ಬೆಂಗಳೂರಿನ ಕಳಪೆ ರಸ್ತೆಗಳ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರಿಗೆ ಕರ್ನಾಟಕದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. “ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ಕೆಲಸ ಮಾಡಿ” ಎಂದು ಅವರಿಗೆ ಸಲಹೆ ನೀಡಿದ್ದಾರೆ.
ಕಿರಣ್ ಮಜುಂದಾರ್ ಅವರ ಎಕ್ಸ್ ಪೋಸ್ಟ್ ಕಳಪೆ ರಸ್ತೆಗಳು ಮತ್ತು ಕಸದ ಸಮಸ್ಯೆಯ ಬಗ್ಗೆ ಗಮನ ಸೆಳೆದಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ ಬಿ ಪಾಟೀಲ್, “ಕಿರಣ್ ಮಜುಂದಾರ್ ಶಾ ಅವರಿಗೆ ಸರ್ಕಾರವು 1,000 ಕೋಟಿ ರೂ. ವೆಚ್ಚದಲ್ಲಿ ಗುಂಡಿಗಳನ್ನು ಮುಚ್ಚುತ್ತಿರುವುದು ಗೊತ್ತಿದೆ. ಆದರೂ ಈ ಟ್ವೀಟ್ ಅಗತ್ಯವಿರಲಿಲ್ಲ. ಹಲವು ಬಾರಿ ಇಂತಹ ಮಾತುಗಳನ್ನು ಆಡುವ ಉದ್ದೇಶವೇನು?” ಎಂದು ಪ್ರಶ್ನಿಸಿದರು.
“ಕಿರಣ್ ಮಜುಂದಾರ್ ಶಾ ಅವರು ಗಾಬರಿಯಾಗಬೇಕಿಲ್ಲ. ಅವರು ತಮ್ಮ ಪ್ರದೇಶದಲ್ಲಿ ಸಿಎಸ್‌ಆರ್ ಅಡಿಯಲ್ಲಿ ಒಂದಿಷ್ಟು ಕೆಲಸ ತೆಗೆದುಕೊಳ್ಳಲಿ” ಎಂದು ಸಚಿವರು ಸಲಹೆ ನೀಡಿದರು.
ಸರ್ಕಾರಕ್ಕೆ ಗುಂಡಿಗಳ ಸಮಸ್ಯೆಯು ಹಿಂದಿನ ಬಿಜೆಪಿ ಸರ್ಕಾರದಿಂದ ಬಳುವಳಿಯಾಗಿದೆ. ನಾವು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದೇವೆ, ಆದರೆ ಇದಕ್ಕೆ ಸಮಯ ಬೇಕು ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಎರಡು ಸಂವೇದನಾಶೀಲ ನಿರ್ಧಾರಕ್ಕೆ ಅಭಿನಂದನೆಗಳು
ಬೆಂಗಳೂರನ್ನು “ವಿಶ್ವಮಟ್ಟದ ಬೆಳೆಯುತ್ತಿರುವ ನಗರ” ಎಂದು ಬಣ್ಣಿಸಿದ ಪಾಟೀಲ್, ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಸಂಚಾರಿ ಸಮಸ್ಯೆಗಳನ್ನು ಉದಾಹರಣೆಯಾಗಿ ನೀಡಿದರು. “ಲಂಡನ್‌ನಲ್ಲಿ ಎರಡು ಮೈಲಿ ದೂರವನ್ನು ಕ್ರಮಿಸಲು 2.5 ಗಂಟೆಗಳು ಬೇಕಾಗುತ್ತೆ” ಎಂದು ತಿಳಿಸಿದರು.
ಬೆಂಗಳೂರಿನ ಮೇಲಿನ ಒತ್ತಡವು ಇತರ ರಾಜ್ಯಗಳಿಂದ ಬಂದವರಿಂದ ಹೆಚ್ಚುತ್ತಿದೆ. ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶದಿಂದ ಜನ ಬರುತ್ತಿದ್ದಾರೆ, ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ. ಅವರು ಫ್ಲ್ಯಾಟ್, ಕಾರು ಖರೀದಿಸುತ್ತಾರೆ. ಇದರಿಂದ ಬೆಂಗಳೂರಿನ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಆದರೆ, ನಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿಲ್ಲ. ಕರ್ನಾಟಕದಿಂದ ಕೇವಲ ಶೇ. 5 ರಷ್ಟು ಜನರು ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಹೋಗುತ್ತಾರೆ ಎಂದು ಅವರು ಹೇಳಿದರು.
ಕಳಪೆ ಮೂಲಸೌಕರ್ಯದಿಂದ ಯಾವ ಕಂಪನಿಯೂ ಬೆಂಗಳೂರನ್ನು ತೊರೆಯುವುದಿಲ್ಲ ಎಂಬ ವಿಶ್ವಾಸವನ್ನು ಪಾಟೀಲ್ ವ್ಯಕ್ತಪಡಿಸಿದರು. “ಯಾರು ತೊರೆದಿದ್ದಾರೆ? ಇತರ ರಾಜ್ಯಗಳು ಹೂಡಿಕೆದಾರರನ್ನು ಕರೆಯುತ್ತಿವೆ. ಆದರೆ ಬೆಂಗಳೂರಿನಲ್ಲಿ ಇಲ್ಲಿ ಪ್ರತಿಭೆ, ಉತ್ತಮ ಸೌಕರ್ಯ ಎಲ್ಲವೂ ಇದೆ. ಯಾರೂ ತೊರೆಯುವ ಪ್ರಶ್ನೆಯೇ ಇಲ್ಲ. ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ಮಾಡಿತು ಎಂದು ಅವರು ಸ್ಮರಿಸಿದರು.





