ಸ್ತ್ರೀವಾದಿ, ಮಹಿಳಾ ವಿಮರ್ಶೆ ಹಿಡಿದಷ್ಟು ಚಾಟಿ ಇನ್ಯಾವುದೂ ಹಿಡಿದೇ ಇಲ್ಲ. ನಮಗೆ ಅದು ಕಾಣುತ್ತಿಲ್ಲ ಅಷ್ಟೆ. ಎಷ್ಟು ಕಟುವಾಗಿ ಗಂಡಾಳ್ವಿಕೆಯ ವಿರುದ್ಧ ಅಥವಾ ಒಂದು ತಾತ್ವಿಕ ಪರಿವೇಶವನ್ನು ಇಟ್ಟಿದೆ. ಅದನ್ನು ಚಾಟಿಯಲ್ಲ ಎಂದು ಹೇಗೆ ಹೇಳುವುದು” ಎಂದು ವಿಮರ್ಶಕ ಎಸ್ ಆರ್ ವಿಜಯಶಂಕರ್ ಪ್ರಶ್ನಿಸಿದರು.
ಶನಿವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಸೃಜನಶೀಲ(ಸಮಕಾಲೀನ) ಗೋಷ್ಠಿಯಲ್ಲಿ ‘ಚಾಟಿ ಹಿಡಿಯದ ಚಾಳಿ: ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿಹೋಗಿದೆ..?’ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, “ವಿಮರ್ಶೆ ಎಂದಿಗೂ ಪ್ರಾಬಲ್ಯ ಪಡೆಯಬೇಕಾಗಿಲ್ಲ. ಮಹಿಳಾ ವಿಮರ್ಶೆಯ ಜೊತೆ ಮರು ಓದಿನ ವಿಮರ್ಶೆಯೂ ಇದೆ. ನಾವು ಅನೇಕ ಮುಖ್ಯ ಲೇಖಕರುಗಳನ್ನು ಮರು ಓದಿಗೆ ಒಳಪಡಿಸುತ್ತಿದ್ದೇವೆ, ನಾವು ವಿಮರ್ಶಿಸುತ್ತಿದ್ದೇವೆ. ಅವಾಗ ನಮ್ಮದೇ ಆದ ಕಾಲ ಮಾನದಂಡದಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಾವು ಮಾಡುತ್ತೇವೆ” ಎಂದರು.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ
“ವಿಮರ್ಶಕರು ಎಂದರೆ ಚಾಟಿ ಏಟಿಗೆ ಓಡುವ ಎತ್ತುಗಳಲ್ಲ . ನಿಜವಾಗಿ ವಿಮರ್ಶೆ ಎಂದರೆ ನಾನು ಓದುವಾಗ ಅರ್ಥವಾಗಿದ್ದನ್ನು ನಿಮ್ಮ ಜತೆ ಹಂಚಿಕೊಳ್ಳುವುದು. ಅದು ನಿಜವಾದ ವಿಮರ್ಶೆಯ ಮೂಲ ಲಕ್ಷಣ. ಅದಾದ ಬಳಿಕ ಯಾಕೆ ಹಂಚಿಕೊಂಡೆ, ಯಾವ ತತ್ವಗಳು ಬಂತು, ಈ ಭಾಷೆ ಹೇಗೆ ಬಂತು ಮೊದಲಾದವುಗಳನ್ನು ತಿಳಿಸುವುದು” ಎಂದು ಅಭಿಪ್ರಾಯಿಸಿದರು.
ಈ ಗೋಷ್ಠಿಯಲ್ಲಿ ಮಾತನಾಡಿದ ವಿಮರ್ಶಕಿ ಎಂಎಸ್ ಆಶಾದೇವಿ, “ಕಾವ್ಯ ಬಂದೀತು ವಿಮರ್ಶೆ ಹದಗೊಳ್ಳುವುದು ಬರಿಯ ಚಿನ್ನಾಟದ ಕೆಲಸವಲ್ಲ ಅಂತ ಹೇಳಿದ ಘನವಾದ ಕನ್ನಡ ವಿಮರ್ಶೆಯ ಪರಂಪರೆಯ ಕುರಿತ ಹಾಗೆ ಈ ಬಗೆಯ ತೀರ್ಪುಗಳನ್ನು ಕೊಡುವುದು ತುಂಬಾ ಕ್ರೂರವಾದ ಅಸಾಹಿತ್ಯಕವಾದ ನಡೆ. ಚಾಟಿ ಮತ್ತು ಮತ್ತು ಚಾಳಿ ಎಂಬುದು ಎಂದಿಗೂ ವಿಮರ್ಶೆಯ ದಾರಿಯಲ್ಲ. ಚಾಟಿ ಹಿಡಿಯುವುದೂ ಅಲ್ಲ, ಅದನ್ನು ಚಾಳಿ ಮಾಡಿಕೊಳ್ಳುವುದು ಖಂಡಿತವಲ್ಲ. ವಿಮರ್ಶೆಗೆ ಯಾಕೆ ಈ ಓರೆಗಲ್ಲು ಎಂಬ ಪ್ರಶ್ನೆಯನ್ನು ನಾವಿಲ್ಲಿ ಹಾಕಬೇಕಾಗುತ್ತದೆ” ಎಂದು ಹೇಳಿದರು.
“ಪ್ರಸ್ತುತ ಒಂದು ಬಗೆಯ ತಾತ್ವಿಕ ಅರಾಜಕತೆ ಇರಬಹುದು ಅಥವಾ ಹೊಸ ತಾತ್ವಿಕತೆಯ ಹುಡುಕಾಟದಲ್ಲಿ ಇವತ್ತು ಕನ್ನಡ ವಿಮರ್ಶೆಯಿದೆ. ಎರಡನೆಯದಾಗಿ ಹೊಸ ತಾತ್ವಿಕತೆಯನ್ನು ಕನ್ನಡ ವಿಮರ್ಶೆ ಕಟ್ಟಿಕೊಳ್ಳುತ್ತಿದೆ. ಆ ತಾತ್ವಿಕತೆಗಳನ್ನು ಅದರ ಆಳದಲ್ಲಿ, ಅದರ ಗಾಂಭೀರ್ಯದಲ್ಲಿ ಗ್ರಹಿಸುತ್ತಿಲ್ಲ ಎಂದು ನನಗಿಸುತ್ತದೆ. ಸುಮಿತ್ರಾ ಬಾಯಿ ಅವರ ಸರಹದ್ದಿನ ಆಚೆಈಚೆ ಇಡೀ ಕನ್ನಡ ಸಾಹಿತ್ಯವನ್ನ ಪುನರ್ ಮೌಲ್ಯಮಾಪನ ಮಾಡಲು ನಡೆಸಿದ ಬಹಳ ದೊಡ್ಡ ಪ್ರಯತ್ನ. ಅಂತಹ ಪ್ರಯತ್ನವನ್ನು ಕಣ್ಣೆದುರು ಇಟ್ಟುಕೊಂಡು ಕನ್ನಡ ವಿಮರ್ಶೆ ಬತ್ತಿಹೋಗಿದೆ ಎಂದು ಹೇಳುವುದು” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಸಮಕಾಲೀನ ಸಂಗೀತದಲ್ಲಿ ಪ್ರಯೋಗಗಳ ಪಾತ್ರ ಹೆಚ್ಚು: ಎಂ ಡಿ ಪಲ್ಲವಿ
ಇನ್ನು ಗೋಷ್ಠಿಯಲ್ಲಿ ಮಾತನಾಡಿದ ಪತ್ರಕರ್ತ ಚ.ಹ ರಘುನಾಥ, “ವಿಮರ್ಶೆ ಇವತ್ತು ಮುನ್ನೆಲೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಈ ವಿಷಯದ ಚರ್ಚೆ ನಡೆಯುತ್ತಿದೆ ಎಂಬುದು ನನ್ನ ಭಾವನೆ. ಯಾವ ಕಾಲದಲ್ಲೂ ವಿಮರ್ಶೆ ಮುನ್ನೆಲೆಯ ಪ್ರಕಾರವಾಗಿರಲಿಲ್ಲ ಎಂಬುದನ್ನು ಒಬ್ಬ ಓದುಗನಾಗಿ ನನಗೆ ಅನಿಸುತ್ತದೆ. ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡ ಎಲ್ಲಾ ಲೇಖಕರಲ್ಲಿಯೂ ಒಬ್ಬ ವಿಮರ್ಶಕ ಇದ್ದೇ ಇರುತ್ತಾನೆ. ವಿಮರ್ಶಕ ಇಲ್ಲದಿದ್ದರೆ ಬರವಣಿಗೆಗೆ ಹೊಸ ಆಯಾಮ ಅಥವಾ ಹೊಳಪು ದಕ್ಕಲ್ಲ” ಎಂದು ಅಭಿಪ್ರಾಯಿಸಿದರು.
“ಯಾವ ಬರಹಗಾರ ತನ್ನೊಳಗಿನ ವಿಮರ್ಶಕನನ್ನು ಮಂಕಾಗಿಸುತ್ತಾನೆ ಅಥವಾ ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸುತ್ತಾನೆ ಆಗ ಆತಂಕ ಹುಟ್ಟಿಸುವ ಕೆಲವು ಲೇಖಕರು ಸೃಷ್ಟಿಯಾಗುತ್ತಾರೆ. ನಾವು ಯಾವ ಲೇಖಕರ ಬಗ್ಗೆ ಚರ್ಚೆ ಮಾಡುತ್ತಿದ್ದೇವೋ ಅವರು ಸಾವಿನ ಹಂತದಲ್ಲಿ ಬರೆದ ವಿಲ್ ಅವರ ಒಳಗಿನ ನಿಜವಾದ ಬರಹಗಾರನನ್ನು, ನಿಜವಾದ ಸಾಹಿತ್ಯವನ್ನು ನಮಗೆ ತೋರಿಸಿತು ಅಂತ ನಾನು ಭಾವಿಸುತ್ತೇನೆ. ಅವರ ಕೊನೆಯ ಕೃತಿಗಳಲ್ಲಿ ಹೆಣ್ಣಿನ ಅಸ್ಮಿತೆ, ವ್ಯಕ್ತಿತ್ವ ನಿರಾಕರಿಸುತ್ತಾರೆ. ಆದರೆ ಕೊನೆಗೆ ತಮ್ಮ ಅಂತ್ಯಸಂಸ್ಕಾರವನ್ನು ಒಬ್ಬ ಹೆಣ್ಣು ನಡೆಸಬೇಕು ಎಂದು ಬರೆಯುತ್ತಾರೆ. ಅದು ಒಬ್ಬ ಬರಹಗಾರ ತನ್ನನ್ನು ತಾನು ಮೀರುವ ಪರಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಎಸ್‌ಎಲ್ ಬೈರಪ್ಪ ಅವರ ನಿಜವಾದ ಸಾಹಿತ್ಯ ಅವರ ವಿಲ್ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಮರ್ಶಕಿ ಆಶಾ ಅವರು, “ವಿಲ್‌ನಲ್ಲಿ ಅವರ ಬರಹ ಬದಲಾಗಿರಬಹುದು, ಆದರೆ ಅವರಲ್ಲ” ಎಂದರು.
ಲೇಖಕ, ಅನುವಾದಕ ಸುಭಾಷ್ ರಾಜಮಾನೆ ಸಮನ್ವಯಗೊಳಿಸಿದ ಈ ಗೋಷ್ಠಿಯಲ್ಲಿ ವಿಮರ್ಶಕಿ ಆಶಾದೇವಿ, ಪತ್ರಕರ್ತ ಚ.ಹ ರಘುನಾಥ, ವಿಮರ್ಶಕ ಎಸ್ ಆರ್ ವಿಜಯಶಂಕರ್ ಚರ್ಚಿಸಿದರು.





