ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇಂದೆ ನಂಬಲಾಗಿರುವ ‘ನಮ್ಮ ಮೆಟ್ರೋ’ ನಗರದ ಜೀವನಾಡಿಯಾಗಿದೆ. ಪರಿಸರ ಸ್ನೇಹಿಯಾಗಿರುವ ಈ ಸಾರಿಗೆಯನ್ನ ಪ್ರತಿನಿತ್ಯ ಲಕ್ಷಾಂತರ ಜನರು ಬಳಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೆಟ್ರೋ ಪ್ಲಾಟ್ ಫಾರ್ಮ್‌ಗಳಲ್ಲಿ ನಡೆದ ಘಟನೆಗಳು ಆತಂಕವನ್ನು ಹುಟ್ಟುಹಾಕಿವೆ.
ಹೌದು, ನಗರದ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮಗಳಲ್ಲಿ ಯುವಕ-ಯುವತಿಯರು ಹಠಾತ್ತನೆ ತಲೆ ಸುತ್ತಿ, ಪ್ರಜ್ಞೆ ತಪ್ಪಿ ಬೀಳುತ್ತಿರುವುದು ಕಂಡುಬಂದಿದೆ. ಕಳೆದ ಮೂರು ತಿಂಗಳಿನಲ್ಲಿ (ಆಗಸ್ಟ್ ನಿಂದ ಅಕ್ಟೋಬರ್ ವರೆಗೆ) ಸುಮಾರು 130 ಪ್ರಯಾಣಿಕರು ತಲೆ ಸುತ್ತಿ ಬಿದ್ದ ಘಟನೆಗಳು ನಡೆದಿವೆ. ಮೆಟ್ರೋ ಭದ್ರತಾ ಸಿಬ್ಬಂದಿ ಪ್ರಯಾಣಿಕರಿಗೆ ಸಹಾಯ ಮಾಡಿದ್ದಾರೆ.
ಜನದಟ್ಟಣೆಯಿಂದ ತುಂಬಿರುವ ಈ ಬೆಳಗಿನ ರೈಲುಗಳು ಯುವ ಪ್ರಯಾಣಿಕರಿಗೆ ತೊಂದರೆದಾಯಕವಾಗಿ ಪರಿಣಮಿಸಿವೆ. ಇನ್ನು ಈ ಘಟನೆಗಳು ಕೇವಲ ಆಕಸ್ಮಿಕವಲ್ಲದೇ, ಆಧುನಿಕ ಜೀವನಶೈಲಿಯ ದುಷ್ಪರಿಣಾಮಗಳನ್ನು ಸೂಚಿಸುತ್ತದೆ.
ಬೆಂಗಳೂರಿಗರು ಕೆಲಸದ ಹಿಂದೆ ಓಡುತ್ತಿದ್ದು, ಒತ್ತಡದಲ್ಲಿ ಜೀವಿಸುತ್ತಿದ್ದಾರೆ. ಬೆಳಗಿನ ಉಪಾಹಾರ ಮಾಡುವುದನ್ನ ಬಹುತೇಕರು ಮರೆತೆ ಬಿಟ್ಟಿದ್ದಾರೆ. ಕಾಫಿ-ಟೀ ಮಾತ್ರ ಕುಡಿದು ಕಚೇರಿಗೆ ಧಾವಿಸುವ ಯುವಜನತೆಯೇ ಇದೀಗ ಹೆಚ್ಚಾಗಿದೆ. ಇನ್ನು ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆಯುತ್ತಿದ್ದಾರೆ. ಮೊಬೈಲ್ ಸ್ಕ್ರೋಲ್ ಮಾಡುತ್ತ ನಿದ್ದೆ ಕಡಿಮೆ ಮಾಡುತ್ತಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ತಲೆಸುತ್ತಿ ಬಿದ್ದವರ ಪೈಕಿ 60% ಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್‌ಗಳಲ್ಲಿ ತಲೆ ಸುತ್ತಿ ಬಿದ್ದ ಪ್ರಯಾಣಿಕರಿಗೆ ಮೆಟ್ರೋ ಸಿಬ್ಬಂದಿ ತಾತ್ಕಾಲಿಕ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಈದಿನ.ಕಾಮ್ ಜೊತೆಗೆ ಮಾತನಾಡಿದ ಮೆಟ್ರೋ ಅಧಿಕಾರಿ ಶ್ರೀನಿವಾಸ್ ರಾಜಗೋಪಾಲನ್, “ತಲೆ ಸುತ್ತಿ ಬೀಳುವ ಹೆಚ್ಚಿನ ಘಟನೆಗಳು ಮೆಟ್ರೋ ಪ್ಲಾಟ್ ಫಾರ್ಮ್‌ಗಳಲ್ಲಿ ನಡೆಯುತ್ತಿವೆ. ನಮ್ಮ ಸಿಬ್ಬಂದಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ. ಅಗತ್ಯವಿದ್ದಾಗ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಟ್ರಾಫಿಕ್ ಕಾರಣದಿಂದಾಗಿ ಆಂಬ್ಯುಲೆನ್ಸ್‌ಗಳು ಬರುವುದಕ್ಕೆ ವಿಳಂಬವಾದಾಗ, ಪ್ರಯಾಣಿಕರನ್ನು ಆರೈಕೆ ಮಾಡಲು ನಮ್ಮ ಆಟೋಗಳನ್ನೇ ನೇಮಿಸಿಕೊಂಡಿದೆ. ಎರಡು ತಿಂಗಳಲ್ಲಿ ಮಾತ್ರ, ಸುಮಾರು 30 ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದರು” ಎಂದು ತಿಳಿಸಿದ್ದಾರೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ವೈದ್ಯ ಡಾ ಸಂಜಯ್, “ಬೆಳಗಿನ ಉಪಾಹಾರ ಮಾಡದೇ ಕಾಫಿ ಮಾತ್ರ ಕುಡಿದು ಕಚೇರಿಗೆ ಓಡುವುದು, ರಾತ್ರಿ ಸರಿಯಾಗಿ ನಿದ್ದೆ ಮಾಡದೇ ರೀಲ್ಸ್ ನೋಡುತ್ತ ಕಾಲಹರಣ ಮಾಡುವುದು, ಊಟ ಮಾಡದೇ ಇರುವುದು, ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೇ ಇರುವುದು ಹಾಗೇಯೇ ದಿನಕ್ಕೆ 500 ಮಿ.ಲೀ ನೀರನ್ನ ಕುಡಿಯದೇ ಇರುವುದು ಇದಕ್ಕೆಲ್ಲ ಕಾರಣವಾಗಿದೆ. ಬೆಂಗಳೂರಿನ ಬಹುತೇಕ ಜನರು ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡುತ್ತಿಲ್ಲ. ನೀರಿ ಕುಡಿಯದಿದ್ದರೇ, ನಿರ್ಜಲೀಕರಣ ಉಂಟಾಗುತ್ತದೆ. ಆದರೂ ನೀರು ಕುಡಿಯುತ್ತಿಲ್ಲ. ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.

ವಿಶೇಷವಾಗಿ, ನೇರಳೆ ಮಾರ್ಗದ ವೈಟ್ ಫೀಲ್ಡ್‌ಗೆ ತೆರಳುವ ಯುವಕರು ಕಚೇರಿಗೆ ತೆರಳುವಾಗ ಮೂರ್ಛೆ ಹೋದ ಘಟನೆಗಳು ಹೆಚ್ಚಾಗಿ ನಡೆದಿವೆ ಎಂದು ವರದಿಯಾಗಿದೆ.
ಬೆಂಗಳೂರಿನಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಬಳಸುವ ಯುವಜನರು ಆಗಾಗ ಕುಸಿದು ಬೀಳುತ್ತಾರೆ. ತಲೆ ತಿರುಗುವಿಕೆ ಅನುಭವಿಸುತ್ತಾರೆ ಎಂದು ವೈದ್ಯರು ಹೇಳುತ್ತಾರೆ. “ಖಾಲಿ ಹೊಟ್ಟೆ, ನಿದ್ರಾಹೀನತೆ ಹಾಗೂ ತುಂಬಿದ ರೈಲುಗಳಲ್ಲಿ ನಿಲ್ಲುವ ಒತ್ತಡ ಎಲ್ಲವೂ ಸೇರಿಕೊಂಡಾಗ ಅದು ರಕ್ತದೊತ್ತಡ ಅಥವಾ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು” ಎಂದು ಮಧುಮೇಹ ತಜ್ಞ ಡಾ. ರವೀಂದ್ರ ಎಚ್.ಎಸ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ರಾತ್ರಿಯ ಸಮಯದಲ್ಲಿ ಸರಿಯಾದ ನಿದ್ರೆ ಮಾಡದೇ ಇರುವುದು, ಸರಿಯಾಗಿ ಊಟ ಮಾಡದೇ ಇರುವುದು ಹಾಗೂ ಒತ್ತಡ ಇವುಗಳು ದಿನ ಪ್ರಾರಂಭವಾಗುವ ಮೊದಲೇ ದೇಹವನ್ನು ದಣಿದಂತೆ ಮಾಡುತ್ತದೆ. ಆದರೂ ಕೂಡ ಈ ಸಮಸ್ಯೆಗಳನ್ನು ಸುಲಭವಾಗಿ ಸರಿಪಡಿಸಬಹುದು” ಎಂದು ಹೇಳಿದ್ದಾರೆ.
“ಪ್ರಯಾಣಿಕರು ಬಾಳೆಹಣ್ಣು ಅಥವಾ ಬಿಸ್ಕತ್ತುಗಳಂತಹ ಚಿಕ್ಕ ತಿಂಡಿಯನ್ನು ತಮ್ಮ ಜತೆಗೆ ತೆಗೆದುಕೊಂಡು ಹೋಗಬಹುದು. ನಿಯಮಿತ ಈ ಆಹಾರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳಲು ಮತ್ತು ತಲೆತಿರುಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತೊಂದು ವಿಚಾರವೆಂದರೆ, ನಿರ್ಜಲೀಕರಣವು ಆರ್ಥೋಸ್ಟಾಟಿಕ್ ಹೈಪೊಟೆನ್ಷನ್ ಮತ್ತು ಮೂರ್ಛೆ ಹೋಗುವುದಕ್ಕೆ ಕಾರಣವಾಗಿದೆ. ದಿನವಿಡೀ 1.5–2 ಲೀಟರ್ ನೀರನ್ನು ಕುಡಿಯಿರಿ. ನೀರನ್ನು ಕುಡಿಯುವ ಗುರಿಯನ್ನು ಹಾಕಿಕೊಳ್ಳಿರಿ. ಸಾಧ್ಯವಾದರೇ, ಯಾವಾಗಲೂ ನೀರಿನ ಬಾಟಲಿಯನ್ನ ನಿಮ್ಮ ಜತೆಗೆ ಇಟ್ಟುಕೊಳ್ಳಿ” ಎಂದು ಹೊಸ್ಮತ್ ಆಸ್ಪತ್ರೆಯ ವೈದ್ಯ ಡಾ. ಎನ್. ಖುದಾ ಬಕ್ಷ್ ಸಲಹೆ ನೀಡಿದ್ದಾರೆ.
“ಚೆನ್ನಾಗಿ ನಿದ್ದೆ ಮಾಡದೇ ಇದ್ದಾಗ ಜಾಸ್ತಿ ಹೊತ್ತು ನಿಲ್ಲಬಾರದು. ನಿಲ್ಲುವುದನ್ನ ತಪ್ಪಿಸಲು ಆಸನದಲ್ಲಿ ಕುಳಿತುಕೊಳ್ಳಬೇಕು. ಹಠಾತ್ ಚಲನೆಯನ್ನು ತಪ್ಪಿಸಬೇಕು. ಮೊಣಕಾಲುಗಳನ್ನು ಲಾಕ್ ಮಾಡಬಾರದು ಏಕೆಂದರೆ, ಅದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಮೆಜೆಸ್ಟಿಕ್, ಕೆ ಆರ್ ಪುರಂ ಅಥವಾ ಬೈಯಪ್ಪನಹಳ್ಳಿಯಂತಹ ಜನದಟ್ಟಣೆಯ ಮೆಟ್ರೋ ನಿಲ್ದಾಣಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹದಗೆಡಬಹುದು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದಟ್ಟ ಮಂಜು; 41 ವಿಮಾನ ಹಾರಾಟ ವಿಳಂಬ
“ತಲೆತಿರುಗುವಿಕೆ, ಮಂದ ದೃಷ್ಟಿ, ವಾಕರಿಕೆ, ಬೆವರು ಸುರಿಯುವುದು ಅಥವಾ ಕಿವಿಗಳಲ್ಲಿ ರಿಂಗಣಿಸುವಿಕೆಯ ಮೊದಲ ಸುಳಿವಿನಲ್ಲಿ ಅಗತ್ಯವಿದ್ದರೆ ಅವರು ನೆಲದ ಮೇಲೆ ಕುಳಿತುಕೊಳ್ಳಬೇಕು. ನೀರನ್ನು ಕುಡಿಯಬೇಕು” ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಮೆಟ್ರೋ ಬಳಕೆದಾರರಿಗೆ ತ್ವರಿತ ಆರೋಗ್ಯ ಸಲಹೆಗಳು
- ಬೆಳಗಿನ ಉಪಹಾರವನ್ನು ಸೇವಿಸಿ
- ಉಪಹಾರ ತಪ್ಪಿಸಿದ್ದರೇ, ಕನಿಷ್ಠ ತಿಂಡಿಯನ್ನು ಒಯ್ಯಿರಿ — ಬಾಳೆಹಣ್ಣು, ಡ್ರೈ ಪ್ರೂಟ್ಸ್, ಚಿಕ್ಕಿ ಅಥವಾ ಪ್ರೋಟೀನ್ ಬಾರ್
- ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ, ನೀರನ್ನು ಕುಡಿಯಿರಿ.
- ಮೆಟ್ರೋ ಬಾಗಿಲುಗಳ ಬಳಿ ನಿಂತುಕೊಳ್ಳಬೇಡಿ, ಸೀಟ್ ಸಿಗದಾಗ ಆಸರೆಗಾಗಿ ಕಂಬಗಳ ಬಳಿ ನಿಂತುಕೊಳ್ಳಿ
- ಗಾಳಿಯಾಡುವ ಬಟ್ಟೆಗಳನ್ನು ಧರಿಸಿ
- ಕಾಲಿನ ಸ್ನಾಯುಗಳನ್ನು ಸಕ್ರಿಯವಾಗಿಡಿ; ದೀರ್ಘಕಾಲ ನಿಲ್ಲುವುದನ್ನು ತಪ್ಪಿಸಿ




