ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಡಿಸೆಂಬರ್ 31ರ ರಾತ್ರಿ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ಸೇವೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಮಧ್ಯರಾತ್ರಿ ಹೊಸ ವರ್ಷ ಆಚರಣೆಯ ನಂತರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಈ ಬದಲಾವಣೆಯನ್ನು ಮಾಡಲಾಗಿದೆ.
ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟಕ್ಕೆ ಹೋಗುವ ಕೊನೆಯ ರೈಲು ಬೆಳಗಿನ ಜಾವ 1.45ಕ್ಕೆ ಕೊನೆಯದಾಗಿ ಸಂಚಾರ ಮಾಡಲಿದೆ. ಆದರೆ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಹೋಗುವ ಕೊನೆಯ ರೈಲು ಬೆಳಗಿನ ಜಾವ 2.00ಕ್ಕೆ ಕೊನೆ ಸಂಚಾರ ಮಾಡಲಿದೆ.
ಇದನ್ನು ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇಂದು ಚಾಲನೆ
ಹಸಿರು ಮಾರ್ಗದಲ್ಲಿ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಮಾದಾವರಕ್ಕೆ ಹೋಗುವ ಕೊನೆಯ ರೈಲುಗಳು ಬೆಳಗಿನ ಜಾವ 2.00ಕ್ಕೆ ಕೊನೆಯದಾಗಿ ಸಂಚರಿಸುತ್ತದೆ.
ಇನ್ನು ಹಳದಿ ಮಾರ್ಗದಲ್ಲಿ ಆರ್.ವಿ.ಯಿಂದ ಕೊನೆಯ ರೈಲು ಬೊಮ್ಮಸಂದ್ರಕ್ಕೆ ಬೆಳಗಿನ ಜಾವ 3.10ಕ್ಕೆ ಹೊರಡಲಿದ್ದು, ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಹೋಗುವ ಅಂತಿಮ ಸೇವೆ ಬೆಳಗಿನ ಜಾವ 1.30ಕ್ಕೆ ಇರಲಿದೆ.
ಹೆಚ್ಚುವರಿಯಾಗಿ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ನೇರಳೆ ಮಾರ್ಗ ವೈಟ್ ಫೀಲ್ಡ್ ಮತ್ತು ಚಲ್ಲಘಟ್ಟ, ಹಸಿರು ಮಾರ್ಗ ಮಾದವರ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ಕಡೆಗೆ ಹೋಗುವ ಕೊನೆಯ ಮೆಟ್ರೋ ಸೇವೆಗಳು ಬೆಳಗಿನ ಜಾವ 2.45ಕ್ಕೆ ಹೊರಡಲಿವೆ.
ರಾತ್ರಿ 11:30ರ ನಂತರ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ರೈಲುಗಳು 8 ನಿಮಿಷಗಳ ಅಂತರದಲ್ಲಿ ಮತ್ತು ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣವನ್ನು ಮಾತ್ರ ಮುಚ್ಚಲಾಗುತ್ತದೆ.
ಹೊಸ ವರ್ಷದ ಆಚರಣೆಯ ಕಾರಣ ಪಬ್‌ಗಳು ಇರುವ, ಅಧಿಕ ಕಾರ್ಯಕ್ರಮಗಳು ನಡೆಯುವ ಎಂಜಿ ರಸ್ತೆಯಲ್ಲಿ ಜನಸಂದಣಿ ಅಧಿಕವಾಗಿರುವ ಕಾರಣ ಡಿಸೆಂಬರ್ 31ರಂದು ರಾತ್ರಿ 10.00 ಗಂಟೆಯಿಂದ ಎಂಜಿ ರಸ್ತೆ ನಿಲ್ದಾಣದಲ್ಲಿ ಪ್ರವೇಶ ಮತ್ತು ನಿರ್ಗಮನವಿರುವುದಿಲ್ಲ. ಆದರೆ ಪಕ್ಕದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಮೆಟ್ರೋ ತೆರೆದಿರುತ್ತದೆ.
ಇದಲ್ಲದೆ, ಟಿಕೆಟ್ ಕೌಂಟರ್‌ಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು, ಡಿಸೆಂಬರ್ 31ರಂದು ರಾತ್ರಿ 11.00 ಗಂಟೆಯ ನಂತರ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ. ಈ ನಿಲ್ದಾಣಗಳಿಂದ ರಾತ್ರಿ 11.00 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು QR ಟಿಕೆಟ್‌ಗಳನ್ನು ಮಾಡಿಕೊಳ್ಳಬೇಕು ಅಥವಾ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಬೇಕು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.





