ನಾಡಿನ ಮೂಲೆಮೂಲೆಗಳಿಂದ ಸೇರಿದ ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿ, ಕರ್ನಾಟಕ ಸರ್ಕಾರಕ್ಕೆ ಮದ್ಯ ನಿಷೇಧ ಘೋಷಣೆಗೆ ಒತ್ತಾಯಿಸಿದರು.
ಕಳೆದ ದಶಕಕ್ಕಿಂತ ಹೆಚ್ಚು ಕಾಲದಿಂದ ನಡೆಯುತ್ತಿರುವ ‘ಮದ್ಯ ನಿಷೇಧ ಆಂದೋಲನ’ದ ಭಾಗವಾಗಿ ಈ ಸಮಾವೇಶ ನಡೆದಿದ್ದು, ಮಹಿಳೆಯರು ತಮ್ಮ ಹಕ್ಕೊತ್ತಾಯ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಆಂದೋಲನದ ನಿರಂತರ ಹೋರಾಟಕ್ಕೆ ಸರ್ಕಾರ ಈಗಲಾದರೂ ಓಗೊಡಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.
ಮದ್ಯ ನಿಷೇಧ ಆಂದೋಲನವು ಕಳೆದ ಹತ್ತು ವರ್ಷಗಳಿಂದ ಜನರ ಬೆಂಬಲದೊಂದಿಗೆ ಮದ್ಯ ನಿಯಂತ್ರಣಕ್ಕಾಗಿ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಕಾನೂನುಬದ್ಧ ಹಾಗೂ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಲೇ ಬಂದಿದ್ದು, ಸರ್ಕಾರ ಅಬಕಾರಿ ಆದಾಯದತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಆಂದೋಲನಕಾರರು ಆರೋಪಿಸಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಚಿಕ್ಕ ಮಕ್ಕಳು ಕುಡಿಯುವ ಚಟಕ್ಕೆ ಬಲಿಯಾಗುತ್ತಿದ್ದರೆ, ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಹಲವು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇದು ಮುಂದುವರಿದರೆ, ಪಂಜಾಬ್ ರಾಜ್ಯದಂತೆ ಕರ್ನಾಟಕದಲ್ಲಿ ಯುವಕರು ಮದ್ಯ ಸೇವನೆಯಿಂದ ಮಾದಕ ವ್ಯಸನದತ್ತ ಸಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಹಿಂದಿನ ಹೋರಾಟಗಳಲ್ಲಿ NIMHANS, NCRB, NFHS ಮತ್ತು IAM ಬೆಂಗಳೂರು ಮುಂತಾದ ಸರ್ಕಾರಿ ಸಂಸ್ಥೆಗಳ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಆಂದೋಲನದ ಪ್ರತಿನಿಧಿಗಳು ತಿಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕದ ಹಲವು ಗ್ರಾಮಗಳಿಂದ ಮಹಿಳೆಯರು ಅಕ್ರಮ ಮದ್ಯ ಮಾರಾಟದ ದೂರುಗಳನ್ನು ಅಬಕಾರಿ ಇಲಾಖೆ, ಗ್ರಾಮ ಪಂಚಾಯತಿಗಳು, ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಆದರೆ, ಈ ದೂರುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ
ಸರ್ಕಾರಕ್ಕೆ ಸಲ್ಲಿಸಿದ ಹಕ್ಕೊತ್ತಾಯ ಪತ್ರದಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೊದಲನೆಯದು: ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದಂತೆ ಗ್ರಾಮ ಸಭೆಗಳಿಗೆ ಮದ್ಯ ಮಾರಾಟ ಪರವಾನಗಿ ನೀಡುವಲ್ಲಿ ಪರಮಾಧಿಕಾರ ನೀಡಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯ ಅಂಗಡಿ ತೆರೆಯಲು ಗ್ರಾಮ ಸಭೆಯಲ್ಲಿ ಕನಿಷ್ಠ ಶೇಕಡಾ 20ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನಲ್ಲಿ 2016ರವರೆಗೆ ಇದೇ ರೀತಿಯ ಅಂಶವಿತ್ತು, ಆದರೆ ಅಂದಿನ ಸರ್ಕಾರ ಅದನ್ನು ತೆಗೆದುಹಾಕಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎರಡನೆಯ ಬೇಡಿಕೆ: ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯ ಜೊತೆಗೆ, ಮನೆಮನೆಗಳಲ್ಲಿ, ಪಾನ್ ಶಾಪ್, ಕಿರಾಣಿ ಅಂಗಡಿ ಮತ್ತು ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದೆ. ಹೀಗಾಗಿ, ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ, ಈ ಸಮಿತಿಗಳಿಗೆ ಅರೆ ನ್ಯಾಯಿಕ ಅಧಿಕಾರ (ಕ್ವಾಸಿ ಜ್ಯುಡಿಷಿಯಲ್ ಪವರ್) ನೀಡಬೇಕು. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೆಚ್ಚುವರಿ ಸಮಿತಿಗಳನ್ನು ರಚಿಸುವ ಅವಕಾಶವಿದೆ ಎಂದು ಬೇಡಿಕೆಯಲ್ಲಿ ಹೇಳಲಾಗಿದೆ.
ಮದ್ಯ ನಿಷೇಧ ಆಂದೋಲನದ ಪರವಾಗಿ ಸ್ವರ್ಣ ಭಟ್,ವಿದ್ಯಾ ಪಾಟೀಲ್, ಮೋಕ್ಷಮ್ಮ, ವಿರುಪಮಾ, ಹುಚ್ಚಮ್ಮ ರಾಯಚೂರು, ನಿಂಗಮ್ಮ ಧಾರವಾಡ, ರತ್ನ ಬೀದರ್, ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು. ಹೋರಾಟವನ್ನು ಬೆಂಬಲಿಸಿ – ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ (MGSP), ಸೌಮ್ಯ ಕೆ ಆರ್, ಸಾಮಾಜಿಕ ಕಾರ್ಯಕರ್ತರು, ಕೆಆರ್‌ಪಕ್ಷದ ಆಶಾ ವೀರೇಶ್, ಕರ್ನಾಟಕಜನಶಕ್ತಿಯ ಚೆನ್ನಮ್ಮ ಜಾಲಗಾರ, ತ್ಯಾಜ್ಯ ಶ್ರಮಿಕರ ಸಂಘದ ಸೌಭಾಗ್ಯ ಮತ್ತು ಅಮ್ಮುಲು, NFIW ಇಂದ ಜ್ಯೋತಿ ಎ ಮಾತನಾಡಿದರು.





