ರಾಜಾಜಿನಗರ ಶಾಸಕ ಎಸ್ ಸುರೇಶ್ ಕುಮಾರ್ ಅವರು ಶುಕ್ರವಾರ ವಿಧಾನಸಭೆಯ ಕಲಾಪದ ವೇಳೆ ಸಚಿವ ಬೈರತಿ ಸುರೇಶ್ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕರ ಮನೆ ಕಾಂಪೌಂಡ್‌ಗೆ ಭಿತ್ತಿಪತ್ರ ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಲಾಪದಲ್ಲಿ ಮಾತನಾಡುವಾಗ ಶಾಸಕರು, ಸಚಿವ ಬೈರತಿ ಸುರೇಶ್ ಅವರನ್ನು ಉದ್ದೇಶಿಸಿ, “ಏಳು ತಿಂಗಳಿಗೆ ಹುಟ್ಟಿದವರು ಮಾತ್ರ ನಿಮ್ಮಂತೆ ಆಡ್ತಾರೆ, ಒಂಭತ್ತು ತಿಂಗಳಿಗೆ ಹುಟ್ಟಿದವರು ಸರಿ ಇರ್ತಾರೆ” ಎಂದು ಲಘವಾದ ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವರಾದ ಬೈರತಿ ಸುರೇಶ್ ಮತ್ತು ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆಕ್ಷೇಪ ವ್ಯಕ್ತಪಡಿಸಿ ಸದನದ ಕಡತದಿಂದ ಈ ಹೇಳಿಕೆಯನ್ನು ತೆಗೆದು ಹಾಕುವಂತೆ ಸಲಹೆ ನೀಡಿದ್ದರು. ಸ್ಪೀಕರ್ ಖಾದರ್ ಕೂಡಾ ಕಡತದಿಂದ ತೆಗೆಯುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಇಂದು ಮುಂಜಾನೆ ಕಾಂಗ್ರೆಸ್ ಕಾರ್ಯಕರ್ತರು ಭಿತ್ತಿ ಪತ್ರ ಅಂಟಿಸಿ ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲ ಸುರೇಶ್ ಕುಮಾರ್ ಅವರು ತಾಯಂದಿರಿಗೆ ಅವಮಾನ ಮಾಡಿದ್ದಾರೆ. ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.






