ನಮ್ಮ ಮೆಟ್ರೋ ಟಿಕೆಟ್ ದರವು ಫೆಬ್ರವರಿಯಲ್ಲಿ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಟಿಕೆಟ್ ದರವು ಹೆಚ್ಚಾಗಿದ್ದು, ಈಗ ಮತ್ತೆ BMRCL ನಮ್ಮ ಮೆಟ್ರೋ ಟಿಕೆಟ್ ಬೆಲೆಗಳಲ್ಲಿ ಹೊಸ ಪರಿಷ್ಕರಣೆಗೆ ಮುಂದಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಜಾರಿ ಮಾಡಲಾಗಿದೆ. ಇದೀಗ ಒಂದು ವರ್ಷ ಪೂರ್ಣಗೊಂಡಿರುವುದರಿಂದ ಮತ್ತೆ ಪ್ರಸ್ತಾವಿತ ದರ ಪರಿಷ್ಕರಣೆಗೆ ಮುಂದಾಗಿದೆ. ಪ್ರತಿ ವರ್ಷ ಮೆಟ್ರೋ ಟಿಕೆಟ್ ದರಗಳನ್ನು ಪರಿಷ್ಕರಿಸಬೇಕೆಂದು ಸೂಚಿಸಿದ್ದ ದರ ನಿಗದಿ ಸಮಿತಿಯ (FFC) ಶಿಫಾರಸಿನ ಆಧಾರದಲ್ಲಿ ಪರಿಷ್ಕರಣೆ ನಡೆಯಲಿದೆ.
ಇದನ್ನು ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇಂದು ಚಾಲನೆ
ಇನ್ನು ದರ ನಿಗದಿ ಸಮಿತಿ ಪ್ರಕಾರವಾಗಿ ವಾರ್ಷಿಕವಾಗಿ ಗರಿಷ್ಠ 5ರಂದು ಟಿಕೆಟ್ ದರ ಏರಿಸಬಹುದಾಗಿದೆ. ಈ ಮಾರ್ಗಸೂಚಿ ಆಧಾರದಲ್ಲಿ ಫೆಬ್ರವರಿಯ ದರ ಏರಿಸಲು BMRCL ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಈಗಾಗಲೇ ನಮ್ಮ ಮೆಟ್ರೋ ಟಿಕೆಟ್ ದರವು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದ ಆರ್ಥಿಕ ಸಂಕಷ್ಟವೂ ಅಧಿಕವಾಗಿದೆ. 2025ರಲ್ಲಿ ಬಿಎಂಆರ್‌ಸಿಎಲ್ ಶೇ. 71ರಷ್ಟು ದರ ಏರಿಕೆಯನ್ನು ಜಾರಿಗೆ ತಂದಿತ್ತು. ಇದರಿಂದಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು, ಪ್ರತಿಭಟನೆ ನಡೆದಿತ್ತು.
ಮೆಟ್ರೋ ಟಿಕೆಟ್ ದರ ಶೇಕಡ 60 ರೂಪಾಯಿಯಿಂದ 90 ರೂಪಾಯಿಗೆ ಏರಿಕೆಯಾಗಿತ್ತು. ಇದರಿಂದಾಗಿ ದಿಡೀರ್ ಆಗಿ ಪ್ರಯಾಣಿಕರ ಪ್ರಮಾಣವೂ ಕಡಿಮೆಯಾಗಿತ್ತು. ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯ ಮೇರೆಗೆ ಶೇ.30ರಷ್ಟು ಅಂದರೆ 8-9 ರೂಪಾಯಿ ಟಿಕೆಟ್ ದರ ಇಳಿಸಲಾಗಿತ್ತು. ಈಗ ಒಂದು ವರ್ಷವಾಗುತ್ತಿದ್ದಂತೆ ಮತ್ತೆ ದರ ಏರಿಕೆಗೆ ಸಿದ್ಧತೆ ನಡೆಯುತ್ತಿದೆ. ಇದರಿಂದಾಗಿ ದೈನಂದಿನ ಓಡಾಟಕ್ಕೆ ಮೆಟ್ರೋವನ್ನೇ ಅವಲಂಬಿಸಿರುವ ಪ್ರಯಾಣಿಕರಿಗೆ ಕಳವಳ ಉಂಟಾಗಿದೆ.





