ನೂರಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಮಾಡಿದ ಆರೋಪ ಹೊತ್ತಿರಯುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಿಚಾರಣೆಗೆ ಸಹಕರಿಸದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಈ ಬಗ್ಗೆ ನ್ಯಾಯಾಲಯಕ್ಕೆ ಎಸ್‌ಐಟಿ ಮಾಹಿತಿ ನೀಡಲು ಮುಂದಾಗಿದೆ ಎನ್ನಲಾಗಿದೆ. “ತನಿಖೆ ಮಾಡುವವರಿಗೆ ಪ್ರಜ್ವಲ್ ರೇವಣ್ಣ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ನಾವು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತೇವೆ” ಎಂದು ಎಸ್‌ಐಟಿ ಮೂಲಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
“ಪ್ರಜ್ವಲ್ ರೇವಣ್ಣ ಬೆದರಿಕೆ ಹಾಕುತ್ತಿರುವ ಬಗ್ಗೆ ನಾವು ನೇರವಾಗಿ ದೂರು ದಾಖಲಿಸಿಕೊಂಡರೆ ಅದು ನಾವು ದುರುದ್ದೇಶದಿಂದ ದೂರು ದಾಖಲಿಸಿಕೊಂಡಂತೆ ಆಗಬಹುದು. ಈ ನಿಟ್ಟಿನಲ್ಲಿ ನಾವು ನ್ಯಾಯಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿ ನ್ಯಾಯಾಲಯ ನಮಗೆ ಏನು ನಿರ್ದೇಶನ ನೀಡುತ್ತದೆಯೋ ಅದರ ಪ್ರಕಾರವಾಗಿ ನಡೆದುಕೊಳ್ಳುತ್ತೇವೆ” ಎಂದು ಎಸ್‌ಐಟಿ ತಂಡ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಲೈಂಗಿಕ ದೌರ್ಜನ್ಯ ಪ್ರಕರಣ | ಜೂನ್ 6ರವರೆಗೆ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿಗೆ
ಪ್ರಜ್ವಲ್ ರೇವಣ್ಣ ಅವರನ್ನು ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯ ಸೆಲ್‌ನಲ್ಲಿ ಎಸ್‌ಐಟಿ ವಿಚಾರಣೆ ನಡೆಸುತ್ತಿದ್ದು ಪ್ರಜ್ವಲ್ ಮಾತ್ರ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸುತ್ತಿದ್ದಾರೆ. ತನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದೆ. ನಾವು ತಪ್ಪು ಮಾಡಿಲ್ಲ ಎನ್ನುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ನಾಲ್ಕು ವರ್ಷವಾದ ಬಳಿಕ ಅತ್ಯಾಚಾರ ದೂರು ನೀಡಲು ಕಾರಣವೇನು ಎಂದು ಪತ್ತೆ ಹೆಚ್ಚುವಂತೆ ಪ್ರಜ್ವಲ್ ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದು, ತಿರುಚಿತ ವಿಡಿಯೋ ಹರಿಬಿಡಲಾಗಿದೆ ಎಂದಿದ್ದಾರೆ.





