ಬಸ್ತರ್, ದೇವರಹಳ್ಳಿ, ಲಡಾಖ್, ಮಣಿಪುರ, ನಾಗರಹೊಳೆ ಮುಂತಾದ ಸ್ಥಳಗಳಲ್ಲಿ ನಡೆಯುತ್ತಿರುವ ಆಪರೇಷನ್ ಕಗಾರ ಹಾಗೂ ಜಲ-ಜಂಗಲ್-ಜಮೀನ್ ಲೂಟಿ ವಿರುದ್ಧವಾಗಿ ನೂರಾರು ಮಂದಿ ಪರಿಸರ ಹೋರಾಟಗಾರರು, ವೃತ್ತಿಪರರು, ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕ ಸಂಘದ ಮುಖಂಡರು ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ದೇಶದ ಅತ್ಯಂತ ಹಿಂದುಳಿದ ಜನರ ಮೇಲೆ ದೇಶದ ಸೈನಿಕ ದಾಳಿಗಳನ್ನು ಖಂಡಿಸಿ, ಮಧ್ಯ ಭಾರತದಲ್ಲಿ ನಡೆಯುತ್ತಿರುವ ಸೈನಿಕ ನೀತಿಗೆ ಅಂತ್ಯ ತರಬೇಕು ಮತ್ತು ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಭೂಮಿ ಕಬಳಿಕೆಯನ್ನು ತಡೆಹಿಡಿಯಬೇಕು ಎಂಬುದಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಪಿಯುಸಿಎಲ್‌ನ ಐಶ್ವರ್ಯಾ ಮಾತನಾಡಿ, “ʼನಕ್ಸಲ್ ವಿರೋಧಿ ಕಾರ್ಯಾಚರಣೆʼ ಎಂಬ ಹೆಸರಿನಲ್ಲಿ ಸರ್ಕಾರವು ಆದಿವಾಸಿ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಮಾಡಿಕೊಂಡು ಕಾನೂನಿನ ಉಲ್ಲಂಘನೆ ಮಾಡುತ್ತಿದೆ. ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರ ಬಲಿದಾನ ದಿನ ನಾಳೆ, ಅಕ್ಟೋಬರ್ 12. ಅವರ ಸಾವಿನ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಮಧ್ಯ ಭಾರತದಲ್ಲಿ ಆದಿವಾಸಿಗಳ ಹತ್ಯೆಗಳ ಬಗ್ಗೆ ಮಾತನಾಡಿದ ಕಾರಣಕ್ಕೆ ಅವರನ್ನು ಬಂಧಿಸಲಾಯಿತು. ಹಿಂಸೆ ನೀಡಲಾಯಿತು ರಾಜ್ಯದ ಕ್ರೂರತೆಗೆ ಅವರು ಬಲಿಯಾದರು. ಮಧ್ಯ ಭಾರತದಲ್ಲಿ ಜನರ ಮೇಲೆ ಹಿಂಸೆ ನಡೆಸಲು ನಮ್ಮ ತೆರಿಗೆ ಹಣವನ್ನು ಉಪಯೋಗಿಸಲಾಗುತ್ತಿದೆ. ಮಾವೋವಾದಿಗಳನ್ನು ಬಂಧಿಸುವ ಬದಲು ಬಹುಮಾನಕ್ಕಾಗಿ ಕೊಲ್ಲಲಾಗುತ್ತಿದೆ, ಅವರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸದೆ ಸರ್ಕಾರದ ಹಿಂಸೆಯನ್ನು ಮರೆಮಾಚಲಾಗುತ್ತಿದೆ. ಪ್ರೊಫೆಸರ್ ಸಾಯಿಬಾಬಾ, ಪಂಡು ನರೋಟೆ, ಫಾದರ್ ಸ್ಟಾನ್ ಸ್ವಾಮಿ ಮುಂತಾದವರು ಕಂಪನಿಗಳ ಆಕ್ರಮಣ ಮತ್ತು ಸೈನಿಕೀಕರಣದ ವಿರುದ್ಧ ಹೋರಾಡಿ ಪ್ರಾಣ ಬಿಟ್ಟಿದ್ದಾರೆ. ಅವರ ಹೋರಾಟದ ದೀಪವನ್ನು ಜೀವಂತವಾಗಿಡುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಪ್ರಗತಿಪರ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಯೂನಿಯನ್‌ನ ಎಸ್.ಎಂ. ಮಾರಿ ಮಾತನಾಡಿ, “ನಮ್ಮ ಪರ್ವತಗಳು, ಜಲಾಶಯಗಳು, ಭೂಮಿ ಮತ್ತು ಅರಣ್ಯಗಳಲ್ಲಿ ಅಪಾರ ಸಂಪತ್ತು ಇದೆ. ಸರ್ಕಾರ ‘ಆಪರೇಷನ್ ಕಗಾರ’ ಮೂಲಕ ಈ ಸಂಪತ್ತನ್ನು ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡುತ್ತಿದೆ. ಈ ಹಿಂಸೆಯ ಭಾರವನ್ನು ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು ಹೊರುತ್ತಿದ್ದಾರೆ. ನಾವು ಎಲ್ಲರೂ ಒಗ್ಗೂಡಿ ಇದರ ವಿರುದ್ಧ ಖಂಡನೆ ವ್ಯಕ್ತಪಡಿಸಬೇಕು” ಎಂದು ಹೇಳಿದರು.
ಸ್ಟುಡೆಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ ಸಂಘಟನೆಯ ಲಾವಣ್ಯ ಮಾತನಾಡಿ, “ಕಾಶ್ಮೀರದಿಂದ ಲಡಾಖ್, ನಾಗರಹೊಳೆ, ಮಣಿಪುರ, ಬಸ್ತರ್, ಒಡಿಶಾ ಮತ್ತು ಗಡ್ಚಿರೋಲಿ ತನಕ ಒಂದೇ ಮಾದರಿಯ ಹೋರಾಟಗಳು ನಡೆಯುತ್ತಿವೆ. ಭಾರತದಲ್ಲಿ ಪ್ರಕೃತಿ ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿ ನಡೆಯುತ್ತಿದ್ದು, ಅದನ್ನು ಭಾರತೀಯ ಆಡಳಿತ ವರ್ಗ ಮತ್ತು ಅದರ ರಾಜ್ಯಯಂತ್ರ ರಕ್ಷಿಸುತ್ತಿದೆ. ಶತಮಾನಗಳಿಂದ ಈ ಭೂಮಿಯಲ್ಲಿ ಬದುಕಿ ಬಂದಿರುವ ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗುತ್ತಿದೆ. ಇದು ಅಭಿವೃದ್ಧಿ ಅಲ್ಲ, ಶೋಷಣೆಯಾಗಿದೆ – ಪರಿಸರ, ಪ್ರಜಾಸತ್ತಾತ್ಮಕತೆ ಮತ್ತು ಮಾನವೀಯ ಗೌರವದ ಮೇಲೆ ನಿರಂತರ ದಾಳಿ” ಎಂದು ಹೇಳಿದರು.

ಸಿಪಿಐಎಂಎಲ್‌ನ ನಾಗರಾಜ್ ಮಾತನಾಡಿ, “ಮಧ್ಯ ಭಾರತವನ್ನು ಗುರಿಯಾಗಿಸಿರುವ ನಿಜವಾದ ಕಾರಣಗಳು ಎಲ್ಲರಿಗೂ ಸ್ಪಷ್ಟವಾಗಿವೆ. ಆದಿವಾಸಿಗಳನ್ನು ಅಳಿಸಿಹಾಕುವಲ್ಲಿ ಆರ್‌ಎಸ್ಎಸ್ ಮತ್ತು ಸಂಘ ಪರಿವಾರದ ಪಾತ್ರ ಸ್ಪಷ್ಟವಾಗಿದೆ. ಆದಿವಾಸಿಗಳ ಪರ ಹೋರಾಡುವವರನ್ನೇ ದೇಶದ್ರೋಹಿಗಳೆಂದು ಕರೆಯಲಾಗುತ್ತಿದೆ” ಎಂದು ಹೇಳಿದರು.
ಫ್ರೈಡೇಸ್ ಫಾರ್ ಫ್ಯೂಚರ್‌ನ ಸಂಜನಾ, “ನಾವು ಆದಿವಾಸಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ನಾಗರಹೊಳೆ ಮತ್ತು ದೇವರಹಳ್ಳಿಯಲ್ಲಿಯೂ ಪರಿಸರದ ಮೇಲೆ ದಾಳಿ ನಡೆಯುತ್ತಿದೆ. ಹುಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಆದಿವಾಸಿಗಳ ಜೀವನವನ್ನು ಅತಿಕ್ರಮಿಸಲಾಗುತ್ತಿದೆ. ಬಸ್ತರ್‌ನಲ್ಲಿ ನಡೆಯುತ್ತಿರುವುದು ನಮ್ಮ ಹತ್ತಿರದಲ್ಲಿಯೂ ನಡೆಯುತ್ತಿದೆ. ಆದರೆ ಎಲ್ಲೆಡೆ ಸತ್ಯ ಒಂದೇ – ಜಲ, ಜಂಗಲ್, ಜಮೀನ್ ಹೋರಾಟ ಎಲ್ಲರ ಹೋರಾಟ. ‘ಪವರ್ ಟು ದ ಪೀಪಲ್, ವೀ ವಿಲ್ ನೆವರ್ ಬಿ ಡಿಫೀಟೆಡ್’” ಎಂದರು.
“ಕಲೆಕ್ಟಿವ್”ನ ಅಮಲ್ ಮಾತನಾಡಿ, “ಇಂದು ಅಧಿಕಾರದಲ್ಲಿರುವವರು ಕಂಪನಿಗಳ ಪರವಾಗಿ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನಕ್ಸಲ್‌ಗಳು ವಿದೇಶಿ ನಿಧಿಯನ್ನು ಪಡೆಯುತ್ತಾರೆ ಎಂಬ ಸುಳ್ಳು ಕಥೆಗಳನ್ನು ರಚಿಸಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ವರ್ಷಗಳಿಂದ ಕಂಪನಿಗಳಿಗೆ ಭೂಮಿ ಮತ್ತು ಖನಿಜಗಳನ್ನು ಮಾರಾಟ ಮಾಡಲಾಗುತ್ತಿದೆ, ಅದನ್ನೂ ಆದಿವಾಸಿಗಳ ಮೇಲೆ ಕ್ರೂರ ಹಿಂಸೆ ನಡೆಸುತ್ತಾ” ಎಂದು ಹೇಳಿದರು.
ಐಐಡಿಯಿಎಯ ಸುಮನ್ ಮಾತನಾಡಿ, “ಈ ಸರ್ಕಾರ ನಿಜವಾಗಿಯೂ ಅಭಿವೃದ್ಧಿಯ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದರೆ, ಆ ಅಭಿವೃದ್ಧಿ ಎಲ್ಲಿದೆ ಮತ್ತು ಯಾರಿಗೆ? ಈ ಭೂಸ್ವಾಧೀನದಿಂದ ಯಾರೂ ಪ್ರಯೋಜನ ಪಡೆಯುತ್ತಿಲ್ಲ, ಕೆಲ ಕಂಪನಿಗಳಷ್ಟೇ ಲಾಭ ಪಡೆಯುತ್ತಿವೆ. ಉದ್ಯೋಗದ ಸುಳ್ಳು ಭರವಸೆ ನೀಡಿ ದೇಶವನ್ನು ಮೋಸಗೊಳಿಸುತ್ತಿದ್ದಾರೆ” ಎಂದು ಹೇಳಿದರು.
ಪ್ರೊಫೆಸರ್ ಗಣೇಶ್ ಮಾತನಾಡಿ, “ಆದಿವಾಸಿಗಳು ಈ ಭೂಮಿಯ ಮೂಲವಾಸಿಗಳು – ನಿಜವಾದ ವಾರಸುದಾರರು. ಆದರೆ ಲಾಭದಾಸೆಯ ಕ್ಯಾಪಿಟಲಿಸ್ಟ್‌ಗಳು ಅವರನ್ನು ತಮ್ಮ ವ್ಯವಹಾರಕ್ಕೆ ಅಡ್ಡಿಯಾಗುವವರಂತೆ ನೋಡುತ್ತಿದ್ದಾರೆ” ಎಂದರು.
ಆದಿವಾಸಿ ಸಂಘರ್ಷ ಮೋರ್ಚಾದ ಲಿಯೋನ್ ಮಾತನಾಡಿ, “ಭಾರತಾದ್ಯಂತ ನಡೆಯುತ್ತಿರುವ ಆದಿವಾಸಿ ಹೋರಾಟಗಳ ನಡುವೆ ವ್ಯಾಪಕ ಒಗ್ಗಟ್ಟಿನ ಅಗತ್ಯವಿದೆ” ಎಂದು ಹೇಳಿದರು.
ನಾಗರಹೊಳೆಯ ಜೇನು ಕುರುಬ ಸಮುದಾಯದ ಶಿವು ಮಾತನಾಡಿ, “ಹುಲಿಗಳನ್ನು ರಕ್ಷಿಸುವ ಹೆಸರಿನಲ್ಲಿ ಆದಿವಾಸಿಗಳ ಮೇಲೆ ಗುಂಡು ಹಾರಿಸಲಾಗುತ್ತಿದೆ. ಇದು ಆದಿವಾಸಿಗಳ ಮೇಲಿನ ಯುದ್ಧ. ಜಲ, ಜಂಗಲ್, ಜಮೀನ್ ನಮ್ಮ ಹಕ್ಕುಗಳು – ಸರ್ಕಾರದ ಸ್ವತ್ತು ಅಲ್ಲ. ನಗರ ನಿವಾಸಿಗಳು ಅರಣ್ಯದ ಬಗ್ಗೆ ತೋರಿಸುವ ನಾಟಕೀಯ ಕಾಳಜಿಯನ್ನು ನಿಲ್ಲಿಸಬೇಕು, ಏಕೆಂದರೆ ನೂರಾರು ವರ್ಷಗಳಿಂದ ಈ ಅರಣ್ಯವನ್ನು ಕಾಪಾಡಿ ಬದುಕಿರುವವರು ನಾವು” ಎಂದು ಹೇಳಿದರು.

ಪ್ರತಿಭಟನೆಯು ಹಾಡುಗಳು ಮತ್ತು ಘೋಷಣೆಗಳಿಂದ ಕೂಡಿತ್ತು. ಕಾರ್ಯಕ್ರಮವು “ಆಪರೇಷನ್ ಕಗಾರ ನಿಲ್ಲಿಸಬೇಕು” ಮತ್ತು “ಆದಿವಾಸಿಗಳ ಮೇಲಿನ ಯುದ್ಧಕ್ಕೆ ಅಂತ್ಯ ತರಬೇಕು” ಎಂಬ ಘೋಷಣೆಗಳೊಂದಿಗೆ ಮುಕ್ತಾಯವಾಯಿತು.





