ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಪ್ರದಾನ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾದರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
“ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದು ಹೆಮ್ಮೆಯ ಸಂಗತಿ. ಡಾಕ್ಟರೇಟ್ ಪದವಿಯಿಂದ ಗೌರವದ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಭವಿಷ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯವನ್ನು, ವಿಶ್ವಾಸವನ್ನು ಎತ್ತಿ ಹಿಡಿಯುವ ದಾರಿಯಲ್ಲಿ ಸಾಗುತ್ತೇನೆ” ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
“ಕಾಲೇಜು ದಿನಗಳಲ್ಲಿ ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ವಿಜ್ಞಾನ ವಿಷಯದಲ್ಲಿ ಅಂಕಗಳು ಕಡಿಮೆ ಬರುತ್ತಿದ್ದರಿಂದ, ಡಾಕ್ಟರ್ ಆಗುವ ಕನಸನ್ನು ಬಿಟ್ಟು ಕಾನೂನು ಪದವಿಯಲ್ಲಿ ವ್ಯಾಸಂಗ ಮಾಡಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದದ್ದು, ಡಾಕ್ಟರ್ ಆದಷ್ಟೇ ಸಂತಸ ತಂದಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಪ್ಲಾಟ್ ಫಾರ್ಮ್‌ಗಳಲ್ಲಿ ತಲೆ ಸುತ್ತಿ ಬೀಳುತ್ತಿರುವ ಯುವಜನರು!
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಜಯಕರ ಎಸ್.ಎಂ, ಕುಲಸಚಿವ ಕೆ.ಟಿ.ಶಾಂತಲಾ, ಕುಲಸಚಿವ ಮೌಲ್ಯಮಾಪನ ಪ್ರೊ.ಸಿ.ಎಸ್.ಕರಿಗಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.





