ಸರ್ಕಾರ ಸಿದ್ಧಪಡಿಸಿದ ಭಾಷಣ ಓದದೇ, ತಾವೇ ಬರೆದುಕೊಂಡ ಎರಡು ಸಾಲುಗಳ ಭಾಷಣವನ್ನು ಓದಿ ವಿಧಾನಸಭೆಯಿಂದ ಹೊರನಡೆದ ರಾಜ್ಯಪಾಲರ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ ಹಾಗೂ ಮನರೇಗಾ ಯೋಜನೆಯನ್ನು ರದ್ದುಪಡಿಸಿರುವ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಕೇಂದ್ರಮಂತ್ರಿಗಳ ವಿರುದ್ಧ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ‘ಗೋ ಬ್ಯಾಕ್, ಗೋ ಬ್ಯಾಕ್ ಗವರ್ನರ್ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದ್ದಾರೆ.
“ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಜಾರಿಯಲ್ಲಿದ್ದ ಮನರೇಗಾ ಯೋಜನೆಯಿಂದ ದೇಶದಲ್ಲಿ ಕೋಟ್ಯಾಂತರ ಜನರಿಗೆ ಉದ್ಯೋಗ ದೊರಕುತ್ತಿತ್ತು. ಬಿಜೆಪಿ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿ ನಿರುದ್ಯೋಗ ಹೆಚ್ಚಿಸಲು ಮುಂದಾಗಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿರುವ ಯೋಜನೆಯನ್ನು ತಡೆಗಟ್ಟಿ ವಿ ಬಿ ರಾಮ್ ಜಿ ಎಂದು ಹೆಸರು ಬದಲಾಯಿಸಿರುವ ಕೇಂದ್ರ ಸರ್ಕಾರದ ಹೇಡಿತನವನ್ನು ಖಂಡಿಸುತ್ತೇವೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯಪಾಲರ ‘ಪಲಾಯನ’ ರಹಸ್ಯ ಇಲ್ಲಿದೆ- ‘ಮನರೇಗ’ದ ಮೆಚ್ಚುಗೆ- ‘ವಿಬಿ ಜಿ ರಾಮ್ ಜಿ’ಯ ಟೀಕೆ
“ಇಡೀ ದೇಶದಲ್ಲೇ ಇಂದು ಮಹಾತ್ಮ ಗಾಂಧಿ ಅವರ ಅನುಯಯಿಗಳು ಬಿಜೆಪಿಯ ನಡೆಯನ್ನು ಖಂಡಿಸುತ್ತಿದ್ದಾರೆ. ಬಿಜೆಪಿ ಕೇವಲ ಮಹಾತ್ಮ ಗಾಂಧಿ ಅವರ ಯೋಜನೆಗಳನ್ನು ಅಳಿಸಬಹುದು. ಆದರೆ ಅವರ ಅಹಿಂಸಾ ಮಾರ್ಗವನ್ನು ತ್ಯಾಗದ ಹಾದಿಯನ್ನು ಅಳಿಸಲು ಈ ಬಿಜೆಪಿಯ ಹೇಡಿಗಳಿಂದ ಸಾಧ್ಯವಿಲ್ಲ” ಎಂದು ಪ್ರತಿಭಟನಾಕಾರರು ಅಭಿಪ್ರಾಯಿಸಿದರು.
“ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಪ್ರತಿನಿತ್ಯ ರೈತರಿಗೆ ಹಾಗೂ ನಿರುದ್ಯೋಗಿಗಳಿಗೆ ದಿನನಿತ್ಯ ಕೆಲಸ ಲಭಿಸುತ್ತಿತ್ತು. ಈ ಮೂಲಕ ನಿರುದ್ಯೋಗ ನಿವಾರಣೆಗೆ ಹೆಚ್ಚಿನ ಒತ್ತನ್ನು ನೀಡಿ ಸ್ಥಳೀಯ ಗ್ರಾಮಗಳಿಗೆ ಹಾಗೂ ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಹೊಂದಲು ಈ ಯೋಜನೆ ಸಹಕಾರಿಯಾಗಿತ್ತು” ಎಂದು ಹೇಳಿದ್ದಾರೆ.

“ಇಂತಹ ಮಹತ್ವವಾದ ಯೋಜನೆಯನ್ನು ಕೈ ಬಿಟ್ಟು ಜನ ವಿರೋಧಿ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಈಗ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ನಿರ್ಣಯ ಕೈಗೊಂಡರೆ ಅದನ್ನು ಓದದೆ ಸಂವಿಧಾನಕ್ಕೆ ಅಪಚಾರ ಮಾಡಿರುವ ರಾಜ್ಯಪಾಲರ ನಡೆಯಿಂದ ಇಂದು ಕರ್ನಾಟಕದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೂಡಲೇ ರಾಜ್ಯಪಾಲರು ನೈತಿಕ ಹೊಣೆ ಓತ್ತು ರಾಜೀನಾಮೆ ನೀಡಿ ತೊಲಗಬೇಕು” ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ.ಆನಂದ್, ಚಂದ್ರಶೇಖರ್, ಕುಶಾಲ್ ಪುಟ್ಟರಾಜ್ ಸಾಯಿ, ನವೀನ್ ಸುಂಕದಕಟ್ಟೆ, ನವೀನ್, ಉಮೇಶ್, ಸಂಜಯ್ ಸಶಿಮಠ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.





