ವ್ಯಾಪ್ತಿಯ ರಾಘವೇಂದ್ರ ಲೇಔಟಿನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಜೀವಾಗೆ ಸಿಐಡಿಯ ಡಿವೈಎಸ್‌ಪಿ ಕನಕಲಕ್ಷ್ಮಿ ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗೂ 25 ಲಕ್ಷ ರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಮೃತಳ ಸಹೋದರಿ ಸಂಗೀತಾ ಆರೋಪಿಸಿದ್ದರು. ಡೆತ್ ನೋಟ್ ಮತ್ತು ಮೃತಳ ಸಹೋದರಿ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಬನಶಂಕರಿ ಠಾಣೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿದ್ದರು.





